ಸಂಗತ್ವ- ನಿಸ್ಸಂಗತ್ವ: ವ್ಯಕ್ತಿತ್ವದ ಸತ್ವ

Upayuktha
0


ಸಂಗತ್ವ ಎಂದರೆ ಜೊತೆಯಲ್ಲಿರುವುದು, ಸಂಗಾತಿಯಾಗಿರುವುದು, ಯಾವುದರದಾದರೂ, ಯಾರದಾದರೂ ಸಾಮೀಪ್ಯವನ್ನು ಬಯಸಿ  ಹೊಂದಿರುವದೆಂದು ಹೇಳಬಹುದು. ಹಾಗೆಯೇ ನಿಸ್ಸಂಗತ್ವವೆಂದರೆ ಮೇಲಿನದರ ವಿರುದ್ಧವಾದುದಾಗಿರುವುದು; ಅರ್ಥಾತ್ ಯಾವುದರ, ಯಾರದರ ಸಂಗತಿಯಾಗಿರದೇ ಏಕಾಂಗಿಯಾಗಿರುವುದು, ಯಾವುದರ ಸಾಮೀಪ್ಯವನ್ನು ಹೊಂದದಿರುವುದು ಎಂದು ಹೇಳಬಹುದು...!


ಸಂಗತ್ವದಲ್ಲಿ ಬಾಹ್ಯ ವಸ್ತು-ವಿಷಯಗಳ ಪ್ರಭಾವ, ಪರಿಣಾಮ ಬಹಳವಾಗಿರುತ್ತದೆ. ಬೇಡ ಬೇಡವೆಂದರೂ ಅನಪೇಕ್ಷಿತವಾಗಿ ಅವುಗಳಿಗೆ ಈಡಾಗಬೇಕಾಗುತ್ತದೆ. ಇದರಿಂದ ಆಸೆಗಳ, ನಿರ್ವಹಿಸಲಾಗದ ಸಂಚಯಗಳ ದುಷ್ಪರಿಣಾಮಗಳಿಗೆ ಒಳಗಾಗಬೇಕಾಗುತ್ತದೆ. ತೋರಿಕೆಗೆ ಶುದ್ಧತೆಯಿಂದ ವರ್ತಿಸಿದರೂ ಒಳಗಿನ ಅಶುದ್ಧತೆ ಬೆಳೆಯುತ್ತದೆ. ವ್ಯಕ್ತಿತ್ವದಲ್ಲಿ ಕಸದಂತೆ ತುಂಬಿಕೊಳ್ಳುವ ಅನಿರ್ಮಲತೆ ಬೆಳೆಯುತ್ತದೆ. ಹೀಗಾಗಿ ಒಳಗೊಂದು, ಹೊರಗೊಂದು ತೋರಿಕೊಳ್ಳುವ ನಾಟಕೀಯತೆಯೂ ಬೆಳೆಯುತ್ತದೆ. ಈ ನಾಟಕೀಯತೆ ಬೆಳೆದಂತೆ, ವ್ಯಕ್ತಿಯ ವ್ಯಕ್ತಿತ್ವವು ತನಗರಿಯದಂತೆಯೇ ಅಂತರಂಗಿಕವಾಗಿ ಕುಸಿತಗೊಳ್ಳುತ್ತದೆ. ವಾಣಿಯಲ್ಲಿ ನಡವಳಿಕೆಗಳಲ್ಲಿ ಸ್ಥಿರತೆ, ಧೃಢತೆ, ಧೈರ್ಯಗಳು ಕಂಡುಬರುವುದಿಲ್ಲ. ಗೆದ್ದಿಲು ಹತ್ತಿದ ಕಟ್ಟಿಗೆಯಂತೆ ಹೊರಗಿನ ರೂಪ ಪೂರ್ಣವಾಗಿರುವಂತೆ ಕಂಡರೂ ಒಳಗೆ ಮಾತ್ರ ಟೊಳ್ಳೋ ಟೊಳ್ಳು. ಮುಟ್ಟಿದರೆ, ತಾಡಿಸಿದರೆ ಮುರಿದುಬಿದ್ದು ಪುಡಿಪುಡಿಯಾಗಿ-ಹುಡಿಹುಡಿಯಾಗಿ ಹೋಗಿಬಿಡುತ್ತದೆ....!


