ಮಂಗಳೂರು: ವಿಭಿನ್ನ ಸಂಸ್ಕೃತಿ, ಜೀವನ ಶೈಲಿ, ಧಾರ್ಮಿಕ ಆಚರಣೆಗಳಿಗೆ ಹೆಸರು ವಾಸಿಯಾದ ಕರಾವಳಿ ಜಿಲ್ಲೆಗಳು, ಆಧುನಿಕರಣಕ್ಕೆ ಕಾಲಿಡುತ್ತಿದ್ದಂತೆ ಅಭಿವೃದ್ಧಿಯ ಹೆಸರಿನಲ್ಲಿ ಆ ಸಂಸ್ಕೃತಿ, ಜೀವನಶೈಲಿ ಬದಲಾಗುತ್ತಿವೆ. ಬದಲಾಗುತ್ತಿರುವ ಕಾಲವನ್ನು ತಡೆಯಲು ಸಾಧ್ಯವಿಲ್ಲದಿದ್ದರೂ ಹಿಂದಿನ ಸಂಸ್ಕೃತಿ ಕರಾವಳಿಯ ಜೀವನ ಶೈಲಿಯ ವೈಭೋಗದ ಸವಿ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ ಈ ಕನ್ನಡ ಸಾಂಸ್ಕೃತಿಕ ವಸ್ತುಸಂಗ್ರಹಾಲಯ.
ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ಸಂಕಿರ್ಣದ ಹಿಂಭಾಗದಲ್ಲಿರುವ ಈ ಮ್ಯೂಸಿಯಂ ನೋಡುಗರನ್ನು ಕೆಲವು ವರ್ಷಗಳ ಹಿಂದಿನ ಜೀವನಕ್ಕೆ ಕರೆದೊಯ್ಯುವುದು ಖಂಡಿತ.
ಸುಮಾರು 35ರಿಂದ 40 ವರ್ಷಗಳ ಹಿಂದೆ, ಕರಾವಳಿಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕೆಂಬ ದಿಟ್ಟ ಮನಸ್ಸಿನಿಂದ ಈ ಮಹತ್ವ ಕಾರ್ಯಕ್ಕೆ ಮೊದಲು ಕೈ ಹಾಕಿದವರು ಕನ್ನಡ ಸಾಂಸ್ಕೃತಿಕ ವಿಭಾಗ ಅಧ್ಯಕ್ಷರಾದ ಪ್ರೊ. ಬಿ.ಎ. ವಿವೇಕ ರೈ ಮತ್ತು ಸಹ ಅಧ್ಯಾಪಕರು. ಇವರೊಂದಿಗೆ ವಿದ್ಯಾರ್ಥಿಗಳು ಕೈ ಜೋಡಿಸಿದ್ದು ಈ ಯೋಜನೆಗೆ ಮತ್ತಷ್ಟು ಮೆರುಗು ಬಂತು.
ಈ ವಸ್ತುಸಂಗ್ರಹಾಲಯವು ಹಿಂದಿನ ಕಾಲದ ಸಂಸ್ಕೃತಿ, ಕೃಷಿ ಪದ್ಧತಿ, ಕಲೆಯನ್ನು, ತಾಯಿಯಂತೆ ತನ್ನ ಒಡಲಲ್ಲಿಟ್ಟುಕೊಂಡು ಜೋಪಾನ ಮಾಡುತ್ತಿದೆ.
ಇಲ್ಲಿ ಸುಮಾರು 300ವರ್ಷಗಳಷ್ಟು ಹಳೆಯದಾದ ಸೂರ್ಯ ದೇವನ ಕಲ್ಲಿನ ಪ್ರತಿಮೆ, ಅಲ್ಲದೆ ಬ್ರಿಟಿಷರ ಕಾಲದಲ್ಲಿ ಹೋರಾಡಿದ ಸುಳ್ಯದ ಕಲ್ಯಾಣಪ್ಪ ಕಾಟ್ ಕಾಯಿಯವರು ಉಪಯೋಗಿಸಿದ ಖಡ್ಗ ಈ ಸಂಗ್ರಹಾಲಯಕ್ಕೆ ಮತ್ತಷ್ಟು ಮೆರುಗನ್ನು ನೀಡಿದೆ.
