ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳಿಗೆ ಅಪಮಾನ, ಹಿಂದೂ ಭಾವನೆಗೆ ಧಕ್ಕೆ: ಬಿ.ವೈ.ವಿಜಯೇಂದ್ರ

Upayuktha
0


ನವದೆಹಲಿ: ಈ ಬಿಜೆಪಿಯವರಿಂದ ರಾಜ್ಯದಲ್ಲಿ ನೆಮ್ಮದಿ ಹಾಳಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೆ ಕೊಟ್ಟಿದ್ದಾರೆ. ದರಿದ್ರ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕದಲ್ಲಿ ಹಿಂದೂಗಳಿಗೆ ಅಪಮಾನ, ಹಿಂದೂ ಭಾವನೆಗೆ ಧಕ್ಕೆ ಆಗುತ್ತಿದೆ. ಹಿಂದೂಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಸಂಸದ ಬಿ.ವೈ. ರಾಘವೇಂದ್ರ ಅವರ ದೆಹಲಿಯ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಮದ್ದೂರಿನಲ್ಲಿ ಹೆಣ್ಮಕ್ಕಳ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಸಣ್ಣ ಘಟನೆ ಎಂದು ಗೃಹ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆÉ ಅನಿಸುವುದಾದರೆ, ಲಜ್ಜೆಗೆಟ್ಟ ವರ್ತನೆ ರಾಜ್ಯ ಸರಕಾರದ್ದು ಎಂದು ಖಂಡಿಸಿದರು.


ಮದ್ದೂರಿನಲ್ಲಿ ಇವತ್ತು ಹೆಣ್ಮಕ್ಕಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ದೇಶಾದ್ಯಂತ ಗಣೇಶ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಮಹಾರಾಷ್ಟ್ರ ಸೇರಿ ಎಲ್ಲ ರಾಜ್ಯಗಳಲ್ಲಿ ಗಣೇಶ ಹಬ್ಬ, ವಿಗ್ರಹ ವಿಸರ್ಜನೆ ವಿಜೃಂಭಣೆಯಿಂದ ನಡೆಯುತ್ತದೆ. ಕರ್ನಾಟಕದಲ್ಲಿ ಯಾಕೆ ಗಲಾಟೆ ಆಗುತ್ತಿದೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಈದ್ ಮಿಲಾದ್ ನಡೆದಾಗ ಎಲ್ಲಾದರೂ ಗಲಾಟೆ ಆಗಿದೆಯೇ ಎಂದು ಕೇಳಿದರು.


ಕರ್ನಾಟಕದಲ್ಲೂ ಹಿಂದೂಗಳು ಶಾಂತಿಪ್ರಿಯರು; ಎಲ್ಲ ಧರ್ಮ, ಎಲ್ಲ ಸಮುದಾಯಗಳನ್ನು ಪ್ರೀತಿಸುವ ಕೆಲಸವನ್ನು ಹಿಂದೂ ಸಮಾಜ ಮಾಡುತ್ತಿದೆ. ಆದರೆ, ರಾಜ್ಯ ಸರಕಾರ ನಡೆಸುವ ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿಗಳು ಇದನ್ನು ರಾಜ್ಯದ ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು. ಮದ್ದೂರಿನದು ಸಣ್ಣಪುಟ್ಟ ಘಟನೆ ಎಂದು ಗೃಹ ಸಚಿವರು ಹೇಳಿದ್ದಾರೆ. ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಸಣ್ಣಪುಟ್ಟ ಘಟನೆ ಆಗಲು ಸಾಧ್ಯವೇ ಎಂದು ಕೇಳಿದರು. ನಿಮ್ಮ ಮನೆಯ ಹೆಣ್ಮಕ್ಕಳ ಮೇಲೆ ಕಲ್ಲೆಸೆದರೆ, ಲಾಠಿ ಚಾರ್ಜ್ ಮಾಡಿದರೆ ಯಾವ ಪರಿಸ್ಥಿತಿ ಆಗಲಿದೆ ಎಂದು ಪ್ರಶ್ನಿಸಿದರು. 


ಕೇಸರಿ ಕಂಡರೆ ಆಗದ ಮುಖ್ಯಮಂತ್ರಿ..

ಸಿದ್ದರಾಮಯ್ಯನವರಿಗೆ ಕೇಸರಿ ಕಂಡರೆ ಆಗುವುದಿಲ್ಲ; ಕೇಸರಿ ಪೇಟ ತೊಡಿಸಿದರೆ ಕಿತ್ತು ಬಿಸಾಡುತ್ತಾರೆ. ಆದರೆ, ಮೊನ್ನೆ ಈದ್ ಮಿಲಾದ್‍ನಲ್ಲಿ ಇಡೀದಿನ ಆ ಟೊಪ್ಪಿ ಹಾಕಿಕೊಂಡು ಆನಂದವಾಗಿ ಕುಳಿತಿದ್ದರು ಎಂದು ಟೀಕಿಸಿದರು.


