ವಿಡಂಬನೆ: 'ಮದ್ದೂರದಾಗ ಮದ್ದ ಸಿಡದೈತಿ-ಬುರುಡೆ ಗ್ಯಾಂಗ್ ಕಂಗಾಲಾಗೈತೆ'

Upayuktha
0



'ಏನಲೇ ಕುರ್ಸಾಲ್ಯಾ, ಎಲ್ಲಿ ಗಪ್ಪ ಆಗಿದ್ದಿ ಇಷ್ಟ ದಿನಾ?' ಕೇಳಿದ ಕಾಕಾ ಡುಮ್ಯಾಗ

'ಏನಿಲ್ಲ ಕಾಕಾ, ಮದ್ದೂರ ಕಡೆ ಹೋಗಿದ್ನಾ.....' ಎಂದ ಡುಮ್ಯಾ

'ಅಲ್ಲೇನ ಮದ್ದೂರ ವಡಾ ತಿನ್ನಾಕ ಹೋಗಿದ್ಯಾ ಹ್ಯಾಂಗ?' ಕೇಳಿದಳು ರಾಶಿ

'ಏs ಇಲ್ಲವಾ, ಅಲ್ಲಿ 'ಗಣೇಶನ ಗಲಾಟೆ' ಅಂತ ಸಿನೇಮಾ ರಿಲೀಸ ಆಗಿತ್ತು ನೋಡಾಕ ಹೋಗಿದ್ದೆ' ಎಂದು ನಕ್ಕ ಡುಮ್ಯಾ

'ಹಂಗೇ ನಮ್ಮ ಟಕಳ್ಯಾನೂ ಕರ್ಕೊಂಡ ಹೋಗಬೇಕಿಲ್ಲ' ಎಂದ ಗುಡುಮ್ಯಾ


'ಯಾಕ ನಾ ಯಾಕೆ ಹೋಗಬೇಕಾಗಿತ್ತು?' ಅಸಮಾಧಾನದಿಂದ ಕೇಳಿದ ಟಕಳ್ಯಾ

'ನೀನೂ ಫೀಲ್ಮ್ ಹೀರೋ ಆಗಬೇಕಂತ ಹೋಗಿದ್ದೆಲ್ಲಪಾ? ಅದ್ಕೆ ಹೇಳಿದೆ' ಎಂದು ನಕ್ಕ ಗುಡುಮ್ಯಾ

'ಏs ಇವ್ನ ಝಿ ಟಿವಿ ಶೋ ಕ್ಕ ಕಳಿಸರಿ, ಅಂದ್ರ ಭಾರಿ ಮಹಾನಟ ಆಕ್ಕಾನು' ಎಂದ ಧಡಂಧುಡಕಿ

'ಎಂಥದು ಮಾರಾಯಾ ನಿನ್ನದು, ಅದು 'ಮಹಾನಟ' ರಿಯಾಲಿಟಿ ಶೋ ಅಲ್ಲ ಮಾರಾಯ, ಅದು 'ಮಹಾನಟಿ' ಅಂತ ಉಂಟು, ಇವನೇನು ಮಾಡುತಾನೆ ಅಲ್ಲಿ ಹೋಗಿ?' ಎಂದು ಕೇಳಿದ ಮಂಗಳೂರು ಮಾಣಿ ಕಿಟ್ಟಿ


'ಏs ಯಾವದರ ಇರಲಕ, ಅಲ್ಲಿಗೆ ದಬ್ಬರಿ ಇಂವಗ' ಎಂದ ಟುಮ್ಯಾ

'ಏs ನನಗ್ಯಾಕ ಗಂಟು ಬಿದ್ದಿರೆಲೇ, ನಾ ಅಂದ್ರs ಮದ್ದೂರ ವಡಾ ಅಂತ ತಿಳಿದಿರ ಹ್ಯಾಂಗ?' ಕೇಳಿದ ಟಕಳ್ಯಾ

'ಅರೇ ಮದ್ದೂರದಾಗ ಕಲ್ಲು ಹೊಡದಾರು, ಅಲ್ಲಿಗೆ ಕಮಲಕ್ಕ ಮನಿಯವರು ತಾಬಡ ತೋಬಡ ಹೋಗ್ಯಾರು' ಎಂದಳು ರಾಶಿ

