ಸಿದ್ದವನಹಳ್ಳಿ ಕೃಷ್ಣಶರ್ಮ ಅವರ ಪುಣ್ಯ ದಿನಾಚರಣೆಯ ಸಂದರ್ಭದಲ್ಲಿ ಅವರ ಒಂದು ಲೇಖನ
ಮೊನ್ನೆ ಮೊನ್ನೆ ಧಾರವಾಡದಲ್ಲಿ 'ವೀರಶೈವ ಸಾಹಿತ್ಯ ಗೋಷ್ಠಿ' ನಡೆಯಿತು. ಕನ್ನಡ ನಾಡಿನ ಹೆಸರಾಂತ 'ವೀರಶೈವ ಸಾಹಿತಿ' ಗಳು ಸೇರಿದ್ದರು. ಬೇಕಾದಷ್ಟು ಧೂಳು ಎದ್ದಿತ್ತು. ಕುಮಾರವ್ಯಾಸ ಲಿಂಗಾಯತ ಎಂಬ ಕುಸ್ತಿಯಾಯಿತು. ವೀರಶೈವ ಸಾಹಿತ್ಯ ಎಂದರೇನು? ಎಂದು ಚರ್ಚೆಯಾಗಲಿಲ್ಲ. ಸಾಹಿತ್ಯದಲ್ಲಿ ನೀತಿ ಧರ್ಮಕ್ಕೆ ಮುಖ್ಯ ಸ್ಥಾನವಿಲ್ಲ ಎನ್ನುವ ವಿಮರ್ಶಕರೂ ಅಲ್ಲಿದ್ದರು. ಅವರಿಗೆ ಈ ಸಮಸ್ಯೆ ತೋಚಲಿಲ್ಲ. ಕಲೆ ಕಲೆಗಾಗಿ ಎನ್ನುವ ಕಲಾವಿದರೂ ಇದ್ದರು. ಅವರ ಕಲಾದೃಷ್ಟಿಗೆ ಈ ಪ್ರಶ್ನೆ ಕಾಣಲಿಲ್ಲ!
ಸಾಹಿತ್ಯಕ್ಕೆ ಕುಲಗೋತ್ರವಿದೆಯೇ? ವಿಜ್ಞಾನಶಾಸ್ತ್ರದಲ್ಲಿ ವರೋಪಚಾರವೇ? ವೀರಶೈವ ಸಾಹಿತ್ಯದಲ್ಲಿ ಉಳಿದ ಕಾವ್ಯಗಳಲ್ಲಿಲ್ಲದ ವೀರಶೈವ ರಸವೊಂದಿದೆಯೆ? ವೀರಶೈವ ಧರ್ಮದ ಮಾತು ಅಲ್ಲಲ್ಲಿ ಬರಬಹುದು! ವೀರಶೈವರಾದ ಕತೆಗಾರರು ಬರೆದ ಕತೆಯಲ್ಲಿ ರಾಮನ ಬದಲು ನಿಂಗ ಬಂದಾನು. ಅದೂ ಬರಬೇಕಾಗಿಲ್ಲ. ಆದರೆ ಕತೆ ಸುತ್ತಲಿನ ಬಾಳಿನದಲ್ಲವೆ?
ಶಾಲೆಗಳಲ್ಲಿ 'ಹಿಂದುಳಿದವರ ವಿದ್ಯಾರ್ಥಿವೇತನ ' ಹಂಚುವಂತೆ ನಮ್ಮ ನಮ್ಮ ಗುಂಪಿನಲ್ಲಿ ಕವಿಗಳನ್ನು ಹಂಚಿಕೊಳ್ಳೋಣವೆ? ಚೆನ್ನಮಲ್ಲಪ್ಪನವರು ವೀರಶೈವರು, ಉತ್ತಮ ಕವಿ. ಅವರ 'ನನ್ನ ನಲ್ಲ' ಯಾವ ಸಾಹಿತ್ಯ? ಅವರು ಎಂಥ ಕವಿ? ವೀರಶೈವ ಕವಿ ಎನ್ನೋಣವೇ? ಆ ಕಾವ್ಯದಲ್ಲಿ, ಅವರ ಯಾವ ಬರಹದಲ್ಲಿಯೂ ವೀರಶೈವರ ಸೊಂಕಿಲ್ಲ. ಎಂ. ಆರ್ ಶ್ರೀನಿವಾಸಮೂರ್ತಿ ಬ್ರಾಹ್ಮಣರು. ಅವರ 'ಭಕ್ತಿ ಭಂಡಾರಿ ಬಸವಣ್ಣ' ಯಾವ ವೀರಶೈವ ಪಂಥಿ ಆದರೂ ಉತ್ತಮ ಲೇಖಕನಾದರೆ- ಬರೆಯಬಹುದಾದ ಗ್ರಂಥ. ಆ ಪುಸ್ತಕ ವೀರಶೈವ ಸಾಹಿತ್ಯ. ಶ್ರೀಮತಿ ಶಾಂತಾದೇವಿ ಮಾಳವಾಡರು ಚಲೋ ಕತೆ ಬರೆದಿದಾರೆ. ವೀರಶೈವ ಗೋಷ್ಠಿಗೆ ಆ ಕತೆಗಾರಿಕೆಗೂ ಏನು ಸಂಬಂಧ? ವೀರಶೈವ ಎಲ್ಲಿರಬೇಕು- ಕವಿಯಲ್ಲೇ, ಸಾಹಿತ್ಯದಲ್ಲೇ? ಯೋಚನೆ ಮಾಡಿದರೆ ಈ ಕಗ್ಗಂಟಿನ ಮೂಲ ಎಲ್ಲಿದೆಯೋ ಗೊತ್ತಾಗದು?
