ಗ್ರಾಮೀಣ ಆರೋಗ್ಯ ರಂಗದಲ್ಲಿ ಸೇವೆಯಿಂದ ಸಾರ್ಥಕತೆ: ಪ್ರಕಾಶ್ ಪೈ
ಮೂಡುಬಿದಿರೆ: ಗ್ರಾಮೀಣ ಆರೋಗ್ಯ ಸೇವೆ ಸವಾಲಿನ ಕ್ಷೇತ್ರವಾಗಿದೆ. ಇಲ್ಲಿ ಮಿತ ದರದಲ್ಲಿ ಗುಣಮಟ್ಟದ ಸೇವೆ ನೀಡುವುದು ನಿಜಾರ್ಥದ ಸೇವೆಯಾಗುತ್ತದೆ. ಇಂತಹ ಸೇವಾ ಕಾಳಜಿ ಹೊಂದಿರುವ ಮೂಡುಬಿದಿರೆಯ ಜಿ.ವಿ.ಪೈ ಚ್ಯಾರಿಟೇಬಲ್ ಟ್ರಸ್ಟ್ ನೇತೃತ್ವದ ಜಿ.ವಿ.ಪೈ ಸ್ಮಾರಕ ಆಸ್ಪತ್ರೆಯಲ್ಲಿ ಉನ್ನತ ದರ್ಜೆಯಿಂದ ಜನರಲ್ ವಾರ್ಡ್ಗಳ ತನಕ ರೋಗಿಗಳ ಆರೈಕೆಗೆ ಬಳಕೆಯಾಗುವ ಬೆಡ್ ಸಹಿತ ಉಪಕರಣ ಸೌಲಭ್ಯಗಳ ಉನ್ನತ ಗುಣಮಟ್ಟದಲ್ಲಿ ಏಕತೆಯನ್ನು ಕಾಯ್ದುಕೊಂಡಿದ್ದೇವೆ ಎಂದು ಪುಣೆಯ ಸೊಶಿಯಲ್ ಸೇವಾ ಇನಿಶಿಯೇಟಿವ್‌ನ ಪ್ರಕಾಶ್ ಪೈ ಹೇಳಿದರು.
ಅವರು ಗುರುವಾರ ಜಿ.ವಿ. ಪೈಆಸ್ಪತ್ರೆಯಲ್ಲಿ ನೂತನ ಪಿ.ಎಸ್.ಭಟ್ ಬ್ಲಾಕ್, ನವೀಕೃತ ತುರ್ತುಚಿಕಿತ್ಸಾ ವಿಭಾಗ, ನವಜಾತ ಶಿಶುಗಳ ತೀವ್ರ ನಿಗಾ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ, ನವೀಕೃತ ತುರ್ತುಚಿಕಿತ್ಸಾ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಆರೋಗ್ಯ ಸೇವೆಗೆ ಈ ಆಸ್ಪತ್ರೆಗೆ ನಾವೂ ದಾನಿಗಳಾಗಿ ಕೊಡುಗೆಯ ರೂಪದಲ್ಲಿ ಹೂಡಿಕೆ ಮಾಡಿ ಸಾರ್ಥಕತೆ ಕಂಡಿದ್ದೇವೆ. ಅದರ ಫಲ ಜನತೆಗೆ ದೊರೆಯಲಾರಂಭಿಸಿದೆ. ಜನತೆಗೆ ಆರೋಗ್ಯ ರಕ್ಷಣೆಯ ಎಲ್ಲ ಉನ್ನತ ಚಿಕಿತ್ಸೆಗಳೂ ಊರಲ್ಲೇ ದೊರೆತು ಮೂಡುಬಿದಿರೆ ಮೆಡಿಕಲ್ ಹಬ್ ಆಗಲಿ ಎಂದವರು ಹಾರೈಸಿದರು.