ನಿಸ್ಸಂಗತ್ವದಲ್ಲಿರುವ ವ್ಯಕ್ತಿತ್ವ, ಕೇವಲ ತನ್ನತನದ ಸತ್ಯದ ಸಾಂಗತ್ಯವನ್ನು ಹೊಂದಿ, ಯಾವುದೇ ಬಗೆಯ ವೈಭವ, ವಿಝೃಂಬಣೆಗಳ ಆಮಿಷಕ್ಕೆ ಒಳಗಾಗದೇ, ಬಾಹ್ಯದಲ್ಲಿ ಕಾರ್ಯಕ್ರಿಯೆಗಳಲ್ಲಿ ತೊಡಗಿಕೊಂಡಿದ್ದರೂ ಅಂತರಂಗದಲ್ಲಿ ತನ್ನತನದ ನಿಸ್ಸಂಗತ್ವದ ಆನಂದದಲ್ಲಿ ಸದಾ ಮುಳುಗಿಕೊಂಡಿರುತ್ತದೆ. ಹೀಗಾಗಿ, ಯಾವಾಗಲೂ ನಿಸ್ಪೃಹ ನಿರಾಮಯವಾಗಿರುತ್ತದೆ. ಉದ್ವಿಗ್ನತೆ, ಕ್ಷೋಬೆ, ದುವಿಧಾಗಳ ಚಂಚಲತೆಯಿಂದ ವಿಮುಕ್ತವಾಗಿರುತ್ತದೆ. ಹೀಗಾಗಿ ಸ್ಥಿರವಾಗಿರುತ್ತದೆ, ಧೈರ್ಯ ಧೃಢತೆಯಿಂದ ವರ್ತಿಸುತ್ತದೆ.


ಮತ್ತು ನಿಸ್ಸಂಗತ್ವವೆಂದರೆ, ಕೇವಲ ಎಲ್ಲ ಚಟುವಟಿಕೆಗಳಿಂದ ವಿಮುಕ್ತರಾಗಿ ಇರುವುದಲ್ಲ...; ಆದರೆ, ಸಂಗತ್ವದ ಚಟುವಟಿಕೆಗಳಲ್ಲಿ ಇದ್ದಾಗ್ಯೂ ಅವುಗಳ ಫಲಪರಿಣಾಮಗಳಲ್ಲಿ ನಿರಾಸಕ್ತರಾಗಿ, ನಿರಾಮಯರಾಗಿ ಇರುವುದೇ ನಿಜವಾದ ನಿಸ್ಸಂಗತ್ವವಾಗಿರುತ್ತದೆ; ಮತ್ತು ಇದು ವ್ಯಕ್ತಿತ್ವದ ಗಟ್ಟಿತನದಲ್ಲಿ ಅತ್ಯಂತ ಅಂತರ್ಯದ ಆಳದಲ್ಲಿರುವುದಾಗಿರುತ್ತದೆ.


ಸಂಗತ್ವದಲ್ಲಿದ್ದಂತೆ ಹೊರತೋರಿಕೊಂಡರೂ ಸದಾ  ನಿಸ್ಸಂಗತ್ವದಲ್ಲಿರುವಿರೋ ಅಥವಾ ನಿಸ್ಸಂಗತ್ವದಲ್ಲಿದ್ದಂತೆ ಹೊರತೋರಿಕೊಂಡರೂ  ಅಂತರಂಗದಲ್ಲಿ ಸದಾ  ಸಂಗತ್ವದಲ್ಲಿರುವಿರೋ..., ಎಂಬುದು ನಿಮ್ಮ ನಿಮ್ಮ ವಿವೇಕ ವಿವೇಚನೆಗಳಿಗೆ ಬಿಟ್ಟ ವಿಷಯ...; ಗಟ್ಟಿ ಹಾಗೂ  ಪೊಳ್ಳುತನಗಳ ವ್ಯಕ್ತಿತ್ವಗಳಿಗನುಸಾರವಾಗಿ ಅಷ್ಟೇ...! 


ಒಳ್ಳೆಯದಾಗಲಿ, ಎಲ್ಲವೂ  ಎಲ್ಲರಿಗೂ...!


-ಕುರಾಜನ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top