ಬಂಟ್ವಾಳ: ಆರ್.ಎಸ್.ಎಸ್. ಪ್ರಮುಖರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಸಹಿತ ಅನೇಕ ಹಿಂದೂ ನಾಯಕರುಗಳನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸುವ ಮೂಲಕ ಕಿರುಕುಳ ನೀಡುವುದಲ್ಲದೆ, ಜಿಲ್ಲೆಯಲ್ಲಿ ಅಶಾಂತಿ ತಲೆದೋರುವಂತೆ ಮಾಡುವ ರಾಜ್ಯ ಸರಕಾರದ ನೀತಿ ಖಂಡನೀಯ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದ್ದಾರೆ.
ಇತ್ತೀಚೆಗೆ ಕೊಲೆಯಾದ ಸುಹಾಸ್ ಶೆಟ್ಟಿ ಅವರ ಶ್ರದ್ದಾಂಜಲಿ ಸಭೆಯಲ್ಲಿ ಮಾಡಿದ ಭಾಷಣದಿಂದ ಮತೀಯ ಗುಂಪುಗಳ ನಡುವೆ ವೈಮನಸ್ಸು ಮಾಡುವಂತೆ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪ ಮಾಡಿ ಪ್ರಕರಣ ದಾಖಲಿಸಿರುವುದು ನೋಡಿದರೆ ಜಿಲ್ಲೆಯಲ್ಲಿ ಕೋಮು ದ್ವೇಷವನ್ನು ರಾಜ್ಯ ಸರಕಾರ ಪೋಲೀಸ್ ಇಲಾಖೆಯ ಮುಖಾಂತರ ಮಾಡುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.
ದ್ವೇಷ ಭಾಷಣದ ವಿಚಾರದಲ್ಲಿ ಕೇವಲ ಹಿಂದೂ ನಾಯಕರುಗಳನ್ನು ಗುರಿಯಾಗಿಸಿ ಪ್ರಕರಣ ದಾಖಲಿಸುವ ಸರಕಾರದ ಕ್ರಮವನ್ನು ಸರಿಯಾ ಎಂದು ಪ್ರಶ್ನಿಸಿದ್ದಾರೆ.
ಕಳೆದ ಏಳು ವರ್ಷಗಳಿಂದ ಶಾಂತವಾಗಿದ್ದ ತಾಲೂಕಿನಲ್ಲಿ ಮತ್ತೆ ಕೋಮು ದ್ವೇಷದ ವಿಷ ಬೀಜ ಬಿತ್ತಿದವರು ಯಾರು? ಹಿಂಸೆಗೆ ಪ್ರೇರಣೆ ನೀಡಿದವರು ಯಾರು? ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನು ಹಾಕಿದವರು ಯಾರು? ಇಂತಹವರ ಮೇಲೆ ಕಾನೂನು ಕ್ರಮಕೈಗೊಳ್ಳದಿರುವ ಇಲಾಖೆಯ ನಡೆ ಏನು? ಎಂದು ಪ್ರಶ್ನಿಸಿದ್ದಾರೆ.
ಕೇವಲ ಹಿಂದೂ ನಾಯಕರುಗಳನ್ನು ಗುರುತಿಸಿ, ಟಾರ್ಗೆಟ್ ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಅನ್ಯಾಯ ಮಾಡಲಾಗುತ್ತಿರುವ ಕ್ರಮ ನ್ಯಾಯಸಮ್ಮತವಾದುದಲ್ಲ. ನೈಜ ಆರೋಪಿಗಳಿಗೆ ಕಾನೂನುಪ್ರಕಾರ ಶಿಕ್ಷೆ ನೀಡಿ, ಆದರೆ ಇದರ ನೆಪದಲ್ಲಿ ಹಿರಿಯರಿಗೆ, ಹಿಂದೂ ಮುಖಂಡರುಗಳಿಗೆ ಸುಖಾಸುಮ್ಮನೆ ಕಿರುಕುಳ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಹಿಂದೂಗಳ ಧ್ವನಿ ಅಡಗಿಸಲು ಷಡ್ಯಂತ್ರ ನಡೆಸಿದ್ದು ಗೊಂದಲಕ್ಕೆ ಕಾರಣವಾಗಬಹುದು. ರಾಜ್ಯ ಸರಕಾರ ಪೊಲೀಸ್ ಇಲಾಖೆಯ ಮೂಲಕ ಸುಳ್ಳು ಕೇಸುಗಳನ್ನು ಹಾಕಿ ಹಿಂದೂ ನಾಯಕರುಗಳನ್ನು ಕಟ್ಟಿಹಾಕುವ ಪ್ರಯತ್ನಮಾಡುವ ಕನಸು ಕಂಡರೆ ಅದು ಸಾಧ್ಯವಿಲ್ಲ ಎಂದಿದ್ದಾರೆ.
ಮತ ಬ್ಯಾಂಕ್‌ಗಾಗಿ ರಾಜಕೀಯ ಮಾಡುವುದು ಬಿಟ್ಟು ಜಿಲ್ಲೆಯ ಶಾಂತಿಗಾಗಿ ರಾಜಕೀಯ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಯುತ ವಿಚಾರಣೆ ಮಾಡಲಿ ಎಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


