ಸದಾ ಧಾವಂತದ, ಅಭದ್ರತೆಯ ಬದುಕು ಏಕೆ...? ಯಾವುದಕ್ಕಾಗಿ ಈ ಓಟ...?

Upayuktha
0


 


ಮತ್ತೆ ಹುಟ್ಟಿ ಬರಬೇಡ ಗೆಳೆಯ... ನಿನಗೆ ಶಾಶ್ವತ ಜೀವನ್ಮುಕ್ತಿ ಸಿಗಲಿ...


ಬದಲಾದ ಈ ಸ್ಪರ್ಧಾತ್ಮಕ ದಿನಮಾನದಲ್ಲಿ, ಬಾಲ್ಯದ ಆಟೋಟಗಳೇ ಇಲ್ಲದ ಅಥವಾ ಬಾಲ್ಯವೇ ಇಲ್ಲದ, ಸದಾ ಧಾವಂತದ, ಸದಾ ಅಭದ್ರತೆಯ, ಹೃದಯ ತುಂಬಿದ ಬಂಧು ಮಿತ್ರರಿಲ್ಲದ... ಮನುಷ್ಯ ಜನ್ಮ ಸೇರಿದಂತೆ ಭೂಮಿಯ ಮೇಲಿನ ಏನಾಗಿಯೂ ಹುಟ್ಟದಿರು ಗೆಳೆಯ...


ಬಹುಶಃ ಬೇಬಿ ಸಿಟ್ಟಿಂಗ್ ಸೆಂಟರ್ ನಿಂದ ಶಿಕ್ಷಣ ಉದ್ಯಮದ ಬಂಧನ ಅಥವಾ "ಶಿಕ್ಷಾ" ಶುರುವಾಗುತ್ತದೆ. ಹೆಚ್ಚು ಕಮ್ಮಿ ಇಪ್ಪತ್ಮೂರು ವರ್ಷದ ಶಿಕ್ಷಣ. ಪ್ರೀ ಎಜುಕೇಶನ್ ಸ್ಪರ್ಧೆ ಸಾಮಾನ್ಯವಾಗಿ "ಕೃಷ್ಣ ವೇಷ ಸ್ಪರ್ಧೆ"ಯಿಂದ ಆರಂಭವಾಗುತ್ತದೆ. ಅಲ್ಲಿಂದ ಶುರುವಾದ ಸ್ಪರ್ಧಾತ್ಮಕ ಜೀವನ, ಅಥವಾ ಪರೀಕ್ಷೆ ನಿರೀಕ್ಷೆ, ದುಗುಡ ಆತಂಕಗಳು ವೃತ್ತಿ ಪದವಿ ಮುಗಿಸಿ ನೌಕರಿ ಹಿಡಿಯುವ ತನಕವೂ ನಿತ್ಯ ನಿರಂತರ.


ಈ ಅಂಕ ಕೇಂದ್ರಿತ ಶಿಕ್ಷಣ ವ್ಯವಸ್ಥೆಯಲ್ಲಿ ನಮಗೆ ಜ್ಞಾಪಕ ಶಕ್ತಿ, ಅರ್ಥ ಮಾಡಿಕೊಳ್ಳುವ ಶಕ್ತಿ ಐಕ್ಯೂ ಚೆನ್ನಾಗಿದ್ದರೆ ಮಾತ್ರ ಶಿಕ್ಷಣ ಜೀವನ‌ ಸುಂದರ. 

ಆದರೆ ಈ ಐಕ್ಯೂ, grasping power ನೂರಕ್ಕೆ ಎರಡು ಮೂರೋ ಮಕ್ಕಳಿಗೆ ಮಾತ್ರ ಚೆನ್ನಾಗಿರುತ್ತದೆ. ಇನ್ನುಳಿದ ತೊಂಬತ್ತೈದೋ ತೊಂಬತ್ತೇಳೋ ಪ್ರತಿಶತ ಮಕ್ಕಳು ಶಿಕ್ಷಣದಲ್ಲಿ ಒಂದು ಹಂತಕ್ಕೆ ಬರಲು ಇನ್ನಿಲ್ಲದ ಸರ್ಕಸ್ ಮಾಡಬೇಕು.


