ಕೊಳ್ಳುಬಾಕ ಸಂಸ್ಕೃತಿ ನಮಗೆ ಅನಿವಾರ್ಯವೇ?

Upayuktha
0


ಒಂದು ದಿನ ಸಪತ್ನೀಕನಾಗಿ ಪೇಟೆಯಲ್ಲಿ ಹೋಗುತ್ತಿದ್ದೆ. ನನ್ನ ಪತ್ನಿಯ ಸ್ನೇಹಿತರೊಬ್ಬರು ಸಿಕ್ಕಿದರು. ಪ್ರಸಿದ್ದ ಬಟ್ಟೆ ಅಂಗಡಿಯಲ್ಲಿ ದರ ಕಡಿತದ ಮಾರಾಟ (ಡಿಸ್ಕೌಂಟ್ ಸೇಲ್) ಇದೆ ನೀವು ಹೋಗಲಿಲ್ಲವೇ?ಪ್ರಶ್ನೆ. ಇಲ್ಲ ಎಂದಳು ನನ್ನಾಕೆ . ನಾನು ನಿನ್ನೆ ಹೋಗಿದ್ದೆ, ತುಂಬಾ ಸೀರೆಗಳು ಇವೆ. ಯಾವುದು ತೆಗೆಯುವುದು ಬಿಡುವುದು ಗೊತ್ತಾಗುವುದಿಲ್ಲ 5 ಸೀರೆ ತೆಗೆದೆ. ಕಳೆದ ವರ್ಷವೂ  ನಾನು ತೆಗೆದಿದ್ದೆ. ಪ್ರಶ್ನೆ ಮುಗಿಯುವುದರೊಳಗೆ ಹೀಗೆ ಉತ್ತರವು ಬಂದಿತ್ತು.


ದಂಪತಿಗಳಿಗೆ ಕೈತುಂಬಾ ಸಂಪಾದನೆ, ಚಿಕ್ಕಮಗು. ಮಗುವನ್ನು ರಂಜಿಸಲು ಆಗಾಗ ಆಟಿಕೆಗಳ ಆಗಮನ ಮನೆಗೆ. ಮನೆಯಲ್ಲಿ ಎಲ್ಲಿ ನೋಡಿದರೂ ಆಟಿಕೆಗಳ ಸಾಮ್ರಾಜ್ಯವೇ. ಹೊಸತು ಬಂದಾಗ ಒಂದು ದಿನ ಆಡಿಯೋ, ಕುಟ್ಟಿ ಮುರಿದೋ ಸಂತೋಷ ಪಡುವ  ಮಗು ಮರುದಿನಕ್ಕೆ ಹೊಸತಕ್ಕೆ ಬೇಡಿಕೆ. ಹೀಗೆ ಬಂದುದಕ್ಕೆ ಲೆಕ್ಕವಿಟ್ಟವರಿಲ್ಲ.


ನಾಲ್ಕಾರು ದಿನ ಬಳಸಿದಾಗ ಕಾಲಿನ ಪಾದರಕ್ಷೆ ಮಾಸುವುದು ಸಹಜ.ಹಾಗಾಗಿ ಆಗಾಗ ಪಾದರಕ್ಷೆಗಳ ಬದಲಾವಣೆ.  ಉಡುವ ತೊಡುಗೆಗೆ ಹೊಂದುವಂತಹ ಪಾದರಕ್ಷೆಗಳು, ಬೂಟುಗಳು ಚಪ್ಪಲಿಗಳು ಕೋಟುಗಳು ಹೀಗೆ ನಾನಾ ವೈವಿಧ್ಯಗಳು.


ಮನೆಯೊಂದು ಹೊಸತು ಆದಾಗ ಅಲ್ಲೊಂದು ಪ್ರದರ್ಶನ ಕವಾಟು ( ಶೋ ಕೇಸ್) ಆಗಾಗ ಅಲಂಕಾರಿಕ ವಸ್ತುಗಳ ಸಂಗ್ರಹ. ನೋಡಿದ್ದನ್ನೇ ನೋಡುವಾಗ ಮನಸ್ಸಿಗೆ ಬೇಜಾರು. ಧೂಳು ಕುಳಿತು ಮಾಸಿದಂತೆ ಅದನ್ನು ತೆಗೆದು ಬಿಸಾಡಿ ಇನ್ನೊಂದರ ಪ್ರದರ್ಶನ.


ಸಂಚಾರ ವಾಣಿಯೊಂದನ್ನು (ಮೊಬೈಲ್) ತೆಗೆದು ನಾಲ್ಕಾರು ತಿಂಗಳಾಗುತ್ತಿದ್ದಂತೆ, ಹೊಸ ನಮೂನೆ ಬಂದಾಗ ಕೈಯಲ್ಲಿದ್ದದ್ದು ಹಳತಾದಂತೆ ಗೋಚರಿಸುವುದು.

