ಮಾನವನ ದುರಾಸೆಯಿಂದಾಗಿ ಪರಿಸರದ ಮೇಲೆ ಅತ್ಯಾಚಾರವಾಗುತ್ತಿದೆ: ಜಗದೀಶ್ ಪ್ರಸಾದ್

Upayuktha
0


ಉಜಿರೆ: ಬಹಳ ವಿದ್ಯಾವಂತರಾಗಿರುವ ಇಂದಿನ ಪೀಳಿಗೆಯು ಕೃಷಿಯ ಸಂಬಂಧಿತ ವಿಷಯದಲ್ಲಿ ರಾಸಾಯನಿಕ ಔಷಧಿ ಸಿಂಪಡಿಸುತಿದ್ದಾರೆ. ಈ ರೀತಿಯ ಅತಿಯಾಸೆಯಿಂದಾಗಿ ಸತತವಾಗಿ ಪರಿಸರದ ಮೇಲೆ ಅತ್ಯಾಚಾರವಾಗುತ್ತಿದೆ. ಮನುಷ್ಯನ ಆಸೆಗೆ ಪರಿಸರ ಬಲಿಯಾಗುತ್ತಿದೆ ಎಂದು ಉಜಿರೆಯ ಸಿವಿಲ್ ಇಂಜಿನಿಯರ್ ಜಗದೀಶ್ ಪ್ರಸಾದ್ ಅವರು ಹೇಳಿದರು.



ಉಜಿರೆ ಕಾಲೇಜಿನಲ್ಲಿ ಜು.30 ರಂದು ಅವರು ಸಸ್ಯಶಾಸ್ತ್ರ ವಿಭಾಗದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಮತ್ತು ಸಸ್ಯಸೌರಭ ಹಾಗೂ ಇಕೋ ಕ್ಲಬ್ ಅನ್ನು ಉದ್ಘಾಟಿಸಿ ಮಾತನಾಡಿದರು.


ಹವಾಮಾನದಲ್ಲಿ ಏರಿಳಿತಗಳು ಏಕೆ ಆಗುತ್ತವೆ ಎಂದು ಸಂಶೋಧಿಸಿದಾಗ ರಾಸಾಯನಿಕಗಳನ್ನು ಭೂಮಿಗೆ ಸಿಂಪಡಿಸುವುದರಿಂದ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುವುದರಿಂದ ಹವಾಮಾನದಲ್ಲಿ ಏರಿಳಿತಗಳಾಗುತ್ತವೆ.ತೋಟಗಳಲ್ಲಿ ಸಿಂಪಡಿಸಿದ ರಾಸಾಯನಿಕಗಳು ಮಳೆ ಬಂದಾಗ ನೀರಿನೊಂದಿಗೆ ಅಂತರ್ಜಲಕ್ಕೇ ಸೇರಿ ಪುನಃ ಅದೇ ನೀರನ್ನು ನಾವು ಕುಡಿಯುವುದರಿಂದ ಜನರು ಕ್ರಮೇಣ ಜೀವ ಕಳೆದುಕೊಳ್ಳುತ್ತಿದ್ದಾರೆ. ಬಹಳ ಹಣ ಮಾಡಬೇಕು ಎಂಬ ಆಸೆಗೆ ಬಿದ್ದು ಭೂಮಿಯ ಫಲವತ್ತತೆಯನ್ನು ಹಾಳು ಮಾಡುತ್ತಿದ್ದೇವೆ. ಸಾವಯವ ಕೃಷಿಗೆ ಸಂಬಂಧಿಸಿದ ಹಲವಾರು ಯೋಜನೆಗಳು ಜಾರಿಗೆ ಬಂದರೂ ಸಹ ಯಾವ ರೈತರೂ ಅದನ್ನು ಉಪಯೋಗ ಮಾಡುತ್ತಿಲ್ಲ. ಎಲ್ಲರೂ ರಾಸಾಯನಿಕ ಗೊಬ್ಬರದ ಮೊರೆ ಹೋಗುವ ಪರಿಸ್ಥಿತಿ ಬಂದಿದೆ. ಪರಿಸರಕ್ಕೆ ಇನ್ನೊಂದು ಸವಾಲಂತೆ ಇರುವುದು ಎಂದರೆ ಪ್ಲಾಸ್ಟಿಕ್. ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡಲು ಎಷ್ಟೇ ಕ್ರಮಗಳು ಬಂದರೂ ಅದನ್ನು ಯಾರೂ ಸಹ ಪಾಲಿಸುತ್ತಿಲ್ಲ. ಯುವಜನತೆಯಾದ ನೀವುಗಳು ಅದನ್ನು ಪಾಲಿಸಬೇಕು ಎಂದು ಅವರು ಹೇಳಿದರು.


