ಧರ್ಮಸ್ಥಳ: ಸಂಸ್ಕಾರವೆಂಬುದು ಶಿಶುವಿಗೆ ಗರ್ಭಾಂಕುರದಿಂದ ಆರಂಭವಾಗುತ್ತದೆ ಎಂದು ಉಜಿರೆಯ ಧಾರ್ಮಿಕ ವಿದ್ವಾಂಸ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಅಭಿಪ್ರಾಯಪಟ್ಟರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 3ನೇ ದಿನದ ಕಾರ್ಯಾಗಾರದಲ್ಲಿ 'ಯುವಕರಲ್ಲಿ ಸಂಸ್ಕಾರ ಸಂಸ್ಕೃತಿ ಅರಿವು' ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು.
ಸಂಸ್ಕಾರವೆಂಬುದು ನಾವು ಭೂಸ್ಪರ್ಶವಾಗುವ ಮುನ್ನವೇ ಆರಂಭವಾಗುತ್ತದೆ.ಗರ್ಭದಲ್ಲಿನ ಕಲಿಕೆ ಅಕ್ಷರಾಭ್ಯಾಸದ ಜೊತೆ ಮುಂದುವರಿದು ಕುಟುಂಬ ಸಂಸ್ಕಾರದ ಜೊತೆ ಬೆರೆತು ಭವಿಷ್ಯದಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾಗುತ್ತದೆ. ನಾವು ಸೇವಿಸುವ ಆಹಾರ, ಪಾನೀಯ, ಧರಿಸುವ ವಸ್ತ್ರದಿಂದ ಸಂಸ್ಕಾರವೆಂಬುದು ಆರಂಭವಾಗಿ ಕೌಟುಂಬಿಕ ಪ್ರಜ್ಞೆ ಮತ್ತು ಸಾಮಾಜಿಕ ಪರಿವರ್ತನೆಗೆ ದಾರಿದೀಪವಾಗುತ್ತದೆ. ವ್ಯಕ್ತಿಯಿಂದ ಕುಟುಂಬ, ಕುಟುಂಬದಿಂದ ಉತ್ತಮ ಸಮಾಜದ ನಿರ್ಮಾಣ ಮಾಡುವಲ್ಲಿ ಸಂಸ್ಕಾರದ ಪಾತ್ರ ಮಹತ್ತರವಾದುದು ಎಂದು ಹೇಳಿದರು.
ಯುವಕರಲ್ಲಿ ಅಧ್ಯಾತ್ಮಿಕ,ಭೌತಿಕ ಮತ್ತು ಧಾರ್ಮಿಕ ಚಿಂತನೆಗಳು ಮುಖ್ಯ.ಇವೆಲ್ಲದರ ಬೆಳವಣಿಗೆಯ ಮೊದಲ ಹೆಜ್ಜೆಯು ನಮ್ಮ ಮನೆಯಂಗಳದಲ್ಲಿ ಆರಂಭವಾಗಬೇಕು.
'ವಸುದೈವ ಕುಟುಂಬಕಂ' ಪರಿಕಲ್ಪನೆಯು ಪರಿಪೂರ್ಣವಾಗಲು ಯುವ ಮನಸ್ಸುಗಳನ್ನು ಸದೃಢಗೊಳಿಸುವಲ್ಲಿ ಭಜನೆ, ಹಬ್ಬ, ಆಚರಣೆ, ನಂಬಿಕೆ ಮತ್ತು ಕಲಿಕೆ ಅನುಷ್ಠಾನವಾದಾಗ ಮಾತ್ರ ಸಾಧ್ಯ.ಅಲ್ಲದೆ ಇಂದಿನ ಪೀಳಿಗೆಗಳಲ್ಲಿ ಗುಣ, ಶೀಲ, ನಡತೆ ಹಾಗೂ ಸನ್ನಡತೆಯನ್ನು ಜಾಗೃತಗೊಳಿಸಿ ಸಂಸ್ಕಾರದ ಜ್ಯೋತಿ ಬೆಳಗಬೇಕಿದೆ ಎಂದರು.