' ಕಲ್ಲ ಹೊಡದವ್ರಿಗೆ ಹೂವು ಕೊಡ್ರಿ ಅಂತ ಶರಣರು ಹೇಳ್ಯಾರು ಅಲ್ಲೇನು?' ಎಂದ ಕಾಕಾ

'ಅದು ಎಲ್ಲಾ ಆ ಕಾಲದಾಗ ಇತ್ತು, ಈಗ ಒಂದ ಕಣ್ಣ ಕಿತ್ತಿದ್ರಂದ್ರs ..... ಅವಂದು ಎರಡೂ ಕಣ್ಣು ಕಿತ್ತಿ ಒಗಿಯೂ ಜಮಾನಾ ಇದು ಐತಿ' ಎಂದ ಧಡಂಧುಡಕಿ.


'ಅಲ್ಲಾ.... ಸುಮ್ಮಸುಮ್ನೆ ಯಾಕ ಜಗಳಾ ತೆಗಿಬೇಕು, ಎಲ್ಲಾರೂ ಚಂದಂಗೆ ಇರಲಾಕ ಏನು ಧಾಡಿ ಆಗೇತಿ?' ಎಂದ ಕಾಕಾ

'ಉಂಡ ಕೂಳು ಕರಗಬೇಕಲ್ಲಾ ಸುಮ್ಮನೆ ಕುಂತ್ರs?' ಎಂದಳು ರಾಶಿ.

'ಸುಮ್ನೆ ಇರಲಾರದೆ ಇರುವೆ ಬಿಟ್ಟುಕೊಂಡರು' ಎನ್ನುತ್ತಾರೆ ನೋಡಿ ನಮ್ಮ ಕಡೆಗೆ, ಅದು ಇದುವೇ ಇರಬಹುದು ಅಲ್ಲವೆ ಭಾವ?' ಎಂದ ಮಾಣಿ ಕಿಟ್ಟಿ.


'ಏs ಇಂವಾ 'ಭಾವ ಬಂದರೋ ಭಾವ ಬಂದರೋ' ಅಂತ ಹಾಡು ಐತೆಲ್ಲಾ, ಅಲ್ಲಿಗೇ ಹೋದ್ನಪಾ' ಎಂದು ನಕ್ಕ ಡುಮ್ಯಾ

'ಅದು 'ಸು ಫ್ರಾಮ್ ಸೋ' ಎಷ್ಟು ಫೇಮಸ್ ಆಯ್ತು ನೋಡಿ ಮಾರಾಯ್ರೆ' ಎಂದ ಮಾಣಿ ಕುಟ್ಟಿ

'ಕಡಿಮೆ ಖರ್ಚಿನ್ಯಾಗ ಫೀಲಂ ತೆಗೆದು, ನೂರು ಕೋಟಿಗೆ ಹೋಗಿ ಮುಟ್ಟೇತಿ ಆ ಅದು' ಎಂದಳು ರಾಣಿ

'ಈಗ ಬರುವ ದೀಪಾವಳಿಗೆ ಎಲ್ಲರ ಮನೆಯಲ್ಲಿಯೂ ಅದೇ ಹಾಡು ಕೇಳಿ ಬರುತ್ತದೆ ನೋಡಿ' ಎಂದ ಮಾಣಿ ಕುಟ್ಟಿ

'ಯಾವುದಪಾ? ಬ್ಯಾಂಗಲ್ ಬಂಗಾರಿ ಬ್ಯಾಂಗಲ್ ಬಂಗಾರಿ' ಹಾಡಾ?' ಕೇಳಿದ ಟಕಳ್ಯಾ.


'ಏs ಬಂಗಾರ ಏನ ಕೊಡ್ತಾರಲೇ ಅಳಿಯಾಗ ದೀಪಾವಳಿಗೆ, ಒಂದು ಲಕ್ಷ ಹದಿನಾಲ್ಕು ಸಾವಿರ ಆಗೇತಿ ಗೋಲ್ಡ್ ಒಂದು ತೊಲಿಗೆ' ಎಂದ ಕಾಕಾ

'ಆ ಹಾಡು ಅಲ್ಲ ಮಾರಾಯಾ, ನಾನು ಹೇಳಿದ್ದು ಬೇರೆ.....' ಭಾವ ಬಂದರೋ ಭಾವ ಒಂದರೋ' ಹಾಡು.... ಅದು ವಿಥ್ ಡ್ಯಾನ್ಸ್' ಎಂದ ಮಾಣಿ ಕಿಟ್ಟಿ