ಒಂಬತ್ತನೇ ಕ್ಲಾಸ್ ಲ್ಲಿ ಇರುವಾಗ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಿದ್ದವಾಗೋದು, ಫಸ್ಟ್  ಈಯರ್ ಪಿಯುಸಿಲಿರೋವಾಗಲೇ ಸೆಕೆಂಡ್ ಪಿಯುಸಿ ಪರೀಕ್ಷೆ ಮತ್ತು ನೀಟ್ ಪರೀಕ್ಷೆಗೆ ಸಿದ್ದವಾಗೋದು..!!


ಈ ಕಾಲದ ಮಕ್ಕಳು ಸದಾ ಟ್ಯೂಷನ್ , ಕೋಚಿಂಗ್ ಲ್ಲೇ  ಇರ್ತಾವೆ. ಈ ಶಾಲೆ ಪರೀಕ್ಷೆ ಟ್ಯೂಷನ್ನು ಜೊತೆಯಲ್ಲಿ ಬೆಳೆಗೆದ್ದರೆ, ಭರತನಾಟ್ಯ, ಕರಾಟೆ, ಇತರ ಕ್ರಿಡಾತ್ಮಾಕ ಚಟುವಟಿಕೆಗಳ ತರಬೇತಿಗಳ ಶಿಕ್ಷೆ ಬೇರೆ...!


ಈ ಕಾಲದಲ್ಲಿ ಹುಟ್ಟೋ ಒಂದೋ ಎರಡೋ ಮಕ್ಕಳನ್ನು ಏನೋ ಭಯಂಕರ ಸಾಧಕರನ್ನಾಗಿ ಮಾಡುವ ಪೋಷಕರ "ಮಕ್ಕಳ ತಯಾರಿಕೆ" ಮಾಡುವ ಹುಚ್ಚುತನ ! ಮಕ್ಕಳು ಹೂ ಇದ್ದಂತೆ. ಮೊಗ್ಗು ತಾನಾಗೇ ಅರಳಿ ಸೌಂದರ್ಯ ಬೀರಿದರೆ ಚಂದ. ಆದರೆ ಈ ಕಾಲದಲ್ಲಿ ಎಲ್ಲವನ್ನೂ ಒತ್ತಾಯ ಪೂರ್ವಕವಾಗಿ ಪೋಷಕರು ಮಾಡಲು ಮಕ್ಕಳ ಮೇಲೆ ಒತ್ತಡ ಹೇರಿ ಮಕ್ಕಳ ಅಮೂಲ್ಯ ಬಾಲ್ಯವನ್ನು ಹಾಳುಗೆಡುವುತ್ತಾರೆ.


ಈ "ಬಾಲ್ಯ- ಶಿಕ್ಷಣ" ಇಪ್ಪತ್ತೈದು ವರ್ಷಗಳ ಕಾಲ ಕಳೆದ ನಂತರ...

ನೌಕರಿ ಪರ್ವ...

ನೀವೇ ಗಮನಿಸಿ...

ಈ ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಸರ್ಕಾರಿ ಶಾಲೆ ಮೇಷ್ಟ್ರು, ಕಂದಾಯ ಇಲಾಖೆ, ಪೋಲಿಸ್, ಆರೋಗ್ಯ ಇಲಾಖೆ ಬ್ಯಾಂಕು ಸೇರಿದಂತೆ ಯಾವುದೇ ನೌಕರಿ ಸಿಕ್ಕಿರೆ ಜೀವನ ಹೂ ಹಾಸಿದಂತೆ...!! 

ಆದರೆ ಇವತ್ತು ಸರ್ಕಾರೇತರ ನೌಕರಿ ಹೆಚ್ಚು...

