ಭಾರತೀಯ ಸ್ವಾತಂತ್ರ್ಯ ಸಮರದ ಕಥನದಲ್ಲಿ ಅಗ್ರಮಾನ್ಯರೇನಿಸುವ ಕ್ರಾಂತಿಕಾರಿಗಳು ಇಂದಿನ ಚರಿತ್ರೆಯ ಪುಸ್ತಕದಿಂದ ಬಹುದೂರ ಉಳಿದಿರುವುದು ದುರಂತವೇ ಸರಿ. ಸ್ವಪ್ರಾಣಾರ್ಪಣೆಯನ್ನು ಗೈದಾದರೂ ಭಾರತ ಮಾತೆಯನ್ನು ಬಂಧಮುಕ್ತಗೊಳಿಸುವ ಅಪ್ರತಿಮ ದೇಶಪ್ರೇಮಿಗಳ ಬಣವಿದು. ಇಂತಹ ಬಣವೊಂದು ಸೇರಿಕೊಂಡು ಆಂಗ್ಲ ಸರ್ಕಾರಕ್ಕೆ ತಕ್ಕ ಶಾಸ್ತಿಯನ್ನು ಮಾಡಲು ಹೊರಟ ಸಂದರ್ಭಗಳಲ್ಲೊಂದು ಈ ಕಾಕೋರಿ ದುರಂತ.
ರಾಮ್ ಪ್ರಸಾದ್ ಬಿಸ್ಮಿಲ್ ಸಚಿಂದ್ರನಾಥ ಸನ್ಯಾಲ, ಮನ್ಮಥನಾಥ ಗುಪ್ತಾ, ಠಾಕೂರ್ ರೋಷನ್ ಸಿಂಹ ಅಸ್ಬಾಕುಲ್ಲ ಖಾನ್ ರಾಜೇಂದ್ರ ಲಾಹಿರಿ ಸೇರಿದಂತೆ ಕ್ರಾಂತಿಕಾರಿಗಳ ಗುಂಪೊಂದು ಈ ಮಹತ್ಕಾರ್ಯಕ್ಕೆ ಕೈ ಹಾಕಿ ಇರುತ್ತದೆ. ಇದರಲ್ಲಿ ಅಪ್ರತಿಮ ದೇಶಪ್ರೇಮಿ ಎಂದು ಖ್ಯಾತಿಗೊಳಪಡಲಿದ್ದ ವಾರಣಾಸಿಯ ಸಂಸ್ಕೃತ ವಿದ್ಯಾರ್ಥಿ ಹದಿಹರೆಯದ ಬಾಲಕ ಚಂದ್ರಶೇಖರ್ ಆಜಾದ್ ಕೂಡ ಒಬ್ಬರು.
ಮಧ್ಯ ಪ್ರದೇಶದ ಭಾವರ ಎಂಬ ಚಿಕ್ಕ ಗ್ರಾಮದ ಚಂದ್ರಶೇಖರ್ ತಿವಾರಿ ವಾರಣಾಸಿಯಲ್ಲಿ ಸಂಸ್ಕೃತ ಅಧ್ಯಯನ ಮಾಡುತ್ತಿದ್ದ ಕಾಲವದು. ತನ್ನ ಹೆಸರನ್ನು ಅಜಾದ್ ಎಂದು ನ್ಯಾಯಾಲಯದಲ್ಲಿ ಹೇಳಿ ಚಡಿ ಏಟುಗಳ ಶಿಕ್ಷೆಯನ್ನು ಅನುಭವಿಸಿ ಕುಗ್ಗದ ದೇಶಪ್ರೇಮದೊಂದಿಗೆ ಹುರುಪಿನಿಂದ ಮುನ್ನುಗ್ಗುತ್ತಿರುವಾಗ ಕಾಕೋರಿ ಘಟನೆಯಲ್ಲಿ ಪಾಲ್ಗೊಳ್ಳುವ ಅವಕಾಶ ಈತನಿಗೊದಾಗಿ ಬಂತು.
