ಕಾವೂರು: ಭಾರತೀಯ ಜನತಾ ಪಾರ್ಟಿ, ಮಂಗಳೂರು ಉತ್ತರಮಂಡಲ ಯುವ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಕಾವೂರಿನ ಸೊಸೈಟಿ ಸಭಾಂಗಣದಲ್ಲಿ ಬುಧವಾರ ಜರಗಿತು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಉದ್ಘಾಟಿಸಿ, ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಸೆ. 17ರಿಂದ ಅ. 2ನೇ ತಾರೀಖಿನವರೆಗೆ ಜಿಲ್ಲೆ, ರಾಜ್ಯ, ದೇಶದಾದ್ಯಂತ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಥಮ ಬಾರಿಗೆ ಮಂಗಳೂರು ಉತ್ತರ ಮಂಡಲ ಯುವ ಮೋರ್ಚಾ ರಕ್ತದಾನ ಹಮ್ಮಿಕೊಳ್ಳುವ ಮೂಲಕ ಶ್ಲಾಘನೀಯ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ವೈದ್ಯಕೀಯ ಶಿಬಿರ, ಪರಿಸರ ಸ್ವಚ್ಛತೆ, ಸಸಿ ನೆಟ್ಟು ಪೋಷಿಸುವುದು ಸೇರಿದಂತೆ ಯೋಜನೆ ರೂಪಿಸಲಾಗಿದೆ ಎಂದರು.
ಶಾಸಕ ಡಾ. ಭರತ್ ಶೆಟ್ಟಿ ವೈ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಪ್ರಚಾರಕ್ಕಾಗಿ ನಿಸ್ವಾರ್ಥ ಸೇವೆಯನ್ನು ಸಾಧಿಸುವ ಮೂಲಕ ಗುಜರಾತಿನಲ್ಲಿ ಬಿಜೆಪಿಯ ಪತಾಕೆಯನ್ನು ಹಾರಿಸಿ ದೇಶದಾದ್ಯಂತ ಪಕ್ಷವನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿ ಮುಖ್ಯಮಂತ್ರಿಯಾಗಿ ಇದೀಗ ಪ್ರಧಾನ ಮಂತ್ರಿಯಾಗಿ ಸುಧೀರ್ಘ ಆಡಳಿತವನ್ನು ನಡೆಸುವ ಮೂಲಕ ಪ್ರಪಂಚದಲ್ಲಿ ಗುರುತಿಸಿಕೊಂಡಿದ್ದಾರೆ. ಅಮೂಲಾಗ್ರ ಬದಲಾವಣೆಯನ್ನು ಮಾಡುವ ಮೂಲಕ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿದ್ದಾರೆ. ಡಿಜಿಟಲ್ ಟೆಕ್ನಾಲಜಿ, ಚಂದ್ರಯಾನ ಹೀಗೆ ಸಾಲು ಸಾಲು ಅಭಿವೃದ್ಧಿ ಸಾಧನೆಯನ್ನ ಕಂಡಿದ್ದೇವೆ. ದೇಶದ ಸೈನಿಕ ಶಕ್ತಿಯ ಬಲವರ್ಧನೆ ಜಾಗತಿಕವಾಗಿ ಪ್ರಪಂಚವೇ ಬೆರಗಾಗಿದೆ. ದೇಶದ ಒಳಗೆ ದೇಶದ ಕಾನೂನಿನಲ್ಲಿ ತ್ವರಿತ ಗತಿಯ ಬದಲಾವಣೆ ತಂದು ಐತಿಹಾಸಿಕ ನಿರ್ಧಾರಗಳಿಗೆ ಸಾಕ್ಷಿಯಾಗಿದ್ದಾರೆ ಎಂದರು.
ಪ್ರಧಾನಿಯವರ ಸೇವಾ ಮನೋಭಾವವು ಯುವ ಮೋರ್ಚಾ ಕಾರ್ಯಕರ್ತರಿಗೆ ಮಾದರಿಯಾಗಿದೆ. ಯುವ ಮೋರ್ಚಾ ಕಾರ್ಯಕರ್ತರಿಗೆ ನರೇಂದ್ರ ಮೋದಿಯವರ ನಾಯಕತ್ವದ ಗುಣ ಪ್ರೇರಣೆಯಾಗಿದೆ. ಪಕ್ಷದ ಬೆಳವಣಿಗೆಯಲ್ಲಿ ಕಾರ್ಯಕರ್ತರೇ ಪ್ರಧಾನ ಭೂಮಿಕೆಯನ್ನು ನಿಭಾಯಿಸುವುದರಿಂದ ಪ್ರತಿಯೊಬ್ಬರೂ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಂಗಳೂರು ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಶುಭ ಹಾರೈಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಪೂಜಾ ಪೈ, ಬಿಜೆಪಿ ಮುಖಂಡ ರಣದೀಪ್ ಕಾಂಚನ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ, ಪ್ರಮುಖರಾದ ಶ್ವೇತಾ ಪೂಜಾರಿ, ಹರ್ಷಿತ್ ನೋಂಡಾ, ಸಂದೀಪ್ ಪಚ್ಚನಾಡಿ, ಲೋಹಿತ್ ಅಮೀನ್, ಎ ಜೆ ಶೆಟ್ಟಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಪ್ರಮುಖರಾದ ಗೋಪಾಲಕೃಷ್ಣ ಮತ್ತಿತರರು ವೇದಿಕೆಯಲ್ಲಿ ಮಹಾನಗರ ಪಾಲಿಕೆಯ ಸದಸ್ಯರು, ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉತ್ತರಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಕ್ಷಿತ್ ಪೂಜಾರಿ ಸ್ವಾಗತಿಸಿದರು. ಸಂಜಯ್ ಶೆಟ್ಟಿ ವಂದಿಸಿದರು. ಯಶೋಪಾಲ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