ಪಂಜುರ್ಲಿ ದೈವದ ಮುಖವಾಡ, ವಿವಿಧ ಬಗೆಯ ನಾಗರ ವಿಗ್ರಹಗಳು, ಬಬ್ಬರಿಯನ ಹುರುಗಳು, ಮರದ ಬೃಹತ್ ಶಿಲ್ಪಕಲೆಗಳು, ಹಿಂದಿನ ಕಾಲದ ಕೃಷಿ ಉಪಕರಣಗಳು, ವಿಭಿನ್ನ ಶೈಲಿಯ ಮಣ್ಣಿನ ಮಡಿಕೆಗಳು, ಸಾಲು ದೀಪ ಸ್ತಂಭಗಳು. ಮೀನುಗಾರಿಕಾ ಉಪಕರಣಗಳು, ನಾಣ್ಯಗಳು,
ಗೃಹಉಪಯೋಗಿ ವಸ್ತುಗಳು, ಮರದ ಒಳಾಂಗಣ ಆಟಿಕೆಗಳು ಸಾಮಗ್ರಿಗಳು, ಹೀಗೆ ಒಂದಲ್ಲ ಎರಡಲ್ಲ ಕರಾವಳಿ ಜೀವನ ಮತ್ತು ಸಂಸ್ಕೃತಿಯನ್ನು ನೆನಪಿಸುವ ಬಹುತೇಕ ವಸ್ತುಗಳನ್ನು ಬಹಳ ನಾಜೂಕಾಗಿ ಕಾಪಾಡಿಕೊಂಡು ಬಂದಿದೆ.
ಈ ವಸ್ತು ಸಂಗ್ರಹಾಲಯಕ್ಕೆ ವಿಶ್ವವಿದ್ಯಾನಿಲಯಕ್ಕೆ ರ್‍ಯಾಂಕಿಂಗ್ ಕೊಡುವ ನ್ಯಾಕ್ ತಂಡದವರು ಬಂದು ವೀಕ್ಷಿಸಿ ಉತ್ತಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಸ್ಥಳೀಯ ಶಾಲಾ ಮಕ್ಕಳು, ಇತರೆ ಕಾಲೇಜು ವಿದ್ಯಾರ್ಥಿಗಳು, ಕೆಲವು ಹಿರಿಯ ವ್ಯಕ್ತಿಗಳು ಬಂದು ವೀಕ್ಷಿಸಿದ್ದಾರೆ. ವೀಕ್ಷಣೆಗೆ ಆಗಾಗ ಬರುತ್ತಾರೆ. ಸಂಗ್ರಹಾಲಯಲ್ಲಿರುವ ಸಾಮಗ್ರಿಗಳ ಸಂಗ್ರಹವನ್ನು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳೇ ಸೇರಿ ಮಾಡಿರುವುದು ವಿಶೇಷ. ಇದರಲ್ಲಿರುವ ಸಾಮಗ್ರಿಗಳನ್ನು ಕುಂದಾಪುರ, ಸುಬ್ರಮಣ್ಯ, ಕಾಸರಗೋಡು, ಹೀಗೆ ವಿವಿಧ ಭಾಗಗಳಿಂದ ಸಂಗ್ರಹಿಸಲಾಗಿದೆ.
ಹಿಂದಿನ ಸಂಸ್ಕೃತಿ, ಜೀವನ ಪದ್ಧತಿಯನ್ನು ನೆನಪಿಸುವಲ್ಲಿ ಈ ಮ್ಯೂಸಿಯಂ ಉತ್ತಮ ನಿದರ್ಶನವಾಗಿದೆ. ಉತ್ತಮ ರೀತಿಯಲ್ಲಿ ಕಂಗೊಳಿತ್ತಿರುವ ಈ ಮ್ಯೂಸಿಯಂ ಅಭಿವೃದ್ಧಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದರೆ ಇನ್ನೂ ಭವ್ಯವಾಗಿ ಕಂಗೊಳಿಸುತ್ತದೆ.
- ಹನುಮಂತ ಎಸ್ ಕೆ.
ಪತ್ರಿಕೋದ್ಯಮ ವಿದ್ಯಾರ್ಥಿ. ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