ಕ್ರಾಂತಿಕಾರಿಗಳ ಗುಂಪಿಗಾದರೋ ಆಹಾರದ ತೀವ್ರ ಅಭಾವ ಒಂದೆಡೆಯಾದರೆ ಆಂಗ್ಲರು ಬಲಾತ್ಕಾರವಾಗಿ ತೆರಿಗೆಯನ್ನು ಸಂಗ್ರಹಿಸಿ ರೈಲಿನಲ್ಲಿ ಕೊಂಡೊಯ್ಯುತ್ತಿದ್ದು ಅವರ ರಕ್ತವನ್ನು ಕುದಿಸಿದ ಇನ್ನೊಂದು ವಿಚಾರ. ಅಲ್ಲದೆ ಜರ್ಮನಿಯಿಂದ ಕಲ್ಕತ್ತೆಗೆ ದೊಡ್ಡ ಪ್ರಮಾಣದಲ್ಲಿ ಶಸ್ತ್ರಗಳು ಬಂದು ಸೇರಿದ್ದವು. ಅವುಗಳನ್ನು ಖರೀದಿಸಲು ಹಣದ ಅವಶ್ಯಕತೆ ಇವರಿಗಿತ್ತು. ಆದ್ದರಿಂದ ಇಂತಹ ರೈಲಿಗೆ ದಾಳಿಯಲ್ಲಿತ್ತು ಆಂಗ್ಲರು ಲೂಟಿ ಮಾಡುತ್ತಿದ್ದ ಸಂಪತ್ತನ್ನು ಮರಳಿ ಕಿತ್ತುಕೊಳ್ಳುವ ಯತ್ನ ಇದಾಗಿತ್ತು.
ಕಾಕೋರಿ ಎಂಬುದು ಉತ್ತರ ಪ್ರದೇಶದ ಲಕ್ನೋ ಮತ್ತು ಸಹಜಹಾನ್ ಪುರದ ಮಧ್ಯ ಇರುವ ಒಂದು ಚಿಕ್ಕ ರೈಲು ನಿಲ್ದಾಣ. ಎರಡು ಕಡೆಯಲ್ಲಿಯೂ ದಟ್ಟವಾದ ಅರಣ್ಯ ಹಾಗೂ ತಪ್ಪಿಸಿಕೊಂಡು ಮರೆಯಾಗಲು ಯೋಗ್ಯ ಸ್ಥಾನ ಇದಾಗಿತ್ತು. ಅಗಸ್ಟ್ 8ನೇ ದಿನಾಂಕದಂದು ಇವರು ಈ ಕಾರ್ಯವನ್ನು ಮಾಡಲು ಹನ್ನದ್ಧರಾಗಿದ್ದರು. ಆದರೆ ಇವರು ಒಂದು ನಿಮಿಷ ತಡವಾಗಿ ಕಾರ್ಯಸ್ಥಾನವನ್ನು ತಲುಪಿದ ಕಾರಣ ಗುರಿ ತಲುಪಲು ಸಾಧ್ಯವಾಗಲಿಲ್ಲ. ಮರುದಿನ ಮರಳಿ ಯತ್ನ ದತ್ತ ಇವರು ಕೈ ಹಾಕಿದ್ದರು. ಇವರೆಲ್ಲರೂ ಬೇರೆ ಬೇರೆ ಡಬ್ಬಿಗಳಲ್ಲಿ ಹತ್ತಿ ರೈಲಿನಲ್ಲಿ ಪ್ರಯಾಣಿಕರಂತೆ ನಟಿಸುತ್ತಾ ಮುನ್ನುಗ್ಗಿದರು. ಬಳಿಕ ನಿಶ್ಚಯಿಸಿದ ಸ್ಥಳದಲ್ಲಿ ಕಾರ್ಯೋನ್ಮುಖರಾದರು. ಮುಸುಕಿನ ಮುಂಜಾನೆಯ ವೇಳೆಯದು. ರೈಲನ್ನು ಎಷ್ಟು ಬಡಿದರು ಇವರ ನಿಶ್ಚಯದಂತೆ ಕಂಬಿಯನ್ನು ತೆರೆಯಲಾಗುತ್ತಿರಲಿಲ್ಲ. ಆದರೂ ಅಂತಿಮವಾಗಿ ಸಫಲತೆಯನ್ನು ಕಂಡರು.
ಈ ಕಾರ್ಯದಲ್ಲಿ ಯಶಸ್ಸು ದೊರೆತರೂ ಮುಂದಿನ ದಿನಗಳಲ್ಲಿ ಈ ಕ್ರಾಂತಿಕಾರಿಗಳ ಜೀವನ ಘೋರ ದುರಂತಮಯವೆನಿಸಿತು. ಚಂದ್ರಶೇಖರ್ ಆಜಾದ್ ಇಂಥವರಲ್ಲಿ ಒಬ್ಬರು. ಮರುದಿನ ಲಕ್ನೋದಲ್ಲಿ ಎಲ್ಲೋ ಒಂದೆಡೆ ರಸ್ತೆಯಲ್ಲಿ ಮಲಗಿ ಸಾಗಿದರು. ಬಳಿಕ ವಾರಣಾಸಿ ತಲುಪಿದ ನಂತರ ಅಲ್ಲಿಯೂ ಬೆಂಬಿಡದ ಆರಕ್ಷಕರ ಕಾಟ ಇವರ ಪಾಲಿಗೆ ಒದಗಿ ಬಂತು. ಮುಂದಿನ ದಿನಗಳಲ್ಲಿ ವಾರಣಾಸಿಯಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಅಜಾದರು ಅನಿವಾರ್ಯವಾಗಿ ಝಾನ್ಸಿಯ ಹತ್ತಿರ ಮುಖ ಮಾಡಬೇಕಾಯಿತು. ಅಲ್ಲಿಯೂ ಅವರು ಹರಿಶಂಕರ್ ಎನ್ನುವ ಹೆಸರಿನಲ್ಲಿ ಅಜ್ಞಾತವಾಸದಲ್ಲಿಯೇ ಹಲವು ವರ್ಷಗಳ ಕಾಲ ಮುಂದುವರಿಯಬೇಕಾಯಿತು.
