ಹೇಗೆಂದು ಬಣ್ಣಿಸಲಿ ನಾ ಅವಳನ್ನಾ...!

Upayuktha
0



"ಅಮ್ಮಾ" ಎಂದು ಕರೆದಾಗ ಮನಸ್ಸಿಗೆ ಎಷ್ಟೊಂದು ಹಿತವೆನಿಸುತ್ತದೆ ಅಲ್ಲವೇ?... ಅವಳೆಂದರೆ ನನಗೆ ಪ್ರಪಂಚದ ಅತ್ಯಂತ ಅಮೂಲ್ಯವಾದ ಆಸ್ತಿ. ತಾಯಿ ಅನ್ನೋ  ಒಂದೇ ಹೆಸರಿನಲ್ಲಿ ಅನೇಕ ಭಾವನೆಗಳೂ ತುಂಬಿವೆ. ಅವಳ ಸಹನೆ, ತ್ಯಾಗ, ಮಮತೆ- ವಾತ್ಸಲ್ಯವನ್ನು ಹೇಗೆಂದು ಬಣ್ಣಿಸಲಿ ನಾ...


ಒಂಬತ್ತು ತಿಂಗಳು ಗರ್ಭದಲ್ಲಿ ಇರಿಸಿ, ಹಲವಾರು ಸಂಕಟಗಳನ್ನು ಅನುಭವಿಸಿ, ಹಾರೈಕೆ ಮಾಡಿ ಜನ್ಮ ಕೊಟ್ಟವಳು. ನಾನು ಅತ್ತಾಗ ಲಾಲಿಸಿ-ಪಾಲಿಸಿ, ಮುದ್ದಾಡಿದವಳು. ನಾ ನಕ್ಕಾಗ ತನ್ನೆಲ್ಲಾ ನೋವನ್ನು ಮರೆತು ಮಗುವಲ್ಲಿ ಮಗುವಾಗುವವಳು ಅವಳೇ ನನ್ನಮ್ಮಾ. "ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ" ಎಂಬ ಗಾದೆ ಮಾತಿನಂತೆ ತಾಯಿಗಿಂತ ಮಿಗಿಲಾದದ್ದು ಇನ್ನೊಂದಿಲ್ಲ. ನೋವಿನಲ್ಲೂ ಸದಾ ನಗುವುದನ್ನು ಕಲಿಸಿದವಳು, ಕಷ್ಟದಲ್ಲಿ ಹೆಗಲು ಕೊಟ್ಟು ಧೈರ್ಯ ತುಂಬಿದವಳು, ತ್ಯಾಗದಲ್ಲಿ ಸುಖವನ್ನು ನೀಡಿದವಳು, ಸ್ವಾರ್ಥ ಬಯಸದ ಪ್ರೀತಿಯನ್ನು ಹಂಚಿ ಪ್ರತಿ ಕೆಲಸಕ್ಕೂ ಸ್ಪೂರ್ತಿಯಾದವಳು ಆಕೆಯೇ ನನ್ನಮ್ಮಾ.


ಎಲ್ಲಿಗಾದರೂ ಹೊರಡುವ ಸಮಯದಲ್ಲಿಯೂ 'ಅಮ್ಮ ನನ್ನ ಬಟ್ಟೆ ಎಲ್ಲಿ?', 'ಅಮ್ಮ ನನ್ನ  ಕರ್ಚಿಫ್ ಎಲ್ಲಿ?' ಎಂಬ ಹುಡುಕಾಟದಲ್ಲಿಯೂ ಅವಳೇ ಬೇಕು. ಮನೆಯಲ್ಲಿ ಮಕ್ಕಳಿಬ್ಬರು ಜಗಳವಾಡುತ್ತಿದ್ದರೆ ಇಬ್ಬರಿಗೂ ಸರಿಸಮಾನಾಗಿ ನ್ಯಾಯ ಕೊಡುವ  ನ್ಯಾಯಾಧೀಶೆಯಾಗಿರುತ್ತಾಳೆ ಮತ್ತು ತಪ್ಪಿದ್ದರೆ ನಾಲ್ಕು ಪೆಟ್ಟು ಕೊಟ್ಟು ತಿದ್ದಿ ಬುದ್ದಿ ಹೇಳುತ್ತಾಳೆ. ಅಪ್ಪನ ಜವಾಬ್ದಾರಿಗೆ ಹೆಗಲುಕೊಟ್ಟು ಸಂಸಾರದ ಹೆಜ್ಜೆಗೆ ಪ್ರತಿಹೆಜ್ಜೆ ಆದವಳು. ತಂದೆ ಮನೆಗೆ ಏನೇ ತಿಂಡಿ-ತಿನಿಸುಗಳನ್ನು ತಂದರೂ ತಾನು ತಿನ್ನದೇ ತನ್ನ ಮಕ್ಕಳಿಗಾಗಿಯೇ ಎತ್ತಿಟ್ಟು ಅದರಲ್ಲಿ ಸ್ವಲ್ಪ ಉಳಿದರೆ ಮಾತ್ರ ತಾನು ತಿಂದು ಖುಷಿ ಪಡೋ ತ್ಯಾಗಮಯಿ ಅವಳು.


