- ಟಿ. ದೇವಿದಾಸ್
ಭಾರತೀಯರಿಗೆ ದೀಪ ಬೆಳಕಷ್ಟೇ ಅಲ್ಲ, ಬದುಕೂ ಅಹುದು, ಶಾಖವೂ ಅಹುದು ಸುಖವೂ ಅಹುದು ಶುಭವೂ ಅಹುದು. ದೀಪವೂ ಶಾಖವಾದರೆ ಆಹಾರಕ್ಕೆ ಹೇತುವಾಗುತ್ತದೆ. ಆಹಾರದಲ್ಲಿ ಪಂಚಭೂತಾಂಶಗಳ ಸ್ಪರ್ಶವಿದೆ. ಆದ್ದರಿಂದ ಬೆಳಕು ಆಂತರ್ಯದಲ್ಲೇ ಅಂತಸ್ಥವಾಗಿದ್ದು ಬದುಕಿನ ಹಬ್ಬವಾಗೇ ದೀಪಾವಳಿ ನಮ್ಮ ಬಾಳನ್ನು ಬೆಳಗುತ್ತದೆ. ಶಾಖವಿದ್ದಲ್ಲಿ ಚಲನೆಯಿರುತ್ತದೆ. ಇದು ದೇಹದ ಚಲನೆಗೂ ವಿಶ್ವದ ಚಲನೆಗೂ ಅನ್ವಯಿಸುತ್ತದೆ. ಹೊತ್ತುರಿಯುವ ಕಿಚ್ಚಿನಲ್ಲಿ ದೀಪದ ಸುಖವಿಲ್ಲ. ಅಲ್ಲಿ ಕಣ್ಣುಕೋರೈಸುವ ಬೆಳಕು ಕಾಣುತ್ತದೆಯೋ ಹೊರತು ದೀಪದ ಸುಖವಿರುವುದಿಲ್ಲ. ಬಾಳಪಥಕ್ಕೆ ದೀಪವು ಎರವಾಗಬೇಕು. ಒಮ್ಮೆಲೇ ಸುಟ್ಟುಬೂದಿಯಾಗುವ ಬೆಂಕಿಯಲ್ಲಿ ಯಾವ ಹಿತವೂ ಸಿಗುವುದಿಲ್ಲ. ಬಾಳಿಗೆ ಬೆಳಕಾಗುತ್ತದೆಂಬ ಅರಿವಿನಲ್ಲಿ ಬೆಳಕೆಂಬುದು ಯುನಿವರ್ಸಲ್ ಸೆನ್ಸ್.
ಬೆಳಕನ್ನು ವಿಭಿನ್ನ ರೂಪ, ಆಕಾರದಲ್ಲಿ ಕಾಣುವ ಭಾವ ನಮ್ಮದು. ಬಗೆಬಗೆಯ ಹಣತೆಗಳಲ್ಲಿ ಉರಿಯುವ ದೀಪವನ್ನು ಕಾಣುವ ನಮ್ಮ ಪ್ರಜ್ಞೆಯಲ್ಲೇ ವಿಭಿನ್ನತೆಯಲ್ಲಿ ಕಾಣುವ ನಿರ್ಮಲ ಮನಸ್ಸಿನ ಉದಾತ್ತ ಭಾವವಿದೆ. ದೀಪಾರಾಧನೆ ಕೇವಲ ಭೌತಿಕವಷ್ಟೇ ಅಲ್ಲ ಪಾರಮಾರ್ಥಿಕವಾಗಿಯೂ ವೈಜ್ಞಾನಿಕವಾದ ತಾದಾತ್ಮ್ಯವನ್ನು ಹೊಂದಿದೆ. ಎಲ್ಲವನ್ನೂ ದಕ್ಕಿಸಿಕೊಳ್ಳುವ ತಾಕತ್ತು ಅಗ್ನಿಗೆ ಇದೆ. ಆದರೂ ಮನುಷ್ಯನ ಮನಸ್ಸು ಒಂದು ಹದವಾದ ಬೆಚ್ಚನೆಯ ಅನುಭವವನ್ನು ದೀಪದಿಂದ ಬಯಸುವುದಂತೂ ನಿಜ. ಕತ್ತಲೆಗೂ ಹಿಂದೆ ಏನಿತ್ತು ಅಂದರೆ ಕತ್ತಲೆಯೇ ಇತ್ತೇನೋ! ಕತ್ತಲೆಯೇ ತುಂಬಿಕೊಂಡ ಕಾಲದಲ್ಲಿ ಕತ್ತಲೆಯನ್ನೇ ಬೆಳಕಿನಂತೆ ಮನುಷ್ಯ ಕಂಡಿರಬಹುದು. ಅಂಥ ಕತ್ತಲೆಗೂ ಕತ್ತಲೆಯನ್ನು ತೋರಿಸಿದ್ದು ಬೆಳಕು. ಅಂದಿನಿಂದ ಮನುಷ್ಯ ಸಂಕುಲ ಬೆಳಕನ್ನು ಕತ್ತಲೆಗಿಂತ ಹೆಚ್ಚಾಗಿ ಇಷ್ಟಪಡುತ್ತ ಕಾಲಚಕ್ರದ ಗತಿಯಲ್ಲಿ ಅಂಥ ಬೆಳಕನ್ನೇ ಕಾಣುವ ಹಂಬಲ ಹೆಚ್ಚಿಸಿಕೊಂಡ. ಕತ್ತಲೆಯನ್ನು ಆಹ್ವಾನಿಸಿದ ಮನುಷ್ಯನ ಈ ಪ್ರಜ್ಞೆಯು ಕತ್ತಲೆಯಲ್ಲಿ ಬೆಳಕನ್ನು ಕಾಣತೊಡಗಿತು. ಬೆಳಕನ್ನು ಹಲವಿಧದಲ್ಲಿ ಕಾಣುವ ಮನುಷ್ಯ ಮನಸ್ಸು ದೀಪದ ಆರಾಧನೆಯನ್ನು ವೈವಿಧ್ಯಮಯವಾಗಿ ಆಚರಿಸತೊಡಗಿತು.
ಬೆಳಕನ್ನೂ ಬೆಳಕಾಗಿಸುವ ಈ ಕತ್ತಲಿಗೆ ಬೆಳಕನ್ನು ಅರಗಿಸುವ ಕರಗಿಸುವ ಅದಮ್ಯವಾದ ತುಡಿತ. ಬೆಳಕಿಗೆ ಕತ್ತಲನ್ನು ನುಂಗುವ ಧಾಷ್ಟ್ರ್ಯ. ಇದು ಕತ್ತಲು ಬೆಳಕಿನ ನಿರಂತರವಾದ ಹೋರಾಟ. ಬದುಕು ಕೂಡ ಹೀಗೆಯೇ ಅಲ್ಲವೆ? ಕತ್ತಲು ಬೆಳಕಿನ ಯುದ್ಧದಂತೆ. ಬೆಳಕನ್ನು ಬಯಸುವಂತೆ ಜಯವನ್ನೇ ನಿರಂತರವಾಗಿ ಅಪೇಕ್ಷಿಸುವ ಮನುಷ್ಯನ ಈ ಬದುಕು ಕತ್ತಲೆ ಬೆಳಕಿನಂತೆ ದ್ವಂದ್ವಮಯದ ಗೂಡು. ಬೆಳಕು ಜ್ಞಾನ ಸಂಕೇತ. ಕತ್ತಲೆಯ ಅಜ್ಞಾನದ ಪ್ರತಿನಿಧಿ. ಜ್ಞಾನಾಜ್ಞಾನಗಳ ಮೇಲಾಟದಲ್ಲಿ ಕತ್ತಲೂ ಸೋಲುತ್ತದೆ; ಬೆಳಕೂ ಕತ್ತಲಿನಿಂದಾಗಿ ಸೋಲುತ್ತದೆ. ಕೊನೆ ಮೊದಲಿಲ್ಲದ ಆಟವಿದು. ಇದು ನಮ್ಮೊಳಗಿನ ಆಂತರ್ಯದಲ್ಲೂ ಅವ್ಯಾಹತವಾಗಿ ನಡೆಯುತ್ತಲೇ ಇರುತ್ತದೆ. ಕತ್ತಲೆಯನ್ನು ಸೋಲಿಸಿ ಅಲ್ಲೂ ಬೆಳಕಿಗೇ ಮನ್ನಣೆ ನೀಡುತ್ತೇವೆ. ವಿಚಿತ್ರವೆಂದರೆ, ಕತ್ತಲಿಲ್ಲದೆ ಈ ಆಟಕ್ಕೆ ಮೆರುಗು ಇರುವುದಿಲ್ಲ. ಕತ್ತಲು ಗೆಲುವುದನ್ನು ಕಲಿಸುತ್ತದೆ.
