ಬದುಕಿಗೆ ಧರ್ಮದ ತಳಹದಿ ಅಗತ್ಯ: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ಧರ್ಮ ಎನ್ನುವ ತಳಹದಿಯಲ್ಲಿ ಬದುಕು ನಿಂತಿದೆ. ಅರ್ಥ ಮತ್ತು ಕಾಮನೆಗಳಿಗೆ ಧರ್ಮವೇ ತಳಹದಿ. ಮನೆಗೆ ಸುಭದ್ರ ಅಡಿಪಾಯ ಹೇಗೆ ಅಗತ್ಯವೋ ನಮ್ಮ ಬದುಕಿಗೂ ಧರ್ಮದ ತಳಹದಿ ಅಗತ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.


ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಶುಕ್ರವಾರ ಸಿದ್ದಾಪುರ ಮಂಡಲದ ಬಾನ್ಕುಳಿ, ಇಟಗಿ, ದೊಡ್ಮನೆ, ಚಪ್ಪರಮನೆ, ತಾಳಗುಪ್ಪ ಮತ್ತು ಇಡುವಾಣಿ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.


ಗೋಡೆ ಎಂದರೆ ಸಂಪತ್ತು; ಛಾವಣಿ ಎನ್ನುವುದು ಕಾಮನೆಗಳು. ಧರ್ಮದ ತಳಹದಿ ಇದ್ದರೆ ಮಾತ್ರ ಉಳಿದ ಎರಡು ಸಿದ್ಧಿಸುತ್ತವೆ. ಜೀವನದಲ್ಲಿ ತಪ್ಪು ಮಾಡದೇ ಧರ್ಮದ ಬೆಳಕಲ್ಲಿ ಜೀವನ ಮಾಡಬೇಕು ಎಂದು ಸಲಹೆ ಮಾಡಿದರು.


ಸೇವೆ ಎನ್ನುವುದು ಧರ್ಮಸಂಗ್ರಹಕ್ಕೆ ಅವಕಾಶ. ಪೀಠದ ಸೇವೆ ಜನ್ಮ ಜನ್ಮಾಂತರದಲ್ಲಿ ನಿಮ್ಮನ್ನು ಕಾಪಾಡುತ್ತವೆ. ಪುಣ್ಯಸಂಗ್ರಹಕ್ಕೆ ಇಂಥ ಜವಾಬ್ದಾರಿಗಳು ಒಳ್ಳೆಯ ಮಾರ್ಗ. ಸಿಕ್ಕಿದ ಸೇವಾ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಧನ್ಯತೆ ಪಡೆಯಬೇಕು ಎಂದು ಸೂಚಿಸಿದರು.


ವರ್ಷಕಾಲದಲ್ಲಿ ಗುರುದರ್ಶನಾರ್ಥವಾಗಿ, ರಾಮನ ದರ್ಶನಕ್ಕಾಗಿ ಆಗಮಿಸಿದ ಸಮಸ್ತ ಶಿಷ್ಯರ ಮೇಲೆ ಅನುಗ್ರಹದ ಮಳೆ ಸುರಿಯಲಿ ಎಂದು ಹರಸಿದರು.


ಗೋಮಾತೆಯ ಸೇವೆ ಸಮಾಜದ ಪ್ರತಿಯೊಬ್ಬ ಶಿಷ್ಯರ ಕರ್ತವ್ಯ. ಗೋಸ್ವರ್ಗವನ್ನು ಬೆಳೆಸುವುದು ಸಿದ್ದಾಪುರ ಮಂಡಲದ ಸಮಸ್ತ ಶಿಷ್ಯರ ಕರ್ತವ್ಯ ಎಂದರು. ಈ ಬಾರಿಯ ನವರಾತ್ರಿ ಉತ್ಸವ ಸಾಗರದಲ್ಲಿ ನಡೆಯಲಿದ್ದು, ಸಿದ್ದಾಪುರ ಮಂಡಲದ ಜನತೆ ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡು ಆತ್ಮೈಶ್ವರ್ಯ ಪಡೆದುಕೊಳ್ಳಲು ಅವಕಾಶ ಒದಗಿ ಬಂದಿದೆ ಎಂದು ಹೇಳಿದರು.


ಪುಣ್ಯನಿಧಿ ಸಂಪಾದನೆಗೆ ಅನುಷ್ಠಾನದ ಮಾರ್ಗವನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಧರ್ಮಧನವನ್ನು ಅಂತರಂಗದಲ್ಲಿ ಕೂಡಿಟ್ಟುಕೊಳ್ಳಬೇಕು. ಚಾತುರ್ಮಾಸ್ಯ ಇದಕ್ಕೆ ಹೇಳಿ ಮಾಡಿಸಿದ ಸಮಯ. ಸನಾತನ ಸಂಸ್ಕೃತಿಯ ಹಿನ್ನೆಲೆ ಇರುವ, ಶಂಕರಾಚಾರ್ಯರಿಂದ ಸ್ಥಾಪಿತವಾದ ಅವಿಚ್ಛಿನ್ನ ಪರಂಪರೆಯ ಪೀಠದ ಶಿಷ್ಯರಾಗಿ ನಮಗೆ ದೊಡ್ಡ ಹೊಣೆಗಾರಿಕೆ ಇದೆ ಎಂದು ಕಿವಿಮಾತು ಹೇಳಿದರು.


ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಚಾತುರ್ಮಾಸ್ಯ ತಂಡದ ಪ್ರಧಾನ ಸಂಯೋಜಕ ಮಂಜುನಾಥ ಸುವರ್ಣಗದ್ದೆ, ವಿವಿವಿ ಆಡಳಿತಾಧಿಕಾರಿ ಡಾ. ಟಿ.ಜಿ. ಪ್ರಸನ್ನಕುಮಾರ್, ಮುಖ್ಯ ಅಭಿಯಂತರ ವಿಷ್ಣು ಬನಾರಿ ಮತ್ತಿತರರು ಉಪಸ್ಥಿತರಿದ್ದರು. ಚಾತುರ್ಮಾಸ್ಯ ಅಂಗವಾಗಿ ವೇದಮೂರ್ತಿ ಉಂಚಗೇರಿ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಾಮವೇದ ಪಾರಾಯಣ ನಡೆಯುತ್ತಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top