ಉಜಿರೆ: ನಿರ್ದಿಷ್ಟ ಘಟನೆ, ಹೇಳಿಕೆ ಮತ್ತು ಮಹತ್ವದ ವಿವರಗಳನ್ನು ಸುದ್ದಿಯಾಗಿಸುವಾಗ ಪರ ಮತ್ತು ವಿರೋಧದ ಎರಡು ಆಯಾಮಗಳಿಗಿಂತ ಆಧಾರಸಹಿತವಾದ ನಿಖರ ಅಂಶಗಳನ್ನೇ ಮುಖ್ಯವಾಗಿ ಪರಿಗಣಿಸಬೇಕು ಎಂದು ಬೆಳ್ತಂಗಡಿಯ 'ಸುದ್ದಿ ಬಿಡುಗಡೆ' ವಾಹಿನಿಯ ಮುಖ್ಯಸ್ಥ, ಪತ್ರಕರ್ತ ದಾಮೋದರ ದೊಂಡೋಲೆ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗವು ಸೋಮವಾರ ಆಯೋಜಿಸಿದ್ದ ನೂತನ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಮತ್ತು ಮೀಡಿಯಾ ಮೆಸೆಂಜರ್ ಕ್ಲಬ್‌ನ ನೂತನ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸುದ್ದಿ ಬರೆಯುವಾಗ ಅಥವಾ ಪ್ರಸ್ತುತಪಡಿಸುವಾಗ ಪರವಾಗಿರುವವರು ಮತ್ತು ವಿರೋಧಿಸುವವರು ಎರಡೂ ವಲಯಗಳವರನ್ನು ಮಾತನಾಡಿಸುವುದು ರೂಢಿ. ಆದರೆ, ಬದಲಾದ ಕಾಲಘಟ್ಟದಲ್ಲಿ ಎರಡೂ ವಲಯಗಳವರನ್ನು ಮಾತನಾಡಿಸಿದಾಗ ಸಿಗುವ ನಿಖರ ವಿವರಗಳನ್ನಷ್ಟೇ ಆಧರಿಸಿ ಸುದ್ದಿ ನೀಡುವ ಕ್ರಮ ಹೆಚ್ಚು ವೃತ್ತಿಪರ ಎನ್ನಿಸಿಕೊಳ್ಳುತ್ತದೆ. ಅಂಥ ವರದಿಗಾರಿಕೆ ಮಾತ್ರ ವೃತ್ತಿಪರ ಬದ್ಧತೆಯೊಂದಿಗೆ ಕೂಡಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಒಬ್ಬರು ಹೇಳಿದ್ದನ್ನಷ್ಟೇ ನೆಚ್ಚಿಕೊಂಡು ಅದನ್ನೇ ವೈಭವೀಕರಿಸಿದರೆ ಪ್ರಯೋಜನವಿಲ್ಲ. ಹೇಳಿದ್ದನ್ನು ಪರಿಶೀಲಿಸಿ ಅದು ನಿಖರವೇ ಅಥವಾ ಆಧಾರರಹಿತವೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. ಇಲ್ಲದಿದ್ದರೆ ಏಕಪಕ್ಷೀಯ ಮಾಹಿತಿ ರವಾನಿಸಿದಂತಾಗುತ್ತದೆ. ಏಕಪಕ್ಷೀಯ ವರದಿ ಜನರಲ್ಲಿ ತಪ್ಪುಕಲ್ಪನೆ ಮೂಡಿಸುತ್ತದೆ. ತನಿಖೆಯ ಜಾಡು ಹಿಡಿದು ವಿವಿಧ ಅಭಿಪ್ರಾಯಗಳ ಸತ್ಯಾಸತ್ಯತೆ ಪರಿಶೀಲಿಸಿ ನಿಜವನ್ನು ಬಹಿರಂಗಗೊಳಿಸಿದಾಗ ಮಾತ್ರ ವರದಿಗಾರಿಕೆ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ವರದಿಗಾರರಾಗಿದ್ದಾಗ ಸಾಮಾಜಿಕವಾಗಿ ಎಲ್ಲರೊಂದಿಗೆ ಸೌಹಾರ್ದಯುತವಾಗಿ ಬೆರೆಯುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. ಎಲ್ಲರೊಂದಿಗೆ ಬೆರೆಯುವ ಸೌಮ್ಯಗುಣದಿಂದ ಮಾಹಿತಿಯ ನೆಟ್‌ವರ್ಕ್ ಸೃಷ್ಟಿಸಿಕೊಳ್ಳಬಹುದು. ಬೇರೆಯವರಿಗೆ ಸಿಗದೇ ಇರುವ ನಿಖರವಾದ ವಿಶೇಷ ಮಾಹಿತಿಯನ್ನು ದಕ್ಕಿಸಿಕೊಳ್ಳುವುದಕ್ಕೆ ಈ ಬಗೆಯ ವ್ಯಕ್ತಿತ್ವವನ್ನು ಹೊಸ ಯುವಪತ್ರಕರ್ತರು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತರು ಯಾವಾಗಲೂ ಸರಳವಾಗಿರಬೇಕು. ಸುದ್ದಿಯ ಮೂಲಗಳನ್ನು ಶೋಧಿಸುವುದಕ್ಕೆ ಉತ್ತಮ ಸಂವಹನ ಕೌಶಲ್ಯ ಬೇಕಾಗುತ್ತದೆ. ಬರವಣಿಗೆಯ ಮೇಲೆ ಹಿಡಿತ ಸಾಧಿಸಿದವರು ಮಾಧ್ಯಮದ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಸಾಧ್ಯವಾಗಿಸಿಕೊಳ್ಳಬಹುದು ಎಂದರು.
ವಿಭಾಗದ ಮುಖ್ಯಸ್ಥ ಡಾ. ಬಾಸ್ಕರ್ ಹೆಗಡೆ ಮಾತನಾಡಿ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿಭಾಗದ ಸೃಜನಾತ್ಮಕ ಪ್ರಯೋಗಶೀಲ ಚಟುವಟಿಕೆಗಳ ನೆರವಿನೊಂದಿಗೆ ಮಾಧ್ಯಮಗಳು ನಿರೀಕ್ಷಿಸುವ ವೃತ್ತಿಪರತೆ ರೂಢಿಸಿಕೊಳ್ಳುವುದರ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು.
ದ್ವಿತೀಯ ವರ್ಷದ ವಿಧ್ಯಾರ್ಥಿಗಳ ಬರಹಗಳ ಸಂಗ್ರಹ ‘ಹೊಂಗಿರಣ’ ಬಿಡುಗಡೆಗೊಳಿಸಲಾಯಿತು. ಅಲ್ಲದೇ ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಗೆಜೆಟ್‌ನ ವಿಶೇಷ ಸಂಚಿಕೆ ಅನಾವರಣಗೊಂಡಿತು. ಕಾವ್ಯ ಹೆಗಡೆ ಸ್ವಾಗತಿಸಿದರು. ಹರ್ಷಿತಾ, ವಸುಧಾ ಕಾರ್ಯಕ್ರಮ ನಿರೂಪಿಸಿದರು. ತೇಜಸ್ವಿನಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