ಜ್ಞಾನದ ಮೌಲ್ಯ ಇರುವುದು ಅಜ್ಞಾನದ ಅಸ್ಮಿತೆಯಲ್ಲಿ. ಬರಿಯ ಜ್ಞಾನ ಜ್ಞಾನವಲ್ಲ. ಅಜ್ಞಾನವೂ ಜ್ಞಾನಸಾಧನೆಯ ಮೂಲ. ಜ್ಞಾನದ ಜ್ಞಾನವಿರುವುದು ಅಜ್ಞಾನದ ಮೂಸೆಯಲ್ಲಿ. ಬೆಳಕು ಮತ್ತಷ್ಟು ಬೆಳಕಾಗಿ ಬೆಳಗುವುದು ಕತ್ತಲೆಯಲ್ಲಿ. ಆದ್ದರಿಂದ ಬೆಳಕಿನಾರಾಧನೆಯಲ್ಲಿ ಕತ್ತಲೆಯ ಆರಾಧನೆಯೂ ಅಡಗಿದೆ. ಕತ್ತಲೆಯ ಮೊಟ್ಟೆಯೊಳಗೆ ಬೆಳಕಿನ ಪಾರಮ್ಯ. ಕತ್ತಲೆಯ ಒಡಲಿನಲ್ಲಿ ಬೆಳಕಿನ ರಮ್ಯತೆ. ಬೆಳಕು ಮತ್ತು ಕತ್ತಲಿಗೆ ತೀರಲಾರದ ಅವಿನಾಭಾವದ ನಂಟು. ಒಂದನ್ನು ಬಿಟ್ಟು ಇನ್ನೊದಿರಲಾರದು. ಇವೆರಡರಲ್ಲೇ ಲೌಕಿಕ ಅಲೌಕಿಕ ಜಗದ ಗಂಟು ನಂಟೂ ಇರುವುದು. ಬೆಳಕಿನಷ್ಟೆ ಕತ್ತಲಿಗೂ ಅಸೀಮವಾದ ಪರಿಧಿ. ತನ್ನ ಪರಿಧಿಯಲ್ಲಿ ಉರಿಯುವ ಬೆಳಕು ಕತ್ತಲನ್ನು ಗೆಲ್ಲುತ್ತದೆ; ಕತ್ತಲು ಬೆಳಕನ್ನು ಸೋಲಿಸುತ್ತದೆ. ಜೀವನವೂ ಹೀಗೆ ಒಳಿತಿನಿಂದ ಕೆಡುಕು ಸೋಲುತ್ತದೆ. ಕೆಡುಕು ಒಳಿತನ್ನು ಜಯಿಸುತ್ತದೆ. ಆದ್ದರಿಂದ ದೀಪಾವಳಿ ಬಹಿರಂಗ ವಿಜೃಂಭಣೆಯ ಆರಾಧನೆಯಷ್ಟೇ ಅಲ್ಲ, ಅಂತರಂಗದ ಸೋಲು ಗೆಲುವಿನ ಆರಾಧನೆಯೂ ಆಗಿದೆ.
