ಪೊಳಲಿ ಯಕ್ಷೋತ್ಸವ -2025: ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ

Upayuktha
0


ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ದಿನಾಂಕ 27 ಸೆಪ್ಟೆಂಬರ್ 2025ರಂದು ಯಕ್ಷಕಲಾ ಪೊಳಲಿ ಇದರ 30ನೇ ವರ್ಷದ ಪ್ರಯುಕ್ತ ತ್ರಿಂಶತಿ ಸಂಭ್ರಮದ ‘ಪೊಳಲಿ ಯಕ್ಷೋತ್ಸವ’ವು ಪ್ರಶಸ್ತಿ ಪ್ರದಾನ, ಗೌರವಾರ್ಪಣೆ, ಸಮ್ಮಾನ, ಸಂಸ್ಮರಣೆ ಹಾಗೂ ಯಕ್ಷಗಾನ ಪ್ರದರ್ಶನದೊಂದಿಗೆ ಸಂಪನ್ನಗೊಂಡಿತು. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದಜಿ ಆಶೀರ್ವಚನ ನೀಡಿದರು.


ಪೊಳಲಿ ಯಕ್ಷೋತ್ಸವ ಪ್ರಶಸ್ತಿ:

ಸಮಾರಂಭದಲ್ಲಿ ಯಕ್ಷಕಲಾ ಪೋಷಕ, ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಇವರಿಗೆ ‘ಪೊಳಲಿ ಯಕ್ಷೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಅಲ್ಲದೆ ಯಕ್ಷಗಾನ ರಂಗದ ವಿಶಿಷ್ಟ ಸಾಧನೆಗಾಗಿ ಹಿರಿಯ ಕಲಾವಿದರಾದ ಭಾಸ್ಕರ ರೈ ಕುಕ್ಕುವಳ್ಳಿ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಅಡೂರು ಲಕ್ಷ್ಮೀನಾರಾಯಣ ರಾವ್, ಕೊಳ್ತಿಗೆ ನಾರಾಯಣ ಗೌಡ, ಉಬರಡ್ಕ ಉಮೇಶ್ ಶೆಟ್ಟಿ, ಜಬ್ಬಾರ್ ಸಮೋ ಸಂಪಾಜೆ, ಶಿವರಾಮ ಪಣಂಬೂರು, ಗಿರೀಶ್ ಹೆಗ್ಡೆ ಪುತ್ತೂರು, ಜಗದಾಭಿರಾಮ ಸ್ವಾಮಿ ಪಡುಬಿದ್ರೆ, ನಾ. ಕಾರಂತ ಪೆರಾಜೆ, ನಗ್ರಿ ಮಹಾಬಲ ರೈ, ಮಹಾಬಲೇಶ್ವರ ಭಟ್ ಭಾಗಮಂಡಲ ಹಾಗೂ ಲೇಖಕ ಡಾ. ವಸಂತಕುಮಾರ ಪೆರ್ಲ ಇವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ಕಲಾ ಗೌರವ ಪ್ರದಾನ:

ಮಂಗಳೂರಿನ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ ಹಾಗೂ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಗೆ ಯಕ್ಷಕಲಾ ಗೌರವ ನೀಡಲಾಯಿತು. ಜತೆಗೆ 30 ವರ್ಷಗಳ ಕಾಲ ಸಂಸ್ಥೆಯಲ್ಲಿ ಕಲಾ ಸೇವೆ ನೀಡಿದ 5 ಮಂದಿ ಕಲಾವಿದರಿಗೆ ಗೌರವಾರ್ಪಣೆ, ಇಬ್ಬರು ಸಂಘಟಕರಿಗೆ ಯಕ್ಷ ಪೋಷಕ ಗೌರವ ನೀಡಲಾಯಿತು. ಪ್ರಶಸ್ತಿ ಪುರಸ್ಕೃತರ ಪರವಾಗಿ ಯಕ್ಷಗಾನ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.



ಕೀರ್ತಿಶೇಷ 8 ಮಂದಿ ಕಲಾವಿದರನ್ನು ಸ್ಮರಿಸಿ ಅರ್ಥಧಾರಿ ಉಜಿರೆ ಅಶೋಕ ಭಟ್ ಅವರು ಸಂಸ್ಮರಣ ಭಾಷಣ ಮಾಡಿದರು. ಕದ್ರಿ ನವನೀತ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಜ್ಯೋತಿಷಿ ಕೋಡಿಮಜಲು ಆನಂತಪದ್ಮನಾಭ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು.


ಪೊಳಲಿ ಕ್ಷೇತ್ರದ ಪ್ರಧಾನ ಅರ್ಚಕ ಪಿ. ಮಾಧವ ಭಟ್, ಆಡಳಿತ ಮೊಕ್ತಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಸತೀಶ್ ಶೆಟ್ಟಿ ಪಟ್ಲ, ಕರ್ನಿರೆ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ ಸುವರ್ಣ ಕರ್ನಿರೆ, ಬಿಲ್ಲವಾಸ್ ದುಬೈ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಬೆಳಪು, ಬೆಂಗಳೂರಿನ ಉದ್ಯಮಿ ರಾಜೇಂದ್ರ ಕಕ್ಯಪದವು, ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಯಕ್ಷಕಲಾ ಸಂಸ್ಥಾಪಕ ಅ.ನ.ಭ ಪೊಳಲಿ ಉಪಸ್ಥಿತರಿದ್ದರು.


ಕಾರ್ಯಕ್ರಮ ಉದ್ಘಾಟನೆ:

ಬೆಳಗ್ಗೆ ಯಕ್ಷೋತ್ಸವವನ್ನು ಪೊಳಲಿ ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಭಟ್ ಮತ್ತು ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ದೀಪೋಜ್ವಲನ ಮಾಡಿ ಉದ್ಘಾಟಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಭೇಟಿ ನೀಡಿ ಶುಭಹಾರೈಸಿದರು.  


ಯಕ್ಷಕಲಾ ಪೊಳಲಿ ಸಂಚಾಲಕ ವೆಂಕಟೇಶ ನಾವಡ ಸ್ವಾಗತಿಸಿದರು. ಸಂಯೋಜಕ ಬಿ. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರ್ವಹಿಸಿದರು.


ಯಕ್ಷಗಾನ ಪ್ರದರ್ಶನ:

ಪೊಳಲಿ ಯಕ್ಷೋತ್ಸವ ಅಂಗವಾಗಿ ಬೆಳಿಗ್ಗೆ ತೆಂಕುತಿಟ್ಟಿನ ಕಲಾವಿದರಿಂದ ‘ಜ್ವಾಲಾ ಪ್ರತಾಪ’, ‘ವೀರ ಬಬ್ರುವಾಹನ’, ಅಪರಾಹ್ನ ‘ದಮಯಂತಿ ಪುನಃ ಸ್ವಯಂವರ’ ಹಾಗೂ ರಾತ್ರಿ ಬಡಗು ತಿಟ್ಟಿನ ಕಲಾವಿದರಿಂದ ‘ಮಧುರಾ ಮಹೀಂದ್ರ’ ಯಕ್ಷಗಾನ ಪ್ರದರ್ಶನಗೊಂಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top