ಭಾರತವು 1947 ರಲ್ಲಿ ಸ್ವತಂತ್ರಗೊಂಡ ನಂತರ ಇಲ್ಲಿಯವರೆಗೆ ಐದು ಪ್ರಮುಖ ಯುದ್ಧಗಳನ್ನು ಕಂಡಿದೆ. ಇವುಗಳಲ್ಲಿ ನಾಲ್ಕು ಯುದ್ಧಗಳು ಪಕ್ಕದ ಪಾಕಿಸ್ತಾನದ ವಿರುದ್ಧ ಮತ್ತೊಂದು ನೆರೆಯ ಚೀನಾದ ವಿರುದ್ಧ ನಡೆದಿದೆ. 1971 ರ ಯುದ್ಧವನ್ನು ಹೊರತುಪಡಿಸಿದರೆ, ಉಳಿದ ಮೂರು ಯುದ್ಧಗಳು, ಪಾಕಿಸ್ತಾನವು ಕಾಶ್ಮೀರ ಪ್ರದೇಶವನ್ನು ಆಕ್ರಮಿಸಿಕೊಳ್ಳುವ ಉದ್ದೇಶದಿಂದ ನಡೆದಿವೆ. ನಮ್ಮ ಭಾರತದ ನಕ್ಷೆಯನ್ನು ಗಮನಿಸಿದರೆ ಕಾಶ್ಮೀರ ಪ್ರದೇಶವು ತಾಯಿ ಭಾರತಾಂಬೆಯ ಶಿರದ ರೀತಿ ಗೋಚರಿಸುತ್ತದೆ. ಭೌಗೋಳಿಕವಾಗಿ ಮತ್ತು ಮಾನಸಿಕವಾಗಿ ಕಾಶ್ಮೀರವನ್ನು ಬೇರ್ಪಡಿಸುವ ಯಾವುದೇ ಪ್ರಯತ್ನಗಳು ಭಾರತವನ್ನು ಸುಮ್ಮನೆ ಕೂರಲು ಬಿಡುವುದಿಲ್ಲ. ಭಾರತವು ಕಂಡ ವಿಜಯಗಳ ಪೈಕಿ ಕಾರ್ಗಿಲ್ ವಿಜಯವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಹಾಗಾಗಿ ಜುಲೈ 26ರಂದು ದೇಶಾದ್ಯಂತ ಆಚರಿಸುವ ಕಾರ್ಗಿಲ್ ವಿಜಯ ದಿವಸವು ಭಾರತೀಯ ಪ್ರಜೆಗಳ ದೇಶಭಕ್ತಿಗೆ ಕನ್ನಡಿ ಹಿಡಿದಂತಿರುತ್ತದೆ.
1947ರ ಭಾರತ ಪಾಕಿಸ್ತಾನ ವಿಭಜನೆಯು ಗಡಿಭಾಗದ ಕಲಹ ಮತ್ತು ಉದ್ವಿಗ್ನತೆಗೆ ಕಾರಣವಾಗಿದೆ. ಧರ್ಮದ ಆಧಾರದ ಮೇಲೆ ವಿಭಜನೆಗೊಂಡ ಎರಡು ರಾಷ್ಟ್ರಗಳ ಗಡಿಭಾಗಗಳ ಹಂಚಿಕೆ ವಿಚಾರವಾಗಿ ಪಾಕಿಸ್ತಾನವು ಪದೇಪದೇ ಭಾರತದ ಮೇಲೆ ಯುದ್ಧ ಸಾರಿ ಸೋಲುಂಡಿದೆ. 1999ರ ಮೇ 3 ರಿಂದ ಪ್ರಾರಂಭವಾಗಿ ಜುಲೈ 26 ರಂದು ಕೊನೆಗೊಂಡ ಕಾರ್ಗಿಲ್ ಯುದ್ಧವು ರೋಚಕ ಮತ್ತು ಅವಿಸ್ಮರಣೀಯವಾಗಿದೆ. 1999ರ ಫೆಬ್ರವರಿ ತಿಂಗಳಲ್ಲಿ ಕಾರ್ಗಿಲ್ ಪ್ರದೇಶಕ್ಕೆ ಪಾಕಿಸ್ತಾನದ ನುಸುಳುಕೋರರ ಮಾಹಿತಿಯು ಅಲ್ಲಿಯ ಕುರಿಗಾಹಿ ಯುವಕರಿಂದ ತಿಳಿದು ಬರುತ್ತದೆ. ಮೇ 5ನೇ ತಾರೀಖಿನಂದು ಭಾರತೀಯ ಸೇನಾ ಪಡೆಯು ಈ ರೀತಿಯ ನುಸುಳು ಕೋರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತದೆ. ಅಲ್ಲಿಂದ ಭಾರತೀಯ ಸೇನೆಯು ಆಪರೇಷನ್ ವಿಜಯ್ ಎಂಬ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ. ಮೇ 26 ರಿಂದ ಭಾರತೀಯ ವಾಯುಪಡೆಯ “ಆಪರೇಷನ್ ಸಫೇದ್ ಸಾಗರ್” ಎಂಬ ಕಾರ್ಯಾಚರಣೆಯು ಯುದ್ಧದಲ್ಲಿ ಮೇಲುಗೈ ಸಾಧಿಸಲು ಸಹಕರಿಸಿರುತ್ತದೆ.
