ಸಮಾಜದಲ್ಲಿ ಪರಿವರ್ತನೆಯ ಬೆಳಕಿನ ಕಿಡಿ

Upayuktha
0

 



ಗದಲ್ಲಿ ಪರಿವರ್ತನೆಗಳು ಆಗುತ್ತಲೇ ಇರುತ್ತವೆ. ಇದು ಜಗದ ನಿಯಮ. ಆದರೆ ಮನುಷ್ಯನ ನಡವಳಿಕೆಗಳಲ್ಲಿ ಕೆಲವೊಂದು ಪರಿವರ್ತನೆಗಳು ಚಿಂತನಾ ಮತ್ತು ಯೋಚನಾಲಹರಿಯ ವ್ಯತ್ಯಾಸಗಳಲ್ಲಿ ನಡೆಯುತ್ತದೆ.


ನಮ್ಮ ಹವ್ಯಕ ಸಮಾಜದಲ್ಲಿ ನಿತ್ಯ ಜೀವನದ ಆಚಾರ ವಿಚಾರಗಳಿಗೆ ಬಹಳ ಮಹತ್ವ ಕೊಡುತ್ತಿದ್ದರು. ಬೆಳಗ್ಗೆ ಎದ್ದ ತಕ್ಷಣ ಸ್ನಾನ, ಪೂಜೆ  ಆಗದೆ ಉಪಹಾರ ಸೇವಿಸುವ ಕ್ರಮ ಹೆಚ್ಚುಕಮ್ಮಿ ಇರಲಿಲ್ಲ. ಮನೆಯ ಆಹಾರ ಹೊರತು ಹೊರಗಡೆ ಆಹಾರ ಸೇವಿಸುವಿಕೆ ನಿಶಿದ್ಧ ಅಂತಲೇ ಇತ್ತು. ಪ್ರವಾಸಗಳಲ್ಲಿ ಕೂಡ ಬ್ರಾಹ್ಮಣ ಮನೆಗಳಿಗೆ ಅಥವಾ ಅನ್ನ ಛತ್ರಗಳಿಗೆ ಭೇಟಿ ನೀಡುತ್ತಿದ್ದರು. ಶುದ್ಧದ ಹೆಸರಿನಲ್ಲಿಯೂ ಇರಬಹುದು ಅಥವಾ ಈಗಿನಂತೆ ಹೋಟೆಲ್‌ಗಳು ಇಲ್ಲದ ಕಾರಣವೂ ಇರಬಹುದು. ವೃತ್ತಿ ಜೀವನಕ್ಕೆ ಎಷ್ಟು ಮಹತ್ವ ಕೊಡುತ್ತಿದ್ದೇವೋ, ಅಷ್ಟೇ ಮಹತ್ವ ಆಹಾರ, ವಿಹಾರ, ಸಂಸ್ಕಾರಕ್ಕೂ ನೀಡುತ್ತಿದ್ದೆವು.


