ಹಿಂದೂ ವಿರೋಧಿ ಭ್ರಷ್ಟ, ಭಂಡ ಕಾಂಗ್ರೆಸ್ ಸರಕಾರದಿಂದ ರಾಜ್ಯಕ್ಕೆ ಅಧೋಗತಿ: ರಾಜಗೋಪಾಲ್ ರೈ

Upayuktha
0


ಮಂಗಳೂರು:  ಕಾಂಗ್ರೆಸ್ ಸರಕಾರದ ಎರಡೂವರೆ ವರ್ಷದ ಆಡಳಿತದಲ್ಲಿ ರಾಜ್ಯವು ಸಂಪೂರ್ಣ ಅಧೋಗತಿಗೆ ಇಳಿದಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹಿಂದೂ ವಿರೋಧಿ ಮಾನಸಿಕತೆ, ಪಾಕ್ ಪರ ಘೋಷಣೆಗಳು, ದೇಶದ್ರೋಹಿ ಶಕ್ತಿಗಳು ವಿಜೃಂಭಿಸುತ್ತಿವೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರರಾದ ರಾಜಗೋಪಾಲ್ ರೈ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.


ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮುಸ್ಲಿಂ ಓಲೈಕೆ ರಾಜಕಾರಣ ಮಿತಿಮೀರಿ ನಡೆಯುತ್ತಿದ್ದು, ನಾಡಹಬ್ಬ ದಸರಾದ ಉದ್ಘಾಟನೆಗೆ ಹಿಂದೂ ವಿರೋಧಿ ಮಾನಸಿಕತೆಯ ಬಾನು ಮುಷ್ತಾಕ್‌ಗೆ ಆಹ್ವಾನ ನೀಡಲಾಗಿದೆ. ರಾಜ್ಯಾದ್ಯಂತ ಜನರು ವಿರೋಧ ವ್ಯಕ್ತಪಡಿಸುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭಂಡತನದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ರೈ ಹೇಳಿದರು.


ರಾಜ್ಯದ ಇತ್ತೀಚಿನ ದಿನಗಳ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಅವರು ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.


ಕನ್ನಡ ಭುವನೇಶ್ವರಿಯ ಕುರಿತು, ಹಿಂದೂಗಳಿಗೆ ಪವಿತ್ರವಾದ ಅರಶಿಣ-ಕುಂಕುಮದ ಬಗ್ಗೆ ಕೀಳಾಗಿ ಮಾತನಾಡಿದ್ದ ಬಾನು ಮುಷ್ತಾಕ್‌ ಹಿಂದೂ ಧರ್ಮದ ಯಾವುದೇ ಆಚರಣೆಗಳಲ್ಲೂ ನಂಬಿಕೆ, ಗೌರವ ಇಟ್ಟುಕೊಂಡವರಲ್ಲ. ನಾಡಹಬ್ಬ ದಸರಾ ತಾಯಿ ಚಾಮುಂಡೇಶ್ವರಿಯ ಪೂಜೆಯ ನವರಾತ್ರಿ ಉತ್ಸವ. ಇದು ಹಿಂದೂ ದೇವತೆಯ ಉತ್ಸವವಲ್ಲದೆ ಇನ್ನೇನು ನೀವು ಹೇಳುವಂತಹ ಜಾತ್ಯತೀತ ಉತ್ಸವವೆ? ಹಿಂದೂ ದೇವತೆಯ ಬಗ್ಗೆ ಅಗೌರವ ಸೂಚಿಸುವ ಬಾನು ಮುಷ್ತಾಕ್ ತಾಯಿ ಚಾಮುಂಡೇಶ್ವರಿಯ ಮುಂದೆ ಪ್ರಾರ್ಥನೆ ಸಲ್ಲಿಸಿ ದಸರಾ ಉದ್ಘಾಟಿಸುತ್ತಾರೆಯೇ? ಎಂದು ರಾಜಗೋಪಾಲ್ ರೈ ಪ್ರಶ್ನಿಸಿದರು.


