ಪ್ರತಿದಿನ ಬೆಳಗ್ಗಿನ ಗೋ ಸೇವೆಯ ನಂತರ ದೇವರ ಪೂಜೆ ನಮ್ಮಪ್ಪನ ಕಾಲದಿಂದಲೂ ನಡಕೊಂಡು ಬಂದ ಪದ್ಧತಿ. ಅಜ್ಜನೊಟ್ಟಿಗೆ ಮೊಮ್ಮಕ್ಕಳು ಪೂಜಾ ಕೈಂಕರ್ಯದಲ್ಲಿ ಭಾಗಿಗಳಾಗುವುದು ಕೂಡ ಅಷ್ಟೇ ಸಹಜ ಪ್ರಕ್ರಿಯೆ. ಪ್ರತಿನಿತ್ಯ ನಾನು ದೇವರ ಪೂಜೆಗೆ ಬಾವಿಯಿಂದ ನೀರು ತರುವಾಗ ಮೊಮ್ಮಕ್ಕಳು ಅಜ್ಜನ ಹಿಂದೆ ಬಾವಿಯ ಬಳಿಗೆ ಬಂದು ನೀರು ಎಳೆಯುವುದನ್ನು ನೋಡಿ ಪೂಜೆಯಲ್ಲಿ ಭಾಗಿಗಳಾಗುತ್ತಿದ್ದರು. ಈಗ್ಗೆ ಕೆಲ ದಿನಗಳ ಹಿಂದೆ ನಾಲ್ಕುವರೆ ವರ್ಷ ಪ್ರಾಯದ ಮೊಮ್ಮಗನ ಪ್ರಶ್ನೆ. ಹೀಗೆ ದಿನಾ ನೀರು ತಂದರೆ ಆ ಬಾವಿಗೆ ನೀರು ಎಲ್ಲಿಂದ ಬರುವುದು?!! ಅವನ ಕುತೂಹಲದ ಪ್ರಶ್ನೆಗೆ ನಾನಂತೂ ಮೂಕವಿಸ್ಮಿತನಾಗಿದ್ದೆ. ಸಮಾಧಾನದ ಉತ್ತರ ಸಿಗದೇ ಇದ್ದರೆ ಪ್ರಶ್ನೆಯನ್ನು ಮತ್ತೆ ಮತ್ತೆ ಬೇರೆ ರೀತಿಯಲ್ಲಿ ಕೇಳಿಯೇ ಕೇಳುತ್ತಾನೆ ಎಂಬುದು ಗೊತ್ತಿದೆ. ಅವನಿಗೆ ಅರ್ಥ ಆಗುವಂತೆ ವಿವರಿಸುವುದು ನನ್ನ ಕರ್ತವ್ಯ ಅಂತ ವಿವರಿಸಿದೆ.
ನಿನಗೆ ಆಟವಾಡಿ ಬಾಯಾರಿಕೆ ಆಗುವುದಿಲ್ಲವೇ? ಆಗೇನು ಮಾಡುತ್ತಿ? ಅಂತ ಕೇಳಿದೆ. ನೀರು ಕುಡಿಯುತ್ತೇನೆ ಅಂತ ಅಂದ. ತುಂಬಾ ನೀರು ಕುಡಿದ ಮೇಲೆ ಮತ್ತೇನಾಗುತ್ತದೆ ಅಂತ ಕೇಳಿದೆ. ಆಗಾಗ ಉಚ್ಚೆ ಬರುತ್ತದೆ ಅಂತಂದ.