ಕಾಲ ಸರಿಯಿತು, ಆಧುನಿಕ ವಿದ್ಯಾಭ್ಯಾಸ ಬಂತು. ಬದುಕಿನ ಎಲ್ಲಾ ವಿಷಯಗಳನ್ನು ವೈಜ್ಞಾನಿಕತೆಯ ಒರೆಗಲ್ಲಿಗೆ ಹಾಕಿ ವಿಮರ್ಶಿಸಲಾಯಿತು. ನಮ್ಮೆಲ್ಲಾ ನಿತ್ಯಚಾರಗಳಿಗೆ ಮೌಡ್ಯವೆಂಬ ಮುದ್ರೆ ಒತ್ತಲಾಯಿತು. ಆಚರಣೆಗಳು ಮೌಡ್ಯ ಅಂತ ಅನಿಸಿದಾಗ ನಮ್ಮ ನಮ್ಮ ಅನುಕೂಲಕ್ಕೆ ಮತ್ತು ನಮ್ಮ ಮನೋಯೋಚನೆಗೆ ಸರಿಯಾಗಿ ನಮ್ಮ ನಡವಳಿಕೆಗಳು ಪರಿವರ್ತನೆಗೊಂಡವು. ಆಹಾರ ವಿಹಾರ ಸಂಸ್ಕಾರಗಳು ಸ್ವೇಚ್ಚಾಚಾರಕ್ಕೆ ಪರಿವರ್ತನೆಗೊಂಡವು. ತಿಂಗಳಾಂತ್ಯದಲ್ಲಿ ಕೈಗೆ ಬರುವ ಹಣದ ಥೈಲಿ ಆ ರೀತಿ ಕುಣಿಸಿದವು ಅಂತಲೂ ಹೇಳಬಹುದು. ಹಾಗೆಂದು ಈ ಜೀವನ ಸುಖೀ ಸಂಸಾರವನ್ನಂತೂ ಯಾರಿಗೂ ನೀಡಿಲ್ಲ. ನಮ್ಮ ಸಮಾಜದಲ್ಲಾಗುವ ಸಾಂಸಾರಿಕ ಅಸಹಿಷ್ಣುತೆ, ವಿಚ್ಛೇದನ, ಆರೋಪ ಪ್ರತ್ಯಾರೋಪಗಳು, ಮಕ್ಕಳಾಗದಿರುವಿಕೆ, ಮಕ್ಕಳು ಬೇಡ ಅಂತ ಅನಿಸುವುದು, ಆದರೂ ಅರ್ಧ ಜೀವನದ ನಂತರ ಸಾಕು ಅಂತ ಮುಂದೂಡುವುದು, ಮಾನಸಿಕ ಖಿನ್ನತೆ ಇವುಗಳನ್ನೆಲ್ಲ ನೋಡುವಾಗ ನಮ್ಮ ಹಿಂದಿನ ತಲೆ ಮಾರಿನ ಸಂಸ್ಕಾರಗಳ ಹಿಂದಿನ ಸತ್ವದ ಅರಿವಾಗಬಹುದು. ಅತ್ತಲಾಗಿ ಪರಂಪರಾಗತ ಕೂಡು ಕುಟುಂಬ ಜೀವನವೂ ಹಳ್ಳ ಹಿಡಿಯಿತು. ಇತ್ತಲಾಗಿ ಸ್ವಂತ ಜೀವನಕ್ಕೂ ದಿಕ್ಕು ದೆಸೆ ಇಲ್ಲದಾಯಿತು.


ನಮ್ಮ ಗುರುಪೀಠಗಳ ನಿರಂತರ ಮಾರ್ಗದರ್ಶನ, ಚಿಂತಕರ ಚಿಂತನೆಗಳು ನಿಧಾನವಾಗಿಯಾದರೂ ಸಮಾಜದಲ್ಲಿ ಪರಿವರ್ತನೆಗೆ ನಾಂದಿ ಹಾಡಬಹುದು ಎಂಬುದಕ್ಕೆ ಒಂದು ಉದಾಹರಣೆ ನಿನ್ನೆ ಸಿಕ್ಕಿತು.