ಜಲ ದಿನಗಳ ಕಾಲವಂತು ಸನ್ಯಾಸಿಯ ವೇಷ ಧರಿಸಿ ಇನ್ನು ಕೆಲ ದಿನಗಳ ಕಾಲ ಸ್ನೇಹಿತರ ಮನೆಯನ್ನು ಅಲೆಯುತ್ತಾ ಹೊತ್ತು ಊಟಕ್ಕೂ ತುಂಡು ಬಟ್ಟೆಗೂ ಅತಿವ ಕಷ್ಟವನ್ನು ಅನುಭವಿಸುತ್ತಾ ಭಾರತಮಾತೆಯ ಜಪದೊಂದಿಗೆ ಗುರಿ ಸಾಧನೆಯ ಅತೀವ ಆಸಕ್ತಿಯೊಂದಿಗೆ ಮುನ್ನುಗ್ಗುತ್ತಾ ಸಾಗಿದರು. ತನ್ನ ಮನೆಗೆ ಒಂದೇ ಒಂದು ಸಲ ಮುಂದಕ್ಕೆ ಭೇಟಿಯಾಗಲು ಸಾಧ್ಯವಾದರೂ ಅಲ್ಲಿಯೂ ಪೊಲೀಸರ ಹಿಂಬಾಲಿಸುವಿಕೆ ಅವರನ್ನು ಬಿಡಲಿಲ್ಲ. ಹಿಂದೊಮ್ಮೆ ತಾನು ಅಜಾದ್ ಆಗಿ ಹುಟ್ಟಿದ್ದೇನೆ ಹಾಗೂ ಅಜಾದ್ ಆಗಿಯೇ ಅಂದರೆ ಸ್ವತಂತ್ರನಾಗಿಯೇ ಇರುತ್ತೇನೆ ಎಂದು ಹೇಳಿದ ಮಾತಿಗೆ ಎಂದಿಗೂ ಮಸಿ ಬಳಿಯಲಿಲ್ಲ ಈ ಅಜಾದರು. ಮುಂದೆಂದು ಪೊಲೀಸರ ಅತಿಥಿ ಆಗದೆ ಅಪ್ರತಿಮ ದೇಶಭಕ್ತಿಯೊಂದಿಗೆ ಸಾಗಿದ ಇವರ ಜೀವನದಲ್ಲಿ ಕಾಕೋರಿ ದುರಂತ ಒಂದು ದುರಂತವೇ ಆಗಿ ಉಳಿದಿತ್ತು. ಅವರ ಅನಿವಾರ್ಯತೆಯ ಅಜ್ಞಾತವಾಸವು ಭಾರತಮಾತೆಯ ಈ ವೀರಪುತ್ರನ ವೀರತಾ ಅಭಿವ್ಯಕ್ತಿಗೆ ತೊಡಕಾಗಿಯೇ ನಿಂತಿತ್ತು. ಕೊನೆಯದೊಂದು ದಿನ ಸ್ವಪಕ್ಷೀಯರಿಂದಲೇ ಸ್ವ ಪ್ರಾಣಾರ್ಪಣೆಗೆ ಮುಂದಾಗಬೇಕಾದ ಪರಿಸ್ಥಿತಿಯನ್ನು ತಂದದಗಿದ್ದರ ಮೂಲ ಕಾಕೋರಿ ದುರಂತವೇ ಎಂದರೂ ತಪ್ಪಾಗಲಾರದು.
- ಅಭಿಜ್ಞಾ ಉಪಾಧ್ಯಾಯ
ಇತಿಹಾಸ ಪ್ರಾಧ್ಯಾಪಕಿ
ಎಸ್.ಡಿ.ಎಂ. ಕಾಲೇಜು, (ಸ್ವಾಯತ್ತ) ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