ಜಗತ್ತಿನಲ್ಲಿ ಏನನ್ನಾದರೂ ನಾವು ಖರೀದಿಸಬಹುದು. ಆದರೆ ತಾಯಿಯ ಪ್ರೀತಿಯನ್ನು ಎಷ್ಟೇ ಕೋಟಿ ಕೊಟ್ಟರೂ ಖರೀದಿಸಲಾಗದು. ಏಕೆಂದರೆ ಅವಳ ಪ್ರೀತಿಗೆ ಬೆಲೆ ಕಟ್ಟಲಾಗದು. ಅಮ್ಮನಿಲ್ಲದ ಒಂದು ದಿನವನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅವಳು ಮನೆಯಲ್ಲಿ ಅಥವಾ ಜೊತೆಗೆ ಇಲ್ಲವೆಂದರೆ ಏನೋ ಅಮೂಲ್ಯವಾದದನ್ನು ಕಳೆದುಕೊಂಡಂತೆ, ಪ್ರಪಂಚವೆಲ್ಲ ಶೂನ್ಯವೆಂದು ಅನಿಸುತ್ತದೆ. 'ಅಮ್ಮಾ' ಎಂದು ಕರೆದಾಗ ಅದರಲ್ಲಿ ಸಿಗೋ ತೃಪ್ತಿ, ಸಂತೋಷ, ಯಾರನ್ನು ಕರೆದರೂ ಸಿಗಲಾರದು. 'ಅಮ್ಮಾ' ಎಂದರೆ ಸಾಟಿ ಇಲ್ಲದ 'ಪದ- ಭಾವ'. 


ಹೆತ್ತಮ್ಮನ ಮಡಿಲು ತೊಟ್ಟಿಲಿದ್ದಂತೆ, ಮಲಗಿದಾಗ ಸಿಗುವ ನೆಮ್ಮದಿಯು ಇನ್ನೆಲ್ಲೂ ಸಿಗಲಾರದು. ಅವಳ ಕೈ ತುತ್ತಿನ ರುಚಿಯೂ ಅಮೃತವಿದ್ದಂತೆ, ಎಲ್ಲಿಯೂ ಸಿಗಲಾರದ ಅನುಭವ. ಆಕೆಯ ಒಂದು ಅಪ್ಪುಗೆಯು ನೂರಾನೆಯ ಬಲ ಇದ್ದಂತೆ, ಇಡೀ ಪ್ರಪಂಚವನ್ನೇ ಗೆದ್ದೆನೆಂದು ಅನಿಸುತ್ತದೆ. ಈ ಜಗದಲ್ಲಿ ಹಣವಿದ್ದವರೆಲ್ಲ ಶ್ರೀಮಂತರಲ್ಲ. ತಾಯಿಯನ್ನು ಮತ್ತು ಆಕೆಯ ಪ್ರೀತಿಯನ್ನು ಪಡೆದವರೇ ನಿಜವಾದ ಶ್ರೀಮಂತರು ಹಾಗೂ ಅದೃಷ್ಟವಂತರು. ತನ್ನ ಮಗಳು ಮದುವೆಯಾಗಿ ಗಂಡನ ಮನೆಗೆ ಹೊರಡುವಾಗ ಅಪ್ಪನಾದವನು ಮನಸ್ಸಿನಲ್ಲಿಯೇ ಕೊರಗಿದರೆ, ತಾಯಿ ಮಾತ್ರ ಗೆಳತಿಯಾಗಿ ಎರಡು ಬುದ್ಧಿ ಮಾತು ಹೇಳಿ ಕಣ್ಣಂಚಲ್ಲಿ ಕಂಬನಿ ಮಿಡಿದು, ಹಣೆಗೊಂದು ಮುತ್ತಿಟ್ಟು ಕಳಿಸುವಳು. ಅವಳು ತೋರಿಸುವ ಮಮತೆ-ವಾತ್ಸಲ್ಯ, ಕಾಳಜಿ ಸಾಗರದಂತೆ ವಿಶಾಲವಾದದ್ದು ಅದನ್ನು ಅಳೆಯಲು ಸಾಧ್ಯವಿಲ್ಲ.


ಅಮ್ಮ ಎಂದರೆ ಆಸೆ, ಅವಳೆಂದರೆ ಹಸಿವು, ಔಷಧಿ ಮತ್ತು ನೆಮ್ಮದಿ. ತನ್ನ ಕನಸು, ಸುಖಗಳೆಲ್ಲವನ್ನು ಬದಿಗೊತ್ತಿ ಪ್ರತಿ ಕ್ಷಣಾನೂ ತನ್ನ ಮಕ್ಕಳ ಏಳಿಗೆಗಾಗಿ ಜೀವಿಸುತ್ತಾ ಬಂದವಳು. "ಮನೆಯೇ ಮೊದಲ ಪಾಠ ಶಾಲೆ, ಅಲ್ಲಿ ಜನನಿಯೇ ಮೊದಲ ಗುರು". ನಾವು ಏನಾದರೂ ತಪ್ಪು ಮಾಡಿದರೆ ನಮಗೆ ಒಳ್ಳೆಯದನ್ನೇ ಬಯಸೋ ನಿಸ್ವಾರ್ಥಿ. ನನ್ನ ಜೀವನದ ಮೊದಲ ಗುರು ಹಾಗೆಯೇ ನಾನು ಕಾಣುವ ಮೊದಲ ದೇವರು ಆಗಿಹಳು. ಇನ್ನೂ ಸಾವಿರ ಜನುಮ ಹುಟ್ಟಿ ಬಂದರು ಅವಳ ಋಣವನ್ನು ತೀರಿಸಲಾಗದು. ಆಕೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಹೇಗೆಂದು ಬಣ್ಣಿಸಲಿ ನಾ ಅವಳನ್ನಾ....!

ಲವ್ ಯೂ ಅಮ್ಮಾ.......!


- ಹರ್ಷಿಣಿ ಕಾಂಚನ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top