ವೀರಶೈವರು ಬರೆದುದರಲ್ಲಿ ಭಕ್ತಿ ವಾಙ್ಮಯ ಇದೆ, ವೇದಾಂತವಿದೆ, ಬೇರೆ ಇದೆ. ದಾಸ ಸಾಹಿತ್ಯ, ವೀರಶೈವ ವಚನ ಸಾಹಿತ್ಯ ಎರಡೂ ಭಕ್ತಿ ಸಾಹಿತ್ಯ. ಬೇಕಾದರೆ ಒಂದು ವಚನ ಸಾಹಿತ್ಯವಾಗಲಿ, ಮತ್ತೊಂದು ಗೇಯ ವಾಙ್ಮಯವಾಗಲಿ. ಅದೇ ಸರಿಯಾದ ದಾರಿ. ದಿವಾಕರರು ಬರೆದ 'ಅಂತರಾತ್ಮನಿಗೆ' ಯಾವ ಸಾಹಿತ್ಯ? ವಚನ ವಾಙ್ಮಯವಲ್ಲವೇ? ವೀರಶೈವೇತರ ವಚನ ಸಾಹಿತ್ಯವೆಂದು ಒಂದು ಭಾಗ ಮಾಡೋಣವೆ? ಶರೀಫ ಸಾಹೇಬರ ತತ್ವಗಳು ದಾಸ ಸಾಹಿತ್ಯವಾಗದಿದ್ದರೆ 'ಗೇಯ ವಾಙ್ಮಯ' ವಾಗಲಿ.
ಕನ್ನಡ ಸಾಹಿತ್ಯವನ್ನು ಬ್ರಾಹ್ಮಣ ಯುಗ, ವೀರಶೈವ ಯುಗ, ಜೈನ ಯುಗ ಎಂದು ವಿಭಾಗ ಮಾಡಿದವರು ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಆ ವಿಭಾಗವನ್ನು ಸಮರ್ಥಿಸಲು ಬಂದೀತು. ಆದರೆ ಅದರಿಂದಾಗುವ ಹಾನಿ ಪ್ರತ್ಯಕ್ಷ ಸತ್ಯ. 'ಇಲ್ಲಿಗೂ ಬಂದೆಯಾ ಜಡೆ ಶಂಕರ' ಎಂದು ಅದನ್ನು ಕಂಡು ಬೇಸರವಾಗುತ್ತದೆ. ನಮ್ಮ ಅದೂರ ದೃಷ್ಟಿಗೆ ನಾವೇ ಮರುಗಬೇಕಾಗಿದೆ. ಶ್ರೀ ತಾತಾಚಾರ್ಯ ಶರ್ಮರು ಕನ್ನಡ ಸಾಹಿತ್ಯವನ್ನು ಕ್ಷಾತ್ರಯುಗ, ಮತಶ್ರದ್ಧಾಯುಗ, ಪ್ರಜಾತಂತ್ರಯುಗ, ಆಧುನಿಕ ಅಥವಾ ವೈಜ್ಞಾನಿಕ ಯುಗ ಎಂದು ಭಾಗ ಮಾಡಿದಾರೆ. ಚೆನ್ನಾಗಿದೆ. ಇಲ್ಲವಾದರೆ ಚಂಪೂ ಸಾಹಿತ್ಯ, ಷಟ್ಪದಿ, ಗೇಯ, ನಾಟಕ, ವಚನ, ಗದ್ಯ, ವಿಜ್ಞಾನ- ಹೀಗೇನಾದರೂ ಮಾಡೋಣ.
