ಮೂಲಭೂತ ವಿಜ್ಞಾನವನ್ನು ಕಡೆಗಣಿಸದಿರಿ: ಡಾ. ಸತೀಶ್ಚಂದ್ರ ಎಸ್

Upayuktha
0



ಉಜಿರೆ: ನಾವು ಬಳಸುವ ಎಲ್ಲಾ ಪ್ರಮುಖ ತಂತ್ರಜ್ಞಾನಗಳ ಹಿಂದೆ ಮೂಲಭೂತ ವಿಜ್ಞಾನವಿದೆ. ಮೂಲಭೂತ ವಿಜ್ಞಾನದ ಜ್ಞಾನವಿಲ್ಲದೆ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುವುದು ಅಸಾಧ್ಯ, ಹಾಗಾಗಿ ಮೂಲಭೂತ ವಿಜ್ಞಾನವನ್ನು ಕಡೆಗಣಿಸದಿರಿ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು.


ಉಜಿರೆಯ ಶ್ರೀ ಧ.ಮಂ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಭಾಗಿತ್ವದಲ್ಲಿ, ಕ್ವಾಂಟಮ್ ವಿಜ್ಞಾನದ ಅಂತರಾಷ್ಟ್ರೀಯ ವರ್ಷಾಚರಣೆ ಪ್ರಯುಕ್ತ ಸೆ.17 ರಂದು ಆಯೋಜಿಸಿದ್ದ "ಮಾಲಿಕ್ಯೂಲರ್ ರಹಸ್ಯಗಳು ಮತ್ತು ಕ್ವಾಂಟಮ್ ರಹಸ್ಯಗಳು " ಎಂಬ ವಿಷಯದ ಕುರಿತ ಒಂದು ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ರಸಾಯನ ಶಾಸ್ತ್ರ, ಭೌತ ಶಾಸ್ತ್ರ, ಗಣಿತಶಾಸ್ತ್ರ ಮುಂತಾದವುಗಳನ್ನು ಒಳಗೊಂಡ ಮೂಲಭೂತ ವಿಜ್ಞಾನದ ಕಲಿಕೆ ಅತ್ಯಗತ್ಯ. ವಿಜ್ಞಾನವು ವಿದ್ಯಾರ್ಥಿಗಳಲ್ಲಿ ಉತ್ಸಾಹ ಮೂಡಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಕೇವಲ ಪರೀಕ್ಷಾ ದೃಷ್ಟಿಯಿಂದ ವಿಷಯಗಳನ್ನು ಅಭ್ಯಾಸಿಸದೆ ವಿಜ್ಞಾನದ ಮೇಲೆ ವಿಶೇಷ ಆಸಕ್ತಿಯನ್ನು ಬೆಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ಕ್ವಾಂಟಮ್ ವಿಜ್ಞಾನದ ಕೊಡುಗೆ ಅಪಾರ. ಕ್ವಾಂಟಮ್ ಕಂಪ್ಯೂಟಿಂಗ್ ನಂತಹ ತಂತ್ರಜ್ಞಾನಗಳು ಹೆಚ್ಚು ಪ್ರಚಲಿತವಾಗಿತ್ತಿರುವ ಈ ಕಾಲದಲ್ಲಿ ಅವುಗಳನ್ನು ಕಲಿಯುವ ಅನಿವಾರ್ಯತೆಯಿದೆ.ಅಂದಿನಿಂದ ಇಂದಿನಿವರೆಗೆ ವಿಜ್ಞಾನಿಗಳು ಮಾಡಿರುವ ಅನ್ವೇಷಣೆ, ಪ್ರಯೋಗಳೆಲ್ಲವೂ ಕೂಡ ಸಮಾಜದ ಅಭಿವೃದ್ಧಿಯ ದೃಷ್ಟಿಕೋನವನ್ನೇ ಹೊಂದಿದೆ.ಸಮಾಜದ ಉನ್ನತ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಅಪಾರ ಎಂದರು.


ಬೆಂಗಳೂರಿನ ಪಿ.ಇ.ಎಸ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಹುಲ್ ಎಸ್. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.ಕ್ವಾಂಟಮ್ ಕಂಪ್ಯೂಟಿಂಗ್ ನ ವಿಭಾಗಗಳು ಪ್ರಸ್ತುತ ಕಾಲದ ಉದ್ಯಮಗಳಲ್ಲಿ ಸಿಂಹಪಾಲು ಪಡೆದಿದೆ. .ಕ್ವಾಂಟಮ್ ವಿಜ್ಞಾನವನ್ನು ಅರ್ಥೈಸಿಕೊಳ್ಳಲು ಮೂಲಭೂತ ವಿಜ್ಞಾನವನ್ನ ಅರ್ಥೈಸಿಕೊಳ್ಳುವುದು ಬಿಟ್ಟರೆ ಬೇರೆ ಪ್ರತ್ಯೇಕ ದಾರಿಗಳಿಲ್ಲ.ಕ್ವಾಂಟಮ್ ವಿಜ್ಞಾನ ಕ್ಷೇತ್ರದಲ್ಲಿ ಹಿರಿಯ ವಿಜ್ಞಾನಿಗಳು ಹಾಸಿಕೊಟ್ಟಿರುವ ದಾರಿಯಲ್ಲಿ ಇಂದು ನಾವುಗಳು ಮುನ್ನಡೆಯುತ್ತಿದ್ದೇವೆ ಎಂದರು.


ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ್. ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದಿನ ಕಾಲದಲ್ಲಿ ನಾವುಗಳು ಇಂದು ಅನುಭವಿಸುವ ಆಧುನಿಕ ತಂತ್ರಜ್ಞಾನಗಳು ಲಭ್ಯವಿರಲಿಲ್ಲ. ನಾವುಗಳು ಅನುಭವಿಸುವ ಎಲ್ಲಾ ಸೌಕರ್ಯಗಳು ಕೂಡ ವಿಜ್ಞಾನದ ಕೊಡುಗೆಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಉನ್ನತ ಶಿಕ್ಷಣದ ನಂತರ ವಿದ್ಯಾರ್ಥಿಗಳು ಸಂಶೋಧನೆಯ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ನೀಲಕಂಠನ್ ವಿ.ಕೆ ಮತ್ತು ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕಾಲೇಜಿನ ಉಪ ಪ್ರಾಂಶುಪಾಲೆ ಮತ್ತು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದಕುಮಾರಿ ಕೆ.ಪಿ ಸ್ವಾಗತಿಸಿ, ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದಿವ್ಯಾ ವಂದಿಸಿದರು. ವಿದ್ಯಾರ್ಥಿನಿಯರಾದ ಅಪೂರ್ವ ಮತ್ತು ಬಳಗದವರು ಪ್ರಾರ್ಥಿಸಿದರು. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಅನ್ವಿಟಾ ಸೇರಾ ಕಾರ್ಯಕ್ರಮ ನಿರೂಪಿಸಿದರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top