ಜೀವನ ಸುಖ-ದುಃಖಗಳ, ಸತ್ಯ-ಅಸತ್ಯಗಳ, ನಿತ್ಯ-ಅನಿತ್ಯಗಳ, ಅಮೃತ-ಮರ್ತ್ಯಗಳ, ಸೋಲು-ಗೆಲುವಿನ, ನೋವು-ನಲಿವಿನ, ಉನ್ನತಿ-ಅವನತಿಗಳ, ಲಾಭ-ನಷ್ಟಗಳ ದ್ವಂದ್ವ ಸಮ್ಮಿಲನ. ಯಾವುದೂ ಹಿತವಲ್ಲ, ಯಾವುದೂ ಅಹಿತವಲ್ಲ. ಆದರೂ ಬೆಳಕಿನ ರೂಪದ ಆರಾಧನೆಗೇ ಮನಸ್ಸು ಹಂಬಲಿಸುವುದು. ಒಳಿತೇ ಜೀವನವಾಗುವುದರಲ್ಲಿ ಯಾವ ಸ್ವಾರಸ್ಯವೂ ಇಲ್ಲ. ಕೆಡುಕೇ ಬದುಕಾಗುವುದರಲ್ಲಿ ಅಂಥಾ ಅರ್ಥವೇನಿಲ್ಲ. ಇವೆರಡರ ಸಮ್ಮಿಲನದಲ್ಲಿ ಜೀವನದ ರಮ್ಯತೆಯಿದೆ, ಭವ್ಯತೆಯಿದೆ, ಕುತೂಹಲವಿದೆ, ಸೋಜಿಗವಿದೆ.
ಜಗತ್ತನ್ನು ಗೆಲ್ಲ ಹೊರಟವ ನರಕ ಭಾರತದ ಮೇಲೆ ಆಕ್ರಮಣ ಮಾಡಿದ. ಹದಿನಾರು ಸಾವಿರ ಭಾರತದ ಕನ್ಯಾಮಣಿಯರನ್ನು ಕದ್ದು ಹೋದ. ಸಾಂಕೇತಿಕವಾಗಿ ಸಾಮ್ರಾಟ್ "ವರುಣನ ಛತ್ರ" ವನ್ನು "ಅದಿತಿಯ ಕರ್ಣ ಕುಂಡಲ" ಗಳನ್ನು ಅಪಹರಿಸಿದ್ದ ಎಂದು ಶ್ರೀ ಭಾಗವತ ಹೇಳುತ್ತದೆ. ಇದರ ಅರ್ಥ ಭಾರತೀಯ ಸಾರ್ವಭೌಮತ್ವವನ್ನು ಸರ್ವನಾಶಗೊಳಿಸಲು ಯತ್ನಿಸಿದ್ದ ಎಂದು. ಜಗತ್ತಿನೆಲ್ಲೆಡೆ ಭೀಕರ ಕತ್ತಲನ್ನು ತುಂಬಿಸಿ ತನ್ನ ಅಧೀನದಲ್ಲಿ ಇಟ್ಟುಕೊಳ್ಳುವ ಮಹಾ ದುಃಸ್ಸಾಹಸಕ್ಕೆ ಮುಂದಾಗಿ ಎರಗಿ ಬಂದಿದ್ದ. ಇವ ಕತ್ತಲುಪ್ರಿಯ. ಜಗತ್ತಿಗೇ ಕತ್ತಲನ್ನು ತುಂಬಲೆತ್ನಿಸಿದ ಇವನನ್ನು ನಾಶಗೊಳಿಸಿದವ ಶ್ರೀಕೃಷ್ಣ. ತನ್ನ ವಿನಾಶದ ಸಂದರ್ಭದಲ್ಲಿ ನರಕ ಶ್ರೀಕೃಷ್ಣನಲ್ಲಿ ಕೇಳಿಕೊಂಡ: "ನಾನು ಜಗತ್ತನ್ನು ಗೆಲ್ಲ ಹೊರಟಿದ್ದು ತಪ್ಪು; ಬೆಳಕಿಗೇ ಜಯ; ಕತ್ತಲೆಗಲ್ಲ. ಆದರೆ ನಾನು ಮಾಡಿದ ತಪ್ಪನ್ನು ಬೇರೆ ಯಾರೂ ಮಾಡದಿರಲಿ. ಅದಕ್ಕಾಗಿ ನಾನು