ಅವಲೋಕನ: ಭಾಷೆಯ ಉಳಿವಿಗೆ ನುಡಿದೇಣಿಗೆ ಹಬ್ಬ

Upayuktha
0


ಸಂವಹನ ಮಾಡುವಾಗ ಅಳಿಯುತ್ತಿರುವ ಮಾತೃಭಾಷೆಯನ್ನು ಕಂಡು ನಮ್ಮ ಶ್ರೀ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳವರು ಭಾಷೆಯ ಉಳಿವಿನ ದೃಷ್ಟಿಯಿಂದ ಈ ವರ್ಷದ ಚಾತುರ್ಮಾಸ್ಯಕ್ಕೆ ಸ್ವಭಾಷಾಚಾತುರ್ಮಾಸ್ಯ ಎಂದು ಹೆಸರಿಟ್ಟರು. ಆಡುವ ಮಾತೃಭಾಷೆ ಯಾವುದೇ ಇರಲಿ ಅದನ್ನು ಇನ್ನಿತರ ಭಾಷೆ ಬಳಸದೆ ಮಾತೃಭಾಷೆಯಲ್ಲಿಯೇ ಸುಲಲಿತವಾಗಿ ಮಾತನಾಡುವಂತೆ ಕರೆಕೊಟ್ಟರು.


ಅದರ ಮುಂದಿನ ಹಂತವೇ ಇಂದು ಮಾಣಿ ಮಠದಲ್ಲಿ ನಡೆದ ನುಡಿದೇಣಿಗೆ ಹಬ್ಬ. ನಮ್ಮ ಹವಿಗನ್ನಡದಲ್ಲಾಗಲಿ, ತಿಳಿಗನ್ನಡದಲ್ಲಾಗಲಿ ನಮ್ಮ ಅರಿವಿಗೇ ಬಾರದಂತೆ ಆಂಗ್ಲ ಪದಗಳು ಭಾಷೆಯನ್ನು ಹೇಗೆ ಕೊಲ್ಲುತ್ತದೆ ಮತ್ತು ಅದನ್ನು ಸರಿಪಡಿಸಲು ನಾವೆಷ್ಟು ಪ್ರಯತ್ನಿಸಬೇಕು ಎಂಬುದಕ್ಕೆ ಇಂದು ಮಾಣಿಮಠದಲ್ಲಿ ನಡೆದ *ನುಡಿದೇಣಿಗೆ ಕಾರ್ಯಕ್ರಮ ಸಾಕ್ಷಿಯಾಯಿತು.


ಇಂದು ನಡೆದ ಸುಂದರ ಕಾರ್ಯಕ್ರಮವನ್ನು ಉದ್ಘಾಟಿಸಿದವರು ಕನ್ನಡ ಮತ್ತು ಸಂಸ್ಕೃತದಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿರುವ ಶ್ರೀಮಾನ್ ಪಾದೇಕಲ್ಲು ವಿಷ್ಣು ಭಟ್ಟರವರು. ಹಿತನುಡಿಗಳನ್ನು ನುಡಿದವರು ಹವಿಗನ್ನಡದ ನಿಘಂಟನ್ನು ಸಂಪಾದಿಸಿಕೊಟ್ಟ ಮತ್ತು ಕನ್ನಡ ವ್ಯಾಕರಣ, ಛಂದಸ್ಸು ಈ ಕುರಿತಾಗಿ ಅಘಾದ ಕೆಲಸ ಮಾಡಿದ ಮೇರು ವ್ಯಕ್ತಿತ್ವ ಶ್ರೀಮಾನ್ ವೆಂಕಪ್ಪ ಭಟ್ ಕುಳಮರ್ವ ಅವರು. ಈ ಇಬ್ಬರು ಧೀಮಂತ ವ್ಯಕ್ತಿತ್ವಗಳಿಗೇ ಮಾತಿನ ಓಘದಲ್ಲಿ ಕೆಲವೊಂದು ಆಂಗ್ಲ ಪದಗಳು ನುಸುಳಿಕೊಂಡು ಕ್ಷಮಿಸಿ ಎಂದು ಹೇಳಬೇಕಾಯಿತು. ನಮ್ಮ ಅರಿವಿಗೇ ಬಾರದಂತೆ ಆಂಗ್ಲ ಪದಗಳನ್ನು ಕನ್ನಡಿೀಕರಿಸಿದ್ದರ ಪರಿಣಾಮವಿದು. ಆಂಗ್ಲ ಭಾಷಾ ಮಾಧ್ಯಮ ಹೆಚ್ಚು ಪ್ರಚಲಿತವಿಲ್ಲದ ಕಾಲದಲ್ಲಿ ಸಂವಹನ ಎಷ್ಟು ಶುದ್ಧ ಕನ್ನಡದಲ್ಲಿ ನಡೆಯುತ್ತಿತ್ತು ಮತ್ತು ಈಗ ಹೇಗಾಗಿದೆ?ಎಂದು ಹೋಲಿಸಿಕೊಂಡಾಗ ಗುರುಗಳು ಕೊಟ್ಟ ಮಾರ್ಗದರ್ಶನ ಎಷ್ಟೊಂದು ಸಕಾಲಿಕ ಎಂಬುದರ ಅರಿವಾಗುತ್ತದೆ.


