ಕೃತಕ ಬುದ್ಧಿಮತ್ತೆ ಎಲ್ಲರ ಬದುಕನ್ನು ಬದಲಿಸುವ ಮೂಲಭೂತ ಶಕ್ತಿ: ಶಶಿ ಶೇಖರ್ ವೆಂಪತಿ

Upayuktha
0

ಎನ್‌ಎಂಐಟಿ ಮಹಾವಿದ್ಯಾಲಯದ ರಜತ ಮಹೋತ್ಸವ ವರ್ಷಾಚರಣೆ ಉದ್ಘಾಟನೆ




ಯಲಹಂಕ, ಬೆಂಗಳೂರು: ‘ಕೃತಕ ಬುದ್ದಿಮತ್ತೆ ಕೇವಲ ತಂತ್ರಜ್ಞಾನದ ಆವಿಷ್ಕಾರ ಮಾತ್ರವಲ್ಲ. ಅದು ಎಲ್ಲರ ಬದುಕನ್ನು ಬದಲಿಸುವ ಹಾಗೂ ಹೊಸ ಆಯಾಮಗಳಿಂದ ಪುನರ್‌ರೂಪಿಸುವ ಮೂಲಭೂತ ಶಕ್ತಿ. ನಾವು ಅಂದುಕೊಂಡದ್ದನ್ನು ತುರ್ತಾಗಿ ಅನ್ವೇಷಿಸಲು ಅದು ವೇಗವರ್ಧಕದ ರೀತಿ ಕೆಲಸ ಮಾಡುತ್ತದೆ ಮತ್ತು ನಮ್ಮನ್ನು ಸೃಜನಾತ್ಮಕವಾಗಿ ಮತ್ತಷ್ಟು ಯೋಚಿಸಲು ಹಾಗೂ ಅನ್ವೇಷಿಸಲು ಪ್ರೇರೇಪಿಸುತ್ತದೆ. ಜನಸಾಮಾನ್ಯರ ದೈನಂದಿನ ಬದುಕಿನ ವೇಗವನ್ನು ಹೆಚ್ಚಿಸುವುದರಲ್ಲಿ ಮಾತ್ರವಲ್ಲ, ಗಂಭೀರ ಅನ್ವೇಷಕರು ತಮ್ಮ ಗುರಿಯನ್ನು ಕಡಿಮೆ ಅವಧಿಯಲ್ಲಿ ತಲುಪುವಂತೆ ಮಾಡುವಲ್ಲಿ ಕೃತಕ ಬುದ್ದಿಮತ್ತೆ ಮಹತ್ವದ ಪಾತ್ರ ವಹಿಸುತ್ತದೆ. ತಂತ್ರಜ್ಞಾನ ಕಲಿಸುವ ನಮ್ಮ ಶಿಕ್ಷಣ ಸಂಸ್ಥೆಗಳು ಕೃತಕ ಬುದ್ದಿಮತ್ತೆಯ ನೆರವಿನಿಂದ ತಮ್ಮ ವಿದ್ಯಾರ್ಥಿಗಳನ್ನು ಅನ್ವೇಷಣಾ ಕ್ಷೇತ್ರದಲ್ಲಿ ದಾಪುಗಾಲುಗಳನ್ನಿಡುವಂತೆ ಸಜ್ಜುಗೊಳಿಸಬೇಕು' ಎಂದು ಡೀಪ್ ಟೆಕ್ ಫಾರ್ ಭಾರತ್ ಫೌಂಡೆಶನ್‌ನ ಸಹ-ಸಂಸ್ಥಾಪಕ ಹಾಗೂ ಪ್ರಸಾರ ಭಾರತಿಯ ವಿಶ್ರಾಂತ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿ ಶೇಖರ್ ವೆಂಪತಿ ನುಡಿದರು.


ಏಕೆಂದರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನ್ವೇಷಣೆ ಹಾಗೂ ಅಭಿವೃದ್ಧಿಗಳ ಸಲುವಾಗಿ ಸಂಶೋಧನೆಗಳು ತೀವ್ರಗತಿಯಲ್ಲಿ ದೇಶದಾದ್ಯಂತ ನಡೆಯಲೆಂದೇ ನಮ್ಮ ಪ್ರಧಾನಮಂತ್ರಿಗಳು, ಇಷ್ಟರಲ್ಲಿಯೇ ಒಂದು ಲಕ್ಷ ಕೋಟಿ ರೂಗಳ ಅನುದಾನವನ್ನು ಘೋಷಿಸಲಿದ್ದಾರೆ. ಸ್ವಾತಂತ್ರ್ಯದ 100ನೇ ವರ್ಷಾಚರಣೆಯ ಇಸವಿ 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿ ಹಾಗೂ ವಿಶ್ವಗುರುವಾಗಲಿ ಎಂಬುದು ಅವರ ಉದ್ದೇಶ’ ಎಂದರು.


ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ರಜತ ಮಹೋತ್ಸವ ವರ್ಷಾಚರಣೆಯನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡುತ್ತಿದ್ದರು. 



‘2001ನೇ ಇಸವಿಯಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ಈ ಸಂಸ್ಥೆ ಇಂದು ದೇಶದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿ ಬೃಹತ್ತಾಗಿ ಬೆಳೆದಿದೆ ಹಾಗೂ ದೇಶವಿದೇಶಗಳ ತಂತ್ರಜ್ಞರ ಗಮನ ಸೆಳೆದಿದೆ. 24 ವರ್ಷಗಳ ಹಿಂದೆ ಬಿತ್ತಿದ್ದ ಕನಸು ಇಂದು ಬೃಹತ್ ವೃಕ್ಷವಾಗಿ ಸಾವಿರಾರು ವಿದ್ಯಾರ್ಥಿಗಳನ್ನು ಅತ್ಯುತ್ತಮ ತಂತ್ರಜ್ಞರಾಗಿಸುವಲ್ಲಿ ಯಶಸ್ವಿಯಾಗಿದೆ’ ಎಂದರು. 


ನವದೆಹಲಿಯ ಇಂಡಿಯಾ ಹ್ಯಾಬಿಟ್ಯಾಟ್ ಸೆಂಟರ್‌ನ ನಿರ್ದೇಶಕ ಹಾಗೂ ಗ್ಲೋಬಲ್ ಮೀಡಿಯಾ ಎಜುಕೇಶನ್ ಕೌನ್ಸಿಲ್‌ನ ಅಧ್ಯಕ್ಷ ಡಾ. ಕೆ.ಜಿ. ಸುರೇಶ್ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅವರು ಮಾತನಾಡಿ, ‘ನಮ್ಮ ಶಿಕ್ಷಣ ಸಂಸ್ಥೆಗಳು ಸಹಸ್ರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಭಾರತೀಯ ಜ್ಞಾನ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ಹಾಗೆಂದರೆ, ಹಾಲಿ ಇರುವ ಪಠ್ಯಕ್ರಮವನ್ನು ಬದಲಿಸಬೇಕು ಎಂದಲ್ಲ. ಸಾಂಪ್ರದಾಯಿಕ ಶಿಕ್ಷಣದ ಜತೆ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಸಮ್ಮಿಲನಗೊಳಿಸುವುದರಿಂದ ವಿದ್ಯಾರ್ಥಿಗಳಿಗೆ ನೈತಿಕ ತಳಪಾಯವನ್ನು ಒದಗಿಸಿದಂತಾಗುತ್ತದೆ ಹಾಗೂ ಮಾನವೀಯತೆಯನ್ನು ಅವರು ಬದುಕಿನುದ್ದಕ್ಕೂ ಅಳವಡಿಸಿಕೊಳ್ಳಲು ನೆರವು ನೀಡಿದಂತಾಗುತ್ತದೆ. ನಿಟ್ಟೆಯ ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯ ಘಟಕಗಳು ಈಗಾಗಲೇ ಸ್ಥಾಪನೆಗೊಂಡಿವೆ ಎಂಬ ಸಂಗತಿ ನಿಜಕ್ಕೂ ಪ್ರಶಂಸಾರ್ಹ’ ಎಂದು ನುಡಿದರು.


ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ 20ವರ್ಷಕ್ಕೂ ಹೆಚ್ಚು ಅವಧಿ ಸೇವೆ ಸಲ್ಲಿಸಿದ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು.


ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಂ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಸ್ವಾಗತಿಸಿದರು. ಕೊನೆಯಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ವಂದನಾರ್ಪಣೆ ಸಲ್ಲಿಸಿದರು. 


ನಿಟ್ಟೆ ಪರಿಗಣಿತ ವಿಧ್ವವಿದ್ಯಾಲಯದ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ, ತಂತ್ರಜ್ಞಾನ ಕಲಿಕೆ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ, ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತಿç, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top