ವಿದ್ಯಾರ್ಥಿ ಜೀವನವನ್ನು ಸಾರ್ಥಕ ಮಾಡಿಕೊಂಡವನೇ ಸಾಧಕ: ಎ.ಎಸ್.ಪಿ ಸುಧಾಕರ್ ನಾಯಕ್

Upayuktha
0


ಉಡುಪಿ: ವಿದ್ಯಾರ್ಥಿ ಜೀವನದಲ್ಲಿಯೇ ಶಿಸ್ತು, ಶ್ರದ್ಧೆ ಮತ್ತು ಚೆನ್ನಾಗಿ ಓದುವ  ಹವ್ಯಾಸಗಳನ್ನು ಬೆಳೆಸಿಕೊಂಡರೆ ಭವಿಷ್ಯದ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ. ವಿದ್ಯಾರ್ಥಿ  ಜೀವನವನ್ನು ಸಾರ್ಥಕ ಮಾಡಿಕೊಂಡವರೇ ನಿಜವಾದ ಸಾಧಕರು ಆಗುತ್ತಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್ ಹೇಳಿದರು.


ಅವರು ಸೋಮವಾರ ನಗರದ ಅಜ್ಜರಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಉಡುಪಿ ಪೊಲೀಸ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಡ್ರಾಯಿಂಗ್ ಕಿಟ್ ಹಾಗೂ ನೀರಿನ ಬಾಟಲ್‍ಗಳನ್ನು ವಿತರಿಸಿ ಮಾತನಾಡುತ್ತಿದ್ದರು.


ವಿದ್ಯಾರ್ಥಿಗಳು ಪರಿಶ್ರಮದಿಂದ ವಿದ್ಯಾಭ್ಯಾಸವನ್ನು ಮಾಡುವುದರೊಂದಿಗೆ ಶಿಕ್ಷಣವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿ, ತಮ್ಮ ಪೋಷಕರಿಗೆ, ಗುರುಹಿರಿಯರಿಗೆ ಒಳ್ಳೆಯ ಹೆಸರನ್ನು ತಂದುಕೊಡುವ ಜೊತೆಗೆ ಸಮಾಜದಲ್ಲಿ ಉತ್ತಮ ಸೇವೆಯನ್ನು ಮಾಡುವುದರೊಂದಿಗೆ ಜೀವನದಲ್ಲಿ ಸಾರ್ಥಕತೆಯನ್ನು ಕಾಣಬೇಕು ಎಂದರು. 


ಸರ್ಕಲ್ ಪೊಲೀಸ್ ಇನ್ಸ್‍ಪೆಕ್ಟರ್ ರಾಮಚಂದ್ರ ನಾಯಕ್ ಮಾತನಾಡಿ, ಶಿಕ್ಷಣಕ್ಕಾಗಿ ವಿವಿಧೆಡೆಯಿಂದ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಶಿಕ್ಷಣದ ಹಾದಿ ಹಿಡಿಯುತ್ತಾರೆ. ಗುರಿ ಸಾಧಿಸುವವರೆಗೆ ಸತತ ಅಧ್ಯಯನ ಮಾಡಬೇಕು. ಬದುಕುವ ಕಲೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಕಲಿಕೆಯ ಜೊತೆಗೆ ಉಳಿಕೆಯ ಕಲೆಯನ್ನು ಅಭ್ಯಾಸ ಮಾಡಿಕೊಂಡಾಗ ಬದುಕು ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದರು.


ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಡ್ರಾಯಿಂಗ್ ಕಿಟ್ ಹಾಗೂ ನೀರಿನ ಬಾಟಲ್‍ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.  


ಕಾರ್ಯಕ್ರಮದಲ್ಲಿ ಡಿವೈಎಸ್‍ಪಿ ಪ್ರಭು ಡಿ.ಟಿ, ನಗರ ಪೊಲೀಸ್ ನಿರೀಕ್ಷಕ ಮಂಜುನಾಥ್ ಬಡಿಗೇರ, ವಿವಿಧ ಠಾಣೆಯ ಪೊಲೀಸ್ ಉಪನಿರೀಕ್ಷಕರುಗಳು, ಶಾಲೆಯ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. 


ಶಾಲೆಯ ಮುಖ್ಯ ಶಿಕ್ಷಕಿ ಉಷಾಕಿರಣ ಸ್ವಾಗತಿಸಿ, ಶಿಕ್ಷಕ ರವೀಂದ್ರ ನಿರೂಪಿಸಿದರು. 



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top