ಹಾಸನ: ದೇಶಪ್ರೇಮ ಮತ್ತು ರಾಷ್ಟ್ರೀಯ ಭಾವೈಕ್ಯತೆ ಎಂಬುದು ಆಗಸ್ಟ್ ತಿಂಗಳಿಗೆ ಮಾತ್ರ ಸೀಮಿತವಾಗದೆ ನಿತ್ಯ ನಿರಂತರವಾಗಿರಬೇಕು. ನನ್ನದು ದೇಶ, ನನ್ನದು ನಾಡು, ನನ್ನದು ಶಾಲೆ ಎನ್ನದವರ ಎದೆ ಸುಡುಗಾಡು. ಆದ್ದರಿಂದ ನಾವು ಭಾರತೀಯರು ನಾವೆಲ್ಲರೂ ಒಂದೇ ಎಂಬ ಭಾವನೆಯ ಮೂಲಕ ದೇಶಾಭಿಮಾನ ಮೂಡಿಸುವ ಕೆಲಸವಾಗಬೇಕು ಎಂದು ನಿವೃತ್ತ ಶಿಕ್ಷಣಾಧಿಕಾರಿ ಜೆ.ಬಿ. ತಮ್ಮಣ್ಣಗೌಡ ಹೇಳಿದರು.
ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಂದಲಿ ಇಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡುತ್ತಾ, ಇದು ಕಲಿಯುಗ ಅಂದರೆ ಕಲಿಯುವ ಯುಗವಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕಲಿಕೆಯ ಮತ್ತು ಜ್ಞಾನದ ಆಧಾರದ ಮೇಲೆ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕಿದೆ. ಹಾಗಾಗಿ ಕಲಿಸುವವರು ಪರಿಣಾಮಕಾರಿಯಾಗಿ ಕಲಿಸಬೇಕು ಹಾಗೆಯೇ ಕಲಿಯುವವರು ಪರಿಣಾಮಕಾರಿಯಾಗಿ ಕಲಿಯಬೇಕು. ಇಷ್ಟಪಟ್ಟು ಕಲಿಸುವವರು ಇರುವಾಗ ಇಷ್ಟಪಟ್ಟು ಕಲಿಯವವರೂ ಇರಬೇಕು. ಇದು ಇಪ್ಪತ್ತೊಂದನೇ ಶತಮಾನದ ಸ್ಪರ್ಧಾತ್ಮಕ ಯುಗವಾಗಿದೆ. ಕಲಿಕೆಯ ಮೂಲಕ ಲಭಿಸುವ ಜ್ಞಾನ ಮಹತ್ವಪೂರ್ಣವಾಗಿದೆ ಎಂದರು.
ಜಿಲ್ಲೆಯ ಎರಡು ಸರಕಾರಿ ಶಾಲೆಗಳಿಗೆ ನಾನು ಬದುಕಿರುವವರೆಗೂ ನಗದು ಬಹುಮಾನವನ್ನು ಕೊಡುತ್ತೇನೆ ಎಂದು ಹೇಳಿದ್ದಾರೆ. ಅದರಂತೆ, ಶಾಲೆಗಳಲ್ಲಿ ಆರೋಗ್ಯಕರ ಸ್ಪರ್ಧೆ ಮತ್ತು ಗುಣಮಟ್ಟದ ಫಲಿತಾಂಶವನ್ನು ಸಾಧಿಸುವ ನಿಟ್ಟಿನಲ್ಲಿ ನಮ್ಮ ಶಾಲೆ ಎಂಬ ಪರಿಕಲ್ಪನೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಇಪ್ಪತ್ತು ವರ್ಷಗಳ ಕಾಲ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಂದಲಿಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯದಲ್ಲಿರುವಾಗಲೇ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಎಸ್.ಎಸ್ ಎಲ್.ಸಿ. ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತೀ ವರ್ಷವೂ ನಗದು ಬಹುಮಾನವನ್ನು ನೀಡುತ್ತ ಬಂದಿದ್ದರು.
ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಹೋಬಳಿಯ ಜಿನ್ನೇನಹಳ್ಳಿ ಸರ್ಕಾರಿ ಪ್ರೌಢಶಾಲೆಯು ಅವರ ಹುಟ್ಟೂರಿನ ಶಾಲೆಯಾಗಿದ್ದು 'ನಮ್ಮೂರ ಶಾಲೆ' ಎಂಬ ಪರಿಕಲ್ಪನೆಯಲ್ಲಿ ಅಲ್ಲಿಯೂ ಎಸ್.ಎಸ್.ಎಲ್ ಸಿ, ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಗ್ರಾಮೀಣ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾನದಂಡವನ್ನು ನಿಗದಿ ಪಡಿಸಿ ಹನ್ನೊಂದು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿದ್ದಾರೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ 2024 ನೇ ಸಾಲಿನ 09 ವಿದ್ಯಾರ್ಥಿಗಳು ಮತ್ತು 2025 ನೇ ಸಾಲಿನ ಏಳು ವಿದ್ಯಾರ್ಥಿಗಳು ಒಟ್ಟು ಹದಿನಾರು ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ಕಾರ್ಯಕ್ರಮದಲ್ಲಿ ನೀಡಿದರು. ಇದನ್ನು ಮುಂದೆಯೂ ಇದೇ ರೀತಿ ಮುಂದುವರಿಸುತ್ತಾರೆಂದು ತಿಳಿಸಿದರು.
ಅಲ್ಲದೆ 2025- 26 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್ ಎಲ್.ಸಿಯಲ್ಲಿ, ಶೇ.90 ರಿಂದ ಶೇ. 95 ಅಂಕಗಳನ್ನು ಪಡೆದವರಿಗೆ ರೂ. 2000/, ಶೇ.96 ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಗಳಿಸಿದವರಿಗೆ ರೂ. 3000/ ಮತ್ತು ಅತೀ ಹೆಚ್ಚು ಅಂಕಗಳನ್ನು ಪಡೆದ ಪ್ರಥಮ ವಿದ್ಯಾರ್ಥಿ ಗೆ ರೂ. 4000/ ಗಳನ್ನು ನಗದು ಬಹುಮಾನವನ್ನು ಈ ಮಾನದಂಡದ ಆಧಾರದ ಮೇಲೆ ನೀಡಲಾಗುವುದೆಂದು ಘೋಷಿಸಿದರು.
ಇದೇ ಸಮಯದಲ್ಲಿ, ತಮಗೆ ನೆನಪಿನ ಕಾಣಿಕೆಯಾಗಿ ದೊರೆತ ಸುಮಾರು ರೂ 35000 ಮೌಲ್ಯವುಳ್ಳ ಮೊರಾರ್ಜಿ ದೇಸಾಯಿಯವರ ಮಿಶ್ರಲೋಹದ ಪ್ರತಿಮೆಯನ್ನು ತಮ್ಮಣ್ಣಗೌಡರು ಜನ್ಮ ದಿನದ ಸವಿನೆನಪಿಗಾಗಿ ಶಾಲೆಗೆ ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ವಸತಿ ಶಾಲೆಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಿ.ಎನ್. ಉಷಾರವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಸಿದರು. ಕಂದಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮರಳಿ ಗೂಡಿಗೆ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಎಂ.ಹೆಚ್. ಯೋಗೇಶ್, ಕಾರ್ಯದರ್ಶಿ ಡಿ.ಟಿ. ಗಿರೀಶ್, ಉಪಾಧ್ಯಕ್ಷ ಕೆ. ಎಸ್. ಹರೀಶ್, ಖಜಾಂಚಿ ಕೆ.ಎಲ್. ವಸಂತಗೌಡ ನಿರ್ದೇಶಕರಾದ ಕೆ.ಎಸ್ ದಿನೇಶ್, ನಾಗೇಶ್ ರಾಘವೇಂದ್ರ, ಸುಜಯ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಾಂಶುಪಾಲರಾದ ಪ್ರಸವಿಯವರು ಇದ್ದರು. ಆಂಗ್ಲ ಭಾಷಾ ಶಿಕ್ಷಕರಾದ ಪ್ರಮೋದ್ ಎಲ್ಲರನ್ನು ಸ್ವಾಗತಿಸಿದರೆ ಕಂಪ್ಯೂಟರ್ ವಿಷಯ ಶಿಕ್ಷಕರಾದ ಚೇತನ್ ರವರು ವಂದಿಸಿದರು. ಶಿಕ್ಷಕರಾದ ವೀಣಾ ಮತ್ತು ಬಿ.ಡಿ. ಲತಾ ರವರು ಕಾರ್ಯಕ್ರಮ ನಿರೂಪಿಸಿದರು. ಹಾಜರಿದ್ದ ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


