ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಧ್ವನಿಗೆ ಪ್ರಶಸ್ತಿಯ ಗರಿ: ಡಾ. ಸದಾನಂದ ಪೆರ್ಲ

Upayuktha
0



ಕಲಬುರಗಿ : ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಧ್ಯಮ ರಂಗದಲ್ಲಿ ಅಪ್ರತಿಮ ಸೇವೆ ನೀಡಿದ ಹಿರಿಯ ಪತ್ರಕರ್ತ ದೇವಯ್ಯ ಗುತ್ತೇದಾರ್ ಅವರಿಗೆ ರಾಜ್ಯ ಸರ್ಕಾರವು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಿರುವುದು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಗರಿ ಮೂಡಿದಂತಾಗಿದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಹೇಳಿದರು.


ರಾಜ್ಯ ಸರ್ಕಾರವು ಕೊಡ ಮಾಡುವ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯ 2018ನೇ ಸಾಲಿನ ಪ್ರಶಸ್ತಿಯನ್ನು ಸ್ವೀಕರಿಸಿದ ವಿಜಯ ಕರ್ನಾಟಕ ಪತ್ರಿಕೆಯ ಕಲಬುರಗಿ ಆವೃತ್ತಿಯ ಸ್ಥಾನಿಕ ಸಂಪಾದಕರಾದ ದೇವಯ್ಯ ಗುತ್ತೇದಾರ್ ಅವರಿಗೆ ಸೆ.21 ಸನ್ಮಾನ ನೆರವೇರಿಸಿ ಮಾತನಾಡಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪತ್ರಿಕಾ ಮಾಧ್ಯಮದ ಮೂಲಕ ತನ್ನ ವಿಶಿಷ್ಟ ಬರವಣಿಗೆಯಿಂದ ಅಭಿವೃದ್ಧಿಗೆ ಪುನಶ್ಚೇತನ ನೀಡಿ ಜಾಗೃತಿ ಮೂಡಿಸಿದ ಗುತ್ತೇದಾರ್ ಅವರ ಕೆಲಸ ಶ್ಲಾಘನೀಯವಾದದ್ದು. 


ಒಂದು ಭಾಗದ ಪ್ರಗತಿಗೆ ನಾಲ್ಕನೇ ಆಧಾರ ಸ್ತಂಭವಾದ ಮಾಧ್ಯಮ ರಂಗ ಅಭಿವೃದ್ಧಿ ಪತ್ರಿಕೋದ್ಯಮದ ಮೂಲಕ ಕೊಡುಗೆಯನ್ನು ನೀಡಬಹುದು ಎಂಬುದನ್ನು ಸಾಬೀತುಪಡಿಸಿ ರಾಜ್ಯ ಸರ್ಕಾರ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಕ್ಕೆ ಸರಕಾರಕ್ಕೂ ಅಭಿನಂದನೆ ಎಂದು ಡಾ. ಪೆರ್ಲ ಹೇಳಿದರು.


ಪ್ರಜಾಪ್ರಭುತ್ವದ ರಕ್ಷಣೆಗೆ ಅಭಿವೃದ್ಧಿ ಪತ್ರಿಕೋದ್ಯಮ ಮಾತ್ರ ಗಟ್ಟಿ ನೆಲೆಯನ್ನು ಒದಗಿಸುತ್ತದೆ ಮತ್ತು ಪ್ರಗತಿಯ ಹೊಸ ಹೆಜ್ಜೆ ಇಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಗುತ್ತಿಗೆದಾರರಾದ ಕುಪೇಂದ್ರ ಗುತ್ತೇದಾರ್ ನಾಗೂರ್ ಉಪಸ್ಥಿತರಿದ್ದರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top