ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಶ್ವನಾಥ ಪಿ ಅವರಿಗೆ ‘ಮನೀಷಾ’ ಸಂಚಿಕೆಯ ಅನನ್ಯ ಪ್ರಯೋಗ ಶೀಲತೆಗಾಗಿ ಪ್ರಥಮ ಬಹುಮಾನಿತ ಮನ್ನಣೆಯ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಆಡಳಿತಾಂಗ ಕುಲಸಚಿವರಾದ ಕೆ.ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವರಾದ ಡಾ.ಎಚ್. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಡಾ.ಸಂಗಪ್ಪ ವೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕಿ ಡಾ.ಪರಿಣಿತಾ ಅವರ ಅಧ್ಯಕ್ಷತೆಯ ಕಾಲೇಜು ಮ್ಯಾಗಝೀನ್ ತಜ್ಞರ ಆಯ್ಕೆ ಸಮಿತಿಯು ವಿ.ವಿ. ವ್ಯಾಪ್ತಿಯ ಸಂಯೋಜಿತ ಕಾಲೇಜುಗಳ ವಾರ್ಷಿಕ ಸಂಚಿಕೆಗಳನ್ನು ಪರಿಶೀಲಿಸಿ ‘ಮನೀಷಾ’ ಸಂಚಿಕೆಯನ್ನು ಮೊದಲ ಬಹುಮಾನಕ್ಕೆ ಆಯ್ಕೆ ಮಾಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಡಾ.ಪರಿಣಿತಾ ಅವರು ‘ಮನೀಷಾ’ ಸೇರಿದಂತೆ ಸ್ಪರ್ಧೆಗೆ ಪರಿಗಣಿತವಾದ ವಿವಿಧ ಕಾಲೇಜುಗಳು ಹೊರತಂದ ಸಂಚಿಕೆಗಳ ವಿಶೇಷತೆಯನ್ನು ಪರಿಚಯಿಸಿದರು.
ಸ್ಪರ್ಧೆಗೆ ಬಂದ ಕಾಲೇಜು ಸಂಚಿಕೆಗಳ ವಿದ್ಯಾರ್ಥಿ ಬರಹಗಳು ಪ್ರಚಲಿತ ಘಟನೆಗಳನ್ನು ಕೇಂದ್ರೀಕರಿಸಿಕೊಂಡಿದ್ದವು. ಬಹಳ ಮುಖ್ಯವಾಗಿ ಸ್ಥಳೀಯ ಸಂಸ್ಕೃತಿಯನ್ನು ಅನಾವರಣಗೊಳಿಸುವ ಬರಹಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಅಲ್ಲದೇ, ಜ್ಞಾನ ಸಂವಹನದ ಉದ್ದೇಶದ ಬರಹಗಳಿಗಿಂತ ಬಹಳ ಮುಖ್ಯವಾಗಿ ಗಮನ ಸೆಳೆದದ್ದು ಆದರ್ಶ ಮೌಲ್ಯಗಳು ಮತ್ತು ಸಂಸ್ಕಾರಯುತ ಚಿಂತನೆಯನ್ನು ಕಾಣಿಸುವ ಲೇಖನಗಳು. ಅಲ್ಲದೇ, ಈ ಸಲದ ಬಹಳಷ್ಟು ಸಂಚಿಕೆಗಳಲ್ಲಿ ಜನರಿಗೆ ಸಾಮಾಜಿಕವಾಗಿ ನೆರವಾಗಿ ಜನಜನಿತರಾದ ಸ್ಥಳೀಯ ವ್ಯಕ್ತಿತ್ವಗಳ ಹಿರಿಮೆಯನ್ನು ಧ್ವನಿಸುವ ಬರಹಗಳು ಇದ್ದವು. ಅಲ್ಲದೇ ಉಚಿತ ಬಸ್ ಪ್ರಯಾಣದ ಕುರಿತ ನಿಲುವುಗಳನ್ನು ವಿದ್ಯಾರ್ಥಿ ಬರಹಗಾರರು ಈ ಸಂಚಿಕೆಗಳ ಮೂಲಕ ಅಭಿವ್ಯಕ್ತಿಸಿದ್ದಾರೆ ಎಂದು ಡಾ.ಪರಿಣಿತಾ ತಿಳಿಸಿದರು.
ಪ್ರಚಲಿತ ಘಟನೆಗಳು, ಮೌಲಿಕ ಪುಸ್ತಕಗಳ ಪರಿಚಯಾತ್ಮಕ ನಿಲುವುಗಳು, ತಾರುಣ್ಯದ ಹೊಸಿಲಲ್ಲಿರುವ ಯುವ ಮನಸುಗಳ ತವಕ-ತಲ್ಲಣಗಳು, ಹೊಸ ಕಾಲವನ್ನು ವ್ಯಾಖ್ಯಾನಿಸುವ ಕಾವ್ಯಾತ್ಮಕ ಧ್ವನಿ, ಸ್ವಾನುಭವಗಳ ವಿನೂತನ ಅಭಿವ್ಯಕ್ತಿಯ ಆಶಯಗಳನ್ನು ಈ ಬಹುಮಾನಿತ ಸಂಚಿಕೆ ಒಳಗೊಂಡಿದೆ. ಕರ್ನಾಟಕದ ವೈವಿಧ್ಯಮಯ ಸಂಸ್ಕೃತಿಯನ್ನು ಧ್ವನಿಸುವ ಭಾಷಿಕ ಸೊಗಡಿನ ಬರಹಗಳು ಮಾತ್ರವಲ್ಲದೇ ವಿವಿಧ ಭಾಷೆಗಳಲ್ಲಿ ಎಸ್.ಡಿ.ಎಂ ವಿದ್ಯಾರ್ಥಿಗಳು ಬರೆದ ಬರಹಗಳು ‘ಮನೀಷಾ’ ಸಂಚಿಕೆಯಲ್ಲಿವೆ. ಇವುಗಳ ಮೌಲಿಕತೆಯನ್ನು ಪರಿಗಣಿಸಿ ಒಟ್ಟು 350 ಅಂಕಗಳಲ್ಲಿ 266 ಅಂಕಗಳನ್ನು ತಜ್ಞರ ಸಮಿತಿ ನೀಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಮನೀಷಾ’ ಸಂಚಿಕೆಯ ಎಸ್.ಡಿ.ಎಂ ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಪ್ರೊ.ಬಿ.ಗಣೇಶ್ನಾಯಕ್, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ, ‘ಮನೀಷಾ’ ಸಂಪಾದಕೀಯ ಮಂಡಳಿಯ ಸಂಯೋಜಕರಾದ ಡಾ.ರಾಜಶೇಖರ ಹಳೆಮನೆ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