ಸಂಬಳ ಕಡಿಮೆಯೋ ಹೆಚ್ಚೋ...

ಆದರೆ ಖಾಸಗಿ ನೌಕರಿಯಲ್ಲಿ ನೌಕರಿ ನೀಡಿದ ಸಂಸ್ಥೆಗೇ "ಕಬ್ಬನ್ನು" ಕ್ರಷರ್ ಮಿಷನ್‌ಗೆ ಹಾಕಿ ನುರಿದು ರಸ ಹಿಂಡಿದಂತೆ ನೌಕರಿದಾರರನ್ನು ಟಾರ್ಗೆಟ್ ನೀಡಿ ದುಡಿಸಿ ಹಿಂಡಿ ಹಿಪ್ಪೆ ಮಾಡುತ್ತದೆ...


ಹೆಚ್ಚು ಕಡಿಮೆ ಇಪ್ಪತ್ತೈದು ವರ್ಷಗಳ ದುಡಿಮೆ ಮಾಡಿ ನಿವೃತ್ತಿ ಪಡೆವ ಹೊತ್ತಿಗೆ ನೌಕರಿದಾರನ ಬಳಿ ಒಂದಷ್ಟು ಹಣ ಇದ್ದರೂ ಆರೋಗ್ಯ ಸಂಪೂರ್ಣ ನಷ್ಟವಾಗಿರುತ್ತದೆ. ಆಗ ದುಡ್ಡು ಇದ್ದರೂ ಅನುಭವಿಸುವ ಆರೋಗ್ಯ ಚೈತನ್ಯ ಖುಷಿ ಇರೋಲ್ಲ..!!


ನೀವು ಗಮನಿಸಿ ನೋಡಿ...

ಈ ಕಾಲದ ಮಕ್ಕಳಿಗೆ ಶಿಕ್ಷಣ ಪಡೆವ ಕಾಲದ ಇಪ್ಪತ್ತು ವರ್ಷ ಮತ್ತು ನೌಕರಿ ಮಾಡುವ ಇಪ್ಪತ್ತೈದು ವರ್ಷ ಕಾಲ ಸದಾ ಒತ್ತಡ. 

ಸರ್ಕಾರದ ನೌಕರಿ ಖಾಯಂ. ಇದ್ಧದ್ದರಲ್ಲಿ ನೆಮ್ಮದಿ. ಆದರೆ ಸರ್ಕಾರದ ಕೆಲಸ ಎಲ್ಲರಿಗೂ ತಗಳೋಕೆ ಆಗೋಲ್ಲ...!

ಖಾಸಗಿ ನೌಕರಿ ಸದಾ ಅಸುರಕ್ಷಿತ. ಎಷ್ಟೊತ್ತಿಗೆ ನೌಕರಿ ಹೋಗುತ್ತದೆ ಅಂತ ಗೊತ್ತಾಗೋಲ್ಲ. ಸಾಲದಕ್ಕೆ ಈಗ ಎಐ ಬೇರೆ ಬಂದಿದೆ...!


ಈ ಕಾಲದ ಪೀಳಿಗೆಗೆ ಸಂಸಾರವೂ ಸಂಘರ್ಷ ಆಗಿದೆ.

ಮುಂಚೆ ಗಂಡಸು ಹೊರಗೆ ದುಡಿಯುವವ ಹೆಂಗಸು ಮನೆ ಮಡದಿಯಾಗಿ ಮಕ್ಕಳು ಸಂಸಾರ ನಿರ್ವಹಣೆ ಮಾಡುತ್ತಿದ್ದಳು.

ಈಗ ಇಬ್ಬರೂ ಹೊರಗೆ ದುಡಿಯುವವರು.

ನಾ ಮೇಲೆ ತಾ ಮೇಲು ಎನ್ನುವ ತಿಕ್ಕಾಟಕ್ಕೆ ಸಂಸಾರ ಡೈವರ್ಸ್‌ನಲ್ಲಿ ಪರ್ಯಾವಸಾನ....!! 

