ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ

Upayuktha
0

ನಾಳೆ ವಿಶ್ವ ಆತ್ಮಹತ್ಯಾ ತಡೆದಿನ





ಪ್ರಪಂಚದಲ್ಲಿ ಬುದ್ಧಿವಂತ ಪ್ರಾಣಿ ಮನುಷ್ಯ ಬೇರೆಲ್ಲ ಜೀವಗಳಿಗಿಂತ ವಿಭಿನ್ನ ಹೇಗೆಂದರೆ ಅವನಿಗೆ ಬುದ್ಧಿ ಶಕ್ತಿ ಮತ್ತು ಮಾತನಡುವ ಕಲೆಯನ್ನು ವಿಶೇಷವಾಗಿ ದೇವರು ಕೊಟ್ಟಿದ್ದಾನೆ. ಯಾವುದೇ ಪ್ರಾಣಿಯ ಜೀವಕ್ಕೆ ಬಹಳ ಮಹತ್ವವಿದೆ. ಅದರಲ್ಲಿ ಮನುಷ್ಯರ ಜೀವಕ್ಕೆ ಹೆಚ್ಚು ಬೆಲೆ ಕೊಡಲಾಗುತ್ತದೆ. ಪ್ರಾಕೃತಿಕವಾಗಿ ಬರುವ ಸಾವು ಅನಿವಾರ್ಯ ಆದರೆ ಜೀವನದ ಕಷ್ಟ ಕೋಟಲೆ ಅಥವಾ ಸಮಸ್ಯೆಗಳಿಗೆ ಬೇಸತ್ತು ಪ್ರಾಣ ತ್ಯಾಗ ಮಾಡುವುದಕ್ಕೆ ಆತ್ಮಹತ್ಯೆ ಎನ್ನಲಾಗುತ್ತದೆ.


ಪ್ರಾಣಿಗಳು ಜೀವನ ಬೇಸರವಾಗಿ ಪ್ರಾಣತ್ಯಾಗ ಮಾಡುವುದು ಕಡಿಮೆ ಆದರೆ ಅವುಗಳ ಮಾಡಿಕೊಂಡರೆ ಅದನ್ನು ಕ್ಷಮಿಸಬಹುದು ಏಕೆಂದರೆ ಅವುಗಳಿಗೆ ವಿವೇಚನಾಶಕ್ತಿ ಅಥವಾ ತಿಳುವಳಿಕೆ ಇರುವುದಿಲ್ಲ. ಹೀಗಾಗಿ ಪ್ರಾಣಿಗಳ ಆತ್ಮಹತ್ಯೆ ಮಹತ್ವ ಪಡೆಯದೇ ಇರಬಹುದು ಏಕೆಂದರೆ ಅವುಗಳ ಆತ್ಮಹತ್ಯೆ ಮಾಡಿಕೊಳ್ಳುವ ವಿಷಯ ಸೂಚನೆ ಮನುಷ್ಯರಿಗೆ ತಿಳಿದಿರುವುದಿಲ್ಲ. ಆದರೆ ಮನುಷ್ಯರು ತಮ್ಮ ನಡವಳಿಕೆ ಮತ್ತು ಮಾತುಗಳಲ್ಲಿ ಜೀವನದ ಬಗೆಗೆ ಹತಾಶೆ ನಿರಾಶೆ ವ್ಯಕ್ತ ಪಡಿಸುವುದರಿಂದ ನಾವು ಮನುಷ್ಯನ ಮನದಲ್ಲಿ ಹುಟ್ಟುವ ಆತ್ಮಹತ್ಯೆಯ ವಿಚಾರವನ್ನು ಊಹಿಸಬಹುದು. ನಕಾರಾತ್ಮಕ ಹಾಗೂ ಜೀವದ ಹಾನಿಯನ್ನು ಮಾಡಿಕೊಳ್ಳುವ ವಿಷಯವನ್ನು ಹಲವು ಜನರು ವ್ಯಕ್ತ ಪಡಿಸುತ್ತಲೇ ಇರುತ್ತಾರೆ. ಇಂತಹ ಮಾನಸಿಕ ಪರಿಸ್ಥಿತಿಗೆ ಒಳಗಾಗುವ ಮನುಷ್ಯರ ಮಾಹಿತಿ ದೊರೆತಾಗ ಅಂತಹ ಮನಸ್ಥಿತಿಯ ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ಮಾತನಾಡಿ ಸಾಂತ್ವನ ಹೇಳಿ ಅವರಲ್ಲಿ ಹುಟ್ಟಿರುವ ಆತ್ಮಹತ್ಯಾ ಭಾವನೆಯನ್ನು ತಡೆಯುವ ಸಾಮರ್ಥ್ಯ ಮನುಷ್ಯರಲ್ಲಿ ಇದೆ.


ಮನುಷ್ಯ ಜನ್ಮದಲ್ಲಿ ಆತ್ಮಹತ್ಯೆ ಮಹಾಪಾಪವೆಂದು ನಮ್ಮ ಪೂರ್ವಜರು, ಧರ್ಮಗ್ರಂಥಗಳು ಹೇಳಿವೆ. ಒಂದು ಜೀವ ರೂಪುಗೊಂಡು ಭೂಮಿಗೆ ಬರುವ ಸಮಯದಲ್ಲಿ ಪೋಷಕರು ಎಷ್ಟೆಲ್ಲ ಶ್ರಮವಹಿಸಿ ತಮ್ಮ ಪರಂಪರೆಯನ್ನು ಮುಂದುವರೆಸುವ ಮಕ್ಕಳಿಗಾಗಿ ತ್ಯಾಗಗಳನ್ನು ಮಾಡಿರುತ್ತಾರೆ. ಅಂತಹ ಪೋಷಕರ ಶ್ರಮ ಮತ್ತು ತಪಸ್ಸಿಗೆ ನೀರೆರಚದಂತೆ, ಸುಂದರವಾದ ಜೀವನವನ್ನು ಇರುವವರೆಗೂ ನಡೆಸುವುದು ಮನುಷ್ಯನ ಕರ್ತವ್ಯವಾಗಿದೆ.  ಜೀವನದ ಪರಮ ಸತ್ಯ ಎಂದರೆ ಸಾವು ಹುಟ್ಟು ನಿಶ್ಚಿತ ಇಲ್ಲದೇ ಹೋದರೂ ಹುಟ್ಟಿದ ಮೇಲೆ ಸಾವು ನಿಶ್ಚಿತ ಅದಕ್ಕೆ ಸಾಯುವವರೆಗೂ ಉತ್ತಮವಾಗಿ ಬದುಕಿ ಸಾಧನೆಯನ್ನು ಮಾಡಿ ಸುಖದಿಂದ ಬದುಕಬೇಕೆಂಬುದು ಮನುಷ್ಯರ ಜೀವನಕ್ಕೆ ಗುರಿ ಮತ್ತು ಉದ್ದೇಶವಾಗಿರುತ್ತದೆ. ಹೀಗಾಗಿ ಮನುಷ್ಯ ಜನ್ಮದ ಪ್ರತಿ ಕ್ಷಣಗಳನ್ನು ದೇವರ ಆಶೀರ್ವಾದ ಮತ್ತು ನಮಗೆ ಸಿಕ್ಕ ಅವಕಾಶ ಎಂದು ಸಂಭ್ರಮಿಸಬೇಕು, ಸದುಪಯೋಗ ಪಡಿಸಿಕೊಳ್ಳಬೇಕು.


