ಅಂದು ಬೆಳಿಗ್ಗೆ ಎಂದಿನಂತೆ ಆಸ್ಪತ್ರೆಗೆ ಕರ್ತವ್ಯಕ್ಕೆ ಹಾಜರಾದೆ, ನನ್ನನ್ನು ಸ್ವಾಗತಿಸಲು ಅಮ್ಮ ಮಗಳು ಬಾಗಿಲಲ್ಲಿ ಕಾದು ಕುಳಿತ್ತಿದ್ದರು. ಕೊಠಡಿ ಒಳಗೆ ಹೋದ ತಕ್ಷಣ ನನ್ನನ್ನ ಹಿಂಬಾಲಿಸಿದ ಆ ಮೂರು ವರ್ಷದ ಹೆಣ್ಮಗು ಅವಳ ಅಮ್ಮನ ಸಹಾಯದಿಂದ ಕೈಯಲ್ಲಿದ್ದ ಏನೋ ಪೊಟ್ಟಣ ಬಿಡಿಸಲು ಹರಸಾಹಸ ಪಡುತ್ತಿರಲು ನಾನು ಏನೆಂದು ಅವರನ್ನು ಗಮನಿಸಿದೆ, ಆ ಮಗು ತಕ್ಷಣ ನಗೆ ಬೀರಿ ನನ್ನ ಕೈಗೆ ಮಾರುದ್ದ ಕಾಕಡ ಹೂವು ಕೊಡಲು ನಾನು ಅವರಿಬ್ಬರ ಕಣ್ಣಲ್ಲಿ ನನ್ನ ಮೇಲಿರುವ ಅವರ ಪ್ರೀತಿಯನ್ನು ಕಣ್ತುಂಬಿಕೊಂಡೆ.
ಇಂದು ಅವರು ಈ ಧನ್ಯತಾ ಭಾವದಿಂದ ನನ್ನನ್ನು ಕಾಣಲು ಬಂದಿದ್ದು ನನಗೆ ನನ್ನ ಜವಾಬ್ಧಾರಿ ಹೆಚ್ಚಿಸಿತು.
ಎಲ್ಲರಂತೆ ಆಕೆ ನನ್ನಲ್ಲಿ ತೋರಿಸಿಕೊಳ್ಳುತ್ತಿದ್ದ ಗರ್ಭಿಣಿ, ಕಳೆದ ಎರಡು ಮೂರು ತಿಂಗಳಿಂದ ನನ್ನಲ್ಲಿ ಪರೀಕ್ಷೆಗೆ ಬರುತ್ತಿದ್ದಳು. ಪ್ರತಿ ಬಾರಿ ಬಂದಾಗಲೂ ಅವಳ ಮೂರು ವರ್ಷದ ಮಗಳು ಅವಳ ಜೊತೆ ಬರುತ್ತಿದ್ದಳು, ಅವಳು ಬಹಳ ತುಂಟಿ, ಎರಡು ನಿಮಿಷ ನಿಂತಲ್ಲಿ ನಿಲ್ಲಲ್ಲ, ಕೆಲವೊಮ್ಮೆ ನಾನು ಅವಳ ಅಮ್ಮನನ್ನು ಪರೀಕ್ಷೆ ಮಾಡುತ್ತಿದ್ದರೆ ನನ್ನ ಕುರ್ಚಿ ಮೇಲೆ ನನ್ನಂತೆ ಕೂತು ತಾನೇ ಡಾಕ್ಟರ್ ಅಂತ ಬೀಗುತ್ತಿದ್ದಳು. ಅವರು ಹಿಂದಿ ಮಾತನಾಡುವ ಜನ, ನಾನು ಅವಳನ್ನು ಚೋಟಾ ಶೈತಾನ್ ಎಂದು ರೇಗಿಸುತ್ತಿದ್ದೆ. ಬಹುಶಃ ಅವಳ ತುಂಟಾಟ ತರಲೆಯಿಂದ ಅವಳ ಅಮ್ಮ ನನಗೆ ಬಹು ಬೇಗ ನೆನಪಿಟ್ಟುಕೊಳ್ಳುವ ರೋಗಿಯಾಗಿದ್ದಳು.
