ದೀಪಾವಳಿ ಹಬ್ಬ ಆಡಂಬರವಾಗದಿರಲಿ

Upayuktha
0



ಭಾರತ ಸಂಸ್ಕೃತಿಯ ದೇಶ. ಆಚಾರ- ವಿಚಾರಗಳ ತವರೂರು. ಹಬ್ಬ-ಸಂಪ್ರದಾಯಗಳ ಸತ್ವ ನೆಲವೂರಿದ ಭವ್ಯ ರಾಷ್ಟ್ರ. ಆಧುನಿಕತೆಯ ಗುಂಗಿನಲ್ಲಿ ಮುಳುಗಿ ಹೋಗುತ್ತಿರುವ ಜಗತ್ತು ಹಬ್ಬಗಳನ್ನೂ ಪ್ರತಿಷ್ಠೆಯ ಪ್ರತೀಕವನ್ನಾಗಿ ಮಾಡಿಕೊಂಡು ಬಿಟ್ಟಿದೆ. ಇಲ್ಲಿ ದೇವರಿಗೆ ದುಬಾರಿ ಬೆಲೆಯ ಹೂ ಹಾಕಿದರೆ ಅದು ಭಕ್ತಿ, ಹೆಚ್ಚು ಹಣ ಖರ್ಚು ಮಾಡಿ ಪಟಾಕಿ ತಂದು ಧೂಂ ಧೂಂ ಎಂದು ಸಿಡಿಸಿದರೆ ಅದು ದೀಪಾವಳಿ. ಹಬ್ಬಗಳ ಉದ್ದೇಶ, ಮೂಲ ಸ್ವರೂಪಗಳು ಅಧಃಪತನಕ್ಕೆ ತಲುಪುತ್ತಿರುವ ಈ ಕಾಲಘಟ್ಟದಲ್ಲಿ ಅದ್ಯಾಕೋ ಹಬ್ಬಗಳು ಹೀಗ್ಯಾಕೆ ಮತ್ತೆ ಬಾಲ್ಯವನ್ನು ನೆನಪಿಸಬಾರದು ಎಂದೆನಿಸಿ ಸೃಷ್ಟಿಯಾಯ್ತು ಈ ಲೇಖನ.


ಅಂದ ಹಾಗೆ ಮತ್ತೆ ಬಂತು ದೀಪಾವಳಿ, ದೀಪಗಳ ಹಬ್ಬ. ಬಾಲ್ಯದಲ್ಲಿ ಹೊಸ ಬಟ್ಟೆ ಧರಿಸಲು ಕಾದು ಕುಳಿತ್ತಿದ್ದ ಹಬ್ಬ. ವಿಶೇಷ ಸ್ವಾದದ ಊಟ ಮಾಡಬಹುದೆನೋ ಎಂದು ಯೋಚಿಸಲು ಕಾರಣವಾಗಿದ್ದ ಹಬ್ಬ. ಸುರುಸುರು ಬತ್ತಿ ಹಚ್ಚಿ ಅದು ಖಾಲಿಯಾಗುವಷ್ಟು ತಿರುಗಿಸಿ ಸಂಭ್ರಮಿಸಿದ ಹಬ್ಬ. ಹಣತೆಯೆಲ್ಲ ದೀಪ ಹಚ್ಚಿ ಮನೆಯ ಗೋಡೆಗಳಲ್ಲಿ ಇಡಲು ನಾ ಮುಂದು ತಾ ಮುಂದು ಎಂದು ಹಠ ಮಾಡುತ್ತಿದ್ದ ಹಬ್ಬ. ಮೈಯ್ಯೆಲ್ಲ ಎಣ್ಣೆ ಹಚ್ಚಿಕೊಂಡು ಅಜ್ಜಿ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಹೊಸ ಬಟ್ಟೆ ಧರಿಸಿ ನೆರೆಹೊರೆಯ ನಾಲ್ಕೈದು ಮನೆಗೆ ಓಡಿ ಹೋಗಿ ಆ ಬಟ್ಟೆ ತೋರಿಸಿ ಹೊಸ ಬಟ್ಟೆ ಅನ್ನೋದ್ರಲ್ಲಿ ಮಜಾ ಕಾಣುತ್ತಿದ್ದ ಹಬ್ಬ. ಒಂದಲ್ಲ, ಎರಡಲ್ಲ....ನೂರಾರು ಕಾರಣಗಳಿಗೆ ದೀಪಾವಳಿ `ಹಬ್ಬ'ವೆಂಬ ಸಡಗರ. ಮನೆಗೆ ನೆಂಟರಿಷ್ಟರು ಬಂದರಂತೂ ಇಮ್ಮಡಿಗೊಳ್ಳುತ್ತಿದ್ದ ಸಂಭ್ರಮ. ಬಲೀಂದ್ರನಿಗೆ ಮನೆಯ ಹಿರಿಯರು ಕೂ ಎನ್ನುತ್ತಿದ್ದರೆ ನಾವೂ ಗಟ್ಟಿ ದನಿಯಲ್ಲಿ ಬಲೀಂದ್ರನಿಗೂ ಕೂ ಹಾಕುತ್ತಿದ್ದ ನೆನಪುಗಳು ದೀಪಾವಳಿಯ ಸುಂದರ ಕ್ಷಣಗಳನ್ನು ಮತ್ತೆ ನೆನಪಿಸುತ್ತಿದೆ. ಗೋಪೂಜೆಯಲ್ಲಂತೂ ನಾವೇ ಮೊದಲು. ಈ ನಿಜವಾದ ಸಂತೋಷದ ಹಬ್ಬಗಳನ್ನು ಸಂಭ್ರಮಿಸಿದ ಬಾಲ್ಯ ನಮ್ಮದೇ ಕೊನೆ ಅನಿಸುತ್ತೆ. ಮೂರು ದಿನದ ದೀಪಗಳ ಹಬ್ಬ ಮನೆಯೊಳಗಿನ ಮಾತು- ಹರಟೆ, ಸಿದ್ಧತೆ, ಬೊಬ್ಬೆ, ನಗುವಲ್ಲೇ ನಂದಾಗೋಕುಲವೆನಿಸುತ್ತಿತ್ತು.


