ಗೋಕರ್ಣ: ಅತ್ಯುತ್ಸಾಹ ಹಾಗೂ ಅನುತ್ಸಾಹ ಎರಡೂ ತಪ್ಪು; ಇದರ ಬದಲು ಜೀವನಕ್ಕೆ ಸದಾ ಚೈತನ್ಯ ನೀಡುವ ಸದೋತ್ಸಾಹ ಇರಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 22ನೇ ದಿನವಾದ ಶುಕ್ರವಾರ ಮುಳ್ಳೇರಿಯಾ ಮಂಡಲದ ನೀರ್ಚಾಲು, ಚಂದ್ರಗಿರಿ, ಈಶ್ವರಮಂಗಲ, ಕುಂಬಳೆ, ಪೆರಡಾಲ ಮತ್ತು ಪಳ್ಳತಡ್ಕ ವಲಯಗಳ ಶಿಷ್ಯಭಕ್ತರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಯಾವುದೇ ಕಾರ್ಯದ ಆರಂಭದಲ್ಲಿ ಇರುವ ಉತ್ಸಾಹ ಕೊನೆಯ ವರೆಗೂ ಇರಬೇಕು. ಇದು ನಮ್ಮ ಕಾರ್ಯಕರ್ತರಿಗೂ ಅನ್ವಯಿಸುತ್ತದೆ. ಪ್ರತಿಯೊಬ್ಬರನ್ನೂ ಮಠದ ಸೇವೆಯಲ್ಲಿ ತೊಡಗಿಸಲು ಹಿರಿಯ ಕಾರ್ಯಕರ್ತರು ಶ್ರಮ ವಹಿಸಬೇಕು. ಎಲ್ಲರೂ ಸೇವೆಯಲ್ಲಿ ತೊಡಗಿಸಿಕೊಂಡಾಗ ಅದು ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಹೇಳಿದರು.
ಮಠ ಹತ್ತಿರ ಎಂಬ ಭಾವನೆ ಇದ್ದರೆ ಎಷ್ಟು ದೂರದಿಂದಲೂ ಶಿಷ್ಯಭಕ್ತರು ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಮಠ ಮತ್ತು ಶಿಷ್ಯರ ನಡುವಿನ ಸಂಬಂಧ ಆತ್ಮದ ಸಂಬಂಧ. ಈ ಭಾಗ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಿದ ಹಲವು ಕಾರ್ಯಕರ್ತರನ್ನು ಶ್ರೀಮಠಕ್ಕೆ ಕೊಡುಗೆಯಾಗಿ ನೀಡಿದೆ. ಹೊಸ ತಲೆಮಾರು ಕೂಡಾ ಈ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಆಶಿಸಿದರು. 25 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಮಹಿಳೋದಯ ಸಂಘಟನೆ ಇಡೀ ಸಮಾಜಕ್ಕೆ ಮಾದರಿ ಎಂದರು.
ಅಡ್ಕ ಗೋಪಾಲಕೃಷ್ಣ ಭಟ್ ಬರೆದಿರುವ ಹವಿನುಡಿ ಸಂಚಿ ಎಂಬ ಕೃತಿಯನ್ನು ಶ್ರೀಗಳು ಲೋಕಾರ್ಪಣೆ ಮಾಡಿ, ಮರೆತು ಹೋಗುವ ಕನ್ನಡಪದಗಳನ್ನು ಸಂಗ್ರಹಿಸಿ ಪ್ರಕಟಿಸಿರುವ ಕಾರ್ಯ ಶ್ಲಾಘನೀಯ ಎಂದರು. ಹಳೆಯ ಶಬ್ದಗಳು, ಗಾದೆಗಳು ಅಜ್ಜನ ಆಶೀರ್ವಾದ ರೂಪದಲ್ಲಿ ಸಮಾಜಕ್ಕೆ ಲಭ್ಯವಾಗಿದೆ ಎಂದರು. ಕುಂಬಳೆ ಸೀಮೆಯಲ್ಲಿರುವ ಹವಿಗನ್ನಡದ ಅಪರೂಪದ ಶಬ್ದಗಳ ಕೋಶ ಇದಾಗಿದ್ದು, ಸಾವಿರಕ್ಕೂ ಹೆಚ್ಚು ಪದಗಳನ್ನು ಒಳಗೊಂಡಿದೆ. ಈ ಶಬ್ದಗಳನ್ನು ಬಳಸಿ, ಬೆಳೆಸಬೇಕು ಎಂದು ಸೂಚಿಸಿದರು. ಆಯಾ ಪ್ರಾಂತ್ಯಗಳ ಹಳೆಯ ಶಬ್ದಗಳನ್ನು ಉಳಿಸಬೇಕು ಎಂದು ಸಲಹೆ ಮಾಡಿದರು.
ದಿನಕ್ಕೊಂದು ಇಂಗ್ಲಿಷ್ ಪದ ಬಿಡುವ ಅಭಿಯಾನದಲ್ಲಿ ಟೂತ್‍ಬ್ರೆಷ್ ಪದವನ್ನ ಬಿಡೋಣ ಎಂದು ಸಲಹೆ ಮಾಡಿದರು. ಇದಕ್ಕೆ ಪರ್ಯಾಯವಾಗಿ, ಹಲ್ಲುಜ್ಜುಕ ಎಂಬ ಪದ ಕೋಶದಲ್ಲಿದೆ. ಇದಕ್ಕೆ ಸಂಸ್ಕøತದಲ್ಲಿ ಕೂರ್ಚ ಎಂಬ ಪದ ಇದೆ. ಆದ್ದರಿಂದ ಟೂತ್‍ಬ್ರೆಷ್‍ಗೆ ದಂತಕೂರ್ಚ ಎಂಬ ಶಬ್ದ ಬಳಸಬಹುದು ಎಂದು ಅಭಿಪ್ರಾಯಪಟ್ಟರು.
ಮೊದಲು ಶಬ್ದಗಳನ್ನು ಬದಲಿಸಿ ಆ ಬಳಿಕ ಅದರ ಬಳಕೆಗೂ ತಿಲಾಂಜಲಿ ನೀಡೋಣ. ನಮ್ಮ ಬಗ್ಗೆ, ನಮ್ಮ ಭಾಷೆಯ ಬಗ್ಗೆ ಅಭಿಮಾನ ಮೂಡಲಿ ಎಂದು ಆಶಿಸಿದರು.
ಮಹಾಮಂಡಲ ಉಪಾಧ್ಯಕ್ಷ ಶಾಂತಾರಾಮ ಹೆಗಡೆ ಹಿರೇಮನೆ, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮುಳ್ಳೇರಿಯಾ ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಡಾ.ಡಿ.ಪಿ.ಭಟ್, ಗುರುಕುಲಗಳ ಸಮಿತಿ ಅಧ್ಯಕ್ಷ ಅರುಣ್ ಹೆಗಡೆ, ಮುಖ್ಯ ಎಂಜಿನಿಯರ್ ವಿಷ್ಣು ಬನಾರಿ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