ಸುಮಾರು 500 ಭಾರತೀಯ ಯೋಧರನ್ನು ಕಳೆದುಕೊಂಡ ಮತ್ತು 1,300 ಕ್ಕೂ ಅಧಿಕ ಗಾಯಾಳುಗಳನ್ನು ಕಂಡ ಈ ಯುದ್ಧವು, ಪಾಕಿಸ್ತಾನವು ವಶಪಡಿಸಿಕೊಂಡ tololing peak, ಟೈಗರ್ ಹಿಲ್ ಗಳನ್ನು ಮರು ವಶಪಡಿಸಿಕೊಳ್ಳುವಲ್ಲಿ ಮೇಲುಗೈ ಸಾಧಿಸಿತು. ಇದರಿಂದ ಪಾಕಿಸ್ತಾನಕ್ಕೆ ಭೌಗೋಳಿಕವಾಗಿ ಅಲ್ಲದೆ ರಾಜಕೀಯವಾಗಿ ಹಿನ್ನಡೆ ಉಂಟಾಯಿತು. ಸಮುದ್ರಮಟ್ಟದಿಂದ ಸುಮಾರು 16,500 ಅಡಿಗಳಷ್ಟು ಎತ್ತರದಲ್ಲಿದ್ದ ಈ ಪ್ರದೇಶಗಳಲ್ಲಿ ಯುದ್ದಕಾರ್ಯಚರಣೆಗಳು ಸರಳವಾಗಿರಲಿಲ್ಲ. ಶ್ರೀನಗರದಿಂದ ಸುಮಾರು 205 km ದೂರದಲ್ಲಿರುವ ಕಾರ್ಗಿಲ್ ಪ್ರದೇಶದಲ್ಲಿ -48 ಡಿಗ್ರಿ ತಾಪಮಾನದಲ್ಲಿ ಯುದ್ಧ ಮಾಡಲು ಪಾಕಿಸ್ತಾನ ಸೇನೆಗೆ ಅನುಕೂಲವಾಗಿದ್ದು ಮತ್ತು ಭಾರತೀಯ ಸೇನೆಗೆ ಪ್ರತಿಕೂಲವಾಗಿದ್ದ ಹವಾಮಾನದಿಂದಾಗಿ ಭಾರತವು ಹಲವು ಸೈನಿಕರನ್ನು ಈ ಯುದ್ಧದಲ್ಲಿ ಕಳೆದುಕೊಳ್ಳಬೇಕಾಯಿತು. ಭಾರತೀಯ ಸೇನೆಯ ಪರಾಕ್ರಮತೆ ಮತ್ತು ದಿಟ್ಟ ಹೋರಾಟದ ಫಲವಾಗಿ ಕಾರ್ಗಿಲ್ ಪ್ರದೇಶವನ್ನು ಪಾಕಿಸ್ತಾನದ ಸೇನೆಯಿಂದ ವಶಪಡಿಸಿಕೊಳ್ಳಲಾಯಿತು.
ಭಾರತವು ಒಂದೊಂದಾಗಿ ಪಾಕಿಸ್ತಾನವು ಆಕ್ರಮಿಸಿಕೊಂಡ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ಅಮೇರಿಕವು ಅಂದಿನ ಪಾಕಿಸ್ತಾನದ ಪ್ರಧಾನ ಮಂತ್ರಿ ಶ್ರೀ ನವಾಜ್ ಶರೀಫ್ ಜೊತೆ ಮಾತುಕತೆ ನಡೆಸಿತು ಯುದ್ಧದಿಂದ ಹಿಂದೆ ಸರಿಯಲು ಸೂಚಿಸಿತು. ಇದರಿಂದ ಜುಲೈ 4 ರಂದು ಪಾಕಿಸ್ತಾನವು ತಮ್ಮ ಸೇನೆಯನ್ನು ಕಾರ್ಗಿಲ್ ಪ್ರದೇಶದಿಂದ ಹಿಂಪಡೆಯಲು ಒಪ್ಪಿಕೊಂಡಿತು. ಜುಲೈ 11ರಂದು ಪಾಕಿಸ್ತಾನ ಸೇನೆಯು ಮರಳಲು ಪ್ರಾರಂಭಿಸಿತು. ಜುಲೈ 14ರಂದು ಅಂದಿನ ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು “ಆಪರೇಷನ್ ವಿಜಯ್” ಯುದ್ಧದ ವಿಜಯವನ್ನು ಘೋಷಿಸಿದರು. ಜುಲೈ 26ರಂದು ಕಾರ್ಗಿಲ್ ಯುದ್ಧವು ಅಧಿಕೃತವಾಗಿ ಅಂತ್ಯಗೊಂಡಿತು.
