ಮಂಗಳೂರು: ವೆನ್ಲಾಕ್ ಜಿಲ್ಲಾಸ್ಪತ್ರೆಯ ಭವಿಷ್ಯದ ಅಭಿವೃದ್ದಿಯ ದೃಷ್ಟಿಯಿಂದ ನಗರದ ಕೇಂದ್ರಭಾಗದ ಹೊರವಲಯದಲ್ಲಿ ಜಮೀನು ಕಾದಿರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಅವರು ಸೋಮವಾರ ತ್ರೈಮಾಸಿಕ ಕೆ ಡಿ ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಶಾಸಕ ಹರೀಶ್ ಪೂಂಜಾ ಅವರು ವಿಷಯ ಪ್ರಸ್ತಾಪಿಸಿ, ವೆನ್ಲೋಕ್ ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ ಇರುವ ಜಮೀನಿನಲ್ಲಿ ವಿವಿಧ ಕಟ್ಟಡಗಳು ತುಂಬಿದ್ದು, ಭವಿಷ್ಯದ ವಿಸ್ತರಣೆ ಹಾಗೂ ಹೊಸ ಅಭಿವೃದ್ಧಿ ಯೋಜನೆಗಳಿಗೆ ಸ್ಥಳಾ ವಕಾಶದ ಕೊರತೆ ಎದುರಾಗಬಹುದು. ಈ ನಿಟ್ಟಿನಲ್ಲಿ ನಗರ ಸಂಪರ್ಕಿಸುವ ಹೆದ್ದಾರಿಯ ಸಮೀಪ ಜಾಗ ಕಾದಿರಿಸುವಂತೆ ಅಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಜಮೀನು ಗುರುತಿಸಲು ಅಗತ್ಯ ಕ್ರಮ ಕ್ಯೆಗೊಳ್ಳಲು ಸೂಚಿಸಿದರು.
ಜಿಲ್ಲಾ ಅರೋಗ್ಯಧಿಕಾರಿ ಡಾ. ತಿಮ್ಮಯ್ಯ ಮಾತನಾಡಿ, ಮೂಡುಶೆಡ್ಡೆ ಟಿ ಬಿ ಆಸ್ಪತ್ರೆ ಸಮೀಪ 8 ಎಕರೆ ಜಾಗ ಲಭ್ಯವಿದೆ ಎಂದರು. ವೆನ್ಲಾಕ್ ಆಸ್ಪತ್ರೆಯ ಹಾಲಿ ಹೊರರೋಗಿ ವಿಭಾಗವನ್ನು ತೆರವುಗೊಳಿಸಿ, 4 ಮಹಡಿಗಳ ಹೊಸ ಕಟ್ಟಡ ನಿರ್ಮಾಣ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಸಾದ್ ತಿಳಿಸಿದರು.
ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಮತ್ತು ಶವಗಾರ ಸ್ಥಾಪಿಸುವಂತೆ ಶಾಸಕ ಹರೀಶ್ ಪೂಂಜಾ ಕೋರಿದರು. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಲಭ್ಯವಿಲ್ಲದ ಅಂಗನವಾಡಿ ಮತ್ತು ಅರೋಗ್ಯ ಉಪಕೇಂದ್ರಗಳಿಗೆ ಶೀಘ್ರದಲ್ಲಿ ನಗರಪಾಲಿಕೆಯ ಅಥವಾ ಕಂದಾಯ ಜಾಗವನ್ನು ಮಂಜೂರು ಮಾಡಲು ಉಸ್ತುವಾರಿ ಸಚಿವರು ತಿಳಿಸಿದರು.
ನಗರದ ಎಮ್ಮೆಕೆರೆ ಈಜುಕೊಳದ ಸೌಲಭ್ಯಗಳ ಬಳಕೆ ಬಗ್ಗೆ ಈಜು ಸಂಸ್ಥೆಗಳ ನಡುವೆ ಭಿನ್ನಾಭಿಪ್ರಾಯ ಕುರಿತು ಸಭೆ ನಡೆಸಿ ಚರ್ಚಿಸುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಈಜುಕೊಳದ ಯಾವುದೇ ನಿರ್ಮಾಣಗಳನ್ನು ಅನುಮತಿ ಇಲ್ಲದೇ ಬದಲಾಯಿಸಲು ಅವಕಾಶ ನೀಡಬಾರದು ಎಂದು ಅವರು ತಿಳಿಸಿದರು.
ನಗರ ಯೋಜನಾ ಪ್ರಾಧಿಕಾರಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರ ನಕ್ಷೆ ಮಂಜೂರಾತಿ, 9/11, ಮನೆ ನಿರ್ಮಾಣ ಅನುಮತಿ ಮತ್ತಿತರ ಕಾರ್ಯಗಳಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಕೆಡಿಪಿ ಸಭೆಯಲ್ಲಿ ತೀವ್ರ ಚರ್ಚೆಯಾಗಿ, ಅಗತ್ಯ ಸಿಬ್ಬಂದಿ ಒದಗಿಸಲು ಸಚಿವರು ಸೂಚಿಸಿದರು.
ಸಾರ್ವಜನಿಕ ರಸ್ತೆ ಸಂಪರ್ಕ ಇಲ್ಲದಿದ್ದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ನೀಡಲು ಅವಕಾಶ ಇಲ್ಲ ಎಂದು ಜಿ ಪಂ ಸಿ ಇ ಓ ಡಾ. ಕೆ. ಆನಂದ್ ತಿಳಿಸಿದರು.
ಮಂಗಳೂರು ಮಹಾನಗರ ಯೋಜನೆ ಕರಡನ್ನು ಮುಂದಿನ ಕೆಡಿಪಿ ಸಭೆಯೊಳಗೆ ಪ್ರಕಟಿಸುವಂತೆ ಸಚಿವರು ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೂಚಿಸಿದರು.
ಪಂಪವೆಲ್ ಸಮೀಪ ಕೆ.ಎಸ್.ಆರ್.ಟಿ.ಸಿ ಎಲೆಕ್ಟ್ರಿಕಲ್ ಬಸ್ ಡಿಪೋ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಚ್ ವಿ ದರ್ಶನ್ ತಿಳಿಸಿದರು.
ಸುಳ್ಯ ದ್ಯುತ್ ಸಮಸ್ಯೆಗೆ 110 ಕೆ ವಿ ಸಂಪರ್ಕ ನಿರ್ಮಾಣ ಸಂಬಂಧ ಉಂಟಾಗಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿ ಮುಂದುವರಿಸುವಂತೆ ಸಚಿವ ದಿನೇಶ್ ಗುಂಡೂರಾವ್ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