ಹಿಂದೆ ಗುರು, ಮುಂದೆ ಗುರಿ ಇದ್ದರೆ ಗೆಲುವು ಸಾಧ್ಯ: ಗಣೇಶ್ ಶೆಣೈ

Upayuktha
0


ಉಜಿರೆ: ಜೀವನದಲ್ಲಿ ದೊಡ್ಡ ಸ್ಥಾನಕ್ಕೆ ನಾವು ಹೋಗಬಯಸುವುದಾದರೆ, ನಮ್ಮಲ್ಲಿ ದೊಡ್ಡ ಕನಸಿರಬೇಕು, ಜೊತೆಗೆ ನಮ್ಮ ಗುರಿಯತ್ತ ಮುನ್ನಡೆಸುವುದಕ್ಕೆ ಉತ್ತಮ ಗುರು ಇರಬೇಕು” ಎಂದು ನಟ ಹಾಗೂ ಬೆಂಗಳೂರಿನ ಎಸ್ ಜಿ ಅಡ್ವೈಸರಿ ಸರ್ವೀಸಸ್ ನ ಪ್ರಾಕ್ಟೀಸಿಂಗ್ ಕಂಪನಿ ಸೆಕ್ರೆಟರಿ, ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿ ಗಣೇಶ್ ಶೆಣೈ ಹೇಳಿದರು.



ಕಾಲೇಜಿನಲ್ಲಿ ಇಂದು (ಜು.30) ಅವರು ಕಾಮರ್ಸ್ ಕ್ಯಾಂಪಸ್ ಅಸೋಸಿಯೇಶನ್ (ಸಿಸಿಎ) ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಾಲೇಜಿನ ವಾಣಿಜ್ಯ ವಿಭಾಗ ಮತ್ತು ವ್ಯವಹಾರ ಆಡಳಿತ ವಿಭಾಗದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.



“ಸಾಧನೆಗೆ ಅವಕಾಶಗಳು ಎಂದಿಗೂ ಕಡಿಮೆಯಾಗುವುದಿಲ್ಲ. ಯಾವುದು ನಿಮ್ಮ ಕ್ಷೇತ್ರವೋ ಅದರಲ್ಲಿ ನೀವು ಬೆಳೆಯಬಹುದು. ಆದರೆ ಎಲ್ಲದಕ್ಕೂ ಕೂಡ ನೀವು ಪಡುವ ಶ್ರಮ, ಶ್ರದ್ಧೆ ಮಾತ್ರ ಬಹಳ ದೊಡ್ಡ ಪಾತ್ರವಹಿಸುತ್ತದೆ. ಗುರಿಯ ಬಗ್ಗೆ ಸ್ಪಷ್ಟತೆ, ಗುರುವಿನ ಮಾರ್ಗದರ್ಶನವಿದ್ದರೆ ಯಶಸ್ಸು ಸಾಧ್ಯ” ಎಂದು ಅವರು ಕಿವಿಮಾತು ಹೇಳಿದರು.


 

ನನ್ನ ವಿದ್ಯಾರ್ಥಿ ಜೀವನದಲ್ಲಿ ನನಗೆ ನನ್ನ ಕನಸುಗಳನ್ನು ಸಾಕಾರಗೊಳಿಸುವುದಕ್ಕೆ ಹುರಿದುಂಬಿಸಿದ ನನ್ನ ಎಲ್ಲಾ ಅಧ್ಯಾಪಕರಿಗೆ ನಾನು ಋಣಿಯಾಗಿರುತ್ತೇನೆ. ಪ್ರಥಮ ವರ್ಷದ ಪದವಿಯಲ್ಲಿದ್ದಾಗ ನನಗೂ ನನ್ನ ಭವಿಷ್ಯದ ಬಗ್ಗೆ ಯಾವುದೇ ಯೋಚನೆಗಳು ಇರಲಿಲ್ಲ. ಸಿಎಸ್ ಬಗ್ಗೆ ತಿಳಿದಿರಲಿಲ್ಲ. ಆದರೆ ಒಮ್ಮೆ ಒಂದು ವಿಷಯದಲ್ಲಿ ಮುಂದುವರಿಯುವ ಬಯಕೆ ನಮ್ಮಲ್ಲಿ ಮೂಡಿದರೆ ಖಂಡಿತವಾಗಿಯೂ ಎಲ್ಲವೂ ಸಾಧ್ಯ. ಸಿಎಸ್ ಜೊತೆಗೆ ಎಲ್ಎಲ್ ಬಿ ಕೋರ್ಸ್ ಇಂದು ಬಹಳ ಬೇಡಿಕೆಯಲ್ಲಿದೆ. ಶ್ರಮ ಪಡುವುದಕ್ಕೆ ನೀವು ತಯಾರಿದ್ದರೆ ನಿಮಗಾಗಿ ಅವಕಾಶಗಳಿವೆ. ಜೊತೆಗೆ, ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ, ಇದರಿಂದ ನಿಮ್ಮ ದೈಹಿಕ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.- ಗಣೇಶ್ ಶೆಣೈ

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., “ಕಲಿಕೆಗೆ ಪೂರಕವಾದ ಎಲ್ಲಾ ಸೌಲಭ್ಯಗಳು ಇಂದು ವಿದ್ಯಾರ್ಥಿಗಳಿಗೆ ಸುಲಭವಾಗಿ ಲಭ್ಯವಿದೆ. ಇದನ್ನೆಲ್ಲಾ ಬಳಸಿಕೊಂಡು ಯಾವ ರೀತಿ ಜ್ಞಾನವನ್ನು ಪಡೆದುಕೊಳ್ಳಬೇಕು ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಇದರ ಜೊತೆಗೆ ಇರುವ ಜ್ಞಾನವನ್ನು ಯಾವ ರೀತಿ ಎಲ್ಲಿ ಬಳಸಬೇಕು ಎನ್ನುವುದನ್ನು ಸರಿಯಾಗಿ ತಿಳಿದುಕೊಂಡು ವಿದ್ಯಾರ್ಥಿಗಳು ಮುನ್ನಡೆಯಬೇಕಿದೆ” ಎಂದರು.


ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಶ್ರಮ ಪಡಲೇಬೇಕು. ಈ ಸಮಯದಲ್ಲಿ ನೀವು ಪಟ್ಟ ಶ್ರಮವೇ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗಿಸುವುದು.- ಡಾ. ವಿಶ್ವನಾಥ ಪಿ. ವಿಭಾಗದ ಭಿತ್ತಿಪತ್ರಿಕೆ ‘ವಣಿಕ’ ಬಿಡುಗಡೆಗೊಳಿಸಲಾಯಿತು. ವಾಣಿಜ್ಯ ನಿಕಾಯದ ಡೀನ್ ಶಕುಂತಳಾ ಅವರು ಸಿ ಸಿ ಎ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.


ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ., ಸಿಸಿಎ ಸಂಯೋಜಕರಾದ ಫಾತಿಮಾ ಸಫೀರಾ, ಗುರುರಾಜ್ ಮತ್ತು ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top