ಮಂಗಳೂರು: ಕೆನರಾ ಹೈ ಸ್ಕೂಲ್ ಅಸೋಸಿಯೇಷನ್, ಮಂಗಳೂರು ಇದರ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಹಾಗೂ ಶಿಕ್ಷಕರ ಸಾಧನೆಗೆ ಬೆಂಬಲಿಸುವ 'ಸಾಧನೆಯ ಸಂಭ್ರಮ'(ಸೆಲೆಬ್ರೇಟಿಂಗ್ ಸಕ್ಸಸ್)ಕಾರ್ಯಕ್ರಮ ಶನಿವಾರ (ಆ.23) ಸಂಜೆ 4 ಕ್ಕೆ ಕೊಡಿಯಾಲ್ ಬೈಲ್ ನ ಟಿ.ವಿ ರಮಣ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಿತು.
ಕೆನರಾ ಹೈಸ್ಕೂಲ್ ಅಸೋಸಿಯೇಷನ್ 2024-25ರ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಹಾಗೂ ಕ್ರಿಯಾಶೀಲ ಚಟುವಟಿಕಗಳಲ್ಲಿತೊಡಗಿಸಿಕೊಂಡು ಅತ್ಯುತ್ತಮ ಸಾಧನೆಯನ್ನು ಸಾಧಿಸಿದ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಹಾಗೂ ಉದ್ಯೋಗಿ ಸಾಧಕರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಸ್ವಸ್ತಿಕ್ ನ್ಯಾಷನಲ್ ಬಿಜಿನೆಸ್ ಸ್ಕೂಲ್ ಮಂಗಳೂರು ಇದರ ಅಧ್ಯಕ್ಷ ಡಾ ರಾಘವೇಂದ್ರ ಹೊಳ್ಳ ಇವರು ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ವೃತ್ತಿ ಮತ್ತು ಬದುಕಿನಲ್ಲಿ ಯಶಸ್ಸು ಸಿಗಬೇಕಾದರೆ ತಾವು ಮಾಡುವ ಕೆಲಸದಲ್ಲಿ ತಲ್ಲೀನತೆ, ಹೊಸತನ, ಸಂಶೋಧನಾ ಮನೋಭಾವಗಳನ್ನು ಬೆಳೆಸಿಕೊಳ್ಳಬೇಕು. ಜ್ಞಾನ ಮತ್ತು ಅವಕಾಶಗಳನ್ನು ಬೆಳೆಸದೆ ಇರುವ ಯಾವ ವೃತ್ತಿಯು ಪ್ರಯೋಜನಕ್ಕೆ ಬಾರದು. ಸಾಧನೆಗೆ ಒಗ್ಗಿಕೊಳ್ಳುವವ ಕೇವಲ ವೇತನದ ಕಡೆ ಯೋಚಿಸದೆ ತಮ್ಮ ವೃತ್ತಿ ಬೆಳವಣಿಗೆ ಹಾಗೂ ಸಾರ್ವಜನಿಕ ಹಿತದ ದೃಷ್ಟಿಕೋನವನ್ನು ರೂಢಿಸಿಕೊಳ್ಳಬೇಕು. ಪ್ರಯತ್ನದ ಮಾರ್ಗದಲ್ಲಿ ಸೋಲಿನ ಬಗೆಗೆ ಯೋಚಿಸದೆ ವೃತ್ತಿ ಹಾಗೂ ಬದುಕಿನಲ್ಲಿ ನಿರ್ದಿಷ್ಟ ಗುರಿಯನ್ನು ನಿಗದಿಪಡಿಸಿ ಹೆಜ್ಜೆ ಹಾಕಬೇಕು. ಸಮರ್ಪಕ ಯೋಜನೆಗಳು ಮತ್ತು ಯೋಚನೆಗಳು ನಮ್ಮನ್ನು ಯಶಸ್ಸಿನ ಕಡೆ ಕೊಂಡೊಯ್ಯುತ್ತವೆ. ಕಠಿಣ ಪ್ರಯತ್ನವೇ ಗೆಲುವಿನ ಸೂತ್ರ. ನಮ್ಮ ಮುಂದಿರುವ ಅಗಾಧ ಅವಕಾಶಗಳನ್ನು ಬಳಸಿಕೊಳ್ಳುತ್ತಾ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾ ಸಮಯದ ಸದುಪಯೋಗವನ್ನು ಮಾಡಿ ಬೆಳೆಯಬೇಕು, ಮಕ್ಕಳಿಗೆ ಹೆತ್ತವರು ಮತ್ತು ಶಿಕ್ಷಕರ ನಿರಂತರ ಪ್ರೇರಣೆ, ಮೌಲ್ಯಯುತ ಬದುಕಿನ ಕೌಶಲಗಳು, ಗಟ್ಟಿತನ, ತರ್ಕಬದ್ಧವಾದ ಮಾನಸಿಕತೆಯನ್ನು ಬೆಳೆಸುವ ಜೀವನ ಕ್ರಮವನ್ನು ರೂಢಿಸುವಲ್ಲಿ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.