ಸತ್ತ ದಿನವನ್ನು, ಈ ಪರಿಯನ್ನು ಭಾರತೀಯರು ಚಿರಂತನವಾಗಿ ನೆನೆಸಲಿ, ನನ್ನ ಚರಿತ್ರೆಯೊಡನೆ" ಎಂದು. ಭಾಗ್ಯಪ್ರದಾಯಕನೆನಿಸಿದ ಭಗವಂತ ಅವನ ಕೇಳಿಕೆಗೆ ಒಪ್ಪಿಕೊಂಡ. ಅಂದಿನಿಂದ ಇಂದಿನವರೆಗೂ ಭಗವಂತನಿಂದ ನರಕ ಮುಕ್ತಿ ಪಡೆದ ಆ ದಿನವನ್ನೂ, ನರಕನಿಂದ ಆದಂತಹ ಮಹಾನ್ ತಪ್ಪು ನಮ್ಮ ಜೀವನದಲ್ಲೂ ಮರುಕಳಿಸದಿರಲು ನರಕನನ್ನು ನೆನಪಿಸುವ ನರಕ ಚತುರ್ದಶಿಯ ಆರಾಧನೆ. ಸೂರ್ಯೋದಯವಾದೊಡನೆ ಅಭ್ಯಂಗ ಸ್ನಾನ ಮಾಡುತ್ತ, ಮೈಮನಸ್ಸಿಗೆ ಅಂಟಿಕೊಂಡ ಕತ್ತಲೆಯೆಂಬ ಕೊಳೆಯನ್ನು ಕೊಡವಿಕೊಂಡು ಕತ್ತಲನ್ನು ಹೊಡೆದೋಡಿಸುವಂತೆ ದೀಪವನ್ನು ಬೆಳಗಿ ಬೆಳಕಿನ ರೂಪದಲ್ಲಿ ಹಬ್ಬವನ್ನು ಆರಾಧಿಸುತ್ತೇವೆ. ಎಂಥಾ ಘನಮೌಲ್ಯವಲ್ಲವೆ?
ನರಕನು ಮಾಡಿದ ತಪ್ಪನ್ನೇ ಬಲಿಚಕ್ರವರ್ತಿಯೂ ಮಾಡಿದ. ವಿಷ್ಣು ತ್ರಿವಿಕ್ರಮನಾಗಿ ಅವನನ್ನು ಪಾತಾಳಕ್ಕೆ ತಳ್ಳಿದ. ಬಲಿಯ ಪ್ರಾರ್ಥನೆಯಂತೆ ವರ್ಷಕ್ಕೊಮ್ಮೆ ಭಾರತಕ್ಕೆ ಬಂದು ಹೋಗುವುದಕ್ಕೆ ತ್ರಿವಿಕ್ರಮ ದಯಪಾಲಿಸಿದ ದಿನವೇ ಬಲಿಪಾಡ್ಯ. ಈ ಎರಡೂ ನಿದರ್ಶನಗಳೂ ಹಿಂಸೆಯನ್ನು ಲೋಕಕ್ಷೇಮಕ್ಕಾಗಿ ಹಿಂಸೆಯಿಂದಲೇ ಗೆದ್ದು ಶಾಂತಿ, ನೆಮ್ಮದಿ, ಅಹಿಂಸೆಯನ್ನು ಮರುಸ್ಥಾಪನೆ ಮಾಡಿದ ದಿನಗಳಿವು. ಇದನ್ನು ಮರೆಯಬಾರದು. ಕತ್ತಲನ್ನು ಮರೆತರೆ ಬೆಳಕಿಗೆ ಸಾರ್ಥಕ್ಯ ಬರುವುದು ಹೇಗೆ? ಅದಕ್ಕಾಗಿ ಈ ಎರಡೂ ದಿನಗಳ ಆಚರಣೆ ಮಹತ್ತ್ವದ್ದಾಗಿದೆ. ಇವುಗಳನ್ನು ನೆನಪಿಸಿದರೆ ಮಾತ್ರ ಲಕ್ಷ್ಮೀ ಕೃಪೆ. ಅದಕ್ಕಾಗಿಯೇ ಲಕ್ಷ್ಮೀ ಆರಾಧನೆ. ಲಕ್ಷ್ಮೀ ಪೂಜೆ. ಬಲಿಯಂತೆ ದಾನಧರ್ಮವೂ ಈ ದಿನ ಶ್ರೇಷ್ಠ.