ಇಂದಿನ ಯಾಂತ್ರಿಕ ಯುಗದಲ್ಲಿ ಕಷ್ಟ, ಸ್ಪರ್ಧೆ ಮತ್ತು ಗಡುಬಿಡಿಯ ಜೀವನದಲ್ಲಿ ಒತ್ತಡವನ್ನು ಸಹಿಸದ ಬಲಹೀನ ವ್ಯಕ್ತಿಗಳು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಒಂಟಿತನ, ಸೋಲು ಅಥವಾ ಬಯಸಿದ್ದು ಸಿಗದೇ ಇರುವಂತಹ ಕಾರಣಗಳಿಗಾಗಿಯೇ ಆತ್ಮಹತ್ಯೆಗೆ ಜನರು ಮೊರೆ ಹೋಗುತ್ತಲಿದ್ದಾರೆ. ಜಾಗತಿಕವಾಗಿ ಆತ್ಮಹತ್ಯೆಯೊಂದು ದೊಡ್ಡ ಚಿಂತೆಯ ವಿಷಯವಾಗಿ ಮಾರ್ಪಟ್ಟಿದೆ.


ಸೆಪ್ಟಂಬರ್ ತಿಂಗಳ 10ನೇ ತಾರೀಖನ್ನು ವಿಶ್ವ ಆತ್ಮಹತ್ಯಾ ತಡೆದಿನವನ್ನಾಗಿ ಆಚರಿಸುತ್ತಾ ಬಂದಿದ್ದಾರೆ. 2003ನೇ ಇಸವಿಯಿಂದ ಈ ದಿನದ ಆಚರಣೆಯ ನಾಂದಿಯಾಯಿತು. ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಫಾರ್ ಸುಯಿಸೈಡ್ ಪ್ರಿವೆನ್‌ಷನ್ (ಐಎಎಸ್‌ಪಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಒ) ಹಾಗೂ ವರ್ಲ್ಡ್ ಫೆಡೆರೇಷನ್ ಫಾರ್ ಮೆಂಟಲ್ ಹೆಲ್ತ್ ಈ ಸಂಸ್ಥೆಗಳು 2011ರಲ್ಲಿ ಒಟ್ಟು 40 ದೇಶಗಳ ಸಹಯೋಗದಿಂದ ಕಾರ್ಯಕ್ರಮವನ್ನು ಆಯೋಜಿಸಿದರು.  ಈ ದಿನಾಚರಣೆಯ ಮೂಲ ಉದ್ದೇಶ ಆತ್ಮಹತ್ಯೆಗಳನ್ನು ತಡೆಯುವುದು ಮತ್ತು ಜೀವದ ಮಹತ್ವವನ್ನು ಜನರಲ್ಲಿ ಮನವರಿಕೆ ಮಾಡಿಕೊಡುವುದು ಆಗಿತ್ತು. 1999ರಲ್ಲಿ ನಡೆದ ವಿಶ್ವ ಸಂಸ್ಥೆಯ ಅಧಿವೇಶನದಲ್ಲಿ ಪ್ರಸ್ತಾಪವಾದ ಆತ್ಮಹತ್ಯಾ ತಡೆಯ ಕುರಿತಾದ ಚರ್ಚೆ ಇಂತದೊಂದು ದಿನದ ಆಚರಣೆಗೆ ನಾಂದಿಯಾಗಿ ಈಗ 22 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅಧ್ಯಯನಗಳ ಪ್ರಕಾರ ಒಂದು ದಿನದ ಸಾವಿನ ಪ್ರಮಾಣದಲ್ಲಿ 1.4% ಆತ್ಮಹತ್ಯೆಯಿಂಧ ಸಾಯುತ್ತಿರುವವರಾಗಿದ್ದಾರೆ ಎಂಬ ಮಾಹಿತಿ 2020ರಲ್ಲಿ ತಿಳಿದು ಬಂದಿತ್ತು. ಪ್ರತಿ ವರ್ಷ ಒಂದು ವಿಶೇಷ ಥೀಮ್‌ನೊಂದಿಗೆ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 2025ರ ಥೀಮ್ "ಆತ್ಮಹತ್ಯೆಯ ಕುರಿತಾದ ನಿರೂಪಣೆಯನ್ನು ಬದಲಾಯಿಸುವುದು" ಎಂಬುದಾಗಿದೆ.  