ಶೈಕ್ಷಣಿಕ ವರ್ಷದ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು, ಸಂಗೀತ, ಕಲೆ, ಸಾಹಿತ್ಯ, ಚಿತ್ರಕಲೆ, ಕ್ರೀಡೆ, ಸಂಶೋಧನೆ, ಆವಿಷ್ಕಾರ ಇತ್ಯಾದಿ ಕ್ಷೇತ್ರಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿ ಹಾಗೂ ಸಂಸ್ಥೆಯ ಉದ್ಯೋಗಿಗಳನ್ನು ಗುರುತಿಸಿ ಅವರ ಸಾಧನೆಯ ಮಾನದಂಡಗಳನ್ನು ಅನುಸರಿಸಿ ಪ್ರಶಸ್ತಿಗಳನ್ನು ವಿತರಿಸಿ ಗೌರವಿಸಲಾಯಿತು.
ಕೆನರಾ ಹೈಸ್ಕೂಲ್ ಅಸೋಸಿಯೇಷನ್ ನ ಕಾರ್ಯದರ್ಶಿ ರಂಗನಾಥ್ ಭಟ್ ಮಾತನಾಡುತ್ತಾ ಕೆನರಾ ಶಿಕ್ಷಣ ಸಂಸ್ಥೆಯ ಹುಟ್ಟು, ಇತಿಹಾಸ, ಪರಂಪರೆ ಅನೇಕ ಸಾಧಕರನ್ನು ಲೋಕಕ್ಕೆ ಪರಿಚಯಿಸಿದೆ. ಸಾಧನೆಯ ಗುರುತಿಸುವಿಕೆ ಸಾಧಕರಿಗೆ ಅದ್ಭುತ ಬೆಂಬಲವಾಗುತ್ತದೆ. ಫಲದ ಅಪೇಕ್ಷೆ ಇಲ್ಲದೆ ಮುನ್ನಡೆಯುವ ಕಾರ್ಯ, ಪರಿಶ್ರಮಕ್ಕೆ ಅಂತಿಮವಾಗಿ ಪ್ರತಿಫಲ ದೊರೆಯುತ್ತದೆ. ಸಾಧನೆ ಎಂಬುದೇ ಭಿನ್ನವಾದ ವಿಚಾರ. ಅದರ ಪ್ರತಿಫಲವೇ ಯಶಸ್ಸು. ಎಂದು ಹೇಳಿದರು.
ಕೆನರಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ.ಸುರೇಶ್ ಕಾಮತ್, ಜಂಟಿ ಕಾರ್ಯದರ್ಶಿ ಗೋಪಾಲಕೃಷ್ಣ ಶೆಣೈ, ಸಹ ಖಜಾಂಚಿ CA ಎಂ ಜಗನ್ನಾಥ್, ಕಾಮತ್, ಕೆನರಾ ವಿಕಾಸ ಸಂಸ್ಥೆಯ ಸಂಯೋಜಕರಾದ ಬಸ್ತಿ ಪುರುಷೋತ್ತಮ್ ಶೆಣೈ, ನರೇಶ್ ಶೆಣೈ, ಅಶ್ವಿನಿ ಕಾಮತ್, ಶಿವಾನಂದ ಶೆಣೈ, ವಿಕ್ರಮ್ ಪೈ, C.A ಗಿರಿಧರ್ ಕಾಮತ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಮತಿ ಉಜ್ವಲ್ ಮಲ್ಯ, ಕೆನರಾ ಸಹೋದರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರುಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೆನರಾ ಸಿಬಿಎಸ್ ಇ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಸುರೇಖ ಭಟ್ ಮುಖ್ಯ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಸ್ಮಿತಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಕೆನರಾ ಸಂಸ್ಥೆಗಳ ಮೆಂಟಲ್ ಹೆಲ್ತ್ ಪ್ರೊಫೆಷನಲ್ ಶ್ರೀಮತಿ ಮಮತಾ ಭಂಡಾರಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