ಉಜಿರೆ ಎಸ್‌ಡಿಎಂ ಡಿ.ಇಎಲ್.ಇಡಿ. ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ
ಉಜಿರೆ: ಮಂಜುನಾಥೇಶ್ವರ ಶಿಕ್ಷಕರ ತರಬೇತಿ (ಡಿ.ಇಎಲ್.ಇಡಿ.) ಸಂಸ್ಥೆಯಲ್ಲಿ ಇಂದು (ಜು.26) ಕಾರ್ಗಿಲ್ ವಿಜಯ ದಿವಸ್ ಆಚರಣೆ ನಡೆಯಿತು.
ಮುಖ್ಯ ಅತಿಥಿ, ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಎನ್‌ಸಿಸಿ ಅಧಿಕಾರಿ ಡಾ. ಭಾನುಪ್ರಕಾಶ್ ಬಿ ಇ ಅವರು ಮಾತನಾಡಿದರು. “ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರು ಹುತಾತ್ಮರಾದ ಕಾರಣ ಭಾರತವು ಈ ದಿನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಅವರ ಬಲಿದಾನದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಈ ಯುದ್ಧವು 1999 ಮೇ ತಿಂಗಳಿನಲ್ಲಿ ಆರಂಭವಾಗಿ ಜುಲೈ 26ರವರೆಗೆ ನಡೆದಿದ್ದು, ಯುದ್ಧದಲ್ಲಿ ನಮ್ಮ ದೇಶದ ಗೆಲುವನ್ನು ಸಂಭ್ರಮಿಸುವ ದಿನವೂ ಇದಾಗಿದೆ. ದೇಶದಾದ್ಯಂತ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಗುತ್ತಿದ್ದು, ಈ ವರ್ಷ ಕಾರ್ಗಿಲ್ ವಿಜಯದ 26ನೇ ವರ್ಷವನ್ನೂ ಆಚರಿಸಲಾಗುತ್ತಿದೆ” ಎಂದರು.
“ದೇಶಪ್ರೇಮದೊಂದಿಗೆ ತ್ಯಾಗ ಪ್ರಾಮಾಣಿಕತೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಮಾದರಿ ಶಿಕ್ಷಕರಾಗಿ” ಎಂದು ಅವರು ಶುಭ ಹಾರೈಸಿದರು.
ಪ್ರಾಂಶುಪಾಲ ಡಾ. ಸಂತೋಷ್ ಸಲ್ಡಾನ್ಹ ಅಧ್ಯಕ್ಷತೆ ವಹಿಸಿ ಮಾತನಾಡಿ, “ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರಯೋಧರು ಸದೆಬಡಿದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ಆ ದಿನವನ್ನು, ಶೌರ್ಯದ ನೆನಪಿಗಾಗಿ, ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸಲಾಗುತ್ತದೆ. ಭವಿಷ್ಯದಲ್ಲಿ ಶಿಕ್ಷಕರಾಗುವ ನೀವೆಲ್ಲರೂ ದೇಶದ ಸೈನಿಕರನ್ನು ನಿರ್ಮಿಸುವಂತವರಾಗಬೇಕು" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಉಪನ್ಯಾಸಕ ಮಂಜು ಆರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಶಿಕ್ಷಣಾರ್ಥಿಗಳಾದ ರಾಹಿಲ ಮತ್ತು ಬಳಗ ಪ್ರಾರ್ಥಿಸಿ, ರಾಹಿಝ ಸ್ವಾಗತಿಸಿ, ಪೂರ್ಣಿಮಾ ವಂದಿಸಿ, ಜಯಶ್ರೀ ವ್ಯಕ್ತಿ ಪರಿಚಯ ಮಾಡಿದರು. ಸಲ್ವ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