ಸಾಮಾನ್ಯವಾಗಿ ಸಮಾಜದಲ್ಲಿ ನಿರೂಪಣೆ ಮತ್ತು ಹೇಳಿಕೆಯ ಪ್ರಭಾವ ಬಹಳವಾಗಿ ಆಗುತ್ತದೆ. ಒಂದು ವಿಚಾರವನ್ನು ಪದೇ ಪದೇ ಚರ್ಚಿಸುವದು ಮತ್ತು ಹೇಳುವುದು ಕೇಳುವುದರಿಂದ ಆ ವಿಚಾರ ಮನಸ್ಸಿನಲ್ಲಿ ಅಚ್ಚೊತ್ತಿ ಬಿಡುತ್ತದೆ. ಹೀಗಾಗಿ ಯಾವುದೇ ಪ್ರದೇಶದ ಅಭಿವೃದ್ಧಿ ಅಥವಾ ಯಾವುದೇ ವಿಷಯದ ಪ್ರಚಾರಕ್ಕೆ ನರೇಟಿವ್‌ಗಳ ಸೃಷ್ಟು ಬಹು ಮುಖ್ಯವೆನಿಸುತ್ತದೆ. ಇತ್ತೀಚಿನ ಹಲವು ದಶಕಗಳಲ್ಲಿ ಇಂತಹ ನರೇಟಿವ್‌ಗಳೇ ಪ್ರಚಾರ ಮತ್ತು ಪ್ರಸಾರಕ್ಕೆ ಅನುಕೂಲಕರ ನಿರೂಪಣೆಗಳ ಮೂಲಕ ಪಡೆಯಲಾಗುತ್ತದೆ. ಹೀಗಾಗಿ ವಿಶ್ವ ಸಂಸ್ಥೆಯು ಇಂತ ಒಂದು ಘೋಷವಾಕ್ಯದೊಂದಿಗೆ ಆತ್ಮಹತ್ಯೆ ತಡೆಯವ ಪ್ರಯತ್ನಕ್ಕೆ ಈ ವರ್ಷ ಕಾರ್ಯಪ್ರವೃತ್ತವಾಗಿದೆ.


ಸರಕಾರಗಳು, ಸಂಘ ಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಆತ್ಮಹತ್ಯಾ ಭಾವನೆಯನ್ನು ದೂರ ಹೋಗಿಸಲು ಪ್ರಯತ್ನ ಮಾಡುತ್ತಲಿವೆ. ಸ್ವಯಂ ಸೇವಕರು ಮತ್ತು ಸಂಸ್ಥೆಗಳು ಮಾತ್ರ ಈ ಕಾರ್ಯದಲ್ಲಿ ನಿರತರಾಗದೇ ಸಾಮಾನ್ಯ ಮನುಷ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಮಹತ್ವವನ್ನು ನೀಡುತ್ತದೆ.