'ಅಂದ್ರs ..... ಭಾವ ದೀಪಾವಳಿಗೆ ಎಣ್ಣೆ ಹೊಡದೆ ಬರ್ತಾನು ಅಂದಂಗಾತು' ಎಂದು ನಕ್ಕ ಡುಮ್ಯಾ

'ಈಗ ಎಲ್ಲಾದರ ಮ್ಯಾಲೂ ಜಿಎಸ್ಟಿ ಕಡಿಮೆ ಆಗೇತಿ, ಆದ್ರs ಎಣ್ಣೆ ಮ್ಯಾಲಿಂದು ಆಗಿಲ್ಲ ನೋಡು' ಎಂದ ಚಪ್ಪಾಳೆ

'ಬರೀ ಎಣ್ಣೆ ಸುದ್ದಿಗೆ ಹೋಕ್ಕಾನಿವಾ' ಎಂದ ಧಡಂಧುಡಕಿ.


'ಅಲ್ಲಿ ಸ್ನಾನಘಟ್ಟದಾಗ ಏನಾತು? ಬುರುಡೆ ಪುರಾಣ ಎಲ್ಲಿಗೆ ಬಂತು?' ಕೇಳಿದಳು ರಾಶಿ

'ಏs ಆ ಬುರುಡೆ ಗ್ಯಾಂಗ್ ಎಲ್ಲಾ ಸಿಗಬಿದ್ದಾವ, ಎಲ್ಲಾ ಪ್ಲ್ಯಾನ ಉಲ್ಟಾ ಹೊಡದೈತಿ' ಎಂದ ರಬಡ್ಯಾ

'ಆ ಮಾಸ್ಕ್ ಮ್ಯಾನ ಎಲ್ಲಾ ಹೇಳ್ಯಾನು, ಎಲ್ಲಾ ಭಾರಿ ಪ್ಲ್ಯಾನ ಮಾಡೇ ಮಾಡ್ಯಾರಂತ.... ಎಲ್ಲಾ ಟಿವಿ ಚಾನೆಲ್ ಹೇಳೇ ಹೇಳಕತ್ತಾವಲಾ' ಎಂದಳು ರಾಶಿ

'ಇದನ್ನ ಎನ್ಐಎ ತನಿಖೆಗೆ ಕೊಡ್ರಿ ಅಂತ ಕಮಲ ಪಡೆ ಒತ್ತಾಯ ಮಾಡೇತಿ' ಎಂದಳು ರಾಣಿ.


'ಏs ನಮ್ಮ ಎಸ್ಐಟಿ ಏನs ಕಮ್ಮಿ ಐತೇನೂ? ಇವ್ರೆ ಮಾಡ್ಲಿ ಅಂತ 'ಟಗರು' ಗುಮ್ಮೇತಿ!' ಎಂದ ಕಬ್ಬಿಣ

'ನಮಸ್ತೆ ಸದಾ ವತ್ಸಲೆ ಮಾತೃಭೂಮೆ........ ಅಂತ 'ಬಂಡೆ' ಹಾಡಕೊಂತ ಆರಾಮ ಹೊಂಟೈತಿ' ಎಂದ  ಡಬರ್ಯಾ

'ಹೆರಿಗೆ ಆಸ್ಪತ್ರೆ ಎಲ್ಲಾ ಕಡೆ ಸುಸಜ್ಜಿತಗೊಳಸ್ತಿರೇನು? ಅಂತ 'ಪಾಂಡೆ'ಗ ಲೇಡಿ ರಿಫೋರ್ಟರ್ ಕೇಳಿದ್ರs ..... ನಿಂದು ಹೆರಿಗೆ ಆಗೂ ಟೈಮದಾಗ ವ್ಯವಸ್ಥೆ ಮಾಡೋಣ ತಗೋ ಅಂದತಿ 'ಪಾಂಡೆ'!' ಎಂದ ಚಪ್ಪಾಳೆ

'ಈ ಹೆಣ್ಮಕ್ಕಳು ಅಂದ್ರs ಅಷ್ಟು ಸದರ ಆಗೇವ ಹ್ಯಾಂಗ? ಒಟ್ಟ ಕಿಮ್ಮತ್ತ ಇರಲಾರದಂಗ ಆಗೇತಿ' ಎಂದಳು ಅಸಮಾಧಾನದಿಂದ ರಾಶಿ

'ಬರೇ ಇವೇ ನಡದಾವು ಎಲ್ಲಾ ಕಡೆಗೆ' ಎಂದ ಕಾಕಾ.