ಅವಳು ಐದು ತಿಂಗಳ ಸ್ಕ್ಯಾನ್ ಮಾಡಿಸಿಕೊಂಡು ಬಂದಾಗ ಆ ಸ್ಕ್ಯಾನಲ್ಲಿ ಅವಳ ಎಡ ಭಾಗದ ಕಿಡ್ನಿಯಲ್ಲಿ ಸುಮಾರು ಹತ್ತು ಸೆಂಟಿಮೀಟರ್ ಗಾತ್ರದ ಗೆಡ್ಡೆ ಇರುವುದು ನನ್ನ ಗಮನಕ್ಕೆ ಬಂತು. ಅಷ್ಟು ದೊಡ್ಡ ಗೆಡ್ಡೆ ನನಗೆ ತಲೆ ಕೆಡಿಸಿತು, ಅವಳ ಗಂಡನನ್ನು ಕರೆದು ಆ ಗೆಡ್ಡೆ ಬಗ್ಗೆ ಹೇಳಿ ಎಂ ಆರ್ ಐ ಸ್ಕ್ಯಾನ್ ಅವಶ್ಯಕತೆ ಇದೆ ಎಂದು ತಿಳಿಸಿದೆ. ಆ ಸಮಯಕ್ಕೆ ಅವರು ಅವರ ಆರ್ಥಿಕ ಸಮಸ್ಯೆ ಹೇಳಿದರು, ಆದರೆ ಸ್ಕ್ಯಾನ್ ಅವಶ್ಯಕತೆ ತಿಳಿಸಲು ಎರಡು ದಿನದಲ್ಲಿ ಕೆವಿಜೆ ಕಾಲೇಜಿನಲ್ಲಿ ಸ್ಕ್ಯಾನ್ ಮಾಡಿಸಿ ನನ್ನ ಕೈಗೆ ಇಟ್ಟರು. ಆ ಸ್ಕ್ಯಾನ್ ನಲ್ಲೂ ಗೆಡ್ಡೆ ಇರುವುದು ಅದು ಕ್ಯಾನ್ಸರ್ ಸ್ವರೂಪ ಎಂಬ ಅನುಮಾನ ವ್ಯಕ್ತವಾಗಿತ್ತು. ಇಲ್ಲಿಗೆ ನನಗೆ ತಲೆ ಕೆಟ್ಟಿತು, ಗರ್ಭಾವಸ್ಥೆಯಲ್ಲಿ ಕಿಡ್ನಿ ಕ್ಯಾನ್ಸರ್ ನಾನು ಎಂದೂ ನೋಡಿರಲಿಲ್ಲ. ಅದರ ಚಿಕಿತ್ಸೆ ಹೆಚ್ಚಿನ ನಿಗಾ ಗಮನಿಸಿ ಅವರಿಬ್ಬರಿಗೂ ಮಂಗಳೂರಿಗೆ ಹೋಗಲು ತಿಳಿಸಿ ನನ್ನ ನಂಬರ್ ಕೊಟ್ಟು ಅವರಿಗೆ ಏನೇ ಸಹಾಯ ಬೇಕಾದರೂ ಕರೆ ಮಾಡುವಂತೆ ತಿಳಿಸಿದೆ.
ಇಬ್ಬರೂ ಬೇರೆ ಜಿಲ್ಲೆಯವರು, ಅವರಿಗೆ ಮಂಗಳೂರು ಹೊಸದು, ಆದರೆ ಅವರು ನನ್ನ ಮಾತನ್ನು ಎಂದೂ ತೆಗೆದುಹಾಕುತ್ತಿರುಲಿಲ್ಲ, ಹಾಗಾಗಿ ನನ್ನ ಮಾತಿಗೆ ಬೆಲೆಕೊಟ್ಟರು, ಮಂಗಳೂರಿಗೆ ಮರುದಿನ ಹೋದರು. ಒಂದೆರಡು ಆಸ್ಪತ್ರೆ ಸುತ್ತಾಡಿದ ಅವರಿಗೆ ಸೂಕ್ತ ಮಾಹಿತಿ ಸಿಗದೆ ನಿರಾಸೆಯಾಗಿತ್ತು. ಮರುದಿನ ಮತ್ತೆ ನನ್ನ ಬಳಿಯೇ ಬಂದರು. ಮೇಡಂ, ಯಾರೂ ಏನು ಸಲಹೆ ನೀಡಲಿಲ್ಲ, ನೀವೇ ನನಗೆ ದಾರಿ ತೋರಿಸಿ ಎಂದಳು. ಈ ಕೇಸ್ ನನ್ನ ಹಂತದಲ್ಲಿ ಸಂಭಾಳಿಸುವ ಸಾಮಾನ್ಯ ಕೇಸ್ ಅಲ್ಲ, ಆದರೆ ಅವಳಿಗೆ ಸೂಕ್ತ ದಾರಿ ತೋರದಿದ್ದರೆ ಮನೆಯಲ್ಲಿ ಕುಳಿತು ಏನಾದರೂ ಆಗುವುದು ಎನ್ನುವುದು ಅವರ ನನ್ನ ಒಡನಾಟದಿಂದ ಅಲ್ಲಿಗೆ ನನಗೆ ಅರ್ಥವಾಗಿತ್ತು. ಆ ಚೋಟಾ ಶೈತಾನ್ ತುಂಟಾಟ ಕಣ್ಣ ಮುಂದೆ ಬಂತು. ನಾನು ಅವಳಿಗೆ ಎರಡು ದಿನ ಬಿಟ್ಟು ಬಾ, ನಾ ಒಂದು ದಾರಿ ಹುಡುಕುವೆ ಎಂದು ಹೇಳಿ ಕಳುಹಿಸಿದೆ.