"ಇವತ್ತಿನ ಯುವಸಮಾಜ ನಮ್ಮ ದೇಶದ ರಾಯಭಾರಿ ಇದ್ದಂತೆ. ದೇಶದ ಗತಿಯನ್ನು ಉತ್ತುಂಗಕ್ಕೆ ಏರಿಸುವ ಶಕ್ತಿ ಯುವಜನತೆಗಿದೆ. ದೇಶದ ಹಾಗೂ ಪ್ರಪಂಚದ ಭವಿಷ್ಯವನ್ನು ಬದಲಾಯಿಸಲು ಸಾಧ್ಯ ಎಂದರೆ ಅದು ನಿಮ್ಮಂತಹ ಯುವ ಜನತೆಯಿಂದ ಮಾತ್ರ.ದೇಶವನ್ನು ಭದ್ರಗೊಳಿಸುವ ಶಕ್ತಿ ನಿಮ್ಮಲ್ಲಿ ಇದೇ. ಜೀವನದಲ್ಲಿ ಸೋಲುವುದು ಸಹಜ, ಸೋಲು ಬಂದಾಗ ನಾವು ನಮ್ಮ ಅಂತ್ಯವೇ ಪರಿಹಾರ ಎಂದು ನಿರ್ಧರಿಸಬಾರದು. ಎಂದಿಗೂ ಕಷ್ಟಗಳನ್ನು ಎದುರಿಸಬೇಕು" ಎಂದು ತಿಳಿಸಿದರು.


ಇದೇ ಸಂದರ್ಭ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಕು. ಶಕುಂತಲಾ ಅವರು ಮಾತನಾಡಿ, ವಿಭಾಗದ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡರು ಹಾಗೂ ಹೊಸ ವಿದ್ಯಾರ್ಥಿಗಳಿಗೆ ಹುರುಪು ತುಂಬಿದರು.


ಕಾರ್ಯಕ್ರಮದಲ್ಲಿ ವಿಭಾಗದ ಭಿತ್ತಿಪತ್ರಿಕೆಯಾದ 'ಸಸ್ಯಸೌರಭ'ವನ್ನು ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣವಚನವನ್ನು ಬೋಧಿಸಲಾಯಿತು.


ಸತತ 34 ವರ್ಷಗಳಿಂದ ಸಕ್ರಿಯವಾಗಿ ವಿಭಾಗದ ಸಹಾಯಕರಾಗಿ ಸೇವೆ ಸಲ್ಲಿಸಿದ ಜಿನ್ನಪ್ಪ ಅವರು ನಿವೃತ್ತಿ ಹೊಂದಿದ್ದು ಅವರನ್ನು ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ವಿಜ್ಞಾನ ನಿಕಾಯದ ಡೀನ್ ಡಾ. ಸವಿತಾ ರಾವ್ ಹಾಗೂ ಪ್ರತಿನಿಧಿಗಳು ಮತ್ತು ವಿಭಾಗದ ಪ್ರಾಧ್ಯಾಪಕರಾದ ಶ್ರೀ ಅಭಿಲಾಷ್ ಕೆ. ಎಸ್., ಶ್ರೀಮತಿ ಮಂಜುಶ್ರೀ, ಶ್ರೀಮತಿ ಭವ್ಯ, ಮೇಘ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಪದ್ಮಶ್ರೀ ಸ್ವಾಗತಿಸಿ, ಯುವಿಕಾ ವಂದಿಸಿ, ಚಿತ್ಕಲಾ ಹಾಗೂ ತಂಡದವರು ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ನಿಕಿತಾ ಹಾಗೂ ಜ್ಯೋತಿಕಾ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top