ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಅಭಿವೃದ್ಧಿ ಶೂನ್ಯ, ದುರಾಡಳಿತದ ಕರಾಳತೆ ಮೆಲುಕು ಹಾಕಿಸಿದೆ: ಸಂಸದ ಕ್ಯಾ. ಚೌಟ

Upayuktha
0

 


ಮಂಗಳೂರು: ರಾಜ್ಯದಲ್ಲಿ ಭ್ರಷ್ಟಕೂಪ ಆಡಳಿತ ನೀಡಿ, ಉಚಿತ ಗ್ಯಾರಂಟಿಗಳ ಮುಖವಾಡ ಧರಿಸಿಕೊಂಡು ಜನಸಾಮಾನ್ಯರ ಮೇಲೆ ಬೆಲೆಯೇರಿಕೆಗಳ ಬರೆ ಎಳೆದು ಕರ್ನಾಟಕವನ್ನು ಸಾಲದ ಸುಳಿಗೆ ಸಿಲುಕಿಸಿ ದಿವಾಳಿತನದತ್ತ ಸಾಗುವಂತೆ ಮಾಡುವ ಜತೆಗೆ ಕೇಂದ್ರ ಸರ್ಕಾರದ ಯೋಜನೆಗಳಿಗೆ ಅಡ್ಡಗಾಲು ಹಾಕಿ ಅಭಿವೃದ್ಧಿಯನ್ನು ಕುಂಟಿತಗೊಳಿಸಿರುವುದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಎರಡು ವರ್ಷದ ಸಾಧನೆಗಳು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ ಲೇವಡಿ ಮಾಡಿದ್ದಾರೆ.


ಕರ್ನಾಟಕವನ್ನು ಶೂನ್ಯ ಅಭಿವೃದ್ಧಿಗೆ ತಳ್ಳಿರುವ ಕಾಂಗ್ರೆಸ್‌ ತಮ್ಮ ಸರ್ಕಾರದ ಎರಡು ವರ್ಷದ ಸಾಧನೆಯನ್ನು ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಮುಡಾ ನಿವೇಶನದಲ್ಲಿ ಗೋಲ್‌ಮಾಲ್‌ ಮಾಡಿ ತಮ್ಮ ವಿರುದ್ಧದ ಪ್ರಕರಣವನ್ನೇ ಮುಚ್ಚಿಸಿ ಹಾಕಿರುವುದೇ ವೈಯಕ್ತಿಯವಾಗಿ ಸಿಎಂ ಸಿದ್ದರಾಮಯ್ಯನವರ ಬಹುದೊಡ್ಡ ಸಾಧನೆಗಳಲ್ಲಿ ಒಂದು.  ಸ್ವಚ್ಛ ರಾಜಕಾರಣಿ ಎನ್ನುತ್ತಲೇ ಸಿದ್ದರಾಮಯ್ಯನವರು ಭ್ರಷ್ಟಾಚಾರದಲ್ಲಿ ಮುಳುಗಿರಬೇಕಾದರೆ, ಈ ಕಾಂಗ್ರೆಸ್‌ ಸರ್ಕಾರದ ನಿಜ ಹಣೆಬರಹ ನಾಡಿನ ಜನಸಾಮಾನ್ಯರಿಗೂ ಅರ್ಥವಾಗಿದೆ. ವಾಲ್ಮೀಕಿ ನಿಗಮ, ಕೆಪಿಎಸ್‌ಸಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಗುತ್ತಿಗೆದಾರರ ಶೇ.60 ಕಮಿಷನ್‌ ಆರೋಪ, ನೂರಾರು ರೈತರ ಆತ್ಮಹತ್ಯೆ, ವಕ್ಫ್‌ ಬೋರ್ಡ್‌ ಮೂಲಕ ಹಿಂದೂ ರೈತರ ಜಮೀನು ಕಬಳಿಕೆ ಹುನ್ನಾರ, ಹಲವು ಇಲಾಖೆಗಳ ಭ್ರಷ್ಟಾಚಾರಕ್ಕೆ ಬೇಸತ್ತು ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿರುವುದೇ ಸಿದ್ದರಾಮಯ್ಯನವರ ಸರ್ಕಾರದ ಪ್ರಮುಖ ಸಾಧನೆಗಳು ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಅವರು ಟೀಕಿಸಿದ್ದಾರೆ.


