ಮೂಲ ಮರೆತವರು ಅಸ್ತಿತ್ವ ಕಳೆದಕೊಳ್ಳುತ್ತಾರೆ: ರಾಮಚಂದ್ರಾಪುರ ಶ್ರೀ

Upayuktha
0


ಸಾಗರ: ಇಂದು ಮನುಷ್ಯನ ಮನಸ್ಥಿತಿ ಹೇಗಿದೆಯೆಂದರೆ ಪುಣ್ಯದ ಫಲ ಬೇಕು, ಆದರೆ ಪುಣ್ಯದ ಕಾರ್ಯ ಮಾಡುವುದಕ್ಕೆ ಮನಸ್ಸಿಲ್ಲ. ದುಃಖ ಬೇಡ, ಆದರೆ ದುಃಖದ ಮೂಲವಾದ ಪಾಪ ಮಾಡುವುದನ್ನು ನಿಲ್ಲಿಸುವುದಿಲ್ಲ. ಇದು ಬದಲಾಗಿ ಪುಣ್ಯದ ಕಾರ್ಯದಲ್ಲಿ ಮನಸ್ಸು, ದುಃಖದಿಂದ ದೂರವಿರುವ ಕಾರ್ಯ ಮಾಡುವಂತಾಗಲು ಇರುವ ದಾರಿ ಒಂದೇ. ಅದು ಜಗನ್ಮಾತೆಯಾದ ರಾಜರಾಜೇಶ್ವರಿಯ ಧ್ಯಾನ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.


ಸೋಮವಾರ ಸಾಗರದ ರಾಘವೇಶ್ವರ ಸಭಾಭವನದಲ್ಲಿ ಆರಂಭಗೊಂಡ 'ನವರಾತ್ರ ನಮಸ್ಯಾ' ಕಾರ್ಯಕ್ರಮದಲ್ಲಿ ಶ್ರೀ ಲಲಿತಾ ದೇವಿಯ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಪೂಜೆಗೆ ಚಾಲನೆ ನೀಡಿದ ಅವರು, ನಂತರ ಲಲಿತೋಪಾಖ್ಯಾನ ಪ್ರವಚನವನ್ನು ಅನುಗ್ರಹಿಸಿದರು.



ಕೇವಲ ದೇವಿಯ ಸ್ತುತಿಗೆ ಮುಂದಾಗಬೇಕು ಎಂದು ಮನಸ್ಸು ಮಾಡಿದಾಕ್ಷಣಕ್ಕೆ ನಾವು ಮಾಡಿದ ಪಾಪಗಳ ಪರಿಹಾರ ಸಾಧ್ಯವಾಗಲಿದೆ ಎನ್ನುವುದಾದರೆ, ಇನ್ನು ನಿಜವಾಗಿಯೂ ಶ್ರದ್ಧಾಭಕ್ತಿಯಿಂದ ಆಕೆಯ ಆರಾಧನೆಯಲ್ಲಿ ತೊಡಗಿದಾಗ ಸಿಗಬಹುದಾದ ಪುಣ್ಯವೆಷ್ಟು ಎಂಬ ಸಂಗತಿ ಊಹೆಗೂ ನಿಲುಕಲಾರದು. ಮಾತ್ರವಲ್ಲ ಆಕೆಯ ಆರಾಧನೆಯಿಂದ ಪಾಪಗಳೂ ಪುಣ್ಯವಾಗಿ ಪರಿವರ್ತನೆಗೊಳ್ಳುವಂಥ ಮಹತ್ವದ ಸಂಗತಿ ಆ ಪೂಜೆಯಲ್ಲಿದೆ. ಯಾವತ್ತೂ ಪೂಜೆಯ ಹಿಂದಿರಬಹುದಾದ ಮಹತ್ವವನ್ನ ಅರಿತು, ಆರಾಧಿಸಬೇಕು. ಪೂಜೆಯಲ್ಲಿ ಬಳಸುವ ಮಂತ್ರದ ಮೂಲ ಅಂತಹ ಶಕ್ತಿಯನ್ನು ಹೊಂದಿದೆ. ಅದೂ ಮೂಲ. ಹಾಗಾಗಿ ಎಂದೂ ಕೂಡ ಮೂಲವನ್ನು ಮರೆಯಬಾರದು. ಅದು ವೃಕ್ಷಕ್ಕೆ ಬೇರಿದ್ದಂತೆ. ಅದನ್ನು ತೋರುವ ಕಾರ್ಯವನ್ನು ಗುರು ಮಾಡುತ್ತಾನೆ. ಜಗತ್ತಿಗೆ ನೆಮ್ಮದಿ ನೀಡುವ ಉದ್ದೇಶದ ಇಂತಹ ಕಾರ್ಯಗಳಿಗಾಗಿಯೇ ಹಿಂದೆ ಋಷಿ ಮುನಿಗಳು, ತಪಸ್ವಿಗಳು ಇಂಥ ಜ್ಞಾನವನ್ನು ಹುಡುಕಿದವರು. ಅದನ್ನು ಅರಿಯಬೇಕಾದರೆ ಗುರುವಿನ ಕುರಿತಾದ ಅರಿವಿರಬೇಕು ಎಂದರು.


ಇದಕ್ಕೂ ಮುನ್ನ ಸೋಮವಾರ ಬೆಳಗ್ಗೆ ನವರಾತ್ರ ನಮಸ್ಯಾದ ಪುಣ್ಯಾಹವಾಚನೆ, ಮಹಾಸಂಕಲ್ಪ, ಯೋಗನಿದ್ರಾ ದೇವಿ ಉಪಾಸನೆ, ದುರ್ಗಾ ಹವನ, ಚಂಡಿಕಾ ಹವನ, ಲಲಿತಾ ಮೂರ್ತಿ ಪ್ರತಿಷ್ಟಾಪನೆ, ಮಾತೆಯರಿಂದ ಕುಂಕುಮಾರ್ಚನೆ, ಉಡಿ ಸಮರ್ಪಣೆ, ಸ್ತೋತ್ರ ಪಠಣ, ಭಜನೆ ನೆರವೇರಿತು.


ಸಮಾಜ ಸಂಭ್ರಮ


ನವರಾತ್ರ ನಮಸ್ಯಾ ಅಂಗವಾಗಿ ಸಮಿತಿಯು ಆಯೊಜಿಸಿದ್ದ ಸಮಾಜ ಸಂಭ್ರಮದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಪ್ರಭು, ವೈಶ್ಯವಾಣಿ ಸಮಾಜದ ಅಧ್ಯಕ್ಷ ಸತ್ಯನಾರಾಯಣರನ್ನು ಸಮಾಜದ ಪರವಾಗಿ ಗೌರವಿಸಲಾಯಿತು. ಸಂಜೆ ದುರ್ಗಾದೀಪ ನಮಸ್ಕಾರ, ಶ್ರೀ ರಾಜರಾಜೇಶ್ವರಿ ಪೂಜೆ ನೆರವೇರಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top