ರಂಗಿನ ಓಕುಳಿ ಚೆಲ್ಲುತ ಬಾನಿಗೆ
ಬಂದನು ಭಾಸ್ಕರ ನಗುನಗುತ
ಹೊನ್ನಿನ ಎಳೆಯಲಿ ನೇಯ್ಗೆಯ ನೇಯ್ದನು
ಧರಣಿಗೆ ಕಾಣಿಕೆ ಕೊಡಲೆನುತ
ದಿನಮಣಿ ಉದಯಕೆ ವಸುಧೆಯು ನಕ್ಕಳು
ನಿಶೆಯ ಸೆರಗನು ಸರಿಸುತಲಿ
ಹಿಮಮಣಿಯೊಳಗೆ ರವಿಯ ಬಿಂಬವು
ಸೆಳೆದಿದೆ ನೂರು ಭಾವದಲಿ
ಚಿಗುರೆಲೆ ಮೇಲಿನ ಮಣಿ ಮಣಿ ಮಾಲೆಯು
ತೋಷ ರಸವನೇ ಉಕ್ಕಿಸಿದೆ
ಸಾಗರದಲೆಯಲೆಯಲಿ ಅರ್ಕನ ಕಿರಣವು
ಹೊನ್ನಿನ ಬಣ್ಣವ ಚೆಲ್ಲುತಿದೆ
ಇರುಳಲಿ ಜೋಗುಳ ಹಾಡಿದ ಚಂದ್ರಮ
ತನ್ನಯ ಗೂಡಿಗೆ ಮರಳಿದನು
ವಿರಾಮ ಬಯಸದ ನೇಸರ ತಾನು
ಸರದಿಯ ಮರೆಯದೆ ಬಂದಿಹನು
ಸೂರ್ಯನ ಕಾಂತಿಯ ತನುವಲಿ ಪಡೆದು
ಸೆಳೆದಳು ಭೂರಮೆ ಹಿತವಾಗಿ
ಎಲ್ಲೆಯು ಎಲ್ಲಿದೆ ಸೃಷ್ಟಿಯ ಸೊಬಗಿಗೆ
ಸಗ್ಗವೆ ಇಳಿದಿದೆ ತಾನಾಗಿ
-ಮಧುಮಾಲತಿ ರುದ್ರೇಶ್ ಬೇಲೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