ಶಿಷ್ಯರ ಹಿಕ್ಕಾಗಿ ಸತತ ಪ್ರಯತ್ನ ಶೀಲನಾದ ಗುರು ಸರ್ವದಾ ವಂದ್ಯ: ಡಾ|| ಶ್ರೀಧರ ಭಟ್

Upayuktha
0


ಉಜಿರೆ: ಗುರೋಸ್ತು ಮೌನಂ ವ್ಯಾಖ್ಯಾನಂ ಎಂಬ ಸಂಸ್ಕೃತದ ಉಕ್ತಿಯಂತೆ ಗುರುವಾದವರು ಶಿಷ್ಯನ ಎದುರಿಗೆ ಮೌನವಾಗಿ ಕುಳಿತರೂ ಸಾಕು ಶಿಷ್ಯನ ಎಲ್ಲ ಸಂಶಯಗಳು ದೂರವಾಗುತ್ತವೆ. ಅಧ್ಯಾಪಕರು ಮಾತನಾಡುವುದಕ್ಕಿಂತ ಹೆಚ್ಚಾಗಿ ತಮ್ಮ ನಡವಳಿಕೆ ಹಾಗೂ ವ್ಯಕ್ತಿತ್ವದಿಂದ ಶಿಷ್ಯನನ್ನು ಪ್ರಭಾವಿಸಬೇಕು. ಯಾವ ವ್ಯಕ್ತಿ ತತ್ವವನ್ನು ಸಾಕ್ಷಾತ್ಕಾರ ಮಾಡಿಕೊಂಡು ಸತತವಾಗಿ ಶಿಷ್ಯರ ಏಳಿಗೆಗಾಗಿ ತನ್ನನ್ನು ಸಮರ್ಪಿಸಿಕೊಳ್ಳುವನೋ, ಅವನು ಗುರು ಎಂದು ಪ್ರಶ್ನೋತ್ತರ ಮಾಲಿಕೆ ಎಂಬ ಗ್ರಂಥದಲ್ಲಿ ಹೇಳಿದೆ ಎಂದು ಶ್ರೀ.ಧ.ಮಂ. ಕಾಲೇಜಿನ ಆಡಳಿತ ಕುಲಸಚಿವರೂ, ಸಂಸ್ಕೃತ ವಿಭಾಗದ ಮುಖ್ಯಸ್ಥರೂ ಆದ ಡಾ|| ಶ್ರೀಧರ ಭಟ್ ಹೇಳಿದರು.


ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಆಯೋಜಿಸಿದ ಗುರುಪೂರ್ಣಿಮೆ ಕಾರ್ಯಕ್ರಮವು ಇಂದು ಜುಲೈ 10 ರಂದು ಸಮ್ಯಗ್ದರ್ಶನ ಸಭಾಂಗಣದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಶ್ರೀಧರ ಭಟ್ಟರ ಸಂಪಾದಕತ್ವದಲ್ಲಿ ರಚನೆಗೊಂಡ ನಾಲ್ಕು ಸೆಮಿಸ್ಟರ್ ಗಳ ಸಂಸ್ಕೃತ ಭಾಷಾ ಪಠ್ಯಪುಸ್ತಕಗಳನ್ನು ಅನಾವರಣಗೊಳಿಸಲಾಯಿತು.


ಇತಿಹಾಸ ವಿಭಾಗದ ಉಪನ್ಯಾಸಕಿ ಅಭಿಜ್ಞಾ ಮಾತನಾಡುತ್ತ, "ನಾವು ಈ ಭೂಮಿಯಲ್ಲಿ ಹುಟ್ಟಿದಾಗ ಕೇವಲ ಮಾನವರಾಗಿರುತ್ತೇವೆ ನಮ್ಮನ್ನು ಸಂಪೂರ್ಣ ಮನುಷ್ಯರನ್ನಾಗಿ ಮಾಡುವವರು ಗುರುಗಳು. ಭಾರತವು ವಿಶ್ವಕ್ಕೆ ಗುರು. ನಾವು ಹುಟ್ಟಿದಾಗಿಂದಲೂ ದೇವಋಣ, ಪಿತೃಋಣ ಹಾಗೂ ಋಷಿಋಣ ಗಳಿಗೆ ಬದ್ಧರಾಗಿರುತ್ತೇವೆ. ಜ್ಞಾನದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದೇ  ಋಣಗಳ ಋಣ ವಿಮೋಚನೆ. ಹಾಗಾಗಿ ನಮ್ಮಲ್ಲಿ ಗುರುವಿನಿಂದ ಬಂದ ವಿದ್ಯೆಗೆ ಗುರುದಕ್ಷಿಣೆ ನೀಡುವ ಪದ್ಧತಿ ಇದೆ. ಭಾರತದ ಶ್ರೇಷ್ಠ ಶಿಷ್ಯರ ಶ್ರೇಣಿಯಲ್ಲಿ ಉಪಮನ್ಯು ಹಾಗೂ ಏಕಲವ್ಯ ಹೀಗೆ ಶ್ರೇಷ್ಠ ಶಿಷ್ಯ ವೃಂದದವರಲ್ಲದೆ ವಿಶ್ವಕ್ಕೆ ಶ್ರೇಷ್ಠ ಗುರುಗಳನ್ನು ನೀಡಿರುವುದು ಭಾರತದ ಕೊಡುಗೆಯಾಗಿದೆ" ಎಂದರು.