ಸಂಸ್ಕಾರವೆಂಬುದು ಕಲೆ,ಯೋಗ, ಬಾಂಧವ್ಯ, ಶಿಕ್ಷಣ, ವ್ಯಕ್ತಿತ್ವ ಎಲ್ಲದರ ಮಿಶ್ರಣ.ಕಲೆ ಬದುಕನ್ನು ಕಟ್ಟಲು ಕಲಿಸುತ್ತದೆ. ಮಕ್ಕಳನ್ನು ಬೆಳೆಸುವುದು ಒಂದು ಕಲೆ, ಆ ಕಲೆಗೆ ರೂಪ ನೀಡುವುದೇ ಸಂಸ್ಕಾರ.ಮನೆಯ ಹಬ್ಬದಿಂದ ಹಿಡಿದು ಊರಿನ ಜಾತ್ರೆಗಳಿಗೂ ಮಕ್ಕಳನ್ನು ಕರೆದೊಯ್ದು ಸಂತೆ ತಿರುಗಿಸದೆ ಗರ್ಭಗುಡಿಗೆ ಪ್ರದಕ್ಷಿಣೆ ಹಾಕಿಸಿ ಸಂತರನ್ನಾಗಿ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ. ಕುಟುಂಬವೆಂಬ ಪರಿಕಲ್ಪನೆ ಬಹಳ ಮೌಲ್ಯಯುತವಾದುದು, ಪ್ರಪಂಚದಲ್ಲಿ ಕುಟುಂಬದ ಪರಿಕಲ್ಪನೆ ಭಾರತವನ್ನು ಮಹತ್ತರದ ಸ್ಥಾನಕ್ಕೆ ಕೊಂಡೊಯ್ದಿದೆ. ಈ ಪರಿಕಲ್ಪನೆಯ ಮೂಲವೇ ಅವಲಂಬನೆ, ಕೌಟುಂಬಿಕ ಅವಲಂಬನೆಯಿಂದ ಸಂಸ್ಕಾರದ ಬೆಳವಣಿಗೆಯಾಗುತ್ತದೆ. ಅದರ ಬೆಳವಣಿಗೆಗೆ ನಮ್ಮ ಹಬ್ಬ, ಶಾಸ್ತ್ರೀಯ ಕಲೆಗಳ ಮೂಲಗಳನ್ನು ಕೆಡಿಸದೆ ಮುಂದಿನ ಪೀಳಿಗೆಗೆ ನೀಡಬೇಕಿದೆ ಎಂದರು.
ಸಮಾಜದ ಪರಿವರ್ತನೆಯ ಬೃಹತ್ ಕಲ್ಪನೆ ಖಾವಂದರದ್ದು, ಇಂದಿನ ಭಾರತೀಯ ಜ್ಞಾನ ಪರಂಪರೆ, ಆತ್ಮನಿರ್ಭರ ಭಾರತ,ಸ್ವದೇಶಿ ಪ್ರಜ್ಞೆ, ರಾಷ್ಟ್ರೀಯ ಶಿಕ್ಷಣ ನೀತಿ,ಕೌಟುಂಬಿಕ ಪ್ರಜ್ಞೆ ಇಂತಹ ವಿವಿಧ ರಚನಾತ್ಮಕ ಕಾರ್ಯಗಳು ಹಲವು ವರುಷಗಳ ಹಿಂದೆಯೇ ಅವರಿಂದ ಅನುಷ್ಠಾನಕ್ಕೆ ಬಂದಿದೆ.ನನ್ನ ಪ್ರಕಾರ ಖಾವಂದರು ಆಧ್ಯಾತ್ಮಿಕ ಲೋಕದ ಪ್ರಧಾನಿ ಎಂದು ಪ್ರಶಂಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಭಜನಾ ಕಮ್ಮಟಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
ಮಾಣಿಲದ ಮೋಹನದಾಸ ಸ್ವಾಮೀಜಿ, ಕಣಿಯೂರಿನ ಮಾರುತಿಪುರದ ರೈತಬಂಧು ಮಾಲಕ ಶಿವಶಂಕರ್ ನಾಯಕ್, ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.
ಪೂರ್ಣಿಮಾ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ಖ್ಯಾತ ಗಾಯಕಿ ಬೆಂಗಳೂರಿನ ಅರ್ಚನಾ ಉಡುಪ ಶಿಬಿರಾರ್ಥಿಗಳಿಗೆ ಭಜನೆ ಹಾಡುವ ಬಗ್ಗೆ ತರಬೇತಿ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