ಮೈಸೂರಿನ ಚಾಮುಂಡೇಶ್ವರಿ ತಾಯಿಯ ಆರಾಧನಾ ಸ್ಥಳವಾದ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳುತ್ತಾರೆ. ಹಾಗಾದರೆ ಅದು ಇನ್ಯಾರದ್ದು? ಕ್ರೈಸ್ತ ಮಿಷನರಿಗಳದ್ದೇ ಅಥವಾ ನಿಮ್ಮ 'ಬ್ರದರ್ಸ್‌'ಗಳದ್ದೇ? ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇಂತಹ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡಬಾರದು ಎಂದು ರೈ ಟೀಕಿಸಿದರು.


ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಗಣೇಶೋತ್ಸವ ಮೆರವಣಿಗೆಯ ಮೇಲೆ ಮಸೀದಿಗಳಿಂದ ಕಲ್ಲು ತೂರಾಟ ನಡೆಸಲಾಯಿತು. ಪೊಲೀಸರು ಹಿಂದೂಗಳ ಮೇಲೆಯೇ ಲಾಠಿ ಚಾರ್ಜ್ ನಡೆಸಿ ಕ್ರೌರ್ಯ ಮೆರೆದರು. ಇಂತಹ ಘಟನೆಗಳನ್ನು ನೋಡಿದಾಗ ನಾವು ಯಾವ ರಾಜ್ಯದಲ್ಲಿ ಬದುಕುತ್ತಿದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ಭ್ರಷ್ಟ ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಯೇ ಇಂತಹ ಎಲ್ಲ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದ ಹಿಂದೂ ದಂಪತಿಗಳ ಮೇಲೂ ಲಾಠಿ ಚಾರ್ಜ್ ನಡೆಸಲಾಯಿತು. ಇವೆಲ್ಲ ಬೆಳವಣಿಗೆಗಳು ಏನನ್ನು ಸೂಚಿಸುತ್ತವೆ? ಬಹುಸಂಖ್ಯಾತ ಹಿಂದೂಗಳು ಈ ರಾಜ್ಯದಲ್ಲಿ ಸುರಕ್ಷಿತರಾಗಿದ್ದಾರೆಯೇ? ಎಂದು ವಕ್ತಾರರು ಪ್ರಶ್ನಿಸಿದರು.


ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಆ ಯೋಜನೆಗಳನ್ನೂ ಸಮರ್ಪಕವಾಗಿ ಜಾರಿ ಮಾಡಲಾಗದೆ, ರಾಜ್ಯದ ಬೊಕ್ಕಸವನ್ನು ದಿವಾಳಿ ಮಾಡಿದ ಸಿದ್ದರಾಮಯ್ಯ ಸರಕಾರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ಆದ್ಯತೆಯಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆ ಮಾಡಲು ಹಣವೂ ಇಲ್ಲ. ರಾಜ್ಯದಲ್ಲಿ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಅಪಘಾತಗಳ ಪ್ರಮಾಣ ತೀವ್ರ ಹೆಚ್ಚಳವಾಗಿದ್ದು, ಪ್ರತಿದಿನ ಜನರು ರಸ್ತೆಯಲ್ಲೇ ಪ್ರಾಣ ಕಳೆದುಕೊಳ್ಳುವಂತಾಗಿದೆ. ಇದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ, ಕೇವಲ ಹಿಂದೂಗಳ ಮೇಲಿನ ದ್ವೇಷ ಸಾಧನೆಯನ್ನೇ ಪ್ರಮುಖವಾಗಿ ಮಾಡಿಕೊಂಡಿರುವ ಈ ಸರಕಾರದ ವಿರುದ್ಧ ಜನತೆ ಬೀದಿಗಿಳಿಯುವ ಕಾಲ ದೂರವಿಲ್ಲ ಎಂದು ರಾಜಗೋಪಾಲ್ ರೈ ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top