 

ಹೀಗೆ ಅನೇಕ ವಸ್ತುಗಳು ನಮಗೆ ಬೇಕಾಗಿಯೋ ಬೇಡವಾಗಿಯೋ ನಮ್ಮೆಲ್ಲರ ಮನೆಗಳಿಗೆ ಬರುತ್ತಿದೆ. ಇಂದು ಅವರವರ ಆರ್ಥಿಕ ಶಕ್ತಿಯನ್ನು ಮೀರಿ ಕೊಳ್ಳುಬಾಕ ಸಂಸ್ಕೃತಿಯ ಕಡೆಗೆ ನಾವಿಂದು ಆಕರ್ಷಿತರಾಗುತ್ತಿದ್ದೇವೆ. ಅದರ ಪರಿಣಾಮವಾಗಿ ನಮಗೆ ಬೇಡದ ವಸ್ತುಗಳ ನಿರ್ವಹಣೆ ಇಂದು ಸಾಮಾಜಿಕ ಸಮಸ್ಯೆಯಾಗಿ ಕಾಡುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳಂತೂ ಮಣ್ಣಿನಲ್ಲಿ ಮಣ್ಣಾಗದೆ ಜಲಮೂಲಗಳನ್ನು ಮಣ್ಣನ್ನು ನಾಶ ಮಾಡ ಹೊರಟಿದೆ. ಪ್ರಾಕೃತಿಕ ಸಂಪತ್ತು ನಮ್ಮ ಪೀಳಿಗೆಗೂ ಅಗತ್ಯ ಎಂಬುದು ನಮಗೆ ಮರೆತೇ ಹೋಗಿದೆ.


ಭಾರತೀಯ ಸಂಸ್ಕೃತಿಯಲ್ಲಿ ಬಳಸಿ ಎಸೆಯುವ ಮನೋಭಾವವೇ ಇರಲಿಲ್ಲ. ತೊಡುಗೆಗಳನ್ನಾಗಲಿ, ಚಪ್ಪಲಿಯನ್ನಾಗಲಿ ಹರಿದಲ್ಲಿ ಒಂದಷ್ಟು ಹೊಲಿಗೆ ಹಾಕಿ ಮತ್ತೆ ಮತ್ತೆ ಅದನ್ನೇ ಬಳಸುತ್ತಿದ್ದರು. ಹರಿದ ವಸ್ತ್ರಗಳು,  ಮಕ್ಕಳನ್ನು ಮಲಗಿಸುವ ಬಟ್ಟೆಗಳಾಗಿ, ಕೌಪೀನವಾಗಿ, ನೆಲ ಒರೆಸುದಕ್ಕಾಗಿ ಬಳಕೆಯಾಗಿ ನಂತರ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತಿತ್ತು. ಆದರೆ ನಾವಿಂದು ಬಳಸುವ ವಸ್ತ್ರಗಳು ಮರುಬಳಕೆಗೆ ಯೋಗ್ಯವಿಲ್ಲದೆ ಪ್ರಕೃತಿಗೆ ಭಾರವಾಗುತ್ತಿದೆ. ನೆಲ ಒರೆಸುವುದಕ್ಕೂ ನಾವು ಮತ್ತೆ ಪೇಟೆಯನ್ನು ಅವಲಂಬಿಸುವಂತಾಗಿದೆ.


ಹುಟ್ಟಿದ ಮನುಷ್ಯನೊಬ್ಬ ಸಾರ್ಥಕ ಬಾಳನ್ನು ಬಾಳದೆ ಅಕಾಲಿಕ ಮರಣವನ್ನಪ್ಪಿದ್ದರೆ, ಇಲ್ಲ ಆತ್ಮಹತ್ಯೆಗೈದಿದ್ದರೆ,  ಏನು ಅನ್ಯಾಯವಾಗುವುದೋ ಅಂತಹುದೇ ಅನ್ಯಾಯ ಇಂದು ಪ್ರತಿಯೊಂದು ವಸ್ತುವಿನಲ್ಲಿ ನಾವು ಕಾಣುತ್ತಿದ್ದೇವೆ.


ವಸ್ತುವೊಂದು ಬೇಕು ಅನ್ನಿಸಿದಾಗ, ಆ ವಸ್ತು ನಮಗೆ ಅನಿವಾರ್ಯವೇ? ಎಂದು ನಾವು ಆರು ತಿಂಗಳಿಂದ ಒಂದು ವರ್ಷದವರೆಗೆ ಪ್ರಶ್ನೆ ಮಾಡಿದಾಗ ನಮಗೆ ಅದು ಬೇಕೇ ಬೇಡವೇ ಎಂದು ಅರ್ಥ ಆಗುವುದು.


ಕೊಳ್ಳುಬಾಕ ಸಂಸ್ಕೃತಿಯಿಂದ ಪ್ರಕೃತಿ ಪೂರಕದೆಡೆಗೆ ಸಾಗೋಣ.  ಪ್ರಕೃತಿಯನ್ನು ಉಳಿಸೋಣ. ಪ್ರಕೃತಿಯ ಸಂಪತ್ತನ್ನು ಮುಂದಿನ ಪೀಳಿಗೆಗೆ ಕಾಪಿಡೋಣ.


- ಎ.ಪಿ. ಸದಾಶಿವ ಮರಿಕೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top