ಇಷ್ಟು ಗೊತ್ತಿದೆ ಅಂತ ಆದರೆ ಅರ್ಥ ಆಗುವಂತೆ ವಿವರಿಸುವುದು ಕಷ್ಟವಲ್ಲ ಅಂತ ನನ್ನ ಅರಿವಿಗೆ ಬಂತು. ನಿನಗೆ ಹೇಗೆ ಬಾಯಾರಿಕೆ ಆಗುತ್ತದೆಯೋ, ಅದೇ ರೀತಿ ಬೇಸಿಗೆಯ ಕಡುಬಿಸಿಲಿಗೆ ಭೂಮಿಗೆ ಬಾಯಾರಿಕೆ ಆಗುತ್ತದೆ. ಬಿಸಿಲಿನಿಂದ ಒಣಗುತ್ತಿದ್ದ ಭೂಮಿ ಜೋರಾಗಿ ಮಳೆ ಬರುವಾಗ ಬಿದ್ದ ನೀರನ್ನು ಕುಡಿಯುತ್ತದೆ. ಕುಡಿದು ಕುಡಿದು ಹೆಚ್ಚಾದ ನೀರನ್ನು ಭೂಮಿ ಕೂಡ ನಿನಗೆ ಉಚ್ಚೆ ಬಂದಂತೆ ಹೊರಬಿಡುತ್ತದೆ. ಅದಕ್ಕೆ ನಾವು ಹೇಳುವುದು ನೀರ ಒರತೆ. ಅಮ್ಮ ಅಡುಗೆ ಮನೆಯಲ್ಲಿ ಕುಡಿಯುವುದಕ್ಕೋಸ್ಕರ ನೀರು ಸಂಗ್ರಹಿಸುವ ಪಾತ್ರೆಯಂತೆ ಈ ಒರತೆಯ ನೀರನ್ನು ಸಂಗ್ರಹಿಸುವ ಪಾತ್ರೆಯೇ ಬಾವಿ. ಹಾಗಾಗಿ ಇದು ತೆಗೆದರೆ ಮುಗಿಯುವಂತದು ಅಲ್ಲ. ಆದರೆ ಮುಗಿಯಾದ ಹಾಗೆ ಮಾಡಬೇಕಾದರೆ, ಭೂಮಿ ನೀರು ಕುಡಿಯಬೇಕಾದರೆ ಸಹಾಯಕವಾಗಿ ಇರುವುದು ಗಿಡಮರಗಳು ಅಂತ ತಿಳಿಸಿದಾಗ ಹುಡುಗನ ಮುಖದಲ್ಲಿ ಮುಗುಳ್ನಗೆ ಬಂತು. ಪ್ರಶ್ನೆಗೆ ಅವನಿಗೆ ಸರಿಯಾಗಿ ಉತ್ತರ ಸಿಕ್ಕಿತು ಅಂತ ಅವನ ಮುಖಭಾವ ಹೇಳುತ್ತಿತ್ತು. ಆದರೂ ಇಂತಹ ಸಂದರ್ಭದಲ್ಲಿಯೇ ಇನ್ನಷ್ಟು ವಿವರಣೆ ಕೊಟ್ಟರೆ ಮನಸ್ಸಿನಾಳದಲ್ಲಿ ಬೇರೂರುತ್ತದೆ ಎಂಬ ದೃಷ್ಟಿಯಿಂದ ಆತನನ್ನು ಗುಡ್ಡೆಯ ಪರಿಸರಕ್ಕೆ ಕರಕೊಂಡು ಹೋದೆ.
ಕಳೆದ 30 ವರ್ಷಗಳಿಂದ ನಾನು ನೆಟ್ಟು ಬೆಳೆಸಿದ ಕಾಡನ್ನು ಆ ಮರ ಗಿಡಗಳ ಮಹತ್ವವನ್ನು ಒಂದಷ್ಟು ವಿವರಿಸಿದೆ. ಅದು ಭೂಮಿಗೆ ನೀರು ಕುಡಿಸಿ ಒರತೆಯ ರೂಪದಲ್ಲಿ ಬೆಟ್ಟದ ಅರ್ಧ ನೆತ್ತಿಯಿಂದ ನೀರು ಹರಿದು ಬರುವ ಸೌಂದರ್ಯವನ್ನು ತೋರಿಸಿದೆ. ಜುಳು ಜುಳು ನೀನಾದದಿಂದ ಹರಿಯುವ ನಿಷ್ಕಲ್ಮಶ ನೀರಿನಲ್ಲಿ ಅಣ್ಣ ತಂಗಿಯರಿಬ್ಬರು ಮನಸೋಯಿಚ್ಚೆ ಆಡಿದರು.