ಈಗೇನಾಯ್ತು. ಮಣ್ಣಿನ ಹಣತೆ ಹೋಗಿ ಆಕರ್ಷಣೀಯವಾಗಿ ಕಾಣುವ, ದೀಪ ಹಚ್ಚದೆಯೇ ದೀಪದಂತೆ ಬೆಳಕು ನೀಡುವ ಲೈಟಿಂಗ್ ಲ್ಯಾಂಪ್ ಗಳು ಬಂತು. ಕಲ್ಲಿನಲ್ಲಿ ಚಚ್ಚಿ ಒಡೆಯುತ್ತಿದ್ದ ಪಟಾಕಿ ಹೋಗಿ ದುಬಾರಿ ಬೆಲೆಯ ಬೇರೆ ಬೇರೆ ವಿಧವಾದ ಪಟಾಕಿಗಳು ಬಂತು. ಮನೆಯವರೆಲ್ಲರೂ ಸೇರಿ ಅಡುಗೆ ಮಾಡಲು ಸಮಯವಿಲ್ಲದಂತಾಗಿ ಹಬ್ಬಕ್ಕೂ ಕ್ಯಾಟರಿಂಗ್ ಊಟ ಬಂತು ನೋಡಿ, ಎಲ್ಲವೂ ಬದಲಾವಣೆ. ಬದಲಾದ ಹಬ್ಬಗಳ ಸ್ವರೂಪವನ್ನು ಬರೆದಷ್ಟು ಮುಗಿಯದೇನೋ.


ಅದೇನೇ ಆಗಲಿ, ಹಿಂದಿನ ಕಾಲದಿಂದಲೂ ರೂಢಿಯಿಂದ ಬಂದ ಹಬ್ಬಗಳ ಆಚರಣೆ ಬೇರು ಬಿಡದಿರಲಿ. ಪ್ರತಿಷ್ಠೆ, ಸಿರಿವಂತಿಕೆಯ ಪ್ರತೀಕಕ್ಕೆ ಹಬ್ಬಗಳು ಮೂಲವಸ್ತುವಾಗದೆ ಆಡಂಬರವಾಗದಿರಲಿ. ಮನೆ ಮನವೂ ದೀಪಗಳಿಂದ ನಳನಳಿಸಲಿ. ದೀಪಗಳ ಹಬ್ಬ ಬಾಂಧವ್ಯದ ಗಟ್ಟಿತನಕ್ಕೆ ಸಾಕ್ಷಿಯಾಗಲಿ.


- ಅರ್ಪಿತಾ ಕುಂದರ್, ಮಂಗಳೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top