ಕನ್ನಡ ಪುಸ್ತಕ ಭಂಡಾರವೊಂದನ್ನು ನಾಳೆ ಬರಲಿರುವ ಕನ್ನಡ ರಾಜಧಾನಿಯಲ್ಲಿ ಸ್ಥಾಪಿಸಿದರೆ ಅದರಲ್ಲಿ ಬ್ರಾಹ್ಮಣ, ವೀರಶೈವ, ಜೈನ, ಮಹಮದೀಯ ... ಇತ್ಯಾದಿ ವಿಭಾಗ ಮಾಡೋಣವೇ? ಜಗತ್ತು ನಗದೆ? ನಮಗೆ ವೈಜ್ಞಾನಿಕ ದೃಷ್ಟಿಯಿಲ್ಲ ಎಂಬುದನ್ನು ನಾವು ಒಪ್ಪಿಕೊಂಡಂತೆ ಆಗದೆ? ಬೇರೇನು ನಿದರ್ಶನ ಬೇಕು? ಈಗಲಾದರೂ ನಮ್ಮ ಹಿರಿಯ ಸಾಹಿತಿಗಳು ಈ ಬಗೆಯ ಕುರುಡುತನಕ್ಕೆ ಮಂಗಳ ಹಾಡಬೇಕು !
ಸಾಹಿತ್ಯ ನಿರ್ಮಲಾಕಾಶ. ಅದರಲ್ಲಿ ಸರಸ, ನೀರಸ ಎರಡೇ ನಿಜವಾದ ಭಾಗ. ಸರಸ ಭಾಗದಲ್ಲಿ ಸಾಹಿತ್ಯ ಪ್ರಕಾರಗಳು ಹಲವಿರಲಿ. ಈ ಬ್ರಾಹ್ಮಣ ಸಾಹಿತ್ಯ, ವೀರಶೈವ ಸಾಹಿತ್ಯ, ಕುರುಬ, ಸ್ಮಾರ್ತ, ಮಾಧ್ವ ಸಾಹಿತ್ಯ, ಪಂಚಾಚಾರ್ಯ ಸಾಹಿತ್ಯ, ಷಿಯಾ ಸಾಹಿತ್ಯ- ಹೀಗೆ ಬೆಳೆದರೆ ಕನ್ನಡ ಕುಲ ನಾಶವಾದೀತು. ಇದು ಕನ್ನಡ ಸಮಸ್ಯೆ ! ಕನ್ನಡ ನಾಡನ್ನು ಕಟ್ಟುವುದರೊಳಗಾಗಿ ಕನ್ನಡ ಕುಲ ನೂರು ಬಣವಾದರೆ ಏನನ್ನು ಕಟ್ಟಬೇಕು?
ಕನ್ನಡ ಚಳುವಳಿಯ ಹೊಣೆ ಎಲ್ಲರಿಗೂ ಸೇರಿದುದು. ಕನ್ನಡ ಜನ ಒಬ್ಬರಿಗೊಬ್ಬರು ಕೈಗೂಡಿಸಬೇಕು. ಸಾಹಿತ್ಯದಲ್ಲೂ ಯಶ, ಅರ್ಥ- ಹಣ ಮುಂದಾಳ್ತನ ಇವೆ. ಅದಕ್ಕಾಗಿ ಸಾಹಿತ್ಯದ ಬುಗ್ಗೆಯನ್ನು ಕದಡಿ ಕೆಸರು ಮಾಡಬಾರದು. ಈ ವಿರಸ, ಭೇದಭಾವ ಕನ್ನಡದ ಸಮಸ್ಯೆ.
(ಕನ್ನಡ- ಕಾರ್ಯ ಕಲಾಪಗಳು- ಲೇಖಕರು- ಸಿದ್ದವನಹಳ್ಳಿ ಕೃಷ್ಣ ಶರ್ಮ)
ನಿರ್ಮಲ ಸಾಹಿತ್ಯ ಕಾಳಿದಾಸ, ಬಾಣ, ಭಾಸ, ನಲವತ್ತು- ಅರವತ್ತು ದಶಕದ ಸಾಹಿತಿಗಳೊಡನೆಯೇ ಮರೆಯಾಗುತ್ತಾ ಹೋಯಿತು. ರಾಜಕೀಯ ನಾಯಕರು ನಾವು ಜಾತ್ಯತೀತರು ಎಂಬ ಸೋಗು ಹಾಕುತ್ತಾರೆ. ವೋಟಿಗಾಗಿ. ಸಾಹಿತ್ಯ ಇಂದು ಅಬ್ಬರ, ಸಂಕುಚಿತವಾಗಿದೆ.
(ಉಪಯುಕ್ತ ನ್ಯೂಸ್‌ಗಾಗಿ ಕಳುಹಿಸಿದವರು ಅವರ ಪುತ್ರಿ ಸಂಧ್ಯಾ ಸಿದ್ದವನಹಳ್ಳಿ)
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