ರಾಜ್ಯದ ಕಾನೂನು-ಸುವ್ಯವಸ್ಥೆಯಂತೂ ಸಂಪೂರ್ಣ ಹಾಳಾಗಿದ್ದು, ಡ್ರಗ್ಸ್‌ ಮಾಫಿಯಾ, ಕೊಲೆ, ಅತ್ಯಾಚಾರ ಜಾಸ್ತಿಯಾಗಿ ಗೃಹ ಇಲಾಖೆಯೇ ಸತ್ತು ಹೋಗಿದೆ. ವಿಧಾನಸೌಧದೊಳಗೆಯೇ ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಿ ದೇಶದ್ರೋಹ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿರುವ ಈ ಸರ್ಕಾರ ಜನರ ಮುಂದೆಯೇ ಬೆತ್ತಲಾಗಿದೆ. ಇನ್ನು ಒಂದೇ ಹೆಜ್ಜೆ ಮುಂದೆ ಹೋಗಿರುವ ಸಿದ್ದರಾಮಯ್ಯನರು ಬಜೆಟ್‌ ನಲ್ಲೂ ಒಂದೇ ಸಮುದಾಯದ ಓಲೈಕೆ ರಾಜಕಾರಣ ಮಾಡುತ್ತಿದೆ. ಇದರೊಂದಿಗೆ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡಿ ಅವರ ಹತ್ಯೆಯ ಹಿಂದಿರುವ ಇಸ್ಲಾಮಿಕ್‌ ಮೂಲಭೂತವಾದಿಗಳನ್ನು ಮಟ್ಟ ಹಾಕುವುದಕ್ಕೆ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿದೆ. ಈ ಮೂಲಕ ಪಿಎಫ್‌ಐನಂಥ ಸಮಾಜಘಾತುಕ ಶಕ್ತಿಗಳು ಬಾಲ ಬಿಚ್ಚುವುದಕ್ಕೆ ಆಸ್ಪದ ಮಾಡಿಕೊಟ್ಟಿದೆ. ಗ್ಯಾರಂಟಿ ಯೋಜನೆಗಳ ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಈಗ ಜನರ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಬಗೆದಿದೆ. ಹೀಗಿರುವಾಗ, ಸಿದ್ದರಾಮಯ್ಯ ಸರ್ಕಾರವು 2 ವರ್ಷದ ಸಾಧನೆ ಮಾಡಿಸಿಕೊಳ್ಳುವುದಕ್ಕೆ ಯಾವ  ಅರ್ಹತೆ ಇದೆ ಎಂದು ಕ್ಯಾ. ಚೌಟ ಪ್ರಶ್ನಿಸಿದ್ದಾರೆ.


ದಕ್ಷಿಣ ಕನ್ನಡವನ್ನು ತೆಗೆದುಕೊಂಡರೂ ಸಿದ್ದರಾಮಯ್ಯ ಸರ್ಕಾರದ ಸಾಧನೆ ಶೂನ್ಯ. ಬಜೆಟ್‌ನಲ್ಲಿಯೂ ಜಿಲ್ಲೆ ಸಮಗ್ರ ಅಭಿವೃದ್ಧಿ ಅಥವಾ ಕರಾವಳಿ ಭಾಗಕ್ಕೆ ದೂರದೃಷ್ಟಿಯ ಯಾವುದೇ ಯೋಜನೆ ರೂಪಿಸಿಲ್ಲ. ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿಗೆ ನಯಾ ಪೈಸೆ ನೀಡದೆ ಮಾತೆತ್ತಿದರೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದೇ ಛಾಳಿಯಾಗಿ ಬಿಟ್ಟಿದೆ. ಆ ಮೂಲಕ ತಮ್ಮ ಹುಳುಕು ಮುಚ್ಚಿ ಹಾಕುವ ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳ ಅನುಷ್ಠಾನದಲ್ಲಿಯೂ ಅಡ್ಡಗಾಲು ಹಾಕಿ ಅಭಿವೃದ್ಧಿಯಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ. ಪೆಹಲ್ಗಾಮ್‌ ದಾಳಿಯಂಥ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿಯೂ ಕಾಂಗ್ರೆಸ್‌ ಸಚಿವರು ಅಸಂವೇದನಾಶೀಲ ಹೇಳಿಕೆ ನೀಡುತ್ತಾರೆ ಅಂದರೆ ಈ ಕಾಂಗ್ರೆಸ್‌ನವರ ದೇಶಪ್ರೇಮ ಯಾವ ಮಟ್ಟದಲ್ಲಿದೆ ಎಂಬುದನ್ನು ಊಹಿಸಬಹುದು. ಹೀಗಿರುವಾಗ, ಸಿದ್ದರಾಮಯ್ಯನವರು 2 ವರ್ಷದ ಸಾಧನಾ ಸಮಾವೇಶವು ದುರಾಡಳಿತ, ದಿವಾಳಿತನ, ಭ್ರಷ್ಟಾಚಾರ, ದರ ಏರಿಕೆ, ಹಗರಣ, ಅಭಿವೃದ್ಧಿ ಶೂನ್ಯ ಆಡಳಿತದ ಕರಾಳತೆಯನ್ನು ಮೆಲುಕು ಹಾಕುವಂತೆ ಮಾಡಿದೆ ಎಂದು ಕ್ಯಾ. ಚೌಟ ವ್ಯಂಗ್ಯವಾಡಿದ್ದಾರೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top