ಲೇಖಾ ಲೋಕ- 57: ಪ್ರಸಿದ್ಧ ಸಂಶೋಧಕ ಡಾ. ಪಿ. ಗುರುರಾಜ ಭಟ್ಟರು

Upayuktha
0




ಜನ್ಮಶತಾಬ್ಧಿ ಆಚರಣೆಗೊಂಡ ಶ್ರೀ ಪಿ ಗುರುರಾಜ ಭಟ್ಟರು ಅದ್ಭುತ ಸಂಶೋಧಕರು, ಪ್ರಖ್ಯಾತ ಸಾಹಿತಿ ಮತ್ತು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಮಹನೀಯರು.  ಪಿ ಗುರುರಾಜ ಭಟ್ಟರು ಉಡುಪಿ ತಾಲೂಕಿನ ಹತ್ತಿರ ಪಾದೂರಿನಲ್ಲಿ 15-6-1924 ರಂದು ಜನಿಸಿದರು. ಇವರ ಪ್ರಾಥಮಿಕ ಶಾಲೆ ಮೂಡಬಿದ್ರೆ ಜೈನ ಪ್ರೌಢಶಾಲೆಯಲ್ಲಿ ಜರುಗಿ, ಅಧ್ಯಾಪಕ ವೃತ್ತಿಯನ್ನು ಸಹ ಆರಂಭಿಸಿದರು. ವೃತ್ತಿ ಜೀವನದಲ್ಲಿಯೇ, ಹಂತ ಹಂತವಾಗಿ ವಿದ್ಯಾಭ್ಯಾಸದ ಮಜಲುಗಳನ್ನು ದಾಟಿದರು. 1952 ರಲ್ಲಿ ಮದರಾಸು ವಿಶ್ವವಿದ್ಯಾಲಯದ ಬಿ.ಎ. ಪದವಿ ಪಡೆದರು. ನಂತರ 1956 ರಲ್ಲಿ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದ  ಎಂ.ಎ. (ಇತಿಹಾಸ) ಪದವಿ ಗಳಿಸಿದರು. ಇತಿಹಾಸ  ಆಯ್ಕೆ ಮಾಡಿಕೊಂಡು, ಉಡುಪಿಯ ಎಂ ಜಿ ಎಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ 11 ವರ್ಷ ಸೇವೆ ಸಲ್ಲಿಸಿದರು.


1967 ರಲ್ಲಿ ಕಲ್ಯಾಣಪುರದಲ್ಲಿ ಮಿಲಾಗ್ರೆಸ್ ಕಾಲೇಜು ಆರಂಭಗೊಂಡಾಗ, ಅಲ್ಲಿಯ ಆಹ್ವಾನ ಸ್ವೀಕರಿಸಿ, ಆ ಕಾಲೇಜಿನಲ್ಲಿ ಪ್ರಥಮ ಪ್ರಾಂಶುಪಾಲ ಹುದ್ದೆ ಅಲಂಕರಿಸಿದ ಮಹಾನುಭಾವರು. 1976ರಲ್ಲಿ ಆ ಹುದ್ದೆಯಿಂದ ಐಚ್ಛಿಕವಾಗಿ, ನಿವೃತ್ತಿ ಪಡೆದರು.  ಪಿ.ಗುರುರಾಜ ಭಟ್ಟರಿಗೆ ಮೊದಲಿನಿಂದಲೂ ಇತಿಹಾಸ- ಸಂಸ್ಕೃತಿಗಳ ಬಗ್ಗೆ, ಅದರ ಸಂಶೋಧನೆಗಳ ಬಗ್ಗೆ ಆಸಕ್ತಿಯಿದ್ದುದರಿಂದ, ತುಳುನಾಡಿನ ರಾಜಕೀಯ, ಸಂಸ್ಕೃತಿ ಚರಿತ್ರೆಯ (ಕ್ರಿ.ಶ.600 ತನಕ) ಗ್ರಂಥವನ್ನು ರಚಿಸಿ, ಮೈಸೂರು ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪದವಿ ಪಡೆದರು.


