ದಾವಣಗೆರೆ: ಕರ್ನಾಟಕ ಸುಗಮ ಸಂಗೀತ ಪರಿಷತ್ತು ವತಿಯಿಂದ ಆ. 2 ಮತ್ತು 3ರಂದು ಶನಿವಾರ, ಭಾನುವಾರ ಮೈಸೂರಿನ ಕಲಾಮಂದಿರ ಆವರಣದಲ್ಲಿ 19ನೇ ಸುಗಮ ಸಂಗೀತ ಸಮ್ಮೇಳನ' ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಗಾಯಕ ನಗರ ಶ್ರೀನಿವಾಸ ಉಡುಪ ಅವರನ್ನು ಆಯ್ಕೆ ಮಾಡಲಾಗಿದೆ. ನಾಡಿನ ನಾನಾ ಭಾಗಗಳಿಂದ 300ಕ್ಕೂ ಅಧಿಕ ಸುಗಮ ಸಂಗೀತ ಕಲಾವಿದರು, ಕವಿಗಳು ಭಾಗವಹಿಸಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸುಗಮ ಸಂಗೀತ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ.ವಿ. ಪ್ರವೀಣ್ ತಿಳಿಸಿದ್ದಾರೆ.
2023 ಮತ್ತು 2024ನೇ ಸಾಲಿನ 'ಕಾವ್ಯಶ್ರೀ' ಮತ್ತು 'ಭಾವಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 'ಕಾವ್ಯಶ್ರೀ' ಪ್ರಶಸ್ತಿಗೆ ಕವಿಗಳಾದ ಬಿ.ಆರ್. ಲಕ್ಷ್ಮಣರಾವ್, ಡಾ. ನಾ. ದಾಮೋದರ ಶೆಟ್ಟಿ ಹಾಗೂ 'ಭಾವಶ್ರೀ' ಪ್ರಶಸ್ತಿಗೆ ಗಾಯಕಿಯರಾದ ರತ್ನಮಾಲಾ ಪ್ರಕಾಶ್ ಮತ್ತು ಕೆ.ಎಸ್. ಸುರೇಖಾ ಅವರನ್ನು ಆಯ್ಕೆ ಮಾಡಲಾಗಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಆ. 2ರಂದು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಪರಿಷತ್ತು ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಆ. 3ರಂದು ಸಮಾರೋಪದಲ್ಲಿ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಹಿರಿಯ ಸಾಹಿತಿಗಳಾದ ಡಾ. ಹಂಪ ನಾಗರಾಜಯ್ಯ, ಸಿ.ಪಿ. ಕೃಷ್ಣಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪರಿಷತ್ತಿನ ಗೌರವ ಖಜಾಂಚಿ ಪ್ರಶಾಂತ ಉಡುಪ ಪ್ರಕಟಿಸಿದ್ದಾರೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಗೀತೋತ್ಸವ ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ದಾವಣಗೆರೆ ಜಿಲ್ಲಾಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