ಬೀದರ್- ಕಲಬುರಗಿ- ಮಂಗಳೂರು ಮಧ್ಯೆ ರೈಲು ಸಂಚಾರ ಆರಂಭಿಸಿ: ಮಾಜಿ ಸಂಸದ ಜಾಧವ್ ಮನವಿ

Chandrashekhara Kulamarva
0

 

ಕಲಬುರಗಿ: ಉತ್ತರ ಕರ್ನಾಟಕ ಮತ್ತು ಕರಾವಳಿಯನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಬೀದರ್ ನಿಂದ ಮಂಗಳೂರು ಮತ್ತು ಉಡುಪಿಗೆ ರೈಲು ಸಂಚಾರ ಕೂಡಲೇ ಆರಂಭಿಸುವಂತೆ ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ಹಾಗೂ ಕಲಬುರಗಿ ಜಿಲ್ಲಾ ಹೋಟೆಲ್ ಅಸೋಶಿಯೇಷನ್ ವತಿಯಿಂದ ಕೇಂದ್ರ ರೈಲ್ವೆ ಸಚಿವರಾದ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.


ಕಲಬುರಗಿ ರೈಲು ನಿಲ್ದಾಣಕ್ಕೆ ಜೂನ್ ಒಂದರಂದು ಭೇಟಿ ನೀಡಿದ ಕೇಂದ್ರ ರೈಲ್ವೆ ಸಚಿವರಾದ ವಿ. ಸೋಮಣ್ಣ ಅವರಿಗೆ ಮನವಿಪತ್ರ ಸಲ್ಲಿಸಿ ಸ್ವಾತಂತ್ರ್ಯ ಗಳಿಸಿ 78 ವರ್ಷವಾದರೂ ಬೀದರ್ ಮತ್ತು ಕಲಬುರಗಿಯಿಂದ ಕರಾವಳಿ ಜಿಲ್ಲೆಗಳಾದ  ಮಂಗಳೂರಿಗೆ ಹಾಗು ಉಡುಪಿಗೆ ನೇರವಾಗಿ ಈ ರೈಲು ಸಂಪರ್ಕದ ಸೌಲಭ್ಯ ಇಲ್ಲದಿರುವುದರಿಂದ ಶೀಘ್ರದಲ್ಲೇ ಉತ್ತರ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳಿಗೆ ರೈಲು ಸಂಚಾರ ಪ್ರಾರಂಭಿಸುವಂತೆ ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ತಿಳಿಸಿದರು.


ಬೀದರ್, ಕಲಬುರಗಿ ಯಾದಗಿರಿ ಮುಂತಾದ ಜಿಲ್ಲೆಗಳಲ್ಲಿ ಕರಾವಳಿಯ ನೂರಾರು ಕುಟುಂಬಗಳು ವಾಸಿಸುತ್ತಿದ್ದು ಉಡುಪಿ ಮಂಗಳೂರಿನಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ತೆರಳುತ್ತಿರುವುದರಿಂದ ಮತ್ತು ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ಭೇಟಿ ನೀಡುತ್ತಿರುವುದರಿಂದ ರೈಲು ಸೇವೆ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಪೂರ್ಣ ಮಾಹಿತಿಯನ್ನು ಸಚಿವರಿಗೆ ನೀಡಿದರು. ಸಚಿವರು ಕೂಡಲೇ ಗಮನ ಹರಿಸಿ ರೈಲು ಸೇವೆ ಆರಂಭಿಸಲು ಮುಂದಾಗಬೇಕು. ಕರಾವಳಿ ಮತ್ತು ಉತ್ತರ ಕರ್ನಾಟಕದ ಮಧ್ಯೆ ರೈಲು ಸಂಪರ್ಕ ಏರ್ಪಟ್ಟರೆ ಈ ಭಾಗದಲ್ಲಿ ಹೋಟೆಲ್, ಕೈಗಾರಿಕೆ ಮತ್ತಿತರ ವ್ಯಾಪಾರೋದ್ಯಮ ಹಾಗೂ ಶಿಕ್ಷಣ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಬಹುಕಾಲದ ಈ ಬೇಡಿಕೆಯನ್ನು ಸಚಿವರು ನೆರವೇರಿಸಿ ಕೊಡಬೇಕೆಂದು ಅವರು ಒತ್ತಾಯಿಸಿದರು.


ಈ ಬಗ್ಗೆ ಮಾಜಿ ಲೋಕಸಭಾ ಸದಸ್ಯರಾದ ಜಾಧವ್ ಅವರ ಮನವಿಗೆ ಸ್ಪಂದಿಸಿದ ಸಚಿವ ವಿ. ಸೋಮಣ್ಣ ಮನವಿ ಪತ್ರವನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮಾಜಿ ಸಂಸದರು ಪ್ರಸ್ತಾಪಿಸಿದ ವಿಷಯ ಅತ್ಯಂತ ಸೂಕ್ತವಾಗಿದ್ದು ಜನಪರ ಬೇಡಿಕೆಯಾಗಿದೆ. ತಕ್ಷಣದಲ್ಲಿ ಸಂಬಂಧ ಪಟ್ಟವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.


ಹೋಟೆಲ್ ಸಂಘದಿಂದಲೂ ಮನವಿ:

ಕೇಂದ್ರ ಸಚಿವ ವಿ ಸೋಮಣ್ಣ ಅವರನ್ನು ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ನೇತೃತ್ವದ ನಿಯೋಗ ಭೇಟಿ ಮಾಡಿ ಕರಾವಳಿ ಜಿಲ್ಲೆಗಳಾದ ಮಂಗಳೂರು ಮತ್ತು ಉಡುಪಿಗೆ ಉತ್ತರ ಕರ್ನಾಟಕದ ಬೀದರ್ ನಿಂದ ಕಲಬುರಗಿ ಮಾರ್ಗವಾಗಿ ರೈಲು ಸಂಚಾರ ಕೂಡಲೆ ಆರಂಭಿಸಿ ರೈಲು ಯಾನದ ಸೌಲಭ್ಯ ನೀಡುವಂತೆ ಒತ್ತಾಯಿಸಿದರು. ಮನವಿ ಸ್ವೀಕರಿಸಿ ಈ ಬಗ್ಗೆ ಸೂಕ್ತ ಚಿಂತನೆ ಮಾಡಲಾಗುವುದು ಎಂದು ಸಚಿವ ವಿ. ಸೋಮಣ್ಣ ಹೇಳಿದರು.


ನಿಯೋಗದಲ್ಲಿ ಡಾ. ಸದಾನಂದ ಪೆರ್ಲ, ಮಹಾಕೀರ್ತಿ ಶೆಟ್ಟಿ, ಸುನಿಲ್ ಶೆಟ್ಟಿ, ಶಿವರಾಜ್ ಕೋಟ್ಯಾನ್, ಗಿರಿಧರ ಭಟ್, ಶರಣು ಸಪ್ತಗಿರಿ ಮತ್ತಿತರರು ಜೊತೆಗಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top