ಆ ಎರಡು ದಿನ ನನ್ನ ದಿನಚರಿಯಲ್ಲಿ ಅವಳ ಯೋಚನೆಯೇ ತುಂಬಿ ಹೋಗಿತ್ತು. ಒಂದು ಅವಳ ಚಿಂತೆಯಾದರೆ ಇನ್ನೊಂದು ನನ್ನೊಳಗಿರುವ ವೈದ್ಯಕೀಯ ವಿದ್ಯಾರ್ಥಿ ಈ ಪ್ರಕರಣದ ಚಿಕಿತ್ಸೆಯ ಕಲಿಕೆಯ ಬಗೆಗೆ ನನ್ನ ನಿದ್ದೆಗೆಡಿಸಿತ್ತು. ನಾನು ವಾಣಿ ವಿಲಾಸ ಆಸ್ಪತ್ರೆ ನಮ್ಮ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಿವಾಸ ಸರ್, ಮೈಸೂರಿನಲ್ಲಿರುವ ನಮ್ಮ ಪ್ರೊಫೆಸರ್ ಮೂತ್ರಕೋಶ ತಜ್ಞರಾದ ಡಾ. ನಿರಂಜನ್ ಸರ್, ಹಾಸನದಲ್ಲಿದ್ದ ನನ್ನ ಸೀನಿಯರ್ ಡಾ ಸಚಿನ್ ಎಲ್ಲರಿಗೂ ಆ ಪ್ರಕರಣದಲ್ಲಿ ನನಗೆ ಸಲಹೆ ನೀಡಲು ಕೇಳಿದೆ. ಮೂರು ಜನರೂ ನಮಗೆ ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಆ ರೋಗಿಗೆ ನಾನು ಹೇಗೆ ಚಿಕಿತ್ಸೆ ಮಾಡಬೇಕು ತಿಳಿಸಿದರು. ಶ್ರೀನಿವಾಸ ಸರ್ ಗರ್ಭಾವಸ್ಥೆಯಲ್ಲಿ ಕಿಡ್ನಿ ಕ್ಯಾನ್ಸರ್ ಸಂಬಂಧಿಸಿದಂತೆ ನನಗೆ ಕರೆ ಮಾಡಿ ವಿಸ್ತಾರವಾಗಿ ತಿಳಿಸಿ ನಿರ್ಲಕ್ಷಿಸಿದರೆ ಆಕೆಯ ಪ್ರಾಣಕ್ಕೆ ಅನಾಹುತ, ಹೇಗಾದರೂ ಮಾಡಿ ಒಳ್ಳೆ ಕ್ಯಾನ್ಸರ್ ಸರ್ಜನ್ ಬಳಿ ಅವಳನ್ನು ಕಳಿಸಿಕೊಟ್ಟು ಶಸ್ತ್ರಚಿಕಿತ್ಸೆ ಮಾಡಿಸು ಎಂದು ಸೂಚನೆ ನೀಡಿದರು. ಗುರುಗಳ ಮಾತಿನಂತೆ ಅವಳ ಚಿಕಿತ್ಸೆಗೆ ಮೇಲ್ದರ್ಜೆ ಆಸ್ಪತ್ರೆಯ ಅವಶ್ಯಕತೆ ನನಗೆ ಅರ್ಥವಾಯಿತು. ಆದರೆ ಮಂಗಳೂರು ನನಗೂ ಹೊಸದು, ಖಾಸಗಿ ಆಸ್ಪತ್ರೆಗೆ ಹೋಗಲು ಅವರು ಅಷ್ಟು ಸ್ಥಿತಿವಂತರಲ್ಲ, ನನಗೆ ಇಲ್ಲಿ ಯಾವ ವೈದ್ಯರ ಪರಿಚಯವಿಲ್ಲ, ಏನು ಮಾಡಲಿ ತಿಳಿಯದೇ ದಿಕ್ಕೇ ತೋಚಲಿಲ್ಲ.
ದಾರಿ ಕಾಣದೆ ಕುಳಿತಾಗ ನನ್ನ ಮನದಲ್ಲಿ ಗೋಚರವಾದ ಹೆಸರು "ಡಾ. ತಿಮ್ಮಯ್ಯ"- ಮಂಗಳೂರು ಜಿಲ್ಲಾ ಆರೋಗ್ಯಾಧಿಕಾರಿಗಳು. ಅಧಿಕಾರಿಯ ಜೊತೆಗೆ ಆತ್ಮೀಯರು ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆ ಪದಕ್ಕೆ ಪರ್ಯಾಯ, ತಕ್ಷಣ ಅವರಿಗೆ ಒಂದು ಸಂದೇಶ ಕಳುಹಿಸಿದೆ. ಸರ್, ಬಿಡುವಾದಾಗ ಒಂದು ಕರೆ ಮಾಡಿ, ಒಂದು ರೋಗಿಗೆ ನಿಮ್ಮ ಸಹಾಯ ಬೇಕು ಎಂದಷ್ಟೇ ಕೇಳಿದ್ದೆ. ಸಂದೇಶ ನೋಡಿದ ತಕ್ಷಣ ಕರೆ ಮಾಡಿದ ಸರ್ ಗೆ ರೋಗಿಯ ಸಂಪೂರ್ಣ ಮಾಹಿತಿ ನೀಡಿದೆ. ಒಂದು ಗಂಟೆಯೊಳಗೆ ಯೆನೆಪೋಯ ಆಸ್ಪತ್ರೆಯಲ್ಲಿರುವ ಕ್ಯಾನ್ಸರ್ ರೋಗ ತಜ್ಞರಾದ ಡಾ. ವಿಜಯ್ ಕುಮಾರ್ ಸರ್ ನೊಂದಿಗೆ ಮಾತನಾಡಿದ ಅವರು ಮರುದಿನ ಬೆಳಿಗ್ಗೆಯೇ ಅವಳನ್ನು ಅವರ ಬಳಿ ಕಳುಹಿಸಲು ಹೇಳಿದರು. ನಾನು ಅವಳಿಗೆ ಕರೆ ಮಾಡಿ ಕರೆಸಿ ಅವಳಿಗೆ ಸರ್ ಬಳಿ ಹೋಗಲು ಪತ್ರ ಬರೆದುಕೊಟ್ಟು ವಿಳಾಸ ಹೇಳಿ ಕಳುಹಿಸಿದೆ.
