ಉಡುಪಿ: ಕೇವಲ ಮಾಧ್ವ ಸಮಾಜ ಮಾತ್ರವಲ್ಲ; ಸಮಸ್ತ ವೈದಿಕ ಸಮಾಜ ಮಾತ್ರವೂ ಅಲ್ಲ; ದೇಶದ ಇಡೀ ಆಸ್ತಿಕ ಸಮಾಜಕ್ಕೆ ಭೂಷಣಪ್ರಾಯರಾಗಿದ್ದ ಶ್ರೇಷ್ಠ ಜ್ಞಾನನಿಧಿಗಳಾಗಿದ್ದ ಮಹೋನ್ನತ ವಿದ್ವಾಂಸರಾಗಿದ್ದ ಆತ್ಮಕೂರು ಆನಂದತೀರ್ಥಾಚಾರ್ಯರು ಸೋಮವಾರ ಇಹದ ಯಾತ್ರೆ ಮುಗಿಸಿ ತೆರಳಿದ್ದಾರೆ.
ವಿದ್ವಾನ್ ಆತ್ಮಕೂರು ಆನಂದತೀರ್ಥಾಚಾರ್ಯರ ಅದ್ಭುತ ಕಾವ್ಯ ರಚನಾ ಕೌಶಲ್ಯದ ಒಂದು ಸಣ್ಣ ಝಲಕ್.
ವೇದ ಪುರಾಣ ಉಪನಿಷತ್ತುಗಳನ್ನು ಆಧರಿಸಿ ಅನೇಕ ಮೌಲಿಕ ಕೃತಿಕುಸುಮಗಳ ರಚನೆ, ವೇದಗಳಿಗೆ ವ್ಯಾಖ್ಯಾನ ಗ್ರಂಥರಚನೆಯ ಸಾಹಸ, ಆಡುತ್ತಿದ್ದ ಮಾತುಗಳೆಲ್ಲವನ್ನೂ ಮಂತ್ರಗಳೇ ಆಗಿದ್ದ ಅದ್ಭುತ ಕವಿತ್ವ ಸಿದ್ಧಿ, ವೇದಗಳಲ್ಲಿ ಪ್ರಾಣಿಬಲಿ ನಿಷೇಧವನ್ನು ಸಾಧಾರ ನಿರೂಪಿಸಿ ಶ್ರೇಷ್ಠ ಗ್ರಂಥ ರಚನೆ, ಸಂಸ್ಕೃತ ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಸದೃಶ ಪ್ರಾವೀಣ್ಯತೆ, ಕೌತುಕಮಯ ಕಾವ್ಯ ರಚನಾ ಸಿದ್ಧಿಗಳೇ ಮೊದಲಾಗಿ ಹತ್ತಾರು ಅಮೋಘ ಕೌಶಲ್ಯ ವಿದ್ವತ್ತುಗಳ ಗಣಿ ಎಣಿಸಿದ್ದ ಆಚಾರ್ಯರು ನಾಡಿಗೆ ದೇಶಕ್ಕೆ ಸಲ್ಲಿಸಿದ ವಾಙ್ಮಯ ಕೊಡುಗೆಗಳು ಬಣ್ಣಿಸಲಸದಳ. ಅಂತಹ ಸಾರ್ಥಕ ಬದುಕು ನಡೆಸಿ ಭಗವಂತನ ಪಾದ ಸೇರಿದ ಆಚಾರ್ಯರಿಗೆ ಪರಮಪದ ದೊರಕಲಿ. ಆವರಂತಹ ಮತ್ತಷ್ಟು ಶ್ರೇಷ್ಠ ವಿದ್ವಾಂಸರು ನಾಡಿನಲ್ಲಿ ಮೂಡಿಬರಲಿ.
-ವಾಸುದೇವ ಭಟ್ ಪೆರಂಪಳ್ಳಿ