'ಅಂವಾ ಭದ್ರಾವತಿ ಸಂಗಪ್ಪ, ನಾ ಮುಂದಿನ ಜನ್ಮದಾಗ ಮುಸ್ಲೀಂ ಆಗಿ ಹುಟ್ತಿನಿ ಅಂತ ಅಂದಾನು' ಎಂದ ಧಡಂಧುಡಕಿ

'ಮುಂದಿನ ಜನ್ಮದ ತನಕಾ ಯಾಕ ಕಾಯ್ತಿದಿ? ಈಗೇ ಬಾ ನಿನ್ನ ಪರಿವರ್ತನೆ ಮಾಡ್ತಿನಿ ಅಂತ ಒಬ್ಬವಾ ಹೇಳ್ಯಾನು' ಎಂದ ಕಬ್ಬಿಣ

'ಎಲ್ಲಾ ವೋಟ ಸಲುವಾಗಿ ಹೀಂಗ ಮಾತಾಡ್ತಾರು.....ಇವ್ರು ನಮ್ಮ ಜನಪ್ರತಿನಿಧಿಗಳು!' ಎಂದ ಟಕಳ್ಯಾ


'ಹಂಗ ಹೇಳಿಲ್ಲಾಂದ್ರs ಅವರು ಮುಂದಿನ ಎಲೆಕ್ಸ್ನದಾಗ, ವೋಟ ಬರಲಾರ್ದೆ ನಿನ್ನ ತಲಿಗತ್ಲೆ ಸಾಫ್ ಆಕ್ಕಾರು ಟಕಳ್ಯಾ!' ಅಂತ ನಕ್ಕ ಡುಮ್ಯಾ

'ಆ ನಮ್ಮ 'ಹಿಂಹುಲಿ ಗುತ್ನಾಳ' ಹೋಗಿಲ್ಲೇನು ಮದ್ದೂರಿಗೆ?' ಕೇಳಿದ ಕಾಳ್ಯಾ

'ಏs ಯಾ ಮಗನಿಗೂ ಅಂಜುವ ಮಗಾ ನಾನಲ್ಲ' ಅಂತ ಡೈಲಾಗ್ ಹೊಡದು ಹುಲಿ ಎಂಟ್ರಿ ಕೊಟ್ಟೈತಿ' ಸಿಂಹಾದ್ರಿಯ ಸಿಂಹ' ಸ್ಟೈಲ್ದಾಗ ಅಲ್ಲಿಗೆ' ಎಂದ ಧಡಂಧುಡಕಿ


'ನೇಪಾಳದಾಗ ಎಲ್ಲಾ ಭ್ರಷ್ಟಾಚಾರಿಗಳ ಮನೆ ಸುಟ್ಟಾರ, ಅಲ್ಲಿ ಯುವ ಜನರ ಸಹನೆಯ ಕಟ್ಟೆ ಒಡದತಿ' ಎಂದಳು ರಾಣಿ

'ಮಿತಿಮೀರಿದ್ರs ಎಲ್ಲಾ ಕಡೆ ಹೀಂಗೆ ಆಕೈತಿ ನೋಡ್ರಿ, ಯಾವದೂ ಅತಿ ಆಗಬಾರದು' ಎಂದ ಕಾಕಾ

' ನಡ್ರಿ ಹಂಗಾದ್ರs ಎಲ್ಲಾರೂ ಒಂದ ಕಪ್ ಚಾ ಕುಡಿದು, ಮೈಸೂರು ದಸರಾ ನೋಡಾಕ ಹೋಗೂಮು ಬರ್ರಿ' ಎಂದ ಡುಮ್ಯಾ

'ಇನ್ನಾ ದೂರ ಐತಿ ದಸರಾ, ಅದರಕ್ಕಿಂತ ಮೊದಲು ನಮ್ಮ ಹಿರಿಯರಿಗೆ ತರ್ಪಣ ಕೊಟ್ಟು ಅವರ ಪ್ರೀತಿ ಪಡೆಯೋಣ ಬರ್ರಿ' ಎಂದು ಎಲ್ಲರನ್ನು ಕರಕೊಂಡು ಹೊಂಟ ಟುಮ್ಯಾ.

.........

- ಶ್ರೀನಿವಾಸ ಜಾಲವಾದಿ, ಸುರಪುರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top