ಮರುದಿನ ನನ್ನ ಆಣತಿಯಂತೆ ಆಸ್ಪತ್ರೆ ತಲುಪಿ ವೈದ್ಯರ ಬಳಿ ಹೋಗಿ ಅವರಿಂದ ನನಗೆ ಕರೆ ಮಾಡಿಸಿದಳು. ನಾನು ವೈದ್ಯರಿಗೆ ಎಲ್ಲಾ ವಿವರಿಸಿದೆ, ಅವರು ರೋಗಿಯನ್ನು ನೋಡಿ ಡಿ ಹೆಚ್ ಓ ಸರ್ ಮಾತಿಗೆ ಬೆಲೆ ಕೊಟ್ಟು ಅವಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಭರವಸೆ ಕೊಟ್ಟು ಗರ್ಭಪಾತ ಮಾಡಿಸಿಕೊಂಡು ಬನ್ನಿ, ಉಳಿದದ್ದು ನಾವು ನೋಡಿಕೊಳ್ಳುತ್ತೇವೆ ಹೇಳಿ ಕಳುಹಿಸಿದ್ದರು.ಇಷ್ಟೆಲ್ಲಾ ಅವಳಿಗೆ ದಾರಿ ತೋರಿಸಿದ್ದ ನನಗೆ ಧನ್ಯವಾದ ಹೇಳಲು ಅವಳ ಮಗುವಿನ ಕೈಲಿ ಹೂವು ಕೊಟ್ಟು ಅವಳು ಅವಳ ವೈದ್ಯರಿಗೆ ಕೃತಜ್ಞತೆ ಹೇಳಿ ಮುಂದಿನ ಸಲಹೆ ಪಡೆಯಲು ಬಂದಿದ್ದಳು. ಇಲ್ಲಿಯವರೆಗೆ ಅವಳ ಮಗಳ ನಗು ಅವಳನ್ನು ಉಳಿಸಬೇಕೆಂದು ನಿದ್ದೆ ಕೆಡಿಸುತಿತ್ತು, ಈಗ "ಹೂವಿನ ಋಣ" ಬೇರೆ ಹೆಗಲೇರಿತು, ಈಗ ಅವಳು ಇನ್ನೂ ಆಪ್ತಳಾದಳು, ಈಗಾಗಲೇ 22 ವಾರ ನಡೆಯುತ್ತಿತ್ತು, ಜೊತೆಗೆ ಹಿಂದೆ ಸಿಸೇರಿಯನ್ ಆಗಿತ್ತು, ಅವಳ ಗರ್ಭಪಾತ ಸುಲಭವಲ್ಲ, ಅವಳು ಲೇಡಿ ಗೋಷನ್ ತಂಡ ತಲುಪಬೇಕಿತ್ತು, ಮತ್ತೆ ತಿಮ್ಮಯ್ಯ ಸರ್ ಗೆ ಕರೆ ಮಾಡಲು ಅವರು ಲೇಡಿ ಗೋಷನ್ ತಂಡವನ್ನು ಸಜ್ಜು ಮಾಡಿದ್ದರು. ನಾನು ಮರುದಿನ ಅವಳಿಗೆ ಅಲ್ಲಿ ಹೋಗಲು ಸೂಚಿಸಿದೆ.