ಶಿಲ್ಪಗಳ ಶೈಲಿ, ಕಾಲಮಾನಗಳನ್ನು ಗುರುತಿಸುವಲ್ಲಿ ಅಪಾರ ಪಾಂಡಿತ್ಯ ಪಡೆದ ಸಂಶೋಧಕರು. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ, ಸುಮಾರು 2000 ಕ್ಕೂ ಹೆಚ್ಚು ದೇವಾಲಯಗಳನ್ನು ಸಂಶೋಧಿಸಿ, ಲೇಖನಗಳನ್ನು ಬರೆದು ನಾಡಿಗೆ ನೀಡಿದರು. ಈ ಜಿಲ್ಲೆಯಲ್ಲಿ ಪ್ರಥಮವಾಗಿ ಬೃಹತ್ ಶಿಲಾಗೋರಿಗಳ ಅನ್ವೇಷಣೆ, ಕನ್ನಡದ ಪ್ರಾಚೀನತಮ ಬೆಳ್ಮಣ್ಣು ತಾಮ್ರ ಶಾಸನದ ಸಂಶೋಧನೆ ಹಾಗೂ 25ಕ್ಕೂ ಹೆಚ್ಚು ಅಪೂರ್ವ ಶಾಸನಗಳ ಸಂಶೋಧನೆ ನಡೆಸಿದರು. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಸಹ ಹಾಗೂ ನಿಯತಕಾಲಿಕೆಗಳಲ್ಲಿ700ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡು ನಾಡಿನ ಜನರು ಅದರ ಮಹತ್ವದ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡಿ ಪ್ರಖ್ಯಾತರಾದ ಸಂಶೋಧಕರು.

1963ರಲ್ಲಿ ಇವರು ರಚಿಸಿದ ಪ್ರಥಮ ತುಳುನಾಡು ಗ್ರಂಥಕ್ಕೆ ದೇವರಾಜ ಬಹದ್ದೂರ್ ದತ್ತಿ ಬಹುಮಾನ ಲಭಿಸಿತು. ಅದೇ ರೀತಿ ದ್ವಿತೀಯ ಪ್ರಕಟಣೆಯಾದ ತುಳುನಾಡಿನ ಸ್ಥಾನಿಕರು ಕೃತಿಗೆ ಉತ್ತಮ ಸಂಶೋಧನ ಕೃತಿ ಎಂಬ ಪ್ರಶಂಸೆಗೆ ಪಾತ್ರವಾಯಿತು. ತದನಂತರ, ಇವರು ರಚಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಅವಶೇಷಗಳ ಕ್ರಮಬದ್ಧವಾದ ವಿಂಗಡಣೆ ಹಾಗೂ ಅವುಗಳ ಕುರಿತ ಯ್ಯಾನ್ಟಿಕ್ಟಿಟೀಸ್ ಆಫ್ ಸೌತ್ ಕೆನರಾ (ದಕ್ಷಿಣ ಕನ್ನಡ ಪುರಾತತ್ವ) ಕೃತಿ 1968-69 ರಲ್ಲಿ ಪ್ರಕಟವಾಯಿತು. ಇವರ ಅವಿರತ  ಮಾಡಿದ ಸಂಶೋಧನೆಗಳ ಮೇರುಕೃತಿ ತುಳುವಇತಿಹಾಸ ಮತ್ತು ಸಾಂಸ್ಕೃತಿಕ ಅಧ್ಯಯನ ಪ್ರಾದೇಶಿಕ ಇತಿಹಾಸ ನಾಡಿಗೆ ಅಪೂರ್ವ ಕೊಡುಗೆ ಎಂದೇ ಹೇಳಬಹುದು.


1975 ರಲ್ಲಿ ಪ್ರಕಟವಾದ ಈ ಗ್ರಂಥ 500 ಪುಟಗಳ ಸಹಿತ 1000 ಕ್ಕೂ ಹೆಚ್ಚು ಅಪೂರ್ವ ಛಾಯಾಚಿತ್ರಗಳೊಂದಿಗೆ ಈ ಕೃತಿ ನಾಡಿಗೆ ಸಮರ್ಪಿಸಲಾಯಿತು. ಸ್ವಂತವಾಗಿ ಇವರು ಇದನ್ನು ಪ್ರಕಟಿಸಿದರು. ಇವರಿಗೆ ಮಣಿಪಾಲ ಶಿಕ್ಷಣ ಅಕಾಡೆಮಿಯ ಗೌರವ ಸದಸ್ಯತ್ವ, ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ ಸಮಿತಿ, ಕರ್ನಾಟಕ ಸರ್ಕಾರದ ಪುರಾತತ್ವ ಮತ್ತು ವಸ್ತು ಸಂಗ್ರಾಹಾಲಯದ ಇಲಾಖೆಯಲ್ಲಿಯ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ ಮಹಾನುಭಾವರು. ಅದಲ್ಲದೇ ಭಾರತೀಯ ಜ್ಞಾನಪೀಠ ನಿಯೋಜಿತ ಜೈನ ಸ್ಮಾರಕಗಳ ಅನ್ವೇಷಣೆ ಮತ್ತು ಸಂಶೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವಿದ್ವಾಂಸರು.


ಕನ್ನಡ ನಾಡಿಗೆ ಅಪರೂಪದ ಸಂಶೋಧನೆಗಳ ಕೃತಿಗಳನ್ನು ನೀಡಿ, ಅದ್ಭುತ ಲೇಖಕರಾಗಿ, ಆಕಸ್ಮಿಕವಾಗಿ 27-8-1978 ರಂದು ನಿಧನರಾದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top