ವಿಭಕ್ತ ಕುಟುಂಬದ ಕಾರಣಕ್ಕೆ ಸಂಬಂಧಗಳ ಕೊರತೆಯ ಕಾರಣಕ್ಕೆ ಇಂದಿನ ಪೀಳಿಗೆ ತಂದೆ ತಾಯಿ ನಂತರ ಒಂಟಿ ಅನಾಥ...!!!

ಈ  ಎಲ್ಲ ಒತ್ತಡದ ಕಾರಣ ಇಂದು ಐವತ್ತು ವರ್ಷಕ್ಕೇ ವೃದ್ಯಾಪ್ಯ, ಅರವತ್ತಕ್ಕೆ ಜೀವನ ಯಾತ್ರೆ ಮುಗಿಯುತ್ತದೆ..!!!

ಇದರ ಮದ್ಯೆ ....

ರಾಸಾಯನಿಕ ಯುಕ್ತ ಹಣ್ಣು ತರಕಾರಿಗಳು ಆಹಾರೋತ್ಪನ್ನಗಳು, ಪ್ಯಾರಾಫಿನ್ ಅಡಿಗೆ ಎಣ್ಣೆ, ವಾಹನಗಳ ವಾಯು ಮಾಲಿನ್ಯ, ಪ್ಲಾಸ್ಟಿಕ್ ಮಾಲಿನ್ಯ ...

ಅಕಾಲದಲ್ಲೇ ಅಟ್ಯಾಕ್ ಆಗುವ ಬಿಪಿ ಷುಗರ್ ಗಳು...

ಯಾರಿಗೆ ಯಾವ ಕಾರಣವೂ ಇಲ್ಲದೇ ಅಟ್ಯಾಕ್ ಆಗುವ ಕ್ಯಾನ್ಸರ್ ನಂತಹ ಮಾರಣಾಂತಿಕ ಖಾಯಿಲೆಗಳು...!!

ಮನೆಯಿಂದ ಹೊರಗೆ ಹೋದರೆ ವಾಪಾಸು ಮನೆಗೆ ಬಂದ್ ಮೇಲೆ ಜೀವ  ಗ್ಯಾರಂಟಿ. ಇಂದು- ಬೈಕು ಕಾರು ರೈಲು ವಿಮಾನ ಯಾವ ಪ್ರಯಾಣವೂ ಪೂರ್ಣ ಸುರಕ್ಷಿತವಲ್ಲ‌..!!


ಇಪ್ಪತ್ತ್ಮೂರು ವರ್ಷದ ಶೈಕ್ಷಣಿಕ ಜೀವನ + ಇಪ್ಪತ್ತೈದು ವರ್ಷಗಳ ನೌಕರಿ ಜೀವನ=  ಈ ನಡುವಿನ ದಾವಂತದ ಬದುಕು....

ಸುಮ್ಮನೆ ಚಿಂತನೆ ಮಾಡಿ...

"ಭಾರತದಲ್ಲಿ ಮತ್ತೆ ಹುಟ್ಟಿ ಬಂದರೇ ಸುಖವೇ...?"

ಮತ್ತೆ ಹುಟ್ಟಿ ಬಾ....

ಎನ್ನುವ ಸ್ಲೋಗನ್ ಬದಲಿಗೆ 

"ನಿನಗೆ ಶಾಶ್ವತ ಮುಕ್ತಿ‌ ಸಿಗಲಿ ಗೆಳೆಯಾ" ಎನ್ನುವ ಸಾಲನ್ನು ಬರೆಸುವುದೇ ಒಳ್ಳೆಯದೇನೋ...

ಏನಂತೀರ ಬಂಧುಗಳೇ....

ನಿಮ್ಮ ಅಭಿಪ್ರಾಯದ ನಿರೀಕ್ಷೆಯಲ್ಲಿ..

ವಂದನೆಗಳು


- ಪ್ರಬಂಧ ಅಂಬುತೀರ್ಥ

9481801869


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top