ಕಪ್ಪು ಯಾರಿಗೆ? ಸಿದ್ರಾಮಪ್ಪಂಗ? ಬಂಡೆ ಶಿವಪ್ಪಂಗ?

Upayuktha
1 minute read
0



ಆ ತೋಟದ ಸರ್ವೆ, ಮಹಜರ್, ತನಿಖೆ, ಪೋಡಿ, ಪಕ್ಕಾ ಪೋಡಿ, ವಾದ ವಿವಾದ ಎಲ್ಲ ಮುಗಿದು, ಇವತ್ತು ಅಂತಿಮ ತೀರ್ಪು ಬರುವ ನಿರೀಕ್ಷೆ ಇದೆ.


11 ಗುಂಟೆ ಜಾಗ. ಹೆಸರಿಗೆ ಆ ಕಡೆ ಮೂರ ಗೂಟ, ಈ ಕಡೆ ಮೂರು ಗೂಟ, ಮಧ್ಯ ಗಂಟೆ ದಾಸವಾಳ ನೆಟ್ಟು ಒಂದು ಬೇಲಿ ಅಂತ ಲಾಗಾಯ್ತಿನಿಂದಲೂ ಇದೆ. ಜಗಳವೂ ಲಾಗಾಯ್ತಿನಿಂದ ಇದೆ.


ಇವತ್ತು ಫೈನಲ್ ತೀರ್ಪು ಅಂತ ಇಬ್ಬರು ಲಾಯರ್‌ಗಳು 'ಠೀವಿ'ಯಿಂದ ಹೇಳ್ತಾ ಇದ್ರು. ಹದಿನೆಂಟು ವರ್ಷಗಳಿಂದ ಕೇಸ್ ಕೋರ್ಟಲ್ಲಿ ಇತ್ತು!!


11 ಗುಂಟೆ ಆದರೂ, ಉದ್ದ ಕ್ರಿಕೆಟ್ ಬ್ಯಾಟ್ ತರಹ ಒಂದೇ ಪಟ. ಪಟದ ಆ ಕಡೆ ಒಂದು ಅಗಲವಾದ ಕಪ್ಪು. ಹೆಗ್ಗಪ್ಪು. 


ಅದು ನಮಗೆ ಸೇರುತ್ತೆ, ಅದು ನಮಗೆ ಸೇರುತ್ತೆ ಅಂತ ಅವರ ಮನೆಲೂ ಗಲಾಟೆ, ಇವರ ಮನೆಯಲ್ಲೂ ಗಲಾಟೆ. ಅವರ ಮನೆ ಕಪ್ಪು ಹೆರೆಯುವವನಿಗೂ, ಇವರ ಮನೆ ಕಪ್ಪು ಹೆರೆಯುವವನಿಗೂ ನಿನ್ನೆ ಒಂದು ನೂರು ರುಪಾಯಿ ಬೆಟ್ಟಿಂಗ್ ಕೂಡ ಆಗಿದೆ. 


"ಈ ವರ್ಷನೂ ಕಪ್ಪು ಹೆರೆಯುವುದು ನಾನೆ" ಅಂತ ಅವರ ಮನೆ ಸಿದ್ರಾಮಪ್ಪ ಹೇಳುವುದು. ಅದೂ ಈಚೆ ಮನೆಗೆ ಕೇಳುವ ಹಾಗೆ ಕೆಣಕಿ ಹೇಳುವುದು. ಸಿದ್ರಾಮಪ್ಪ, ಅವರಮನೆಗೆ ಎರಡು ವರ್ಷದಿಂದ ಖಾಯಂ ಕೆಲಸಕ್ಕೆ ಬರ್ತಿರುವ ನಂಬಿಕಸ್ತ ಜನ. ಕೆಲಸ ಮಾಡುವುದು ಕಮ್ಮಿ ಆದರೂ, ಹೇಳಿದ ದಿನಕ್ಕೆ ಗ್ಯಾರಂಟಿ ಬರುವ ಪಾರ್ಟಿ.  


"ಅಯ್ಯ ಈ ವರ್ಸ ಆ ಕಪ್ ಹೆರಿದು ನಾನೆ. ಕಪ್ ನಮ್ದೆ ಆತಾ?" ಅಂತ ಈ ಕಡೆ ಮನೆ ಬಂಡೆ ಶಿವಪ್ಪ. "ಈ ವರ್ಸ ಮಾತ್ರ ಅಲ್ಲ, ಇನ್ ಮುಂದೂ ಈ ಕಪ್ ಹೆರಿದು ನಾನೆ ಆತಾ?" ಅಂತ ಸಿದ್ರಾಮಪ್ಪಂಗೆ ಕೇಳುವ ಹಾಗೆ ಬಂಡೆ ಶಿವಪ್ಪ ಗುಟುರು.


"ಇವತ್ತು 'ಕೋರ್ಟಲ್ಲಿ' ಕಪ್ಪು ಯಾರಿಗೆ ಅಂತ ತೀರ್ಮಾನ ಆದ ಕೂಡ್ಳೆ ಒಂದು ಫೋನ್ ಮಾಡಿ ಅಯ್ಯ" ಅಂತ ಕುಡಿದ ಕಾಫಿ 'ಕಪ್' ಕೆಳಗಿಟ್ಟ ಶಿವಪ್ಪ, ಕ್ರಿಕೆಟ್ ಬ್ಯಾಟ್‌ನ್ನು ಹಿಡ್ಕಂಡ ದಾಂಡಿಗನ ತರಹ, ಹಾರೆಯನ್ನು ಹೆಗಲ ಮೇಲೆ ಹಿಡ್ಕಂಡ್, ತ್ವಾಟದ ಫೀಲ್ಡಿಗೆ ಇಳಿದ.  


ಎರಡೂ ಮನೆಯವರು 'ಕೋರ್ಟ್' ಕಡೆ ಮುಖ ಮಾಡಿದ್ರು!!


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631258


Post a Comment

0 Comments
Post a Comment (0)
To Top