ಟ್ರಸ್ಟಿ ಡಾ. ಮುರಳೀ ಕೃಷ್ಣ ಆಸ್ಪತ್ರೆಯ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ ಮಿತದರದಲ್ಲಿ ಗುಣಮಟ್ಟದ ಸೇವೆಗೆ ಆದ್ಯತೆ ನೀಡುತ್ತಿರುವ ಆಸ್ಪತ್ರೆ ಮುಂದೆ ಎನ್.ಎ.ಬಿ.ಎಚ್. ಮಾನ್ಯತೆ ಹಾಗೂ ಮೇಲ್ದರ್ಜೆಯ ಶಸ್ತ್ರಚಿಕಿತ್ಸಾ ವಿಭಾಗದ ಕನಸು ಹೊಂದಿದೆ ಎಂದರು.
ನೂತನ ಪಿ.ಎಸ್.ಭಟ್ ಬ್ಲಾಕ್ ಉದ್ಘಾಟನೆಯನ್ನು ಪಿ.ಎಸ್.ಭಟ್ ಸಹೋದರ ಪಿ.ವಿಶ್ವನಾಥ ಭಟ್ ನೆರವೇರಿಸಿದರು. ಟ್ರಸ್ಟ್ ಉಪಾಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆವಹಿಸಿ ಉದಾರ ದಾನಿಗಳು ಕೊಡುಗೆಗಳ ಮೂಲಕ ಆಸ್ಪತ್ರೆಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಹಾಗಾಗಿಡಯಾಲಿಸೀಸ್‌ನಂತಹ ವ್ಯವಸ್ಥೆ ಅತ್ಯಂತ ರಿಯಾಯಿತಿ ದರದಲ್ಲಿ ಇಲ್ಲಿನ ಜನತೆಗೆ ದೊರೆಯುವಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಅವರು ತನ್ನ ತಂದೆ ದಿ. ಡಾ. ಮಂಜುನಾಥ ಕಾಮತ್ ಸ್ಮರಣಾರ್ಥ ನೀಡಿದ ಅತ್ಯಾಧುನಿಕ ಇಸಿಜಿ ಯಂತ್ರವನ್ನು ಪಿ.ಆರ್.ಒ ಪ್ರದೀಪ್ ನಾಯಕ್ ಆಸ್ಪತ್ರೆಗೆ ಹಸ್ತಾಂತರಿಸಿದರು.
ನವಜಾತ ಶಿಶುಗಳ ನವೀಕೃತ ತೀವ್ರ ನಿಗಾ ವಿಭಾಗವನ್ನು ಎಂ.ಸಿ.ಎಸ್ ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಉದ್ಘಾಟಿಸಿ ತ್ಯಾಗದ ತಳಹದಿಯ ಮೇಲೆ ನಿರ್ಮಾಣವಾಗಿರುವ ಈ ಆಸ್ಪತ್ರೆಯ ಸೇವಾ ಫಲಗಳು ಜನತೆಯ ಆರೋಗ್ಯಕ್ಕೆ ಸಹಕಾರಿಯಾಗಲಿ ಎಂದು ಹಾರೈಸಿದರು. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಟ್ರಸ್ಟ್ ಕಾರ್ಯದರ್ಶಿ ಡಾ. ಹರೀಶ್ ನಾಯಕ್ ಐದು ದಶಕಗಳ ಹಿಂದೆ ಹೆರಿಗೆ ಆಸ್ಪತ್ರೆಯೆಂದು ಖ್ಯಾತಿ ಪಡೆದ ಜಿ.ವಿ.ಆಸ್ಪತ್ರೆ ಹಲವು ದಾನಿಗಳ ಉದಾರ ಕೊಡುಗೆಗಳಿಂದ ಬೆಳೆದು ಇದೀಗ ಸಾರ್ಥಕ ಸ್ವರ್ಣ ಮಹೋತ್ಸವ ಕಾಣುತ್ತಿದೆ ಎಂದರು.
ಇನ್ನೋರ್ವ ಉಪಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ, ಮನೋಹರ್ ಮೂಡುಬಿದಿರೆ ಉಪಸ್ಥಿತರಿದ್ದರು. ಜೆ.ಜೆ.ಪಿಂಟೋ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಜಿ.ವಿ.ಪೈ ಟ್ರಸ್ಟ್ ಪದಾಧಿಕಾರಿಗಳು, ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬಂದಿಗಳು, ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