'ಮಳೆ' ಅದೊಂದು ಸುಂದರ ಅನುಭವ. ಆ ನೀರ ಸ್ಪರ್ಶಕ್ಕೆ ಇಳೆಯೆಲ್ಲಾ ತಂಪಾಗಿ ಎಲ್ಲಾ ಸಣ್ಣ ಪುಟ್ಟ ಸಸ್ಯಗಳಿಂದ ಹಿಡಿದು ದೈತ್ಯಾಕಾರದ ಪ್ರಾಣಿ -ಪಕ್ಷಿಗಳಿಗೂ ಸಹ ಆ ವರುಣನೇ ಆಧಾರ, ಅವನಿಲ್ಲದೆ ಹೋದರೆ ಈ ಧರೆಯೂ ಇಲ್ಲ, ಹಾಗೆ ಉಳಿದ ಜೀವ ಸಂಕುಲಕ್ಕೂ ಉಳಿವಿಲ್ಲ. ಸುತ್ತಲೂ ಹಸಿರ ಸಿರಿ ಚಿಗುರಲು, ನಿತ್ಯ ಹಕ್ಕಿಗಳ ಸೊಗಸಾದ ಇಂಪನ ಕೇಳಲು ಆ ಹೂಮಳೆಯೇ ಕಾರಣ. ಕೆಲವೊಮ್ಮೆ ನಾಟ್ಯಪ್ರಿಯ ನವಿಲುಗಳು ತಮ್ಮ ಗರಿಬಿಚ್ಚಿ ಸುಂದರವಾಗಿ ನೃತ್ಯ ಮಾಡಿದಾಗ ಆ ವರುಣ ದೇವನಿಗೆ ಧನ್ಯವಾದ ಸಮರ್ಪಿಸುತ್ತಿವೆಯೇನೋ ಎಂಬ ಭಾವ ಹುಟ್ಟುತ್ತದೆ.
ಇವಿಷ್ಟೇ ಏಕೆ ಉಳಿದ ವನ್ಯ ಪ್ರಾಣಿಗಳು ಆ ಜಿಟಿಜಿಟಿ ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪಡುವ ಪಜೀತಿ ಹೇಳಲಾಗದು. ಆದರೂ ಅವುಗಳು ಸಹ ಆ ಜಲಋತುವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳುತ್ತವೆ. ಆ ಜಲಧಾರೆ ಭೂಮಿಗಿಳಿದಾಗ ಆಗುವ ಖುಷಿಯ ಎದುರು ಎಲ್ಲ ದುಃಖಗಳು ನಶ್ವರವಾಗುತ್ತವೆ. ಏಕೆಂದರೆ ಆ ಮುಸಲಧಾರೆಯಿಂದ ಸಿಗುವ ತೃಪ್ತಿ ಹೇಳಲಾಗದು ಮತ್ತು ಅದೊಂದು ನೆಮ್ಮದಿಯ ಕ್ಷಣವಾಗಿರುವುದಂತೂ ನಿಜ. ಇದಿಷ್ಟು ಸುಂದರ ಪ್ರಕೃತಿಯ ಕಥೆಯಾದರೆ, ಅದರೊಂದಿಗೆ ಬಾಳುವ ಮನುಷ್ಯನ ಕಥೆ ಇನ್ನೊಂದು ರೀತಿ. ಪ್ರಕೃತಿ ನಿರ್ಮಿತ ಆ ಸೌಂದರ್ಯಕ್ಕೂ ಮಾನವ ನಿರ್ಮಿತ ಕೃತಕ ಸೌಂದರ್ಯಕ್ಕೂ ಇರುವ ವ್ಯತ್ಯಾಸ ಅಜಗಜಾಂತರ. ಕೆಲವು ಜನರು ವರ್ಷಧಾರೆಯನ್ನು ಸುಖದ ಜೀವನದೊಂದಿಗೆ ಅನುಭವಿಸಿದರೆ ಇನ್ನು ಹಲವರು ಆ ಮಳೆಗಾಲದ ಕ್ಷಣಗಳನ್ನು ದುಃಖದಲ್ಲಿ ಸವೆಸುವವರು ಇದ್ದಾರೆ. ಕಾರಣವಿಷ್ಟೇ, ಅವರವರ ಜೀವನಕ್ಕೆ ತಕ್ಕಂತೆ ಆ ಮಳೆರಾಯನು ಸಹ ಹೊಂದಿಕೊಂಡಿದ್ದಾನಷ್ಟೇ.
ಇನ್ನು ಈ ಕಾಲದಲ್ಲಿ ರಸ್ತೆಗಳ ಕಥೆಯೋ ಕೇಳುವುದೇ ಬೇಡ. ಅವುಗಳು ರಸ್ತೆಗಳೋ ಅಥವಾ ಚಂದ್ರಲೋಕದ ಚಂದ್ರದೇವನ ಶಿಥಿಲಗೊಂಡ ಭಾಗಗಳೋ ಎಂದು ತಿಳಿಯದು, ಏಕೆಂದರೆ ಅಷ್ಟು ಹದಗೆಟ್ಟಿವೆ. ಇದರ ಬಗ್ಗೆ ಮಾತಾಡಿ ಅಥವಾ ಬರೆದು ಸುಖವಿಲ್ಲ, ಅಂದರೆ ಅದರ ಅರ್ಥ ಅವುಗಳು ಕೊನೆಯಿರದ ಅಥವಾ ಬಗೆಹರಿಯದ ಸಮಸ್ಯೆಗಳೆಂಬ ಪಟ್ಟಿಯನ್ನು ಪಡೆದುಕೊಂಡು ಬಿಟ್ಟಿವೆಯಷ್ಟೇ.
ಹೀಗೆ ಹೇಳುತ್ತಾ ಹೋದಂತೆಲ್ಲ ಎಷ್ಟೋ ಸುಂದರವಾದ ಹಾಗೆ ಅನೇಕ ಬಗೆಹರಿಯದ ಸಮಸ್ಯೆಗಳ ಸರಪಳಿ ಏನೂ ಕಡಿಮೆ ಇಲ್ಲ. ಈ ಕೆಲವು ಸಮಸ್ಯೆಗಳಿಗೆ ಪರಿಹಾರವೆಂಬ ಭಾಗ್ಯ ಯಾವಾಗ ಬರುವುದೋ ಗೊತ್ತಿಲ್ಲ. ಆದರೆ ಮಳೆಗಾಲವೆಂಬ ಆ ಸುಂದರ ಕ್ಷಣಗಳು ಮತ್ತೆ ಮತ್ತೆ ಹೆಚ್ಚು ಚೇತನವಾಗಿ ಮರುಕಳಿಸುವುದಂತೂ ನಿಜ.
- ವಿನುತ
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