ಸಾಮಾನ್ಯವಾಗಿ ನಾನು ಹೇಳಿದ ಆಸ್ಪತ್ರೆಗೆ ಹೋದ ತಕ್ಷಣ ನನಗೆ ಕರೆ ಮಾಡುತ್ತಿದ್ದ ಅವಳು ಮರುದಿನ ನನಗೆ ಕರೆ ಮಾಡಲಿಲ್ಲ, ಸಂಜೆಗೆ ಅವಳು ಮತ್ತೆ ನೆನಪಾಗಲು ನಾನೇ ಅವಳಿಗೆ ಕರೆಮಾಡಿದೆ. ಇಷ್ಟು ದಿನ ಹೇಳಿದ ಕಡೆಯೆಲ್ಲಾ ಓಡಾಡಿ ಅವರ ಬಳಿಯಿದ್ದ ಹಣವೆಲ್ಲಾ ಖಾಲಿಯಾಗಿ ಸಾಲವೂ ಸ್ವಲ್ಪ ಹೆಗಲೇರಲು ಆಸ್ಪತ್ರೆಗೆ ಹೋಗುವುದು ಮುಂದೆ ಹೋಗಿತ್ತು. ಎರಡು ದಿನ ಬಿಟ್ಟು ಹೋಗುವುದಾಗಿ ಹೇಳಿದಳು. ಎರಡು ದಿನವಾಯ್ತು, ಮೂರು ದಿನವಾಯ್ತು ಅವಳ ಸುದ್ದಿಯೇ ಇಲ್ಲ, ಪ್ರತಿ ಸಂಜೆ ಅವಳಿಗೆ ಕರೆ ಮಾಡಲು ಹಣದ ಕೊರತೆ ಎಂಬ ಮಾತು, ಕೊನೆಗೆ ಮಂಗಳೂರಿಗೆ ಹೋಗಿ ಬರುವ ಖರ್ಚು ನಾನೇ ಕೊಡುತ್ತೇನೆ ಹೋಗಿ ಬಾ ಎಂದೂ ಹೇಳಿದೆ. ಅವಳಿಗೆ ಏನು ಮುಜುಗರ ಕಾಡಿತೋ ಅವಳು ಬರಲೇ ಇಲ್ಲ, ಈಗಾಗಲೇ 22 ವಾರ ಕಳೆದು ಹೋಗಿತ್ತು, ಇನ್ನೊಂದು ವಾರ ಕಳೆದರೆ ಮತ್ತೆ ಗರ್ಭಪಾತಕ್ಕೆ ನಾವು MTP ಬೋರ್ಡ್ ಅದು ಇದು ಅಲೆದಾಡಬೇಕು, ಅಲ್ಲಿಗೆ ನನ್ನ ತಾಳ್ಮೆ ಮೀರಿ ಹೋಯ್ತು, ಅವಳು ವಾಸವಿರುವ ಕ್ಷೇತ್ರ ಸಿಬ್ಬಂದಿಗೆ, ತಾಲ್ಲೂಕು ಆರೋಗ್ಯ ತಂಡ ಎಲ್ಲರಿಗೂ ತಿಳಿಸಿದೆ, ಆರ್ಥಿಕ ಬಿಕ್ಕಟ್ಟು ಎಂದು ಎಲ್ಲರೂ ಕೈಚೆಲ್ಲಲು ನಾನು ಅಸಹಾಯಕವಾದೆ. ರಾತ್ರಿ ನೆಮ್ಮದಿಯಿಂದ ನಿದ್ದೆ ಬರದೆ ಹೋಗಲು ತಾಲ್ಲೂಕು ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಆ ಗರ್ಭಿಣಿ ಹಣದ ಸಮಸ್ಯೆಯಿಂದ ಹೆಚ್ಚಿನ ಆಸ್ಪತ್ರೆಗೆ ಹೋಗುತ್ತಿಲ್ಲ, ಇನ್ನೊಂದು ವಾರದ ಒಳಗೆ ಗರ್ಭಪಾತ ಆಗದೆ ಹೋದರೆ ಮುಂದಿನ ಚಿಕಿತ್ಸೆ ಕಷ್ಟ, ಒಂದು ಖಾಸಗಿ ಆಸ್ಪತ್ರೆ ಅಷ್ಟು ದೊಡ್ಡ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿರಲು ನಾವು ಏನಾದರೂ ಮಾಡಬೇಕು, ಹಿರಿಯ ಅಧಿಕಾರಿಗಳು ಗಮನ ಹರಿಸಿ ಎಂದು ಒಂದು ಸಂದೇಶ ಹಾಕಿ ಬೇಸರದಲ್ಲಿ ಮಲಗಿದೆ.
ಮರುದಿನ ಸಂಜೆ ಅದೇ ಗ್ರೂಪ್ನಲ್ಲಿ ಒಂದು ಸಂದೇಶವಿತ್ತು, ಜಿಲ್ಲೆಯಿಂದ ತಿಮ್ಮಯ್ಯ ಸರ್ ತಂಡ ಕಟ್ಟಿಕೊಂಡು ಆ ಮಹಿಳೆಯ ಮನೆ ಮುಂದೆ ಹೋಗಿ ಅವರೇ ಅವಳ ಮನವೊಲಿಸುತ್ತಿರುವ ಫೋಟೋ ನನ್ನನ್ನು ದಿಗ್ಭ್ರಮೆಗೊಳಿಸಿತು. ಇದೊಂದು ಸ್ಪಂದನೆ ನಿರೀಕ್ಷೆಗೂ ಮೀರಿದ್ದು, ಆದರೆ ಸರ್ ಮಾನವೀಯ ಗುಣ ಅವರ ಅಧಿಕಾರದ ಕರ್ತವ್ಯ ನಿಷ್ಠೆ ಅವರನ್ನು ಅವಳ ಬಳಿ ಕಳಿಸಿತ್ತು. ಅಷ್ಟರಲ್ಲಿ ಅವಳೇ ನನಗೆ ಕರೆ ಮಾಡಿದಳು, ಸರ್ ಬಂದ ವಿಷಯ ತಿಳಿಸಿದಳು, ಮರುದಿನ ಬೆಳಿಗ್ಗೆ ಸರ್ ಅಂಬುಲೆನ್ಸ್ ಕಳಿಸುತ್ತಾರಂತೆ ಜೊತೆಗೆ ಸಿಸ್ಟರ್ ಬರ್ತಾರಂತೆ, ನಾಳೆ ಲೇಡಿ ಗೋಷನ್ ಗೆ ಹೋಗುತ್ತೇನೆ ಎಂದಳು. ನನ್ನ ಒಂದು ಬೇಸರದ ಸಂದೇಶ ಅವಳ ಬದುಕನ್ನೇ ಬದಲಾಯಿಸಿತು. ಸರ್ ಗೆ ಧನ್ಯವಾದ ತಿಳಿಸಿದೆ, ಸರ್ ನನಗೆ ಆಧುನಿಕ ದೇವ ಪುರುಷನಂತೆ ಕಂಡರು.