ಕೆಟ್ಟವರೇ ಇಲ್ಲವೆಂಬುದೂ ಅಪಕ್ವ ಅಪ್ರಬುದ್ಧ ಬುದ್ಧಿವಂತಿಕೆಯ ಕುರುಹು. ಎಲ್ಲವೂ ಒಳ್ಳೆಯದೇ ಎಂಬುದೂ ಅತೀ ಬುದ್ಧಿವಂತಿಕೆಯ ಪ್ರದರ್ಶನ. ಬದುಕಿನಲ್ಲಿ ಈ ಎರಡರ ಎಚ್ಚರವೂ ಅತೀ ಮುಖ್ಯ. ಈ ಎಚ್ಚರದಲ್ಲೇ ನಮ್ಮ ನಮ್ಮ ಬದುಕು ಸಾಗಬೇಕು. ಕತ್ತಲು ತುಂಬಿದ ನಮ್ಮ ಅಂತರಂಗ-ಬಹಿರಂಗದ ಬದುಕಿನೊಳಗೆ ಕತ್ತಲನ್ನು ಹೋಗಲಾಡಿಸಿ ಬೆಳಕು ಇನ್ನಷ್ಟು ಬೆಳಕಾಗಿ ಪ್ರಜ್ವಲಿಸಲಿ ಎಂಬ ಸದಾಶಯ, ಸದಾಗ್ರಹದೊಂದಿಗೆ ಪ್ರತಿ ದೀಪಾವಳಿ ನಮ್ಮೆಲ್ಲರ ಔನ್ನತ್ಯವನ್ನು ಉತ್ಕರ್ಷದೆಡೆಗೆ ಒಯ್ಯಲಿ ಎಂಬುದೇ ಪ್ರತಿ ಭಾರತೀಯನ ಸಾರ್ವಕಾಲಿಕ ವಾಂಛೆ. ಕಾಣುವ ಕತ್ತಲಿನಲ್ಲಿ ಕಾಣುವ ಬೆಳಕಿನೊಂದಿಗೆ ಆಟವಾಡುವ ಈ ಹಬ್ಬ ಅಭ್ಯಂಗ ಸ್ನಾನ, ಗೋವರ್ಧನ ಪೂಜೆ, ಗೋಶೃಂಗಾರ, ಹಾಲು ಹಿಂಡುವ, ಕಡೆಗೋಲನ್ನು ಪೂಜಿಸುವ, ಹಟ್ಟಿಗಳನ್ನು ಬೆಳಗಿಸುವ, ಹಸುಗಳಿಗೆ ಗ್ರಾಸ ನೀಡುವ, ದಾನಕ್ರಿಯೆ, ಸಾಂಕೇತಿಕವಾಗಿ ಹಿಟ್ಟಿನಿಂದ ಅಥವಾ ಸಗಣಿಯಿಂದ ಬಲಿಯನ್ನು ಮಾಡಿ ಆರಾಧಿಸಲ್ಪಡುತ್ತದೆ. ದೀಪಾವಳಿ ಆರ್ಯ- ದ್ರಾವಿಡ (ನಿಜವಾಗಿ ಆರ್ಯ-ದ್ರಾವಿಡವೆಂಬ ವಿಭಾಗಗಳಿಲ್ಲ) ಸಂಸ್ಕೃತಿಯ ಸಮಾಗಮವಾಗಿ ಅನೂಚಾನವಾಗಿ ನಡೆಯುತ್ತ ಬಂದಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