ಜೈವಿಕ ತಂತ್ರಜ್ಞಾನ ವಿಭಾಗದ ಉಪನ್ಯಾಸಕರಾದ ದೀಕ್ಷಿತ್ ರೈ ಮಾತನಾಡಿ, "ಮಹಾಭಾರತದಲ್ಲಿ ಘೃತ (ತುಪ್ಪ) ಪಾತ್ರೆಗಳಲ್ಲಿ ಮಾಂಸದ ಮುದ್ದೆಗಳನ್ನು ಹಾಕಿ ಕೌರವರ ಜನನಕ್ಕೆ ಕಾರಣವಾಗಿ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಅಂಗಾಂಶ ಕೃಷಿಯನ್ನು ಪರಿಚಯಿಸಿದವರು ವೇದವ್ಯಾಸರು. ಆದರೆ ನಮ್ಮ ಭಾರತೀಯರ ಮಹತ್ವ ಹಾಗೂ ಅವರ ಕೊಡುಗೆ ನಮಗೆ ತಿಳಿಯದಿರುವುದು ಬೇಸರದ ಸಂಗತಿ" ಎಂದರು.


ಒಬ್ಬ ವಿದ್ಯಾರ್ಥಿಯನ್ನು ಸಂಪೂರ್ಣವಾಗಿ ರೂಪಿಸುವವರು ಗುರು ಆದ್ದರಿಂದ ಗುರುಪೂರ್ಣಿಮೆಯ ಶುಭಾಶಯಗಳನ್ನು ಕೋರುತ್ತಾ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ನಂದಾಕುಮಾರಿ ಹಾಗೂ ಪರೀಕ್ಷಾಂಗ ಕುಲ ಸಚಿವರಾದ ಗಣೇಶ ನಾಯ್ಕ ಇವರು ಗುರುವಿನ ಮಹತ್ವದ ಬಗ್ಗೆ ಮಾತನಾಡಿದರು.


ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀ ಅಭಿಲಾಷ್ ಕೆ.ಎಸ್., ವ್ಯವಹಾರ ಅಧ್ಯಯನ ವಿಭಾಗದ ಉಪನ್ಯಾಸಕ ಶ್ರೀ ಗುರುರಾಜ್, ಜೈವಿಕ ತಂತ್ರಜ್ಞಾನ ವಿಭಾಗದ ಉಪನ್ಯಾಸಕ ಶ್ರೀ ದೀಕ್ಷಿತ್ ರೈ ಹಾಗೂ ಇತಿಹಾಸ ವಿಭಾಗದ ಉಪನ್ಯಾಸಕಿ ಕುಮಾರಿ ಅಭಿಜ್ಞಾ ಇವರು ವೇದಿಕೆಯ ಮೇಲೆ ಅತಿಥಿಗಳಾಗಿ ಉಪಸ್ಥಿತರಿದ್ದು, ಶಿಷ್ಯರ ಜೀವನದಲ್ಲಿ ಗುರುವಿನ ಪಾತ್ರದ ಕುರಿತು ಮಾತನಾಡಿದರು.


ಸಂಸ್ಕೃತ ವಿಭಾಗದ ಅಧ್ಯಾಪಕರಾದ ಶ್ರೇಯಸ್ ಪಾಳಂದೆಯವರು ಸ್ವಾಗತಿಸಿದರು. ದ್ವಿತೀಯ ವರ್ಷದ ವಿಜ್ಞಾನ ವಿದ್ಯಾರ್ಥಿಗಳಾದ ಅಲಕಾ ಮತ್ತು ಬಳಗದವರು ಪ್ರಾರ್ಥಿಸಿ, ಚಿನ್ಮಯ ಅನಂತ ಹೆಗಡೆ ಗುರು ಅಷ್ಟಕಂ ಸ್ತೋತ್ರವನ್ನು ಪಠಿಸಿದನು. ವಿದ್ಯಾರ್ಥಿನಿ ಪ್ರೀತಾ ಕಾರ್ಯಕ್ರಮವನ್ನು ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top