ಮರುದಿನ ಸರ್ ಆಣತಿಯಂತೆ ಅವರ ತಂಡ ಅವಳ ಮನೆ ಬಾಗಿಲು ತಲುಪಿತ್ತು, ಅತ್ತ ಲೇಡಿ ಗೋಷನ್ ತಂಡ ಅವಳ ಆಗಮನಕ್ಕೆ ಕಾದಿತ್ತು, ದಾರಿಯುದ್ದಕ್ಕೂ ಅವಳ ನಡೆ ನುಡಿ ಎಲ್ಲವೂ ನಮಗೆ ಮಾಹಿತಿ ಸಿಗುತ್ತಿತ್ತು, ರಾತ್ರೋರಾತ್ರಿ ಅವಳು ವಿ ಐ ಪಿ, ಅದು ಅಧಿಕಾರಕ್ಕಿರುವ ಬೆಲೆ. ಅಧಿಕಾರಿಯೇ ರಸ್ತೆಗಿಳಿದು ಜನಸಾಮಾನ್ಯನ ಸೇವೆಗೆ ನಿಂತರೆ ಅವರ ಕೆಳಗಿರುವ ಕೆಲಸಗಾರರು ಅತೀ ಚುರುಕಾಗಿ ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ನೈಜ ಉದಾಹರಣೆ, ಅಲ್ಲಿಯವರೆಗೂ ನಾನು ಸಹಾಯ ಕೇಳಿದರೆ ನೆಪ ಹೇಳುತ್ತಿದ್ದವರು ಅವಳು ಹೆಜ್ಜೆಯಿಟ್ಟರೂ ಅದನ್ನು ನಮಗೆ ಮಾಹಿತಿ ನೀಡುತ್ತಿದ್ದರು, ಅದು ಹಾಸ್ಯಾಸ್ಪದವೆನಿಸಿದರೂ ಹೇಗೋ ಅವಳು ಲೇಡಿ ಗೋಷನ್ ತಲುಪಿದಳು, ತಂಡ ಅವಳ ಗರ್ಭಪಾತಕ್ಕೆ ಎಲ್ಲಾ ತಯಾರು ಮಾಡಿದರು, ಮುಂಚೆ ಸಿಸೇರಿಯನ್ ಆದರಿಂದ ಮಾತ್ರೆ ಮದ್ದು ಕೆಲಸ ಮಾಡಲಿಲ್ಲ, ಶಸ್ತ್ರಚಿಕಿತ್ಸೆ ಮಾಡಿ ಗರ್ಭಪಾತ ಮಾಡಿದರು. ಅವಳು ಪ್ರತಿದಿನ ಕರೆ ಮಾಡಿ ವಿಷಯ ತಿಳಿಸುತ್ತಿದ್ದಳು, ಅವಳು ಅಲ್ಲಿ ಇರುವಷ್ಟು ದಿನ ತಿಮ್ಮಯ್ಯ ಸರ್ ಆಸ್ಪತ್ರೆಗೆ ಭೇಟಿ ನೀಡಿ ಅವಳ ಆರೋಗ್ಯ ವಿಚಾರಿಸುವುದು ಅವರ ಮನುಷ್ಯತ್ವಕ್ಕೆ ಒಂದು ಕನ್ನಡಿ, ಬಹುಶಃ ಅಷ್ಟು ಜಾಗರೂಕರಾಗಿ ಒಂದು ರೋಗಿಯ ಬಗ್ಗೆ ಒಬ್ಬ ಅಧಿಕಾರಿ ಗಮನ ಕೊಡುವುದು ಬಹು ಅಪರೂಪ.
ಅಲ್ಲಿಂದ ಬಂದ ಅವಳು ಮನೆಯಲ್ಲಿ ಕೆಲದಿನ ವಿಶ್ರಾಂತಿಸಿದಳು, ಆ ಸಮಯಕ್ಕೆ ಏನೇ ತೊಂದರೆಯಾದರೂ ಸುಳ್ಯ ತಾಲ್ಲೂಕು ಅಧಿಕಾರಿ ಡಾ ಆಶಾ ಅಭಿಕರ್ ಮೇಡಂ ತಂಡ, ಡಿ ಹೆಚ್ ಓ ಸರ್ ತಂಡ ಅವಳ ಕುಟುಂಬಕ್ಕೆ ಬೆನ್ನೆಲುಬಾದರು, ಇಲಾಖೆಯವರು ಅವಳ ಊಟ ಬಟ್ಟೆಗೆ ಸಹಕರಿಸಲು ಆರ್ಥಿಕ ಸಹಾಯವೂ ಮಾಡಿರುವುದು, ಅವಳಿಗೆ ರೇಷನ್ ಕಾರ್ಡ್, ಬ್ಯಾಂಕ್ ಖಾತೆ ತೆರೆದು ಎಟಿಎಂ ಮಾಡಿಸಿಕೊಟ್ಟು ಧನ ಸಹಾಯದ ಜೊತೆಗೆ ನೈತಿಕ ಬೆಂಬಲ ನೀಡಿರುವುದು ನಮ್ಮ ಆರೋಗ್ಯ ಇಲಾಖೆ ಹೆಮ್ಮೆ ಪಡುವ ವಿಷಯ.