ಕಾಂಗ್ರೆಸ್ ಸರಕಾರದ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅವರಿಗೆ ಹಿಂದೂಗಳ ಮತ ಸಿಕ್ಕಿಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ಸಿನವರಿಗೆ ಹಿಂದೂಗಳ ಬಗ್ಗೆ ಇಷ್ಟೊಂದು ದ್ವೇಷ ಏಕೆ ಎಂದು ಅವರು ಕೇಳಿದರು. ಹಿಂದೂಗಳ ಬಗ್ಗೆ ಕಾಂಗ್ರೆಸ್ ಸರಕಾರಕ್ಕೆ ಅಸಡ್ಡೆ ಏಕೆ ಎಂದು ಪ್ರಶ್ನೆಯನ್ನೂ ಮುಂದಿಟ್ಟರು.


ಸರಕಾರದ ಹಿಂದೂ ವಿರೋಧಿ, ಅಲ್ಪಸಂಖ್ಯಾತರ ಪರ ನೀತಿಯಿಂದ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆದಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಪಕ್ಷದ, ಸರಕಾರದ ಪಾಪದ ಕೊಡ ತುಂಬಿದೆ; ಇದೇ ರೀತಿ ಸರಕಾರ ಮುಂದುವರೆದರೆ ಮುಂದೆ ಬೀದಿಯಲ್ಲಿ ನಡೆದು ಹೋಗಲು ಕಾಂಗ್ರೆಸ್ ಕಾರ್ಯಕರ್ತರಿಗೆ ಕಷ್ಟ ಆಗಲಿದೆ ಎಂದು ಎಚ್ಚರಿಸಿದರು.


ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರವನ್ನು ಗಮನಿಸಿ ಈ ಸರಕಾರ ಕೈಕಟ್ಟಿ ಕೂತಿತ್ತು. ಕೊಪ್ಪಳದಲ್ಲಿ ಈಚೆಗೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬ ಹಿಂದೂ ಕಾರ್ಯಕರ್ತ ಗವಿಸಿದ್ದಪ್ಪರ ಬರ್ಬರ ಹತ್ಯೆ ನಡೆದಿತ್ತು. ಮಸೀದಿ ಎದುರು ಅವರನ್ನು ಕೊಚ್ಚಿ ಹಾಕಿದ್ದರು. ಸುಹಾಸ್ ಶೆಟ್ಟಿ ಬರ್ಬರ ಹತ್ಯೆಯೂ ದೇಶಾದ್ಯಂತ ಚರ್ಚೆಯಾಗಿದೆ ಎಂದು ಗಮನ ಸೆಳೆದರು.


ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ, ಹಿಂದೂಗಳಿಗೆ ಪದೇಪದೇ ಅಪಮಾನ ಆಗುತ್ತಿದೆ. ಹಿಂದೂಗಳು ಗೌರವದಿಂದ ತಲೆ ಎತ್ತಿಕೊಂಡು ಓಡಾಡಲು ಆಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರಕಾರವು ಹಿಂದೂಗಳ ಮೇಲೆ ಕೇಸುಗಳನ್ನು ದಾಖಲಿಸುತ್ತಿದೆ ಎಂದು ಆಕ್ಷೇಪಿಸಿದರು.


ಸಮಾಜಘಾತುಕ ಶಕ್ತಿಗಳ ವಿರುದ್ಧ ದಾಖಲಿಸಿದ್ದ ಮೊಕದ್ದಮೆಗಳನ್ನು ಹಿಂಪಡೆದಿದ್ದಾರೆ. ಮದ್ದೂರಿನಲ್ಲಿ ಹಿಂದೂಗಳ ಮೇಲೆ ಕಲ್ಲು ತೂರಾಟ ಆಗಿದ್ದು, ಆ ದೇಶದ್ರೋಹಿಗಳು, ಸಮಾಜಘಾತುಕ ಶಕ್ತಿಗಳಿಗೆ ರಾಜ್ಯ ಸರಕಾರದ ಎಲ್ಲ ತೀರ್ಮಾನಗಳಿಂದ ಧೈರ್ಯ ಬಂದಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯನವರೇ ಸಚಿವ ಸಂಪುಟ ಸಭೆಯಲ್ಲಿ ಕೇಸು ಹಿಂಪಡೆಯುತ್ತೀರಾ? ಎಂದು ಪ್ರಶ್ನಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಹರೀಶ್ ಪೂಂಜಾ, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಮತ್ತು ಪ್ರಮುಖರು ಉಪಸ್ಥಿತರಿದ್ದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top