ನಮ್ಮ ಮನೆಯಲ್ಲಿ ನಮ್ಮ ಸುತ್ತಮುತ್ತಲ ಜನರು ಬೇಕಾದವರಲ್ಲಿ ಆತ್ಮಹತ್ಯೆಯ ಭಾವನೆ ಬರದಂತೆ ಅಥವಾ ಬಂದರೂ ಕೂಡ ಅದನ್ನು ಹೋಗಲಾಡಿಸುವುದು ನಮ್ಮ ಸಾಮಾಜಿಕ ಕರ್ತವ್ಯವಾಗಿದೆ. ಇದಕ್ಕಾಗಿ ನಾವು ಮೊದಲು ಮನೆಯಲ್ಲಿ ಮಕ್ಕಳಿಗೆ ಬದುಕಿನ ಮಹತ್ವ ಮತ್ತು ಕಷ್ಟ ಬಂದಾಗ ಎದುರಿಸುವ ಧೈರ್ಯವನ್ನು ತುಂಬುವುದು ಮುಖ್ಯವಾಗಿದೆ. ಸಣ್ಣ ಮಕ್ಕಳು ಅದರಲ್ಲೂ ಹದಿಹರೆಯದವರಲ್ಲಿ ಇಂತಹ ಕೆಟ್ಟ ಆಲೋಚನೆಗಳು ಬರಲು ಸಾಕಷ್ಟು ಅವಕಾಶ ಮತ್ತು ಸಂದರ್ಭಗಳು ಇರುತ್ತವೆ. ಹೀಗಾಗಿ ಸಣ್ಣ ಮಕ್ಕಳಿಂದ ಹಿಡಿದು ಸೋಲು- ಗೆಲುವು, ಕಷ್ಟ- ಸುಖಗಳ ಪರಿಕಲ್ಪನೆಯನ್ನು ಮಕ್ಕಳಲ್ಲಿ ಮಾಡಿಸಿಕೊಡಬೇಕು. ಇಂದಿನ ಸಮಾಜದಲ್ಲಿ ಮಕ್ಕಳ ಬಾಯಲ್ಲಿ ಬಂದಿದ್ದು ಪೋಷಕರ ಅವರ ಕೈಯಲ್ಲಿ ಹಿಡಿದು ನಿಂತಿರುತ್ತಾರೆ. ಇಂತಹ ಸುಲಭ ಮತ್ತು ಬಯಸಿದ್ದೆಲ್ಲ ಸಿಗುವದರಿಂದ ಕಷ್ಟ ಮತ್ತು ಸೋಲಿನ ಅರಿವು ಇಲ್ಲದ ಮಕ್ಕಳಿಗೆ ನೋವನ್ನು ಅವಮಾನವನ್ನು ಅನುಭವಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ಕೆಲಸಕ್ಕೆ ಕೈ ಹಾಕುತ್ತಾರೆ. ಇಂತಹ ಸ್ವಭಾವ ಸಣ್ಣ ವಯಸ್ಸಿನಲ್ಲಿ ಇದ್ದು ಅಲ್ಪ ಸ್ವಲ್ಪ ಎದುರಿಕೊಂಡು ಬಂದವರು ಮುಂದೆ ಹರಯದಲ್ಲೋ  ನಡು ವಯಸ್ಸಿನಲ್ಲೋ ಆತ್ಮಹತ್ಯೆ ಮಾಡಿಕೊಳ್ಳುವ ಜನರ ಸಂತತಿ ಬೆಳೇಯುತ್ತಾ ಹೋಗುತ್ತದೆ. ಹೀಗಾಗಿ ಸಣ್ಣ ವಯಸ್ಸಿನಲ್ಲಿ ಮನುಷ್ಯ ಜನ್ಮದ ಮಹತ್ವವನ್ನು ಮಕ್ಕಳಲ್ಲಿ ತಿಳಿವಳಿಕೆ ಉದಾಹರಣೆ ಕಥೆಗಳ ಮೂಲಕ ತಿಳಿಸಿಕೊಡಬೇಕು. ಪುರಂದರ ದಾಸರ ಪದವೊಂದಿಗೆ "ಮಾನವ ಜನ್ಮದೊಡ್ಡದು ಇದು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ" ಎಂದು ಇಂತಹ ಹಾಡುಗಳು ಸಣ್ಣ ವಯಸ್ಸಿನಿಂದ ಕೇಳುತ್ತಾ ಬಂದರಲ್ಲಿ ನಮ್ಮ ಮನದಲ್ಲಿ ಮಾನವ ಜನ್ಮದ ಮಹತ್ವ ಮತ್ತು ಜೀವ ಹಾಗೂ ಜೀವನದ ಪ್ರಾಮುಖ್ಯತೆ ತಿಳಿಯುತ್ತದೆ.


ಇಂತಹ ಉತ್ತಮ ದಿನಾಚರಣೆಯಲ್ಲಿ ನಮ್ಮದೂ ಕೊಡುಗೆ ನೀಡಿ ಸಮಾಜಕ್ಕೆ ನಮ್ಮದೊಂದು ಸಣ್ಣ ಅಳಿಲು ಸೇವೆ ಮಾಡುವುದು ಮಾನವೀಯತೆಯ ಕೆಲಸವಾಗಿದೆ.


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top