ಆತ್ಮೀಯ ಮಿತ್ರರೊಬ್ಬರು ಲೋಕಾಭಿರಾಮ ಮಾತುಗಳ ಮಧ್ಯದಲ್ಲಿ ವಿಷಯ ಒಂದನ್ನು ಹಂಚಿಕೊಂಡರು ಅಥವಾ ಈ ವಿಷಯವನ್ನು ಹೇಳುವುದಕ್ಕಾಗಿಯೇ ದೂರವಾಣಿಯನ್ನು ಉಪಯೋಗಿಸಿದ್ದರೂ ಅಂತಲೂ ಹೇಳಬಹುದು. ಅವರ ಸಂಬಂಧಿಕರ ಪೈಕಿ ವಿವಾಹ ಅಪೇಕ್ಷಿತ ಮಾಹಿತಿ ತಂತ್ರಜ್ಞಾನ ಅಭಿಯಂತರ (ಐ.ಟಿ ಇಂಜಿನಿಯರ್) ಹುಡುಗನೊಬ್ಬನಿಗೆ ಅದೇ ವರ್ಗದ ಹುಡುಗಿಯ ಮಾತಾಪಿತೃಗಳನ್ನು ಮಾತನಾಡಿಸಲಾಯಿತು. ಸಾಮಾನ್ಯವಾಗಿ ಈಗಿನ ಕನ್ಯೆ ಮತ್ತು ಕನ್ಯಾಪಿತೃಗಳ ಬೇಡಿಕೆ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುವ ಸ್ವೇಚ್ಛಾಚಾರದ ಬದುಕೇ ಆಗಿರುತ್ತದೆ. ಆ ಕುರಿತು ಬೇಡಿಕೆಗಳ ಪಟ್ಟಿ ಏನೆಂದು ಹೆಚ್ಚಿನವರಿಗೂ ಗೊತ್ತಿರುತ್ತದೆ. ಆದರೆ ಇಲ್ಲಿ ಕನ್ಯೆ ಮತ್ತು ಕನ್ಯಾಪಿತೃಗಳ ಬೇಡಿಕೆ ಹುಡುಗನಾದವನು ನಿತ್ಯ ಜಪ ಮಾಡುವವನಾಗಿರಬೇಕು, ಅನಿವಾರ್ಯ ಸಂದರ್ಭಗಳ ಹೊರತು ಮೋಜಿಗಾಗಿ ಹೋಟೆಲ್‌ಗಳ ಸಂದರ್ಶನಕಾರರಾಗಿರಬಾರದು. ಹಳೆ ಕಾಲದ ಕೂಡು ಕುಟುಂಬದ ಸಂಸ್ಕಾರಗಳಿಗೆ ಒಲವುಳ್ಳವನಾಗಿರದಿದ್ದರೆ ಜಾತಕ ಕೊಡಲು ಸಿದ್ಧ ಎಂಬ ಶರತ್ತನ್ನು ಹಾಕಿದ್ದರಂತೆ. ಮದುವೆ ಎಂಬುದು ನಿಶ್ಚಯವಾಗುವುದು ಸ್ವರ್ಗದಲ್ಲಿಯಂತೆ. ಜೀವನದಲ್ಲಿ ಅದನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವುದು ಗಂಡು ಹೆಣ್ಣಿನ ಜವಾಬ್ದಾರಿ. ಗಂಡು ಮತ್ತು ಹೆಣ್ಣಿನ ತಾಳ್ಮೆ, ಅತಿಯಾದ ನಿರೀಕ್ಷೆಯಿಲ್ಲದ ಹೊಂದಾಣಿಕೆಯ ಬದುಕೇ ಸುಖಿ ಸಂಸಾರದ ಗುಟ್ಟು. ಅದೇನೀತಿಯಂತೆ ಇದೇ ಮಾದರಿಯ ಕನ್ಯೆಯನ್ನು ಅನ್ವೇಷಿಸುತ್ತಿದ್ದ ಈ ಹುಡುಗನ ಕುಟುಂಬಕ್ಕೆ ವಿವಾಹ ಕೂಡುವ ಕಾಲ ಬಂದಿದೆಯಂತೆ.


ಯಾವುದೇ ಪರಿವರ್ತನೆಗಳು ನಡೆಯುವುದು ಸಣ್ಣ ಕಿಡಿಯ ರೂಪದಲ್ಲಿ. ನಿಧಾನವಾಗಿ ಮುಂದೆ ಪ್ರಜ್ವಲಿಸುತ್ತದೆ. ಇಂತಹ ಸಂಗತಿಗಳನ್ನು ಹೆಚ್ಚು ಹೆಚ್ಚು ಪ್ರಸರಿಸಿದರೆ ಪ್ರಕಾಶಮಾನವಾಗಿ ಭವಿಷ್ಯದ ಕುಟುಂಬಗಳು ಬೆಳಗೀತು. ಸಮಾಜದಲ್ಲಿ ಇನ್ನೂ ಒಳಿತಿದೆ. ಆದರೆ ಒಳಿತಿನ ಬಗ್ಗೆ ಪ್ರಚಾರ ಕಡಿಮೆ. ಅಲ್ಲಲ್ಲಿ ಆಗಾಗ ಕೇಳಿ ಬರುವ ಸಾಂಸಾರಿಕ ಸಮಸ್ಯೆಗಳಿಗೆ ನಮ್ಮ ಪಾಲನ್ನೂ ಸೇರಿಸಿಕೊಂಡು ಹರಟೆ (ಗಾಸಿಪ್) ಕೊಚ್ಚುವ ಬದಲು ಒಳಿತಿನ ಬಗ್ಗೆ ಹರಟೆಯಾಗಲಿ. ಆ ಒಳಿತಿನ ಪ್ರಸರಣವು ಸಮಾಜ ತಿದ್ದುವಲ್ಲಿ ಸಹಕಾರಿ.


ನಮ್ಮೆಲ್ಲರ ಪ್ರೀತಿಪೂರ್ವಕ ಹೃದಯಾಂತರಾಳದ ಆಶೀರ್ವಾದವನ್ನು ಈ ಎರಡೂ ಕುಟುಂಬಗಳಿಗೆ ಸಲ್ಲಿಸೋಣ. 


 ಹರೇ ರಾಮ.


- ಎ.ಪಿ. ಸದಾಶಿವ ಮರಿಕೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top