ಅಂದಿನ ಭಾರತ ಸರ್ಕಾರ ಮತ್ತು ಅಧಿಕಾರಿಗಳ ದಿಟ್ಟ ನಿರ್ಧಾರ ಮತ್ತು ಯೋಜನೆಗಳ ಮೂಲಕ ಭಾರತೀಯ ಸೇನೆಯು ಜಯಗಳಿಸಲು ಸಾಧ್ಯವಾಯಿತು. ಯುದ್ಧದಲ್ಲಿ ಬಹಳಷ್ಟು ಸಾವು ನೋವುಗಳನ್ನು ಕಂಡ ಭಾರತಕ್ಕೆ ಸಾರ್ವಜನಿಕರ, ಉದ್ಯಮಿಗಳ ನೇರ ಮತ್ತು ಪರೋಕ್ಷ ಬೆಂಬಲವನ್ನು ನಾವಿಂದು ಸ್ಮರಿಸಬಹುದು. ಭಾರತೀಯ ಸೇನೆಯ ಕ್ಯಾಪ್ಟನ್ ವಿಕ್ರಂ ಬಾತ್ರಾ, ಯೋಗೇಂದ್ರ ಸಿಂಗ್ ಯಾದವ್, ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಲೆಫ್ಟಿನೆಂಟ್ ಬಲ್ವಾನ್ ಸಿಂಗ್ ಮತ್ತಿತರ ವೀರಯೋಧರ ಬಲಿದಾನವನ್ನು ನೆನಪಿಸಿಕೊಳ್ಳುವುದು ಕಾರ್ಗಿಲ್ ವಿಜಯೋತ್ಸವದ ಪ್ರಮುಖ ಉದ್ದೇಶವಾಗಿದೆ.
ಪ್ರಸ್ತುತ ಕಾರ್ಗಿಲ್ ಪ್ರದೇಶವು ಲಡಾಕ್ ಕೇಂದ್ರಾಡಳಿತ ಪ್ರದೇಶದ ಭಾಗವಾಗಿದೆ. ಸುಮಾರು 1,000ಕ್ಕೂ ಅಧಿಕ ಸೈನಿಕರನ್ನು ಕಳೆದುಕೊಂಡ ಪಾಕಿಸ್ತಾನ ಇಂದಿಗೂ ಕಾಶ್ಮೀರ ವಿಚಾರದಲ್ಲಿ ಪದೇ ಪದೇ ಭಾರತವನ್ನು ಕೆಣಕಿ ಅಪಹಾಸ್ಯಕ್ಕೀಡಾಗುತ್ತಿದೆ. ಯುದ್ಧವು ಯಾವುದೇ ದೇಶಕ್ಕೆ ಜಯ ತಂದು ಕೊಟ್ಟರೂ, ಯುದ್ಧದ ತೀವ್ರತೆ ಮತ್ತು ಅದರ ಪರಿಣಾಮವು ಭಾಗವಹಿಸಿದ ರಾಷ್ಟ್ರಗಳಿಗೆ ಶಾಶ್ವತ ಹಾನಿ ಮಾಡುವುದು ಖಚಿತ. ಹಾಗಾಗಿ ಅಂದು ಯುದ್ಧದಲ್ಲಿ ಸಂಭವಿಸಿದ ಸಾವು ನೋವುಗಳಿಂದ ಉಂಟಾದ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ ಮತ್ತು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಶೌರ್ಯ ಮೆರೆದ ಭಾರತೀಯ ಸೈನಿಕರನ್ನು ಸ್ಮರಿಸೋಣ. ಪ್ರಸ್ತುತ ಭಾರತೀಯ ಸೇನೆಯ ತ್ಯಾಗ ಮತ್ತು ಕರ್ತವ್ಯವನ್ನು ಸ್ಮರಿಸುತ್ತಾ 26ನೇ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸೋಣ.
- ಡಾ. ಭಾನುಪ್ರಕಾಶ್ ಬಿ. ಈ
ಪ್ರಾಧ್ಯಾಪಕರು
ಎಸ್ ಡಿ ಎಂ ಕಾಲೇಜು, ಉಜಿರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