ಸ್ಮರಣೀಯ ಸೇವೆಗೆ ಶಾಶ್ವತ ಗೌರವ: ಮೆಂಡನ್

Upayuktha
0

ಕೆಎಸ್ಆರ್ ಪಿಎಸ್‌ಐ ಪುಂಡಲೀಕ ನಾಯಕ್ ಬೀಳ್ಕೊಡುಗೆ





ಕಲಬುರಗಿ: ಯಾವುದೇ ವೃತ್ತಿಯಲ್ಲಿದ್ದರೂ ಜನಪರವಾಗಿ ಮತ್ತು ಮಾನವೀಯತೆ ಯಿಂದ ಕರ್ತವ್ಯ ನಿರ್ವಹಿಸಿದರೆ ನಿವೃತ್ತಿಯ ನಂತರವೂ ಕೂಡ ಗೌರವ ಸಿಗುತ್ತದೆ ಎಂದು ಕಲಬುರಗಿ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನರಸಿಂಹ ಮೆಂಡನ್ ಅಭಿಪ್ರಾಯಪಟ್ಟರು.


ಕಲಬುರಗಿಯ ಮಿನಿವಿಧಾನಸೌಧದ ಸ್ನೇಹ ದರ್ಶಿನಿ ಸಭಾಂಗಣದಲ್ಲಿ (ಗುರುವಾರ) ಜುಲೈ 10 ರಂದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪುಂಡಲೀಕ ನಾಯಕ್ ಅವರು ನಿವೃತ್ತಿಯ ನಂತರ ಬೆಂಗಳೂರಿಗೆ ಸ್ಥಳಾಂತರಹೊಂದುವ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಮತ್ತು ದಕ್ಷಿಣ ಕನ್ನಡ ಸಂಘದ ವತಿಯಿಂದ ಸನ್ಮಾನ ನೆರವೇರಿಸಿ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿ, 40 ವರ್ಷಗಳ ಸೇವಾವಧಿಯಲ್ಲಿ ಜನ ಮೆಚ್ಚುಗೆಯ ಕಾರ್ಯ ನಿರ್ವಹಿಸಿ ಇಲಾಖೆಗೆ ಮತ್ತು ಸಮಾಜದಲ್ಲಿ ಹೆಸರನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು. 


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಮಾತನಾಡಿ, ವೃತ್ತಿಯಲ್ಲಿ ಅಧಿಕಾರಿಯಾಗಿ ನಿವೃತ್ತಿ ಹೊಂದಿದರೂ ಪ್ರವೃತ್ತಿಯಲ್ಲಿ ಸಾಂಸ್ಕೃತಿಕವಾಗಿ ಬೆಳೆದ ಪುಂಡಲೀಕ್ ನಾಯಕ್ ಅವರ ವ್ಯಕ್ತಿತ್ವದಿಂದ ನಿವೃತ್ತಿಯ ನಂತರ ಕೂಡ ಅವರ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ಅವಕಾಶವಿದ್ದು ಒಳ್ಳೆಯ ಜೀವನ ನಡೆಸಲಿ ಎಂದು ಹಾರೈಸಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಮಾತನಾಡಿ, ಪುಂಡಲೀಕ ನಾಯಕ್ ಅವರು ತಮ್ಮ 40 ವರ್ಷಗಳ ಸೇವಾವಧಿಯಲ್ಲಿ ಪ್ರಮುಖವಾಗಿ ಕಾಡುಗಳ್ಳ ವೀರಪ್ಪನ್ ಹಾವಳಿಯ ಸಂದರ್ಭದಲ್ಲಿ ಒಂದು ಕೋಟಿ ಇಪ್ಪತ್ತು ಲಕ್ಷದ ಗಂಧವನ್ನು 1992 ರಲ್ಲಿ ವಶಪಡಿಸಿಕೊಂಡದ್ದು ಅನೇಕ ರಾಜ್ಯಗಳ ಚುನಾವಣಾ ಕಾರ್ಯದಲ್ಲಿ ಮತ್ತು ವಿಧಾನಸಭಾ ಅಧಿವೇಶನಗಳಲ್ಲಿ ಭದ್ರತಾ ಕಾರ್ಯದಲ್ಲಿ ತೊಡಗಿ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಪಡೆದ ಪರಿಣಾಮವಾಗಿಯೇ 2024ರಲ್ಲಿ ರಾಷ್ಟ್ರಪತಿ ಪದಕದಿಂದ ಪುರಸ್ಕೃತರಾಗಿದ್ದಾರೆ. ಜೀವನದಲ್ಲಿ ಸತ್ತ ಮೇಲೂ ಸೇವೆ ಮಾಡಬಹುದು ಎಂಬುದಕ್ಕೆ ನಿದರ್ಶನವಾಗಿ ತಮ್ಮ ಪತ್ನಿ ರೂಪಾ ನಾಯಕ್ ಜೊತೆ ದೇಹ ದಾನ ಮತ್ತು ಕಣ್ಣು ದಾನಕ್ಕೆ ಒಪ್ಪಿಗೆ ನೀಡಿರುವುದು ಅತ್ಯಂತ ಆದರ್ಶ ಕೆಲಸವಾಗಿದೆ. ಮೂಲತಃ ಉಡುಪಿ ಜಿಲ್ಲೆಯ ಜನ್ನಾಡಿಯ ಪುಂಡಲೀಕ ನಾಯಕ್ ಅವರು ಬೆಂಗಳೂರು ಮತ್ತು ಕಲಬುರಗಿಯಲ್ಲಿ ಕಾರ್ಯನಿರ್ವಹಿಸಿ ಜನಪ್ರೀತಿಗೆ ಪಾತ್ರರಾಗಿದ್ದಾರೆ. ನಾಯಕ್ ಅವರು ಪುತ್ರಿ ನಿಧಿ ಜೊತೆ ಉತ್ತಮ ಜೀವನ ನಡೆಸಲಿ ಎಂದು ಹಾರೈಸಿದರು.

 

ದಕ್ಷಿಣ ಕನ್ನಡ ಸಂಘದ ಕ್ರೀಡಾ ಕಾರ್ಯದರ್ಶಿ ಸುನಿಲ್ ಶೆಟ್ಟಿ, ಸದಸ್ಯರಾದ ಸಂತೋಷ್, ಮಹೇಶ್ ಬಸವರಾಜ ಪಾಟೀಲ್ ಮತ್ತಿತರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top