ಇಂದಿದು ಯಾಕೆ ನೆನಪಾಯಿತೆಂದರೇ, ನಮ್ಮ ಕುಲಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳವರ 50ನೇ ವರ್ಧಂತಿಯೋತ್ಸವ ನಡೆಯಿತು. ಅದರ ಸವಿನೆನಪಿಗಾಗಿ ಇಂದಿನಿಂದ ಸುರುವಾಗಿ ಪ್ರತಿ ಮನೆಯಲ್ಲೂ ಯುವ ಕರಗಳ ಮೂಲಕವಾಗಿ ಐದೈದು ಗಿಡವನ್ನಾದರೂ ನೆಟ್ಟು ಮುಂದೆ ಅದು ಹೆಮ್ಮರವಾಗಿ ಬೆಳೆಯುವಂತೆ ಪ್ರೇರೇಪಿಸಬೇಕು ಎಂಬುದು ಗುರು ಆಶಯ. ಅದುವೇ ಸ್ವರ್ಣ ವೃಕ್ಷ ಯೋಜನೆ ಇಂದಿನಿಂದ ಆರಂಭವಾಗಿ ನಿರಂತರ 50 ದಿನಗಳ ಕಾಲ ಐವತ್ತು ಸಾವಿರ ಗಿಡಗಳನ್ನ ನೆಟ್ಟು ಬೆಳೆಸಬೇಕು ಎಂಬುದು ಗುರು ಆಶಯ. ಎಳೆಯ ಮಗುವಿನಿಂದಲೇ ಹಸುರಿನ ಮಹತ್ವವನ್ನು ಸಾರಬೇಕು ಮತ್ತು ಮಗುವಿನ ಮನದಲ್ಲಿ ಹಸುರಿನ ಮಹತ್ವ ಭದ್ರವಾಗಿ ಕೂರಬೇಕು ಎಂದಾದರೆ ಯುವ ಕರಗಳೇ ಇದಕ್ಕೆ ಸಾಕ್ಷಿಯಾಗಬೇಕು.
ವರುಷದಿಂದ ವರುಷಕ್ಕೆ ಬಿಸಿ ಏರುತ್ತಿರುವ ಭೂಮಿ, ಕಳಕೊಳ್ಳುತ್ತಿರುವ ಸಸ್ಯ ಸಂಪತ್ತು, ಭೂಮಿಯನ್ನು ತಂಪಾಗಿಸಲು ಮತ್ತು ಭೂಮಿಗೆ ನೀರು ಇಂಗಿಸಿಕೊಡಲು ಸಹಾಯಕವಾಗುವಂತಹ ಹಸುರಿನ ನಾಶ, ಬೇಸಿಗೆ ಬಂದಂತೆ ಜೀವ ಜಲದ ಹಾಹಾಕಾರ ಮುಂದಿನ ಪೀಳಿಗೆಯ ಭಯಾನಕ ಭವಿಷ್ಯಕ್ಕೆ ನಾಂದಿ ಎಂಬ ಗುರು ದೃಷ್ಟಿಯೇ ಈ ವೃಕ್ಷಾಂದೋಲನದ ಹಿಂದಿನ ಉದ್ದೇಶ. ಅರ್ಥವಿಸಿಕೊಂಡರೆ ಭವಿಷ್ಯದ ಪೀಳಿಗೆಗೆ ಅತ್ಯಂತ ದೊಡ್ಡ ಕೊಡುಗೆ.
ಸ್ವಭಾಷಾ ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ಸ್ವಸಂರಕ್ಷಿತ ವೃಕ್ಷ ಸಾಮ್ರಾಜ್ಯವೂ ಬೆಳೆಯಲಿ ಎಂಬುದೇ ಹಾರೈಕೆ. ಹಸಿರೇ ನಮ್ಮ ಉಸಿರಾಗಲಿ.
- ಎ.ಪಿ. ಸದಾಶಿವ ಮರಿಕೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