ಯಲಹಂಕ, ಬೆಂಗಳೂರು: ‘ಸ್ವತಂತ್ರ ಭಾರತ ಶಕ್ತಿಶಾಲಿ ರಾಷ್ಟ್ರವಾಗಬೇಕಾದರೆ ನಮ್ಮ ಯುವಜನರು ತಮಗೆ ತಾವು ನಿಷ್ಠರಾಗಿರಬೇಕು ಹಾಗೂ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರಾಮಾಣಿಕ ಹೆಜ್ಜೆಗಳನ್ನಿಡಬೇಕು. ನಮ್ಮ ಯುವಜನರು ತಮ್ಮ ಕಾರ್ಯಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದರೆ ಅದೇ ನಾವು ದೇಶಕ್ಕೆ ಸಲ್ಲಿಸುವ ಅನುಪಮ ಸೇವೆ. ಕೃತಕ ಬುದ್ದಿಮತ್ತೆ, ರೋಬೋಟಿಕ್ಸ್ ಇತ್ಯಾದಿ ತಂತ್ರಜ್ಞಾನಗಳನ್ನು ದೇಶದ ಮುನ್ನಡೆಗೆ ಮಾತ್ರ ಬಳಸುವ ಪರಿಜ್ಞಾನ ಹಾಗೂ ಕುಶಲತೆ 2047ರ ಹೊತ್ತಿಗೆ ಭಾರತವನ್ನು ಅಗ್ರರಾಷ್ಟ್ರಗಳ ಶ್ರೇಣಿಯಲ್ಲಿ ನಿಲ್ಲುವಂತೆ ಮಾಡುತ್ತವೆ’ ಎಂದು ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಎನ್.ಸಿ.ಸಿ ಮಹಾನಿರ್ದೇಶನಾಲಯದ ವಿಶ್ರಾಂತ ಉಪನಿರ್ದೇಶಕ ಮೇಜರ್ ಆರ್.ಡಿ. ಭಾರ್ಗವ ತಿಳಿಸಿದರು.
ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ79ನೇ ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
‘ಸಕಾರಾತ್ಮಕವಾಗಿ ನಮ್ಮ ನಡೆನುಡಿ ಸದಾ ಇರಬೇಕು. ಆಗ ಮಾತ್ರ ಜನೋಪಯೋಗಿ ಕಾರ್ಯ ಮಾಡಲು ಸಾಧ್ಯ. ಅಷ್ಟೇ ಅಲ್ಲ, ನಾವು ನಿರಂತರವಾಗಿ ಆಶಾವಾದಿಗಳಾಗಿರಬೇಕು. ಆಗ ಮಾತ್ರ ದೇಶದ ಏಳಿಗೆ ಸಾಧ್ಯ’, ಎಂದರು.
ಪ್ರಾರಂಭದಲ್ಲಿ ಸರ್ವರನ್ನೂ ಸ್ವಾಗತಿಸಿದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್, ‘ಅಹಿಂಸೆಯ ತಳಹದಿಯ ಮೇಲೆ ನಾವು ಗಳಿಸಿರುವ ಸ್ವಾತಂತ್ರ್ಯ ಇಡೀ ಜಗತ್ತಿಗೇ ಮಾದರಿ. ಅದನ್ನು ಅನೇಕ ಸಂಕಷ್ಟಗಳ ನಡುವೆ ಸಾಧ್ಯವಾಗಿಸಿದವರು ರಾಷ್ಟ್ರಪಿತ ಮಹಾತ್ಮ ಗಾಂಧಿ. ಈ ಮಹಾನುಭಾವರಿಗೆ ನಮ್ಮ ನಮನ ಸಲ್ಲಿಸುವುದು ನಮ್ಮಆದ್ಯಕರ್ತವ್ಯ’ ಎಂದರು.
ಅಧ್ಯಕ್ಷತೆ ವಹಿಸಿದ್ದವರು ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ. ಅವರು ಮಾತನಾಡಿ, ‘ನಾವು ನಮ್ಮ ತಂತ್ರಜ್ಞಾನದ ಆವಿಷ್ಕಾರಗಳ ನೆರವಿನಿಂದ ಕೆಲವೇ ಗಂಟೆಗಳ ಅವಧಿಯಲ್ಲಿ ಕಾರ್ಯಾಚರಣೆ ಮಾಡಿ ‘ಆಪರೇಶನ್ ಸಿಂದೂರ’ ಮೂಲಕ ನಮ್ಮನ್ನು ಕೆಣಕಿದವರ ಸದ್ದಡಗಿಸಿದ್ದೇವೆ. ಈ ನಿಟ್ಟಿನಲ್ಲಿ ನಾವು ಮತ್ತಷ್ಟು ಮುಂದೆ ಸಾಗಿ ವಿಶ್ವದ ಗಮನವನ್ನು ನಿರಂತರವಾಗಿ ಸೆಳೆಯುತ್ತಿರಬೇಕು’, ಎಂದರು.
ಸ್ವಾತಂತ್ರ್ಯೋತ್ಸವ ಅಂಗವಾಗಿ ದೇಶಪ್ರೇಮವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು,ಸಂಸ್ಥೆಯ ಎನ್.ಸಿ.ಸಿ. ಮುಖ್ಯಸ್ಥ ಡಾ. ರಾಜೇಶ್ ನಂದಳಿಕೆ, ಶೈಕ್ಷಣಿಕ ಮುಖ್ಯಸ್ಥಡಾ. ಜೆ. ಸುಧೀರ್ ರಡ್ಡಿ, ಡಾ. ಪಿ.ಬಿ. ಶೆಟ್ಟಿ, ಗ್ರಂಥಾಯಲ ಅಧಿಕಾರಿ ಡಾ. ಗಂಗಾಧರ್ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಸಂಸ್ಥೆಯ ಎನ್.ಸಿ.ಸಿ ಘಟಕದ ಕೆಡೆಟ್‍ಗಳ ಪಥಸಂಚಲನ ಆಕರ್ಷಣೆಯ ಕೇಂದ್ರವಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