ಈ ಹಿನ್ನೆಲೆಯಲ್ಲಿ ನಮ್ಮೊಳಗಿನ ಭಾಷಾ ಅಭಿವೃದ್ಧಿಯ ದೃಷ್ಟಿಯಿಂದ, ನಮ್ಮ ಅರಿವಿನ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ, ಸಾಧ್ಯವಾದಷ್ಟು ಶುದ್ಧ ಕನ್ನಡದಲ್ಲಿ ಮಾತನಾಡುವಂತೆ ಮತ್ತು ಕವಿತೆ, ಲೇಖನ, ಲಲಿತ ಪ್ರಬಂಧಗಳು, ಹಾಸ್ಯ ನಾಟಕಗಳು, ಚುಟುಕುಗಳು, ಇತ್ಯಾದಿಗಳನ್ನು ರಚಿಸಲು ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲು ಮುಳ್ಳೇರಿಯ ಹವ್ಯಕ ಮಂಡಲ ಮತ್ತು ಇನ್ನಿತರ ಮಂಡಲಗಳು  ಕರೆಕೊಟ್ಟಿತು.


ಓ! ಓ! ಅದೆಷ್ಟು ಪ್ರತಿಭೆಗಳು ಸ್ಪಂದಿಸಿದವು. ನಿರಂತರ ಸ್ವಭಾಷೆಯಲ್ಲಿ (ಹವಿಗನ್ನಡ ಮತ್ತು ಕನ್ನಡ) ಭಾಷೆಯ ಎಲ್ಲಾ ಪ್ರಕಾರಗಳಲ್ಲಿ ಬರಹಗಳು ಹೊರಬಂದವು. ಅದನ್ನು ಪ್ರಸ್ತುತಿ ಪಡಿಸಿದ್ದು ಇಂದು ಮಾಣಿ ಮಠದಲ್ಲಿ.


ನಾಲ್ಕೈದು ವರ್ಷದ ಎಳೆಯರಿಂದ ತೊಡಗಿ 75 ವರ್ಷದ ಹಿರಿಯ ನಾಗರೀಕರವರೆಗೆ (ಮುದುಕ ಅಥವಾ ವೃದ್ಧ ಎಂಬುದಕ್ಕೆ ಕನ್ನಡದ ಮರ್ಯಾದೆ ಶಬ್ದ) ನುಡಿದೇಣಿಗೆ ಸಮರ್ಪಿಸಿದ್ದು ವಿಶೇಷವಾಗಿತ್ತು. ಸುಪ್ತವಾಗಿದ್ದ ಅನೇಕ ಪ್ರತಿಭೆಗಳು ಪ್ರಕಾಶಕ್ಕೆ ಬಂದದ್ದು ಒಂದು ವಿಶೇಷವಾದರೆ, ಗುರುಗಳು ಕೊಟ್ಟ ಕರೆಗೆ ಶಿಷ್ಯ ವರ್ಗದ ಸ್ಪಂದನ ಅದ್ಭುತವೇ ಸರಿ.


