ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯಲ್ಲಿನ ಎರಡು ಅಂಬಿಕಾ ಪದವಿಪೂರ್ವ ವಿದ್ಯಾಲಯಗಳಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು. ಬಪ್ಪಳಿಗೆಯಲ್ಲಿ ಮಾತನಾಡಿದ ಪುತ್ತೂರು ಸಿಟಿ ಆಸ್ಪತ್ರೆಯ ಆಯುರ್ವೇದ ಮತ್ತು ಯೋಗ ಸಲಹೆಗಾರರಾದ ಡಾ.ಚೇತನಾ ಗಣೇಶ್ ವಿದ್ಯಾರ್ಥಿಗಳು ತಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ಭಸ್ತಿಕಾ ಮತ್ತು ಕಪಾಲಭಾತಿ ಪ್ರಾಣಾಯಾಮಗಳ ಅಭ್ಯಾಸ ಮಾಡುವುದು ಅತ್ಯವಶ್ಯಕವಾಗಿದೆ ಎಂದು ನುಡಿದರು.
ಪುರುಷರು ಆಸನಗಳಲ್ಲಿ ಶ್ರೇಷ್ಟವಾದ ಶೀರ್ಷಾಸನವನ್ನು ಮತ್ತು ಮಹಿಳೆಯರು ಸರ್ವಾಂಗಾಸನವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸಬಹುದು. ಜಂಕ್ ಆಹಾರ ಸೇವನೆ ಮನುಷ್ಯರಲ್ಲಿ ಹಾರ್ಮೋನ್ ಅಸಮತೋಲನವನ್ನು ಉಂಟುಮಾಡಬಹುದು. ಹಾಗಾಗಿ ದಿನನಿತ್ಯ ಯೋಗಾಭ್ಯಾಸದ ಜೊತೆಗೆ ಆರೋಗ್ಯಕರ ಆಹಾರ ಪದ್ದತಿಯನ್ನು ಪಾಲಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.
ನೆಲ್ಲಿಕಟ್ಟೆಯಲ್ಲಿ ಮಾತನಾಡಿದ ಪುತ್ತೂರಿನ ಯೋಗ ಶಿಕ್ಷಕಿ ಪ್ರೀತಿ ಶೆಣೈ ಯೋಗ ಎಂದರೆ ಕೇವಲ ಆಸನ ಅಲ್ಲ. ಪ್ರಾಣಾಯಾಮ, ಧ್ಯಾನ, ಮುದ್ರೆ ಎಲ್ಲವನ್ನು ಅದು ಒಳಗೊಂಡಿದೆ. ನಮ್ಮ ಸಂಪ್ರದಾಯ, ಆಚರಣೆ, ಆರೋಗ್ಯ ಪದ್ಧತಿ, ಯೋಗ ಎಲ್ಲವೂ ವೈಜ್ಞಾನಿಕ ತಳಹದಿಯನ್ನು ಹೊಂದಿವೆ ಎಂಬುದು ಈಗಾಗಲೇ ಸಾಬೀತಾದ ವಿಚಾರ ಎಂದು ಹೇಳಿದರು.
ಎರಡೂ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಯೋಗದಿಂದ ಮೂಲಾಧಾರ ಚಕ್ರ ಜಾಗೃತವಾಗುತ್ತದೆ. ಪ್ರಪಂಚಕ್ಕೆ ಯೋಗವನ್ನು ಕೊಡುಗೆಯಾಗಿ ನೀಡಿದ್ದು ನಮ್ಮ ಹೆಮ್ಮೆಯ ಭಾರತ. ಆದುದರಿಂದ ನಮಗೆಲ್ಲ ವಿಶ್ವ ಯೋಗ ದಿನಾಚರಣೆ ಎಂಬುದು ಹೆಮ್ಮೆಯ ದಿನ.
ಪತಂಜಲಿ ಮುನಿಯ ಯೋಗ ಹಾಗೂ ರವಿಶಂಕರ ಗುರುಗಳ 'ಜೀವನ ಕಲೆ' ಇವುಗಳಲ್ಲಿ ಅದ್ಭುತ ಜೀವನ ಶಕ್ತಿ ಇದೆ. ಭಾರತದ ಯೋಗ ಹಾಗೂ ಆಯುರ್ವೇದ ವೈದ್ಯಕೀಯ ಪದ್ಧತಿಯನ್ನು ಜಗತ್ತಿನಾದ್ಯಂತ ಪಸರಿಸುವ ಕೆಲಸವನ್ನು ಮಾಡಿ ನಾವು ಬದುಕಿನ ಸಾರ್ಥಕ್ಯ ಕಾಣಬೇಕು ಎಂದು ಹೇಳಿದರು.
ನೆಲ್ಲಿಕಟ್ಟೆ ಕಾಲೇಜಿನ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಕಾಲೇಜಿನ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್, ಉಪಪ್ರಾಂಶುಪಾಲ ಪ್ರದೀಪ್ ಕೆ ವೈ ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರದ್ಧಾ ಜಿ. ಎಸ್. ವಿದ್ಯಾರ್ಥಿನಿಯರಾದ ವರ್ಷಾಲಕ್ಷ್ಮಿ, ಅನನ್ಯ, ರಾಶಿ, ರಕ್ಷಾ, ಧೃತಿ ಭಟ್, ವೈಷ್ಣವಿ, ದೀಪ್ತಿ ಹಾಗೂ ಶ್ರೀಲಕ್ಷ್ಮಿ ಸುರೇಶ್ ಕಾರ್ಯಕ್ರಮ ನಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