ಕೆಲ ದಿನಕ್ಕೆ ಎನಪೋಯ್ ಆಸ್ಪತ್ರೆ ವಿಜಯ್ ಸರ್ ತಂಡ ಅವಳ ಶಸ್ತ್ರ ಚಿಕಿತ್ಸೆಗೆ ಕರೆಕೊಡಲು, ಜಿಲ್ಲಾ ತಂಡ ಎಲ್ಲಾ ಅನುಕೂಲ ಮಾಡಿ ಆoಬುಲೆನ್ಸ್ ನಲ್ಲಿ ಅವಳನ್ನು ಆಸ್ಪತ್ರೆಗೆ ತಲುಪಿಸಿತು. ಅವಳನ್ನು ಸಂಪೂರ್ಣವಾಗಿ ಮತ್ತೆ ಪರೀಕ್ಷೆ ಮಾಡಿದ ತಂಡ ಅವಳ ಶಸ್ತ್ರ ಚಿಕಿತ್ಸೆಗೆ ತಯಾರಿ ಮಾಡಿದರು. ಸತತ ನಾಲ್ಕೈದು ಗಂಟೆ ಶಸ್ತ್ರಚಿಕಿತ್ಸೆ ನಡೆದಿದೆ, ಕಿಡ್ನಿ ಕ್ಯಾನ್ಸರ್ ಖಾತ್ರಿಯಾಗಿದೆ. ಅವಳು ಚೇತರಿಸಿಕೊಂಡು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಳೆ. ಅವಳ ಶಸ್ತ್ರ ಚಿಕಿತ್ಸೆ ಯಶಸ್ವಿಯಾದ ಖುಷಿಗೆ ತಿಮ್ಮಯ್ಯ ಸರ್ ನನಗೆ ಕರೆ ಮಾಡಲು ಒಂದು ಕುಟುಂಬ ಉಳಿಸಿದ ತೃಪ್ತಿ, ನಮ್ಮ ಚೋಟಾ ಶೈತಾನ್ ನಗೆ ಎಂದೂ ಬಾಡದಂತೆ ಅವಳ ರಕ್ಷಾ ಕವಚವಾದ ಸಮಾಧಾನ, ಜೀವ ಉಳಿಸುವುದೇ ನಮ್ಮ ಕರ್ತವ್ಯವಾದರೂ ಈ ಪ್ರಕರಣದಲ್ಲಿ ನಮ್ಮ ಪಾತ್ರ ವಿಭಿನ್ನವಾಗಿತ್ತು, ಅವಳ ಜೊತೆ ನಡೆದ ನಮ್ಮ ಪಯಣ ಸಾವಿರಾರು ಅನುಭವ ಪಾಠ ಹೇಳಿತ್ತು.
ಎಲ್ಲದರ ನಾಯಕತ್ವ ವಹಿಸಿದ ತಿಮ್ಮಯ್ಯ ಸರ್ ಪ್ರತಿದಿನ ಅವಳ ಪ್ರತಿ ಹೆಜ್ಜೆ ಜೊತೆ ನಿಂತು ಸ್ಪಂದಿಸಿ ಅವಳಿಗೆ ನಯಾ ಪೈಸಾ ಹೊರೆಯಾಗದಂತೆ ನೋಡಿಕೊಂಡಿದ್ದು, ಅವಳ ಕುಟುಂಬಕ್ಕೆ ಭರವಸೆಯ ಬೆಳಕಾಗಿದ್ದು ಅಧಿಕಾರ ಪದವಿಯ ಸದುಪಯೋಗದ ಯೋಶೋಗಾಥೆ ಹೇಳಿದರೆ, ಖಾಸಗಿ ವೈದ್ಯರಾದರೂ ಎನ್ನಪೋಯ ತಂಡದ ವಿಜಯ್ ಸರ್ ಅವಳ ಶಸ್ತ್ರ ಚಿಕಿತ್ಸೆಯ ಸಂಪೂರ್ಣ ಹೊಣೆಗಾರಿಕೆ ಹೊತ್ತು ಸಂಪೂರ್ಣ ಉಚಿತ ಚಿಕಿತ್ಸೆ ನೀಡಿದ್ದು ವೈದ್ಯರು ದಾನದಾಹಿಗಳು ಎನ್ನುವರ ವ್ಯಾಖ್ಯಾನಕ್ಕೆ ತಕ್ಕ ಉತ್ತರ ಕೊಟ್ಟು ವೈದ್ಯರ ಔದಾರ್ಯ ಮನ ಪರಿಚಯ ಮಾಡಿಸಿತು, ಲೇಡಿ ಗೋಷನ್ ತಂಡ, ತಾಲ್ಲೂಕು ಆರೋಗ್ಯಾಧಿಕಾರಿ ಸುಳ್ಯ ತಂಡ ಕಾಲ ಕಾಲಕ್ಕೆ ಅವಳ ಸಹಾಯಕ್ಕೆ ನಿಂತದ್ದು ಇಲಾಖೆಯ ಗಟ್ಟಿತನ ಅರಿವು ಮೂಡಿಸಿತು.