ಮರೆತು ಹೋಗುತ್ತಿದ್ದ ಅನೇಕ ಹವಿಗನ್ನಡದ ಶಬ್ದಗಳು ಇಂದು ಸಾಕಷ್ಟು ಪ್ರಚಾರಕ್ಕೆ ಬಂತು. ಎಲ್ಲರೂ ಮಾತನಾಡುವಾಗ ನುಸುಳುವ ಆಂಗ್ಲ ಪದಗಳು ಅನೇಕ ರಸಮಯ ಘಳಿಗೆಗಳಿಗೆ ಸಾಕ್ಷಿಯಾಗಿತ್ತು.


ಮನೆ ಮನೆಗಳಲ್ಲಿ ಕನ್ನಡ ಮೊಳಗಲಿ, ಬೆಳಗಲಿ ಎಂಬುದೇ ಎಲ್ಲರ ಹಾರೈಕೆ.


ಯತನ ಕರ್ತವ್ಯವದು, ನಮಗೆ ವಿದ್ಯಾಭ್ಯಾಸ,

ಹಿತ ಪರಿಜ್ಞಾನ ಯತ್ನಾನುಭವ ಫಲಿತ,

ಸತತ ಯತ್ನದಿನಾತ್ಮಶಕ್ತಿ ಪರಿವರ್ಧಿಫುದು,

ಯತನ ಜೀವನ ಶಿಕ್ಷೆ ಮಂಕುತಿಮ್ಮ.


ಪ್ರಯತ್ನವೇ ನಿನಗೆ ಕರ್ತವ್ಯ ಮತ್ತು ಕಲಿಕೆಯ ದಾರಿ. ಹಿತವೆನಿಸಬಲ್ಲ ಪರಿಜ್ಞಾನವೇ ಯತ್ನದಿಂದ ಆಗುವ ಪ್ರಯೋಜನ ಮತ್ತು ಆತ್ಮಶಕ್ತಿಯ ವರ್ಧನೆ. ಸತತ ಯತ್ನವೇ ಜೀವನದ ಶಿಕ್ಷಣ ಅಂತ  ಕಗ್ಗದ ಕವಿಯ ಮಾತಿನಂತೆ ಅಚ್ಚ ಕನ್ನಡದ ಅಥವಾ ಸ್ವಭಾಷೆಯ ನುಡಿಯತ್ತ  ನಮ್ಮ ಪ್ರಯತ್ನಗಳಿರಲಿ.

  

ಶುದ್ಧ ಆಂಗ್ಲ ಭಾಷೆಯಲ್ಲಿ ಮಾತನಾಡುವಾಗ ಕನ್ನಡ ಅಥವಾ ಇನ್ನಿತರ ಭಾಷೆ ಹೇಗೆ ನುಸುಳುವುದಿಲ್ಲವೋ, ಅಂತೆಯೇ ಕನ್ನಡದಲ್ಲಿ ಮಾತನಾಡುವಾಗ ಆಂಗ್ಲ ಶಬ್ದಗಳು ನುಸುಳದೇ (ಭಾಷೆ ಕಂಗ್ಲಿಷ್ ಆಗದೆ) ಅಚ್ಚ ಕನ್ನಡವೇ ಇರಲಿ ಅಥವಾ ಇನ್ನಿತರ ಭಾರತೀಯ ಭಾಷೆಗಳೇ ಇರಲಿ ಎಂಬುದರ ಚಿಕ್ಕ ಪ್ರಯತ್ನ ಇಂದಿನದಾಗಿತ್ತು.


- ಎ. ಪಿ. ಸದಾಶಿವ. ಮರಿಕೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top