ಇನ್ನೂ ವೈಯಕ್ತಿಕವಾಗಿ ಈ ಪ್ರಕರಣ ಈ ಕೇಸ್ ನನಗೆ ಬರಲ್ಲ, ಮೇಲ್ದರ್ಜೆ ಆಸ್ಪತ್ರೆಗೆ ಚೀಟಿ ಕೊಟ್ಟರೆ ಮುಗಿಯಿತು ಎಂಬ ಮನೋಭಾವ ಒಂದು ಪಲಾಯನವಾದ ಒಳಗೊಡಿಸಿಕೊಂಡಿರುವ ಮನಸ್ಥಿತಿಯ ಗುಂಪು. ಪ್ರತಿದಿನ ಹೊಸಬಳಾದ ನನಗೆ ಅದೇ ಕಿವಿಚುಚ್ಚುತ್ತಾರೆ, ಸರ್ಕಾರಿ ಕೆಲಸ ಎಷ್ಟು ಬೇಕೋ ಅಷ್ಟೇ ಮಾಡು,ಎಲ್ಲಾ ಮೇಲ್ದರ್ಜೆಗೆ ಕಳುಹಿಸು ಎನ್ನುತ್ತಾರೆ. ಅಂತಹ ಜನರಿಂದ ದೂರ ಉಳಿದು ಒಂದು ವಿಶೇಷ ಕೇಸ್ ಸಿಕ್ಕರೆ ರೋಗಿಗೆ ನ್ಯಾಯಯುತ ಚಿಕಿತ್ಸೆ ಕೊಡುವ ಜೊತೆಗೆ ಆ ವಿಷಯವನ್ನು ಅರಿತುಕೊಳ್ಳುವ ಪ್ರಯತ್ನ ಮಾಡುವುದು ಜೀವ ಉಳಿಸುವುದರ ಜೊತೆ ನಮ್ಮ ಜ್ಞಾನಾರ್ಜನೆ ಮಾಡುವುದು ಎಂಬುದ ಮನದಟ್ಟು ಮಾಡಿತು, ಕಾಯಕನಿಷ್ಠೆ ಜೊತೆಗೆ ವೈದ್ಯ ಲೋಕದ ಮಾನವೀಯತೆಯ ಪರಿಚಯ ಮಾಡಿತು.
ಒಟ್ಟಾರೆ, ಆರೋಗ್ಯ ಇಲಾಖೆ ಪ್ರತಿ ಹಂತದಲ್ಲೂ ಜೊತೆಯಾಗಿ ನಿಂತಿದ್ದು, ಎಲ್ಲೂ ನಿರ್ಲಕ್ಷ್ಯ ತೋರದೆ ನಡೆದದ್ದು ಒಂದು ತಾಯಿ ಮರಣ ತಪ್ಪಿಸಿದೆ, ನಮ್ಮ ಚೋಟಾ ಶೈತಾನ್ ತಬ್ಬಲಿಯಾಗದೆ ಅಮ್ಮನ ಮಡಿಲಲ್ಲಿ ಅರುಳುವಂತಾಗಿದೆ, ಒಂದು ಬಡ ಕುಟುಂಬ ಮತ್ತೆ ನೆಲೆ ಕಂಡಿದೆ. ನಿದ್ರಾಹೀನ ರಾತ್ರಿಗಳ ಚಿಂತೆಗೆ ಸುಖಾಂತ್ಯ ಸಿಕ್ಕಿದೆ. ಇನ್ನು ಬಾಕಿ ಇರುವ ಚಿಕಿತ್ಸೆ ಮುಗಿಸಿ ಅವಳು ಚೇತರಿಸಿಕೊಂಡು ಆ ಕುಟುಂಬಕ್ಕೆ ಸಾರಥಿಯಾಗುವಳು ಎಂಬ ನಂಬಿಕೆಯಿದೆ.
ಅವಳಿಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತಾ, ಬದುಕಿರುವಷ್ಟು ದಿನ ಮತ್ತೊಬ್ಬರ ಬಾಳಿಗೆ ಬೆಳಕಾಗುವ ಅವಕಾಶ ಸಿಕ್ಕರೆ ದೀಪದ ಬತ್ತಿಯಾಗಲು ಸದಾ ಸನ್ನದ್ಧವಾಗೋಣ, ಬದುಕಲ್ಲಿ ಒಂದು ಸಾರ್ಥಕತೆ ಪಡೆಯೋಣ ಎಂದು ಹೇಳುತ್ತಾ ಹೂವಿನ ಋಣಕ್ಕೆ ನಗುವಿನ ಉಡುಗೊರೆ ಕೊಟ್ಟ ಸಂತೃಪ್ತಿ.
- ಡಾ ಶಾಲಿನಿ ವಿ ಎಲ್
ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ
ಸುಳ್ಯ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

